ಬ್ಯಾಂಕಾಕ್: ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಉತ್ತರ ಭಾಗದಲ್ಲಿರುವ ನಾ ಲಾಡ್‌ಪ್ರಾವೋ (Na Ladprao) ಪಬ್‌ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 63ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತಡರಾ್ರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆ ಕ್ಷಣಾರ್ಧದಲ್ಲ ಪಬ್ ಸಂಪೂರ್ಣ ಆವರಿಸಿದೆ. ಬಳಿಕ ಪಬ್ ತುಂಬೆಲ್ಲಾ ಹೊಗೆ ಮತ್ತು ಬೆಂಕಿ ಜ್ವಾಲೆಗಳಿಂದ ಆವರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಪಬ್‌ನ ಮುಂಭಾಗದಿಂದ ಭಾರೀ ಬೆಂಕಿ ಮತ್ತು ದಟ್ಟ ಕಪ್ಪು ಹೊಗೆ ಹೊರಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಒಳಗಿದ್ದವರು ಜೀವ ಉಳಿಸಿಕೊಳ್ಳಲು ಆತಂಕದಿಂದ ಹೊರಗೆ ಓಡುತ್ತಿರುವುದು ಕೂಡ ಕಂಡು ಬಂದಿದೆ.
ಥಾಯ್ಲೆಂಡ್ ಪ್ರಧಾನಿ ಅನುತಿನ್ ಚಾರ್ನ್ವಿರಾಕುಲ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ್ದು, ಅಗ್ನಿ ಅವಘಡದಲ್ಲಿ ಮೃತಪಟ್ಟ ಹಲವರ ಮೃತದೇಹಗಳು ಪಬ್‌ನ ಹಿಂಭಾಗದಲ್ಲಿದ್ದ ಶೌಚಾಲಯಗಳ ಬಳಿ ಪತ್ತೆಯಾಗಿವೆ. ಬೆಂಕಿಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪಬ್‌ನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಒಬ್ಬ ಸಂಗೀತಗಾರ ಹೇಳಿಕೆ ನೀಡಿ, ವೇದಿಕೆಯ ಸಮೀಪದ ವಿದ್ಯುತ್ ಸರ್ಕ್ಯೂಟ್ ಬ್ರೇಕರ್‌ನಿಂದ ಮೊದಲು ಹೊಗೆ ಕಾಣಿಸಿಕೊಂಡಿತ್ತು. ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡು, ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಪಬ್ ತುಂಬಿಕೊಂಡ ಕಾರಣ ಜನರು ಹೊರಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಬ್ಯಾಂಕಾಕ್ ಗವರ್ನರ್ ಚಾಡ್‌ಚಾರ್ಟ್ ಸಿಟ್ಟಿಪುಂಟ್ ಅವರು ಮಾತನಾಡಿ, 63 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ 22 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಬಳಿ ಗುರುತಿನ ಚೀಟಿ ಇರದ ಕಾರಣ ಹಾಗೂ ಕೆಲವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಿಂದ ಮೃತರು ಮತ್ತು ಗಾಯಾಳುಗಳ ಗುರುತು ಪತ್ತೆ ಕಾರ್ಯ ಮುಂದುವರಿದಿದ ಎಂದು ಹೇಳಿದ್ದಾರೆ.
ಗಾಯಾಳುಗಳಲ್ಲಿ 22 ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.
ಏತನ್ಮಧ್ಯೆ ಅಗ್ನಿಶಾಮಕ ಸಿಬ್ಬಂದಿ ಸುಮಾರು 30 ನಿಮಿಷಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯ ನಂತರ ಪಬ್‌ನ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿರುವ ದೃಶ್ಯಗಳು ಕಂಡುಬಂದಿವೆ.
ಇದೇ ವೇಳೆ, ಘಟನಾ ಸ್ಥಳದಲ್ಲಿ ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಮಾಹಿತಿ ತಿಳಿದುಕೊಳ್ಳಲು ಬಂದವರಿಗಾಗಿ ವಿಶೇಷ ನೋಂದಣಿ ಕೇಂದ್ರವನ್ನೂ ತೆರೆಯಲಾಗಿದೆ.
ಘಟನೆಯ ವೇಳೆ ಸಮೀಪದಲ್ಲೇ ಕಾರ್ಯಕ್ರಮ ನೀಡುತ್ತಿದ್ದ ಗಾಯಕಿ ಸುಕನ್ಯಾ ವೋಂಗ್‌ವೋಂಗ್ವೈ ಮಾತನಾಡಿ, ತಮ್ಮ ಸಂಗೀತ ತಂಡದ ಸದಸ್ಯರಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬರ ಸುಳಿವು ಇನ್ನೂ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
"ಬೆಂಕಿ ಕಾಣಿಸಿಕೊಂಡ ತಕ್ಷಣ ವಿದ್ಯುತ್ ಕಡಿತಗೊಂಡಿತು. ಎಲ್ಲೆಡೆ ದಟ್ಟ ಹೊಗೆ ಆವರಿಸಿದ್ದರಿಂದ ಯಾರೂ ಯಾರನ್ನು ಗುರುತಿಸಲು ಸಾಧ್ಯವಾಗಲಿಲ್ಲ," ಎಂದು ಹೇಳಿದ್ದಾರೆ.
ಥಾಯ್ಲೆಂಡ್‌ನಲ್ಲಿ ಇಂತಹ ದುರಂತಗಳು ಹೊಸದಲ್ಲ
2022ರಲ್ಲಿ ಥಾಯ್ಲೆಂಡ್‌ನ ಪೂರ್ವ ಭಾಗದ ಸಂಗೀತ ಪಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಮಂದಿ ಮೃತಪಟ್ಟಿದ್ದರು. ಅದಕ್ಕೂ ಮೊದಲು, 2009ರ ಜನವರಿ 1ರಂದು ಬ್ಯಾಂಕಾಕ್‌ನ ಸಾಂಟಿಕಾ ನೈಟ್‌ಕ್ಲಬ್‌ನಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಒಳಾಂಗಣ ಪಟಾಕಿ ಪ್ರದರ್ಶನದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ 66 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.