ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಸ್ವದೇಶಕ್ಕೆ ಮರಳುವ ಸಿದ್ಧತೆ ನಡೆಸಿರುವ ಬೆನ್ನಲ್ಲೇ, ಈ ಕುರಿತು ಬಾಂಗ್ಲಾದೇಶ ಸರ್ಕಾರ ತೀವ್ರ ಪ್ರತಿಕ್ರಿಯೆ ನೀಡಿದೆ.
ಹೌದು.. 2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ನೇತೃತ್ವದ ಭಾರೀ ಸರ್ಕಾರಿ ವಿರೋಧಿ ಪ್ರತಿಭಟನೆಯ ಬಳಿಕ ಅಧಿಕಾರ ಕಳೆದುಕೊಂಡ ಬಾಂಗ್ಲಾದೇಶದ ಅಂದಿನ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಆಶ್ರಯಕ್ಕಾಗಿ ಬಂದಿದ್ದರು. ಕಳೆದ ವಾರ ಅವರ ಆಪ್ತ ಮೂಲಗಳು, ಈ ವರ್ಷದ ಅಂತ್ಯದೊಳಗೆ ಹಸೀನಾ ಸ್ವಯಂಪ್ರೇರಿತವಾಗಿ ಢಾಕಾಗೆ ಮರಳಿ ಅವಾಮಿ ಲೀಗ್ ಪಕ್ಷವನ್ನು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದ್ದವು.
ಈ ಬೆಳವಣಿಗೆ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರ ಈ ಬಗ್ಗೆ ತನ್ನ ಮೊದಲ ಪ್ರತಿಕ್ರಿಯೆ ನೀಡಿದ್ದು, 'ಶೇಖ್ ಹಸೀನಾ ಅವರು ದೇಶಕ್ಕೆ ಮರಳುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅವರು ನ್ಯಾಯಾಲಯವನ್ನು ಎದುರಿಸಲೇಬೇಕು. ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆ ಕುರಿತು ಅವರ ವಾದಿಸಿದರೆ ಅದು ಬದಲಾಗಲೂಬಹುದು ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರ ಸಲಹೆಗಾರ ಜಾಹೇದ್ ಉರ್ ರೆಹಮಾನ್, 'ಬಾಂಗ್ಲಾದೇಶ ಜನರು ಶೇಖ್ ಹಸೀನಾ ಅವರಿಗೆ ವಿಧಿಸಲಾದ ಮರಣದಂಡನೆ ಜಾರಿಯಾಗುವುದನ್ನು ನೋಡಲು ಬಯಸಿದ್ದಾರೆ. 2024ರ ವಿದ್ಯಾರ್ಥಿ ಚಳವಳಿಯ ಮೇಲೆ ನಡೆದ ಕ್ರೂರ ದಮನಕ್ಕೆ ಸಂಬಂಧಿಸಿದ ಮಾನವೀಯತೆಯ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಶೇಖ್ ಹಸೀನಾ ನ್ಯಾಯಾಲಯವನ್ನು ಎದುರಿಸಲೇಬೇಕು ಎಂದು ಹೇಳಿದರು.
ಜಗತ್ತಿನ ಅತ್ಯುತ್ತಮ ವಕೀಲರ ಕರೆತನ್ನಿ
ಇದೇ ವೇಳೆ ಶೇಖ್ ಹಸೀನಾ ಅವರಿಗೆ ಜಗತ್ತಿನ ಅತ್ಯುತ್ತಮ ವಕೀಲರ ಕರೆತನ್ನಿ ಎಂದಿರುವ ಜಾಹೇದ್ ಉರ್ ರೆಹಮಾನ್, "ಅವರು ಜಗತ್ತಿನ ಅತ್ಯುತ್ತಮ ವಕೀಲರನ್ನು ಕರೆತಂದು ತಮ್ಮ ಪರ ವಾದಿಸಲಿ. ನ್ಯಾಯಾಂಗ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ವೀಕ್ಷಕರು ಅದನ್ನು ಗಮನಿಸಬಹುದು. ವಿಡಿಯೊ ಮೂಲಕವೂ ಪ್ರಸಾರ ಮಾಡಬಹುದು" ಎಂದು ಹೇಳಿದರು.
ಅಲ್ಲದೆ, ನ್ಯಾಯಾಲಯವು ಹಸೀನಾ ವಿರುದ್ಧದ ತೀರ್ಪನ್ನು ಬದಲಾಯಿಸಬಹುದು ಅಥವಾ ಅವರನ್ನು ಖುಲಾಸೆಗೊಳಿಸಬಹುದು ಎಂಬ ಸಾಧ್ಯತೆಯನ್ನೂ ಅವರು ತಳ್ಳಿಹಾಕಲಿಲ್ಲ. "ಅದೂ ಆಗಬಹುದು. ಆದರೆ ಅವರ ವಾಪಸಾತಿಯಿಂದ ಸರ್ಕಾರ ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ" ಎಂದು ಸ್ಪಷ್ಟಪಡಿಸಿದರು.
'ವಾಪಸಾತಿಗೆ ಯಾವುದೇ ಕಾನೂನು ಅಡ್ಡಿ ಇಲ್ಲ'
ಶೇಖ್ ಹಸೀನಾ ಅವರ ವಾಪಸಾತಿಗೆ ಯಾವುದೇ ಕಾನೂನು ತೊಡಕು ಇಲ್ಲ ಎಂದು ಹೇಳಿದ ರೆಹಮಾನ್, ಭಾರತ ಸರ್ಕಾರವು ಢಾಕಾ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ವ್ಯವಸ್ಥೆ ಮಾಡಬಹುದು ಎಂದರು.
ಗೈರುಹಾಜರಿಯಲ್ಲೇ ಮರಣದಂಡನೆ
ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಪುತ್ರಿಯಾಗಿರುವ ಶೇಖ್ ಹಸೀನಾ ಅವರನ್ನು, 2024ರ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ವಿಶೇಷ ನ್ಯಾಯಮಂಡಳಿ ಗೈರುಹಾಜರಿಯಲ್ಲೇ ಮರಣದಂಡನೆಗೆ ಗುರಿಪಡಿಸಿತ್ತು.
ಆದರೆ, ತಮ್ಮ ವಿರುದ್ಧದ ಮರಣದಂಡನೆ, ಕ್ರಿಮಿನಲ್ ಪ್ರಕರಣಗಳು ಹಾಗೂ ಆರೋಪಗಳೆಲ್ಲವೂ "ರಾಜಕೀಯ ಪ್ರೇರಿತ" ಎಂದು ಹಸೀನಾ ತಳ್ಳಿಹಾಕಿದ್ದಾರೆ. ತೀರ್ಪಿನ ನಂತರದಿಂದಲೇ ಬಾಂಗ್ಲಾದೇಶ ಸರ್ಕಾರ, ಹಸೀನಾ ಅವರನ್ನು ನ್ಯಾಯಾಂಗ ವಿಚಾರಣೆಗೆ ಹಾಜರುಪಡಿಸಲು ಭಾರತಕ್ಕೆ ಹಸ್ತಾಂತರ ಮಾಡುವಂತೆ (ಪ್ರತ್ಯರ್ಪಣೆ) ನಿರಂತರವಾಗಿ ಒತ್ತಾಯಿಸುತ್ತಿದೆ.
ಭಾರತ ಹೇಳೋದೇನು?
ಇತ್ತ ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಈ ವಿಚಾರದಲ್ಲಿ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತ್ಯರ್ಪಣೆ ಕಾನೂನು ಸಂಬಂಧಿತ ವಿಷಯವಾಗಿದ್ದು, ಅದನ್ನು ಕಾನೂನು ಪ್ರಕಾರವೇ ನಿರ್ವಹಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಭಾರತ-ಬಾಂಗ್ಲಾದೇಶ ಸಂಬಂಧದಲ್ಲಿ ಬಿರುಕು
2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡು, ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತ-ಬಾಂಗ್ಲಾದೇಶ ಸಂಬಂಧದಲ್ಲಿ ತೀವ್ರ ಹಿನ್ನಡೆ ಉಂಟಾಗಿತ್ತು. ಆದರೆ, ಬಳಿಕ ಸಂಬಂಧ ಸುಧಾರಿಸುವ ಪ್ರಯತ್ನಗಳು ಆರಂಭಗೊಂಡಿವೆ.
ಈ ವರ್ಷದ ಫೆಬ್ರವರಿ 17ರಂದು ತಾರಿಕ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಭಾರತವನ್ನು ಪ್ರತಿನಿಧಿಸಿದ್ದರು.