ಇಂಡೋನೇಷ್ಯಾದ ಜಕಾರ್ತದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ  
ವಿದೇಶ

ಅಸ್ತ್ರ ಕ್ಷಿಪಣಿ, ಬ್ರಹ್ಮೋಸ್, ಸಬಾಂಗ್ ಬಂದರು ಅಭಿವೃದ್ಧಿ: ಭಾರತ-ಇಂಡೋನೇಷ್ಯಾ ನಡುವೆ ಮಹತ್ವದ ರಕ್ಷಣಾ-ಸಹಕಾರ ಒಪ್ಪಂದ-Video

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರ ಆಹ್ವಾನದ ಮೇರೆಗೆ ನಿನ್ನೆ ಜುಲೈ 6ರಿಂದ ನಾಳೆ ಜುಲೈ 8ರವರೆಗೆ ಇಂಡೋನೇಷ್ಯಾ ಪ್ರವಾಸದಲ್ಲಿದ್ದಾರೆ.

ನವದೆಹಲಿ: ಭಾರತವು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ವ್ಯವಸ್ಥೆ ಹಾಗೂ ಅಸ್ತ್ರ ಗಾಳಿಯಿಂದ-ಗಾಳಿಗೆ ಹೊಡೆಯುವ (Air-to-Air) ಕ್ಷಿಪಣಿಗಳನ್ನು ಇಂಡೋನೇಷ್ಯಾಗೆ ಪೂರೈಸಲಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರ ಆಹ್ವಾನದ ಮೇರೆಗೆ ನಿನ್ನೆ ಜುಲೈ 6ರಿಂದ ನಾಳೆ ಜುಲೈ 8ರವರೆಗೆ ಇಂಡೋನೇಷ್ಯಾ ಪ್ರವಾಸದಲ್ಲಿದ್ದಾರೆ. 2018ರಲ್ಲಿ ಭಾರತ ಮತ್ತು ಇಂಡೋನೇಷ್ಯಾ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ (Comprehensive Strategic Partnership) ಮಟ್ಟಕ್ಕೆ ಏರಿಸಿದ ಬಳಿಕ ನಡೆಯುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಈ ಭೇಟಿಯಿಂದ ಹಲವು ಮಹತ್ವದ ಕಾರ್ಯತಂತ್ರದ ಫಲಿತಾಂಶಗಳು ಹೊರಬರುವ ನಿರೀಕ್ಷೆಯಿದೆ.

ರಕ್ಷಣಾ ಸಹಕಾರಕ್ಕೆ ಮಹತ್ವದ ಉತ್ತೇಜನ

ಆಪರೇಷನ್ ಸಿಂದೂರ್ ವೇಳೆ ಅಸ್ತ್ರ ಕ್ಷಿಪಣಿಯ ಸಾಮರ್ಥ್ಯವನ್ನು ಕಂಡು ಮೆಚ್ಚಿರುವ ಇಂಡೋನೇಷ್ಯಾ, ಭಾರತದಿಂದ ಈ ಕ್ಷಿಪಣಿಗಳನ್ನು ಖರೀದಿಸಲು ನಿರ್ಧರಿಸಿದೆ.

ಇದರ ಜೊತೆಗೆ, ಇಂಡೋನೇಷ್ಯಾದ ಬ್ರಹ್ಮೋಸ್ ಕ್ಷಿಪಣಿ ಸಂಗ್ರಹವನ್ನು ವಿಸ್ತರಿಸಲು ಭಾರತ ಹೆಚ್ಚುವರಿ ಬ್ಯಾಟರಿಗಳನ್ನು ಪೂರೈಸಲಿದೆ. ಇದರಿಂದ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರ ಮತ್ತಷ್ಟು ಬಲಗೊಳ್ಳಲಿದೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಇಂಡೋನೇಷ್ಯಾದ ಅಗತ್ಯಗಳಿಗೆ ತಕ್ಕಂತೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (EVM) ಅಭಿವೃದ್ಧಿಪಡಿಸಲು ಭಾರತ ನೆರವು ನೀಡಲಿದೆ. ಇದು ಭಾರತದ ಚುನಾವಣಾ ನಿರ್ವಹಣಾ ವ್ಯವಸ್ಥೆಯ ಮೇಲಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

ಪ್ರಮುಖ ಖನಿಜಗಳು ಮತ್ತು ಸಾಗರ ಸಹಕಾರಕ್ಕೆ ಒತ್ತು

ಪ್ರಮುಖ ಖನಿಜಗಳ ಪೂರೈಕೆ ಸರಪಳಿಯನ್ನು ಬಲಪಡಿಸುವ ಉದ್ದೇಶದಿಂದ, ಇಂಡೋನೇಷ್ಯಾದಲ್ಲಿ ಉಕ್ಕು, ನಿಕಲ್ ಹಾಗೂ ಅಪರೂಪದ ಭೂಮಿಯ (Rare Earth) ಶಾಶ್ವತ ಆಯಸ್ಕಾಂತಗಳ ತಯಾರಿಕೆಯಲ್ಲಿ ಭಾರತ ಹೂಡಿಕೆ ಮಾಡುವ ಸಾಧ್ಯತೆಯಿದೆ.

ಇದರ ಜೊತೆಗೆ, ಮಲಕ್ಕಾ ಜಲಸಂಧಿ ಸಮೀಪದಲ್ಲಿರುವ ಹಾಗೂ ಭಾರತದ ಗ್ರೇಟ್ ನಿಕೋಬಾರ್ ಬಂದರು ಯೋಜನೆಯಿಂದ ಸುಮಾರು 100 ಮೈಲುಗಳ ದೂರದಲ್ಲಿರುವ ಸಬಾಂಗ್ ಬಂದರನ್ನು ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ. ಈ ಯೋಜನೆಯಿಂದ ಸಮುದ್ರ ಸಂಪರ್ಕ ಹಾಗೂ ಪ್ರಾದೇಶಿಕ ಭದ್ರತಾ ಸಹಕಾರ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.

ಜಕಾರ್ತಾದಲ್ಲಿ ಅದ್ಧೂರಿ ಸ್ವಾಗತ

ಜಕಾರ್ತಾದ ಇಸ್ತಾನಾ ಮೆರ್ಡೆಕಾ (ಅಧ್ಯಕ್ಷೀಯ ಅರಮನೆ)ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಈ ವೇಳೆ ಅವರು ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇಬ್ಬರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಸ್ತಲಾಘವ ನಡೆಸಿದರು. ಬಳಿಕ ಪ್ರಧಾನಿ ಮೋದಿ ಅಧ್ಯಕ್ಷೀಯ ಅತಿಥಿ ಪುಸ್ತಕದಲ್ಲಿ ಸಹಿ ಹಾಕಿದರು.

ಇದಕ್ಕೂ ಮುನ್ನ ಜಕಾರ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರ ವಿಮಾನಕ್ಕೆ ಇಂಡೋನೇಷ್ಯಾ ವಾಯುಪಡೆಯ ಯುದ್ಧ ವಿಮಾನಗಳು ಭದ್ರತಾ ಬೆಂಗಾವಲು ನೀಡಿದ್ದವು. ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ಪ್ರಬೋವೊ ಸ್ವತಃ ಪ್ರಧಾನಿ ಮೋದಿಯನ್ನು ಬರಮಾಡಿಕೊಂಡರು. ಈ ವೇಳೆ ಸಾಂಪ್ರದಾಯಿಕ ಸಾಂಸ್ಕೃತಿಕ ನೃತ್ಯ ಪ್ರದರ್ಶನದ ಮೂಲಕ ವಿಶೇಷ ಸ್ವಾಗತ ಕೋರಲಾಯಿತು.

ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ, ಈ ಭೇಟಿ ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ವಿವಿಧ ಆದ್ಯತಾ ಕ್ಷೇತ್ರಗಳಲ್ಲಿ ಹೊಸ ಸಹಕಾರದ ಅವಕಾಶಗಳನ್ನು ತೆರೆದಿಡುವ ಮಹತ್ವದ ಹೆಜ್ಜೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿಗೆ ಮತ್ತೊಂದು ಅಂತಾರಾಷ್ಟ್ರೀಯ ಗೌರವ; Indonesiaದ ಅತ್ಯುನ್ನತ ನಾಗರಿಕ 'Bintang Adipurna' ಪ್ರಶಸ್ತಿ ಪ್ರದಾನ..!

ಮುಂಬೈನಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ, IMD orange ಅಲರ್ಟ್ ಹಿನ್ನೆಲೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ..!

ಶಿಷ್ಟಾಚಾರ ಬದಿಗಿಟ್ಟ ಇಂಡೋನೇಷ್ಯಾ ಅಧ್ಯಕ್ಷ: ವಿಮಾನ ನಿಲ್ದಾಣಕ್ಕೆ ಖುದ್ದು ಬಂದು ಪ್ರಧಾನಿ ಮೋದಿ ಬರಮಾಡಿಕೊಂಡ ಸುಬಿಯಾಂತೊ, ಜಕಾರ್ತಾದಲ್ಲಿ ಅದ್ಧೂರಿ ಸ್ವಾಗತ..!

ಹಾರ್ಮುಜ್‌ನಲ್ಲಿ ಮತ್ತೆ ಉದ್ವಿಗ್ನತೆ: ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ; ಹಡಗಿನಲ್ಲಿ ಭಾರೀ ಬೆಂಕಿ, ತನಿಖೆ ಆರಂಭ

'ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಕೆಲಸ ಮುಗಿಸುತ್ತೇವೆ'; ಖಮೇನಿ ಅಂತ್ಯಕ್ರಿಯೆ ನಡುವೆಯೇ ಇರಾನ್‌ಗೆ ಟ್ರಂಪ್ ಎಚ್ಚರಿಕೆ