ಸಂಗ್ರಹ ಚಿತ್ರ 
ವಿದೇಶ

ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಗುಡ್‌ನ್ಯೂಸ್: Fuel surcharge ಇಳಿಸಿದ Air India; ವಿಮಾನ ಟಿಕೆಟ್ ದರವೂ ಇಳಿಕೆ ಸಾಧ್ಯತೆ..!

ಸ್ಪೈಸ್‌ಜೆಟ್ ಮಾತ್ರ ತಾವು ಮಧ್ಯಪ್ರಾಚ್ಯ ಬಿಕ್ಕಟ್ಟಿನ ವೇಳೆ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಇಂಧನ ಹೆಚ್ಚುವರಿ ಶುಲ್ಕವನ್ನು ಹೆಚ್ಚಿಸಿರಲಿಲ್ಲ. ಹೀಗಾಗಿ ಈಗ ಕಡಿತಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ: ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಯೋಜನೆ ರೂಪಿಸುತ್ತಿರುವವರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಜುಲೈ 1ರಿಂದ ತನ್ನ ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ಹೆಚ್ಚುವರಿ ಇಂಧನ ಶುಲ್ಕ (Fuel Surcharge) ವನ್ನು ಕಡಿತಗೊಳಿಸಿದೆ.

ಇದರ ಪರಿಣಾಮವಾಗಿ ಯುರೋಪ್, ಯುಕೆ, ಉತ್ತರ ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ಮಾರ್ಗಗಳಲ್ಲಿ ವಿಮಾನ ಟಿಕೆಟ್ ದರವೂ ಮುಂದಿನ ದಿನಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದ್ದು, ಇದರ ಲಾಭ ನೇರವಾಗಿ ಪ್ರಯಾಣಿಕರಿಗೆ ಸಿಗುವ ನಿರೀಕ್ಷೆಯಿದೆ.

ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿತ್ತು. ಆದರೆ ಜೂನ್ 30ರಂದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 70 ಡಾಲರ್‌ಗಿಂತ ಕಡಿಮೆ ಮಟ್ಟಕ್ಕೆ ಇಳಿದಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಏರ್ ಇಂಡಿಯಾ ಇಂಧನ ಹೆಚ್ಚುವರಿ ಶುಲ್ಕವನ್ನು ಇಳಿಕೆ ಮಾಡಿದೆ.

ಏರ್ ಇಂಡಿಯಾ ಯುರೋಪ್ ಹಾಗೂ ಯುನೈಟೆಡ್ ಕಿಂಗ್‌ಡಮ್ (ಯುಕೆ) ಮಾರ್ಗಗಳಲ್ಲಿನ ಇಂಧನ ಹೆಚ್ಚುವರಿ ಶುಲ್ಕವನ್ನು ಶೇ.38ರಷ್ಟು ಕಡಿತಗೊಳಿಸಿದೆ. ಇದೇ ವೇಳೆ ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕ ಮಾರ್ಗಗಳಲ್ಲಿ ಈ ಶುಲ್ಕವನ್ನು ಶೇ.28.5ರಷ್ಟು ಇಳಿಕೆ ಮಾಡಲಾಗಿದೆ.

ಈ ಮೊದಲು ಯುರೋಪ್ ಮತ್ತು ಯುಕೆಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಂದ 205 ಡಾಲರ್ ಇಂಧನ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಈಗ ಅದನ್ನು 125 ಡಾಲರ್‌ಗೆ ಇಳಿಸಲಾಗಿದೆ. ಅದೇ ರೀತಿ ಉತ್ತರ ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರ್ಗಗಳಲ್ಲಿ 280 ಡಾಲರ್ ಇದ್ದ ಶುಲ್ಕವನ್ನು 200 ಡಾಲರ್‌ಗೆ ಇಳಿಸಲಾಗಿದೆ.

ವಿಮಾನಯಾನ ಕ್ಷೇತ್ರದ ಮೂಲಗಳ ಪ್ರಕಾರ, ಈ ಇಳಿಕೆಯ ಲಾಭವನ್ನು ಪ್ರಯಾಣಿಕರಿಗೆ ವರ್ಗಾಯಿಸುವುದು ಸರ್ಕಾರದ ನಿರ್ದೇಶನವಾಗಿರುವುದರಿಂದ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಟಿಕೆಟ್ ದರದಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಉದಾಹರಣೆಗೆ, ಒಂದು ಲಕ್ಷ ರೂಪಾಯಿ ಮೌಲ್ಯದ ಟಿಕೆಟ್‌ನಲ್ಲಿ ಕೇವಲ ಶೇ.10ರಷ್ಟು ಇಳಿಕೆಯಾದರೂ ಸುಮಾರು ರೂ.10,000 ಉಳಿತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಗೋ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸರ್ಕಾರದ ನಿಯಮಗಳ ಪ್ರಕಾರ ಇಂಧನ ವೆಚ್ಚದಲ್ಲಿ ಉಂಟಾಗಿರುವ ಇಳಿಕೆಯ ಲಾಭವನ್ನು ಪ್ರಯಾಣಿಕರಿಗೆ ನೀಡಬೇಕಾಗಿರುವುದರಿಂದ, ಇಂಡಿಗೋ ಕೂಡ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಟಿಕೆಟ್ ದರಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸ್ಪೈಸ್‌ಜೆಟ್ ಮಾತ್ರ ತಾವು ಮಧ್ಯಪ್ರಾಚ್ಯ ಬಿಕ್ಕಟ್ಟಿನ ವೇಳೆ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಇಂಧನ ಹೆಚ್ಚುವರಿ ಶುಲ್ಕವನ್ನು ಹೆಚ್ಚಿಸಿರಲಿಲ್ಲ. ಹೀಗಾಗಿ ಈಗ ಕಡಿತಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ದೇಶೀಯ ವಿಮಾನ ಇಂಧನ (ATF) ದರವೂ ಜುಲೈ 1ರಿಂದ ಕಡಿಮೆಯಾಗಿದೆ. ಆದರೆ, ದೇಶೀಯ ವಿಮಾನ ಟಿಕೆಟ್ ದರದಲ್ಲಿ ಅದರ ಲಾಭವನ್ನು ಪ್ರಯಾಣಿಕರಿಗೆ ತಕ್ಷಣವೇ ವರ್ಗಾಯಿಸುವ ಸಾಧ್ಯತೆ ಕಡಿಮೆ ಎಂದು ವಿಮಾನಯಾನ ವಲಯದ ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಧ್ಯಪ್ರಾಚ್ಯ ಮಾರ್ಗಗಳಲ್ಲಿನ ಸೇವೆಗಳನ್ನು ಸಂಪೂರ್ಣವಾಗಿ ಪುನರಾರಂಭಿಸಿದೆ. ಒಮಾನ್‌ನ ಸಲಾಲಾ ಮತ್ತು ಕುವೈತ್‌ಗೆ ವಿಮಾನ ಸೇವೆಗಳನ್ನು ಪುನರಾರಂಭಿಸಲಾಗಿದೆ. ಕೋಝಿಕ್ಕೋಡ್–ಸಲಾಲಾ ಮಾರ್ಗದಲ್ಲಿ ಜುಲೈ 2ರಿಂದ ವಾರಕ್ಕೆ ಎರಡು ಬಾರಿ ವಿಮಾನ ಸಂಚಾರ ಆರಂಭವಾಗಿದ್ದು, ಕೋಝಿಕ್ಕೋಡ್–ಕುವೈತ್ ಸೇವೆ ಜುಲೈ 3ರಿಂದ ಹಾಗೂ ಬೆಂಗಳೂರು–ಕುವೈತ್ ವಿಮಾನ ಸೇವೆ ಜುಲೈ 4ರಿಂದ ಹಂತ ಹಂತವಾಗಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ರಯಾಣಿಸುವ ಭಾರತೀಯರಿಗೆ ಮತ್ತಷ್ಟು ಅನುಕೂಲವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಷ್ಯಾದಿಂದಲೇ ತೈಲ ತಂದು, ರಷ್ಯಾಕ್ಕೇ ಪೆಟ್ರೋಲ್ ಮಾರಾಟ...? ಏನಿದು ಭಾರತದ ರಿಫೈನರಿಗಳ ‘ಉಲ್ಟಾ’ ಗೇಮ್? ಕೇಂದ್ರ ಸರ್ಕಾರ ಹೇಳಿದ್ದೇನು..?

ಅಮೆರಿಕವೇ ಹೆಚ್ಚು ಖರ್ಚು ಮಾಡುತ್ತಿದ್ದರೂ ಕಷ್ಟದ ಸಮಯದಲ್ಲಿ ಕೈಕೊಟ್ಟರು: ಏಕಪಕ್ಷೀಯ ಸಂಬಂಧ ಮುಂದುವರಿಸುವುದು ಹಾಸ್ಯಾಸ್ಪದ: NATO ವಿರುದ್ಧ ಟ್ರಂಪ್‌ ಆಕ್ರೋಶ

'ಇರಾನ್ ಸಂಪೂರ್ಣ ಮಣಿದಿದೆ', 'ನಮಗೆ ಬೇಕಿದ್ದ ಬಹುತೇಕ ಎಲ್ಲ ಷರತ್ತುಗಳಿಗೆ ಒಪ್ಪಿದೆ': ಟ್ರಂಪ್‌ ಮಹತ್ವದ ಹೇಳಿಕೆ

ಜುಲೈ 4ರಿಂದ ಅಲಿ ಖಮೇನಿ ಅಂತಿಮ ವಿಧಿವಿಧಾನ: ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ, ಭದ್ರತಾ ಕಾರಣಕ್ಕೆ ಪುತ್ರ ಮೊಜ್ತಬಾ ಗೈರು..!

ಕ್ವಾರಿ ದುರಂತಕ್ಕೆ ಸರ್ಕಾರವೇ ಹೊಣೆ: ಕಾರ್ಮಿಕರ ಸಾವಿಗೆ ನ್ಯಾಯ ಬೇಕು; ಪರಿಹಾರ, ತನಿಖೆಗೆ ಪ್ರತಿಪಕ್ಷಗಳ ಆಗ್ರಹ