ವಾಷಿಂಗ್ಟನ್/ಟೆಹ್ರಾನ್: ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾದ 'ಹೊರ್ಮುಜ್ ಜಲಸಂಧಿ'ಯನ್ನು (Strait of Hormuz) ಇರಾನ್ ಸಂಪೂರ್ಣವಾಗಿ ಮುಚ್ಚಿದ ಬೆನ್ನಲ್ಲೇ, ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಯುದ್ಧದ ಭೀತಿ ಆವರಿಸಿದೆ. ಇರಾನ್‌ನ ಈ ಉದ್ಧಟತನಕ್ಕೆ ಅಮೆರಿಕ ತಕ್ಷಣವೇ ತಿರುಗೇಟು ನೀಡಿದ್ದು, ಇರಾನ್‌ನ ಪ್ರಮುಖ ಸೇನಾ ನೆಲೆಗಳ ಮೇಲೆ ಭೀಕರ ವಾಯುದಾಳಿ ನಡೆಸಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಗಳು ಸೈಪ್ರಸ್ ಧ್ವಜ ಹೊತ್ತಿದ್ದ 'ಎಂವಿ ಜಿಎಫ್‌ಎಸ್ ಗ್ಯಾಲಕ್ಸಿ' ಎಂಬ ನಾಗರಿಕ ಸರಕು ಸಾಗಣೆ ಹಡಗಿನ ಮೇಲೆ ತೀವ್ರ ದಾಳಿ ನಡೆಸಿದ್ದವು. ದಾಳಿಯಿಂದಾಗಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಈ ಘಟನೆಯ ಬೆನ್ನಲ್ಲೇ, ಜಾಗತಿಕ ತೈಲ ಸಾಗಣೆಯ ಪ್ರಾಣನಾಡಿಯಾಗಿರುವ ಹೊರ್ಮುಜ್ ಜಲಸಂಧಿಯನ್ನು ಇರಾನ್ "ಮುಂದಿನ ಆದೇಶದವರೆಗೆ" ಮುಚ್ಚಿರುವುದಾಗಿ ಪ್ರಕಟಿಸಿದೆ. ಅಮೆರಿಕ ತನ್ನ ಮಧ್ಯಪ್ರವೇಶ ನಿಲ್ಲಿಸುವವರೆಗೂ ಇದನ್ನು ತೆರೆಯುವುದಿಲ್ಲ ಎಂದು ಇರಾನ್ ಪಟ್ಟು ಹಿಡಿದಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೀಡಿದ ಹೇಳಿಕೆಯ ಪ್ರಕಾರ, ಹಲವು ಬಾರಿ ಎಚ್ಚರಿಕೆ ನೀಡಿದರೂ ಅನುಮೋದಿತ ಸಾಗಣೆ ಮಾರ್ಗವನ್ನು ಬಳಸದೇ ಸಾಗುತ್ತಿದ್ದ ಹಡಗನ್ನು ತಡೆದು ನಿಲ್ಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಎಚ್ಚರಿಕೆ ಗುಂಡುಗಳನ್ನು ಹಾರಿಸಲಾಗಿದೆ ಎಂದು ಇರಾನ್ ಹೇಳಿದೆ.
ಈ ಘಟನೆಯ ನಂತರ ಹಾಗೂ ಅಮೆರಿಕ ಮಧ್ಯಪ್ರವೇಶಗಳು ಅಂತ್ಯಗೊಳ್ಳುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗುತ್ತದೆ. ಮುಂದಿನ ಆದೇಶದವರೆಗೆ ಯಾವುದೇ ಹಡಗುಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡುವುದಿಲ್ಲ" ಎಂದು IRGC ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಆದರೆ, ಅಮೆರಿಕ ಈ ಘಟನೆಯನ್ನು "ಎಚ್ಚರಿಕೆ ಕ್ರಮ" ಎಂದು ಒಪ್ಪಿಕೊಳ್ಳದೆ, ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಸೈಪ್ರಸ್ ಧ್ವಜದ ಕಂಟೇನರ್ ಹಡಗಿನ ಮೇಲೆ ಇರಾನ್ ಬಹಿರಂಗವಾಗಿ ದಾಳಿ ನಡೆಸಿದೆ ಎಂದು ಆರೋಪಿಸಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ಹಡಗಿನ ಎಂಜಿನ್ ವಿಭಾಗಕ್ಕೆ ಬೆಂಕಿ ತಗುಲಿ ಭಾರೀ ಹಾನಿಯಾಗಿದ್ದು, ಹಡಗು ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಒಬ್ಬ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಮುಕ್ತವಾಗಿ ಸಂಚರಿಸುವ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ನಾವಿಕರ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸಲು ಅಮೆರಿಕ ಕಠಿಣ ಕ್ರಮ ಕೈಗೊಳ್ಳುತ್ತಿದೆ" ಎಂದು CENTCOM ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ.
ಅಮೆರಿಕದ ಮಾಹಿತಿಯಂತೆ, ವಾಷಿಂಗ್ಟನ್ ಸಮಯ ಶನಿವಾರ ಸಂಜೆ 7.15ಕ್ಕೆ ಆರಂಭವಾದ ಈ ಕಾರ್ಯಾಚರಣೆ ಈ ವಾರದಲ್ಲಿ ಇರಾನ್ ವಿರುದ್ಧ ನಡೆಸಿದ ಮೂರನೇ ಹಂತದ ದಾಳಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಯುತ್ತಿದೆ ಎಂದು CENTCOM ಹೇಳಿದೆ.
ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್, "ಇರಾನ್ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಈಗ ಅದರ ಬೆಲೆ ತೆರಬೇಕಾಗಿದೆ" ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮೊದಲು ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡಗುಗಳ ಮೇಲೆ ನಡೆದ ದಾಳಿಗಳು ಅಮೆರಿಕ ಮತ್ತು ಇರಾನ್ ನಡುವೆ ಪ್ರತಿದಾಳಿಗಳಿಗೆ ಕಾರಣವಾಗಿದ್ದವು. ಇದರಿಂದ ಎರಡೂ ದೇಶಗಳ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿತ್ತು.
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ–ಇಸ್ರೇಲ್ ನಡೆಸಿದ ಭಾರೀ ವೈಮಾನಿಕ ದಾಳಿಯಲ್ಲಿ ಇರಾನ್‌ನ ಮಾಜಿ ಪರಮೋಚ್ಚ ನಾಯಕ ಅಲಿ ಖಮೇನಿ ಸಾವನ್ನಪ್ಪಿದ ನಂತರ ಆರಂಭವಾದ ಮಧ್ಯಪ್ರಾಚ್ಯದ ಯುದ್ಧವನ್ನು ಕೊನೆಗಾಣಿಸಲು ಮಧ್ಯಂತರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಹಾರ್ಮುಜ್ ಜಲಸಂಧಿಯ ನಿಯಂತ್ರಣವೇ ಅಂತಿಮ ಒಪ್ಪಂದಕ್ಕೆ ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ.
ಯುದ್ಧದ ಅವಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದ ಇರಾನ್, ಇನ್ನು ಮುಂದೆ ಈ ಸಮುದ್ರ ಮಾರ್ಗದಲ್ಲಿ ಸಾಗುವ ಹಡಗುಗಳ ಸಂಚಾರವನ್ನು ತನ್ನ ನಿಯಂತ್ರಣದಲ್ಲಿ ಇಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಹಡಗುಗಳಿಂದ ಶುಲ್ಕ ವಸೂಲಿ ಮಾಡುವ ಯೋಜನೆಯನ್ನೂ ಘೋಷಿಸಿದ್ದು, ಯುದ್ಧಕ್ಕೂ ಮುಂಚಿನಂತೆ ಸಂಪೂರ್ಣ ಮುಕ್ತ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದೆ.
ಇದಕ್ಕೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಸಮುದ್ರ ಕಾನೂನು ಪ್ರಕಾರ, ಜಾಗತಿಕ ಸಂಚಾರಕ್ಕೆ ಬಳಸುವ ಪ್ರಮುಖ ಜಲಸಂಧಿಗಳಲ್ಲಿ ಏಕಪಕ್ಷೀಯವಾಗಿ ಶುಲ್ಕ ವಿಧಿಸಲು ಯಾವುದೇ ರಾಷ್ಟ್ರಕ್ಕೆ ಸಾಮಾನ್ಯವಾಗಿ ಅಧಿಕಾರವಿರುವುದಿಲ್ಲ ಎಂಬುದು ಅಮೆರಿಕದ ವಾದವಾಗಿದೆ.
ಇದಕ್ಕೂ ನಡುವೆ, ಇರಾನ್‌ನ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ. ತಮ್ಮ ತಂದೆ ಹಾಗೂ ಮಾಜಿ ಪರಮೋಚ್ಚ ನಾಯಕ ಅಲಿ ಖಮೇನಿ ಅವರನ್ನು ಅಮೆರಿಕ–ಇಸ್ರೇಲ್ ಕೊಂದಿರುವುದಕ್ಕೆ ಪ್ರತೀಕಾರ ತೀರಿಸುವುದು ರಾಷ್ಟ್ರದ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ.
ತಮ್ಮ ಮೊದಲ ಲಿಖಿತ ಸಂದೇಶದಲ್ಲಿ, "ಪ್ರತೀಕಾರ ನಮ್ಮ ರಾಷ್ಟ್ರದ ಇಚ್ಛೆಯಾಗಿದೆ. ಅದು ಖಂಡಿತವಾಗಿಯೂ ನೆರವೇರುತ್ತದೆ. ನಾನು ಅಥವಾ ಇತರ ಅಧಿಕಾರಿಗಳು ಅಧಿಕಾರದಲ್ಲಿದ್ದರೂ ಇರದಿದ್ದರೂ ಪ್ರತೀಕಾರ ಖಂಡಿತವಾಗಿಯೂ ತೀರಿಸಿಕೊಳ್ಳುತ್ತೇವೆಂದು ಮೊಜ್ತಬಾ ಖಮೇನಿ ಹೇಳಿದ್ದಾರೆ. ಇದೇ ವೇಳೆ, ಗುರಿಯಾಗಬೇಕಾದ ವ್ಯಕ್ತಿಗಳ ಪಟ್ಟಿಯನ್ನು ಇರಾನ್ ಸಿದ್ಧಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಯುದ್ಧಕ್ಕೂ ಮುನ್ನ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಮೊಜ್ತಬಾ ಖಮೇನಿ, ತಮ್ಮ ತಂದೆ ಸಾವನ್ನಪ್ಪಿದ ವೈಮಾನಿಕ ದಾಳಿಯಲ್ಲಿ ಗಾಯಗೊಂಡಿದ್ದರು ಎಂಬ ವರದಿಗಳೂ ಹೊರಬಿದ್ದಿವೆ.
ಇದಕ್ಕೂ ಕೆಲವೇ ಗಂಟೆಗಳ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ವಿರುದ್ಧ ಹತ್ಯೆಯ ಯಾವುದೇ ಪ್ರಯತ್ನ ನಡೆದರೆ ಇರಾನ್ ಮೇಲೆ ಅಮೆರಿಕ ಅತ್ಯಂತ ಭೀಕರ ಸೇನಾ ದಾಳಿ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದರು.
ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಟ್ರಂಪ್, "ನನ್ನ ಹತ್ಯೆಗೆ ಅಥವಾ ಅಮೆರಿಕದ ಹಾಲಿ ಅಧ್ಯಕ್ಷರ ವಿರುದ್ಧ ಯಾವುದೇ ಸಂಚು ನಡೆದರೆ, ಇರಾನ್ ಮೇಲೆ ಸಾವಿರ ಕ್ಷಿಪಣಿಗಳು ಸಿದ್ಧವಾಗಿವೆ. ಅಗತ್ಯವಿದ್ದರೆ ಇನ್ನೂ ಸಾವಿರಾರು ಕ್ಷಿಪಣಿಗಳನ್ನು ತಕ್ಷಣ ಉಡಾಯಿಸಲಾಗುವುದು. ಇರಾನ್ ಸಂಪೂರ್ಣವಾಗಿ ನಾಶವಾಗುವ ಪರಿಸ್ಥಿತಿ ಎದುರಾಗಲಿದೆ" ಎಂದು ಬರೆದುಕೊಂಡಿದ್ದಾರೆ.
ಒಂದೆಡೆ ಪರಸ್ಪರ ಬೆದರಿಕೆಗಳು ಮುಂದುವರಿದಿದ್ದರೆ, ಮತ್ತೊಂದೆಡೆ ರಾಜತಾಂತ್ರಿಕ ಮಾತುಕತೆಗಳನ್ನು ಪುನರಾರಂಭಿಸಲು ಮಧ್ಯವರ್ತಿಗಳು ಪ್ರಯತ್ನ ಮುಂದುವರಿಸಿದ್ದಾರೆ.
ಇರಾನ್‌ನ ತಸ್ನೀಮ್ ಸುದ್ದಿ ಸಂಸ್ಥೆಯ ಪ್ರಕಾರ, ಮಧ್ಯವರ್ತಿತ್ವದ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಕತಾರ್ ನಿಯೋಗವು ಶುಕ್ರವಾರ ಟೆಹ್ರಾನ್‌ಗೆ ಭೇಟಿ ನೀಡಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಕಳೆದ ತಿಂಗಳು ಮಾಡಿಕೊಂಡಿದ್ದ ಒಪ್ಪಂದದ ಎಲ್ಲ ಷರತ್ತುಗಳನ್ನು ಇರಾನ್ ಪಾಲಿಸಿದೆ ಎಂದು ಹೇಳಿದ್ದು, "ಒಪ್ಪಂದ ಯಶಸ್ವಿಯಾಗಬೇಕಾದರೆ ಎರಡೂ ರಾಷ್ಟ್ರಗಳು ಸಮಾನವಾಗಿ ತಮ್ಮ ಬದ್ಧತೆಗಳನ್ನು ಪಾಲಿಸಬೇಕು" ಎಂದು ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ.