ಡೊನಾಲ್ಡ್ ಟ್ರಂಪ್ online desk
ವಿದೇಶ

ಸಂಧಾನ ಬಯಸುತ್ತಿದ್ದಾರೆ ಆದರೆ, ನಮಗೆ ಆಸಕ್ತಿಯೇ ಇಲ್ಲ; ಇರಾನ್ ಇನ್ನೂ ಬೆಲೆ ತೆರಬೇಕಿದೆ; ಡೊನಾಲ್ಡ್ ಟ್ರಂಪ್

ಅವರು (ಇರಾನ್) ನಮ್ಮನ್ನು ಭೇಟಿಯಾಗಲು ತೀವ್ರವಾಗಿ ಬಯಸುತ್ತಿದ್ದಾರೆ. ಆದರೆ, ಅವರು ಅರ್ಥಪೂರ್ಣವಾಗಿ ಮಾತುಕತೆಗೆ ಸಿದ್ಧವಾಗುವವರೆಗೆ ಅವರನ್ನು ಭೇಟಿಯಾಗುವ ಉದ್ದೇಶ ನಮಗಿಲ್ಲ.

ವಾಷಿಂಗ್ಟನ್: ಅಮೆರಿಕ–ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಮತ್ತಷ್ಟು ಉಲ್ಬಣವಾಗುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ತಕ್ಷಣ ಯಾವುದೇ ಮಾತುಕತೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ಇರಾನ್ ಅರ್ಥಪೂರ್ಣ ಸಂವಾದಕ್ಕೆ ಸಿದ್ಧವಾಗುವವರೆಗೆ ಅಮೆರಿಕಕ್ಕೆ ಯಾವುದೇ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಅವರು (ಇರಾನ್) ನಮ್ಮನ್ನು ಭೇಟಿಯಾಗಲು ತೀವ್ರವಾಗಿ ಬಯಸುತ್ತಿದ್ದಾರೆ. ಆದರೆ, ಅವರು ಅರ್ಥಪೂರ್ಣವಾಗಿ ಮಾತುಕತೆಗೆ ಸಿದ್ಧವಾಗುವವರೆಗೆ ಅವರನ್ನು ಭೇಟಿಯಾಗುವ ಉದ್ದೇಶ ನಮಗಿಲ್ಲ" ಎಂದು ಹೇಳಿದರು.

ಇರಾನ್ ಅಧಿಕಾರಿಗಳು ಪರೋಕ್ಷ ಮಾರ್ಗಗಳ ಮೂಲಕ ಅಮೆರಿಕದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ, "ಪರದೆಯ ಹಿಂದೆ ನಡೆಯುತ್ತಿರುವ ಸಂವಾದಗಳಲ್ಲಿ ಯುದ್ಧವನ್ನು ಕೊನೆಗೊಳಿಸಲು ಅವರು ತೀವ್ರ ಆಸಕ್ತಿ ತೋರಿದ್ದಾರೆ. ಯುದ್ಧದಲ್ಲಿ ಅವರು ಭಾರೀ ಹಿನ್ನಡೆ ಅನುಭವಿಸುತ್ತಿರುವುದರಿಂದ ಈ ಪ್ರಯತ್ನ ನಡೆಸುತ್ತಿದ್ದಾರೆ" ಎಂದು ತಿಳಿಸಿದರು.

ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆ ಇನ್ನೂ ಅಂತ್ಯಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಟ್ರಂಪ್, "ಈಗಲೇ ನಾವು ಯುದ್ಧ ನಿಲ್ಲಿಸಿದರೂ ಇರಾನ್ ಮತ್ತೆ ಚೇತರಿಸಿಕೊಳ್ಳಲು 20ರಿಂದ 25 ವರ್ಷ ಬೇಕಾಗುತ್ತದೆ. ಆದರೆ, ನಾವು ಈಗ ನಿಲ್ಲುತ್ತಿಲ್ಲ. ನಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ" ಎಂದು ಹೇಳಿದರು.

ಇದೇ ವೇಳೆ ಟ್ರಂಪ್ ಮತ್ತೊಂದು ಮಹತ್ವದ ಎಚ್ಚರಿಕೆ ನೀಡಿದ್ದು, ಇರಾನ್‌ನ ನತಾಂಜ್ ಅಣು ಕೇಂದ್ರದ ಸಮೀಪದಲ್ಲಿರುವ ಭೂಗತ 'ಪಿಕ್‌ಆಕ್ಸ್ ಮೌಂಟನ್' ತಾಣವನ್ನು ಅಮೆರಿಕ ಶೀಘ್ರದಲ್ಲೇ ಗುರಿಯಾಗಿಸಬಹುದು ಎಂದು ಹೇಳಿದರು.

"ಆ ಪ್ರದೇಶದ ಮೇಲೆ ಭಾರೀ ದಾಳಿ ನಡೆಯಲಿದೆ. ಸಾಮಾನ್ಯವಾಗಿ ಇಂತಹ ಗುರಿಗಳನ್ನು ಮುಂಚಿತವಾಗಿ ಬಹಿರಂಗಪಡಿಸುವುದಿಲ್ಲ. ಆದರೆ, ಇದನ್ನು ತಡೆಯಲು ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ" ಎಂದು ತಿಳಿಸಿದರು.

ಇರಾನ್ ಬೆಂಬಲಿತ ಯೆಮನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಬಂದರುಗಳಿಗೆ ನೌಕಾ ದಿಗ್ಬಂಧನ ಹೇರಲು ಎಚ್ಚರಿಕೆ ನೀಡಿರುವುದಕ್ಕೂ ಟ್ರಂಪ್ ಪ್ರತಿಕ್ರಿಯಿಸಿದ್ದು, ಹೌತಿಗಳು ಅಂಥದ್ದೇನಾದರೂ ಮಾಡಿದರೆ ನಾವು ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಈ ಹಿಂದೆ ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಅದರ ನಂತರ ಅವರಿಂದ ಹೆಚ್ಚು ಪ್ರತಿಕ್ರಿಯೆ ಬಂದಿಲ್ಲ" ಎಂದು ಹೇಳಿದರು.

ಹೌತಿಗಳ ಬೆದರಿಕೆಯನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ. ಆದರೆ, ಈ ಬೆದರಿಕೆ ಜಾಗತಿಕ ತೈಲ ಪೂರೈಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಟ್ರಂಪ್ ಅವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿದ ಇರಾನ್ ಸೇನೆಯ ಖಾತಮ್ ಅಲ್-ಅಂಬಿಯಾ ಕಮಾಂಡ್, ಅಣು ತಾಣಗಳು ಅಥವಾ ಇತರೆ ಸೂಕ್ಷ್ಮ ಕೇಂದ್ರಗಳ ಮೇಲೆ ದಾಳಿ ನಡೆದರೆ ಅದನ್ನು ಯುದ್ಧದ ವಿಸ್ತರಣೆಯಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ.

"ಅಂತಹ ದಾಳಿ ನಡೆದರೆ ಅಮೆರಿಕ, ಅದರ ಮಿತ್ರ ರಾಷ್ಟ್ರಗಳು ಮತ್ತು ಬೆಂಬಲಿಗರ ಎಲ್ಲ ಹಿತಾಸಕ್ತಿಗಳ ಮೇಲೂ ಪ್ರಬಲ ದಾಳಿ ನಡೆಸಲಾಗುವುದು" ಎಂದು ಇರಾನ್ ಸೇನೆ ಘೋಷಿಸಿದೆ.

ಈ ನಡುವೆ ಅಮೆರಿಕ ಸೇನೆ ಸತತ 11ನೇ ರಾತ್ರಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ತಿಳಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಅಪಾಯ ಉಂಟುಮಾಡುವ ಇರಾನ್‌ನ ಸೇನಾ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ಬಹ್ರೇನ್, ಕುವೈತ್, ಜೋರ್ಡನ್ ಮೇಲೆ ಇರಾನ್ ದಾಳಿ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿದ್ದು, ಬಹ್ರೇನ್ ತನ್ನ ವಾಯು ರಕ್ಷಣಾ ವ್ಯವಸ್ಥೆ ಮೂಲಕ ಇರಾನ್ ಉಡಾಯಿಸಿದ ಕ್ಷಿಪಣಿಗಳನ್ನು ತಡೆದಿರುವುದಾಗಿ ತಿಳಿಸಿದೆ. ಕುವೈತ್ ಮತ್ತು ಜೋರ್ಡನ್ ಕೂಡ ಇರಾನ್‌ನ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ಯಶಸ್ವಿಯಾಗಿ ತಡೆದಿರುವುದಾಗಿ ಘೋಷಿಸಿವೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ (IRGC) ಜೋರ್ಡನ್‌ನ ರುಕ್ಬಾನ್ ಪ್ರದೇಶದಲ್ಲಿರುವ ಅಮೆರಿಕ ಸೇನಾ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿದೆ. ಅಲ್ಲದೆ ಕುವೈತ್ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಕೇಂದ್ರಗಳು ಮತ್ತು ಆಡಳಿತ ಕಟ್ಟಡಗಳನ್ನು ಗುರಿಯಾಗಿಸಲಾಗಿದೆ ಎಂದು ಇರಾನ್ ಸೇನೆ ಹೇಳಿಕೊಂಡಿದೆ.

ಕೆಂಪು ಸಮುದ್ರದಲ್ಲಿ ಹಡಗುಗಳ ಮಾರ್ಗ ಬದಲಾವಣೆ

ಹೌತಿಗಳ ಬೆದರಿಕೆಯ ಬಳಿಕ ಸಿಂಗಾಪುರ ಮತ್ತು ಲೈಬೀರಿಯಾ ಧ್ವಜದಡಿ ಸಂಚರಿಸುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳು ಕೆಂಪು ಸಮುದ್ರದಲ್ಲಿ ತಮ್ಮ ಮಾರ್ಗವನ್ನು ಬದಲಿಸಿಕೊಂಡಿವೆ ಎಂದು ಸಮುದ್ರ ಭದ್ರತಾ ಸಂಸ್ಥೆ ವ್ಯಾಂಗಾರ್ಡ್ ಟೆಕ್ ತಿಳಿಸಿದೆ.

ಇದರ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳಿಗೆ ಸ್ಫೋಟ ಸಂಭವಿಸಿ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ ಹೇಳಿದೆ. ಒಮಾನ್ ಕರಾವಳಿಯ ಸಮೀಪ ಸಾಗುತ್ತಿದ್ದ ಟ್ಯಾಂಕರ್ ಮೇಲೆ ಅಪರಿಚಿತ ಕ್ಷಿಪಣಿ ಬಡಿದಿರುವುದಾಗಿ ಬ್ರಿಟನ್‌ನ ಯುಕೆ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಕೂಡ ವರದಿ ಮಾಡಿದೆ.

ಖಮೇನಿ ಜೊತೆ ಸಂಪರ್ಕ ಹೆಚ್ಚಾಗಿದೆ: ಪೆಜೆಶ್ಕಿಯನ್

ಇದರ ನಡುವೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ದೇಶದ ಉನ್ನತ ನಾಯಕ ಮೊಜ್ತಬಾ ಖಮೇನಿ ಅವರೊಂದಿಗೆ ತಮ್ಮ ಸಂಪರ್ಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಕೈಗಾರಿಕೆ ಮತ್ತು ಗಣಿಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಉನ್ನತ ನಾಯಕನ ಮಾರ್ಗದರ್ಶನದಂತೆ ಎಲ್ಲ ಕ್ರಮಗಳನ್ನು ಸಂಘಟಿಸಲಾಗಿದೆ. ದೇಶದ ಹಿತಾಸಕ್ತಿಯನ್ನು ಕಾಪಾಡಲು ಅವರ ಬೆಂಬಲ ಅಗತ್ಯ. ನಾವು ಅವರ ಮಾರ್ಗದರ್ಶನದಲ್ಲೇ ದೃಢವಾಗಿ ಮುಂದುವರಿಯುತ್ತೇವೆ" ಎಂದು ಹೇಳಿದರು.

ಅಮೆರಿಕ ಮಾತುಕತೆಗೆ ನಿರಾಕರಿಸುತ್ತಿರುವುದು, ಮತ್ತೊಂದೆಡೆ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿರುವುದು ಮತ್ತು ಇರಾನ್ ಕೂಡ ಪ್ರತಿದಾಳಿಗೆ ಸಜ್ಜಾಗಿದೆ ಎಂದು ಘೋಷಿಸಿರುವುದು ಮಧ್ಯಪ್ರಾಚ್ಯದ ಸಂಘರ್ಷ ಇನ್ನಷ್ಟು ವ್ಯಾಪಕವಾಗುವ ಆತಂಕವನ್ನು ಹೆಚ್ಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತೆರಿಗೆ ನೀತಿ ಚರ್ಚೆಗಳು ವಲಯ ಹಿತಾಸಕ್ತಿ ಮೀರಬೇಕು: ಒಟ್ಟಾರೆ ಆರ್ಥಿಕತೆಯ ಅಗತ್ಯತೆಗಳ ಮೇಲೆ ಗಮನ ಹರಿಸಬೇಕು- ನಿರ್ಮಲಾ ಸೀತಾರಾಮನ್

ಬೆಳಗಾವಿ: ಆಸ್ತಿ ವಿವಾದ ಸಂಬಂಧ ಗ್ರಾಮ ಪಂಚಾಯ್ತಿಗೆ ಬಂದಿದ್ದ ಮಾಜಿ ಯೋಧ, ಪುತ್ರಿಯ ಬರ್ಬರ ಹತ್ಯೆ

ಸಾಲು ಸಾಲು ಉದ್ಯೋಗ ಕಡಿತದ ನಡುವೆ Flipkart ಗೆ 2.5 ಲಕ್ಷ ಮಂದಿ ಹೊಸ ನೇಮಕ!

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ; ಇಸ್ಲಾಮಾಬಾದ್‌ನ ಉನ್ನತ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್

‘ಮಹತ್ವದ ಒಪ್ಪಂದದಿಂದ ಹೆಚ್ಚಿನ ಉದ್ಯೋಗ, ಆದಾಯ’: ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಂಸತ್ ಅನುಮೋದನೆ