ಡೊನಾಲ್ಡ್ ಟ್ರಂಪ್  
ವಿದೇಶ

ಅಮೆರಿಕವೇ ಹೆಚ್ಚು ಖರ್ಚು ಮಾಡುತ್ತಿದ್ದರೂ ಕಷ್ಟದ ಸಮಯದಲ್ಲಿ ಕೈಕೊಟ್ಟರು: ಏಕಪಕ್ಷೀಯ ಸಂಬಂಧ ಮುಂದುವರಿಸುವುದು ಹಾಸ್ಯಾಸ್ಪದ: NATO ವಿರುದ್ಧ ಟ್ರಂಪ್‌ ಆಕ್ರೋಶ

ಸಂಕಷ್ಟದ ಸಮಯದಲ್ಲಿ ಮಿತ್ರ ರಾಷ್ಟ್ರಗಳು ಅಮೆರಿಕದ ಬೆಂಬಲಕ್ಕೆ ಬರಲಿಲ್ಲ. ಇದೇ ಕಾರಣಕ್ಕೆ ಅಮೆರಿಕ ಮಾತ್ರ ನ್ಯಾಟೋ ರಕ್ಷಣೆಯ ಭಾರವನ್ನು ಹೊರುವುದು ಸರಿಯಲ್ಲ.

ವಾಷಿಂಗ್ಟನ್: ನ್ಯಾಟೋ (NATO)ಗೆ ಅಮೆರಿಕ ನೀಡುತ್ತಿರುವ ಪ್ರಸ್ತುತ ಬೆಂಬಲ "ಏಕಪಕ್ಷೀಯ"ವಾಗಿದ್ದು, ಅದೇ ರೀತಿಯ ಸಂಬಂಧವನ್ನು ಮುಂದುವರಿಸುವುದು "ಹಾಸ್ಯಾಸ್ಪದ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜುಲೈ 7 ಮತ್ತು 8ರಂದು ನಡೆಯಲಿರುವ ನ್ಯಾಟೋ ಶೃಂಗಸಭೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಟ್ರಂಪ್ ಅವರ ಈ ಹೇಳಿಕೆ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ (Truth Social) ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನ್ಯಾಟೋ ಮತ್ತು ಅಮೆರಿಕ ನಡುವಿನ ಸಂಬಂಧ ಪರಸ್ಪರ ಸಮಾನವಾಗಿಲ್ಲ ಎಂದು ಆರೋಪಿಸಿದ್ದಾರೆ.

"ಅವರು ನಮ್ಮ ಪರವಾಗಿ ನಿಲ್ಲಲಿಲ್ಲ. ಅಮೆರಿಕ ನ್ಯಾಟೋಗೆ ನೀಡುತ್ತಿರುವ ಸಹಕಾರಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಈ ಸಂಬಂಧ ಏಕಪಕ್ಷೀಯವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ರಾನ್ ಸಂಘರ್ಷದ ಸಂದರ್ಭದಲ್ಲಿ ಹಲವು ಯುರೋಪಿಯನ್ ರಾಷ್ಟ್ರಗಳು ಅಮೆರಿಕದ ಸೇನಾ ಕಾರ್ಯಾಚರಣೆಗಳಿಗೆ ತಮ್ಮ ಸೇನಾ ನೆಲೆಗಳನ್ನು ಬಳಸಲು ನಿರ್ಬಂಧ ವಿಧಿಸಿದ್ದನ್ನು ಉಲ್ಲೇಖಿಸಿರುವ ಟ್ರಂಪ್, ಸಂಕಷ್ಟದ ಸಮಯದಲ್ಲಿ ಮಿತ್ರ ರಾಷ್ಟ್ರಗಳು ಅಮೆರಿಕದ ಬೆಂಬಲಕ್ಕೆ ಬರಲಿಲ್ಲ. ಇದೇ ಕಾರಣಕ್ಕೆ ಅಮೆರಿಕ ಮಾತ್ರ ನ್ಯಾಟೋ ರಕ್ಷಣೆಯ ಭಾರವನ್ನು ಹೊರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಅವರು ಬಹಳ ಹಿಂದಿನಿಂದಲೂ ಯುರೋಪಿನ ರಾಷ್ಟ್ರಗಳು ತಮ್ಮ ಭದ್ರತೆಯ ಹೊಣೆಗಾರಿಕೆಯನ್ನು ತಾವೇ ಹೆಚ್ಚಾಗಿ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಅಮೆರಿಕದ ತೆರಿಗೆದಾರರ ಹಣವನ್ನು ಇತರ ರಾಷ್ಟ್ರಗಳ ಭದ್ರತೆಗಾಗಿ ಅತಿಯಾಗಿ ಬಳಸಬಾರದು ಎಂಬುದು ಅವರ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಈಗಾಗಲೇ ಕೆಲವು ರಕ್ಷಣಾ ಬದ್ಧತೆಗಳನ್ನು ಮರುಪರಿಶೀಲಿಸುವ ಕೆಲಸ ಆರಂಭಿಸಿದೆ ಎಂದು ತಿಳಿಸಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಟ್ರಂಪ್ ನ್ಯಾಟೋ ಸದಸ್ಯ ರಾಷ್ಟ್ರಗಳ ರಕ್ಷಣಾ ವೆಚ್ಚದ ಹೋಲಿಕೆ ಪಟ್ಟಿಯನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ ಅಮೆರಿಕ ಇತರ ಹಲವು ಸದಸ್ಯ ರಾಷ್ಟ್ರಗಳಿಗಿಂತ ಬಹಳ ಹೆಚ್ಚಿನ ಮೊತ್ತವನ್ನು ನ್ಯಾಟೋಗೆ ವೆಚ್ಚ ಮಾಡುತ್ತಿದೆ ಎಂದು ಉಲ್ಲೇಖಿಸಿ, ಈ ಅಸಮತೋಲನವನ್ನು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಟ್ರಂಪ್ ಅವರ ಒತ್ತಡದ ಪರಿಣಾಮವಾಗಿ ಕಳೆದ ವರ್ಷದ ನ್ಯಾಟೋ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು 2035ರೊಳಗೆ ತಮ್ಮ ಒಟ್ಟು ದೇಶೀಯ ಉತ್ಪನ್ನದ (GDP) ಶೇಕಡಾ 5ರಷ್ಟು ಮೊತ್ತವನ್ನು ರಕ್ಷಣಾ ವೆಚ್ಚಕ್ಕೆ ಮೀಸಲಿಡುವ ಗುರಿಯನ್ನು ಒಪ್ಪಿಕೊಂಡಿದ್ದವು. ಇದರಿಂದ ಅಮೆರಿಕದ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಈ ನಡುವೆ, ಜುಲೈ 7 ಮತ್ತು 8ರಂದು ಟರ್ಕಿಯ ರಾಜಧಾನಿಯಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಯಲ್ಲಿ 32 ಸದಸ್ಯ ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದಾರೆ. ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯದ ಬೆಳವಣಿಗೆಗಳು, ಯುರೋಪಿನ ಭದ್ರತೆ ಹಾಗೂ ಸದಸ್ಯ ರಾಷ್ಟ್ರಗಳ ರಕ್ಷಣಾ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಮಹತ್ವದ ವಿಷಯಗಳು ಸಭೆಯ ಪ್ರಮುಖ ಅಜೆಂಡಾಗಿವೆ.

1949ರಲ್ಲಿ ಸ್ಥಾಪನೆಯಾದ ನ್ಯಾಟೋ, ಅಮೆರಿಕ ನೇತೃತ್ವದ ಪ್ರಮುಖ ರಕ್ಷಣಾ ಮೈತ್ರಿಕೂಟವಾಗಿ ಹಲವು ದಶಕಗಳಿಂದ ಯುರೋಪಿನ ಭದ್ರತೆಯನ್ನು ಬಲಪಡಿಸುವಲ್ಲಿ ಹಾಗೂ ಶೀತಲ ಸಮರದ ಅವಧಿಯಲ್ಲಿ ಸೋವಿಯತ್ ಒಕ್ಕೂಟದ ಪ್ರಭಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಟ್ರಂಪ್ ಅಧ್ಯಕ್ಷರಾದ ನಂತರ ನ್ಯಾಟೋ ಸದಸ್ಯ ರಾಷ್ಟ್ರಗಳ ವೆಚ್ಚ ಹಂಚಿಕೆ ಮತ್ತು ಅಮೆರಿಕದ ಪಾತ್ರದ ಕುರಿತು ಅವರು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದು, ಅವರ ಇತ್ತೀಚಿನ ಹೇಳಿಕೆ ಕೂಡ ಇದೇ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಷ್ಯಾದಿಂದಲೇ ತೈಲ ತಂದು, ರಷ್ಯಾಕ್ಕೇ ಪೆಟ್ರೋಲ್ ಮಾರಾಟ...? ಏನಿದು ಭಾರತದ ರಿಫೈನರಿಗಳ ‘ಉಲ್ಟಾ’ ಗೇಮ್? ಕೇಂದ್ರ ಸರ್ಕಾರ ಹೇಳಿದ್ದೇನು..?

'ಇರಾನ್ ಸಂಪೂರ್ಣ ಮಣಿದಿದೆ', 'ನಮಗೆ ಬೇಕಿದ್ದ ಬಹುತೇಕ ಎಲ್ಲ ಷರತ್ತುಗಳಿಗೆ ಒಪ್ಪಿದೆ': ಟ್ರಂಪ್‌ ಮಹತ್ವದ ಹೇಳಿಕೆ

ಜುಲೈ 4ರಿಂದ ಅಲಿ ಖಮೇನಿ ಅಂತಿಮ ವಿಧಿವಿಧಾನ: ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ, ಭದ್ರತಾ ಕಾರಣಕ್ಕೆ ಪುತ್ರ ಮೊಜ್ತಬಾ ಗೈರು..!

ಕ್ವಾರಿ ದುರಂತಕ್ಕೆ ಸರ್ಕಾರವೇ ಹೊಣೆ: ಕಾರ್ಮಿಕರ ಸಾವಿಗೆ ನ್ಯಾಯ ಬೇಕು; ಪರಿಹಾರ, ತನಿಖೆಗೆ ಪ್ರತಿಪಕ್ಷಗಳ ಆಗ್ರಹ

ಮಕ್ಕಳನ್ನು ವಾಷಿಂಗ್ ಮೆಷಿನ್ ನಲ್ಲಿಟ್ಟು ಕ್ರೌರ್ಯ: Capgemini ಡೇ-ಕೇರ್ ಕೇಂದ್ರ ತಾತ್ಕಾಲಿಕ ಬಂದ್, ತನಿಖೆ ಆರಂಭ