ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಮಾಡುವವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 86 ಕೋಟಿ ರೂ.) ಬಹುಮಾನ ನೀಡುವುದಾಗಿ ಇರಾಕ್‌ನ 'ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್' ಎಂಬ ಸಶಸ್ತ್ರ ಸಂಘಟನೆ ಘೋಷಿಸಿದೆ.
ಈ ಕುರಿತು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್‌ಎ (IRNA) ಹಾಗೂ ರಷ್ಯಾದ ಸರ್ಕಾರಿ ಮಾಧ್ಯಮ ಆರ್‌ಟಿ (RT) ವರದಿ ಮಾಡಿವೆ.
ಈ ಘೋಷಣೆ, ಇರಾನ್‌ನ ಸೇನಾ ಕಮಾಂಡರ್ ಕಾಸಿಂ ಸೊಲೈಮಾನಿ ಹತ್ಯೆಗೆ ಪ್ರತೀಕಾರದ ಭಾವನೆ ಮತ್ತು ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಹೊರಬಂದಿದೆ. ಆದರೆ, ಈ ಹೇಳಿಕೆಯನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ ಮತ್ತು ಅಮೆರಿಕ ಸರ್ಕಾರದಿಂದಲೂ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಇದೇ ವೇಳೆ, ಅಮೆರಿಕಾದ ಕಾರ್ಯಕರ್ತೆ ಲೋರಾ ಲೂಮರ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, "ರಷ್ಯಾದ ಸರ್ಕಾರಿ ಮಾಧ್ಯಮವು ಟ್ರಂಪ್ ಹತ್ಯೆಗೆ ಇರಾಕಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಘೋಷಿಸಿರುವ 10 ಮಿಲಿಯನ್ ಡಾಲರ್ ಬಹುಮಾನವನ್ನು ಪ್ರಚಾರ ಮಾಡುತ್ತಿದೆ" ಎಂದು ಟೀಕಿಸಿದ್ದಾರೆ.
"ರಷ್ಯಾ ನಮ್ಮ ಮಿತ್ರ ರಾಷ್ಟ್ರವಲ್ಲ ಎಂಬುದನ್ನು ಪ್ರತಿದಿನವೂ ಸಾಬೀತುಪಡಿಸುತ್ತಿದೆ" ಎಂದು ಲೂಮರ್ ಬರೆದುಕೊಂಡಿದ್ದಾರೆ.
ಈ ವರದಿಗೆ ಸಂಬಂಧಿಸಿದಂತೆ ಶ್ವೇತಭವನ ಅಥವಾ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ತಕ್ಷಣದ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.