ಮನಿಲಾ (ಫಿಲಿಪೈನ್ಸ್): ವಿಶ್ವವು ಪ್ರಸ್ತುತ ಅತ್ಯಂತ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿದ್ದು, ಯಾವುದೇ ದೇಶ ಅಥವಾ ಪ್ರಾದೇಶಿಕ ಒಕ್ಕೂಟವು ಜಾಗತಿಕ ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಹೇಳಿದ್ದಾರೆ.
ಫಿಲಿಪೈನ್ಸ್‌ನ ಮನಿಲಾದಲ್ಲಿ ಇಂದು (ಬುಧವಾರ) ನಡೆದ 'ಆಸಿಯಾನ್ ಪೋಸ್ಟ್-ಮಿನಿಸ್ಟೀರಿಯಲ್ ಕಾನ್ಫರೆನ್ಸ್' (ASEAN Post-Ministerial Conference) ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಭಾರತ ಮತ್ತು ಆಸಿಯಾನ್ (ASEAN) ರಾಷ್ಟ್ರಗಳು ತಮ್ಮ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು.
‘ಒಟ್ಟಾಗಿ ನಮ್ಮ ಭವಿಷ್ಯವನ್ನು ಮುನ್ನಡೆಸೋಣ’ ಎಂಬ ಈ ವರ್ಷದ ಧ್ಯೇಯವಾಕ್ಯವು ಇಂದಿನ ಜಾಗತಿಕ ಪರಿಸ್ಥಿತಿಗೆ ಅತ್ಯಂತ ಸೂಕ್ತವಾಗಿದೆ. ಜಗತ್ತು ಅತ್ಯಂತ ಅಸ್ಥಿರ ಪರಿಸ್ಥಿತಿಯಲ್ಲಿದೆ. ಯಾವುದೇ ಒಂದು ದೇಶ ಅಥವಾ ದೇಶಗಳ ಒಕ್ಕೂಟವು ಈ ಸವಾಲುಗಳನ್ನು ತನ್ನಷ್ಟಕ್ಕೆ ತಾನೇ ಎದುರಿಸಲು ಸಾಧ್ಯವಿಲ್ಲ ಎಂಬುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ.
ಜಾಗತಿಕ ಅಸ್ಥಿರತೆಯಿಂದಾಗಿ ವ್ಯಾಪಾರ, ಹೂಡಿಕೆ ಹಾಗೂ ಪೂರೈಕೆ ಸರಪಳಿಗಳ ಮೇಲೆ ಭಾರೀ ಒತ್ತಡ ನಿರ್ಮಾಣವಾಗಿದೆ. "ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಪರಸ್ಪರ ಸಹಕಾರವನ್ನು ಇನ್ನಷ್ಟು ಹೇಗೆ ಬಲಪಡಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಅಸ್ಥಿರತೆ ಮತ್ತು ವ್ಯತ್ಯಯಗಳಿಂದ ಕೂಡಿದ ಈ ಕಾಲಘಟ್ಟದಲ್ಲಿ ಪೂರೈಕೆ ಸರಪಳಿಗಳ ಮೇಲಿನ ಒತ್ತಡವೇ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ" ಎಂದು ಅಭಿಪ್ರಾಯಪಟ್ಟರು.
ಇಂಧನ, ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಇನ್ನು ಮುಂದೆ ಸಹಜವಾಗಿ ಪರಿಗಣಿಸಲು ಸಾಧ್ಯವಿಲ್ಲ, ಜಾಗತಿಕ ಸಮುದ್ರ ಮಾರ್ಗಗಳ ಸುರಕ್ಷತೆಯೂ ಈಗ ಪ್ರಮುಖ ಸವಾಲಾಗಿ ಪರಿಣಮಿಸಿದೆ. "ನಾವೆಲ್ಲರೂ ಸಮುದ್ರ ಮಾರ್ಗದ ವ್ಯಾಪಾರದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತರಾಗಿದ್ದೇವೆ. ಹೀಗಾಗಿ ಸಾಗರ ವ್ಯಾಪಾರದಲ್ಲಿ ಉಂಟಾಗುವ ಅಡಚಣೆಗಳು ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಬಹುದು.
ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕಾನೂನುಗಳ ಪಾಲನೆ ಅತ್ಯಂತ ಮಹತ್ವದ್ದಾಗಿದೆ. ಇದೇ ಸಂದರ್ಭದಲ್ಲಿ 2026ನೇ ವರ್ಷವನ್ನು ಭಾರತ–ಆಸಿಯಾನ್ ಸಾಗರ ಸಹಕಾರ ವರ್ಷವಾಗಿ ಆಚರಿಸಲಾಗುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಜಾಗತಿಕ ರಾಜಕೀಯ ಅನಿಶ್ಚಿತತೆ ಮುಂದುವರಿದಿದ್ದರೂ ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ತಮ್ಮ ಭವಿಷ್ಯದ ಬಗ್ಗೆ ಆಶಾವಾದಿಯಾಗಿವೆ. ಸವಾಲುಗಳನ್ನು ಎದುರಿಸುವುದರ ಜೊತೆಗೆ ಹೊಸ ಅವಕಾಶಗಳನ್ನು ಬಳಸಿಕೊಳ್ಳುವತ್ತವೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಭಾರತ–ಆಸಿಯಾನ್ ಸಹಭಾಗಿತ್ವವು ಕೇವಲ ರಾಜತಾಂತ್ರಿಕ ಸಂಬಂಧಗಳಿಗೆ ಸೀಮಿತವಾಗಿಲ್ಲ, ವ್ಯಾಪಾರ, ಹೂಡಿಕೆ, ಪ್ರತಿಭೆ ವಿನಿಮಯ, ತಂತ್ರಜ್ಞಾನ, ಡಿಜಿಟಲ್ ನಾವೀನ್ಯತೆ, ಕೃತಕ ಬುದ್ಧಿಮತ್ತೆ (AI), ಹಸಿರು ಅಭಿವೃದ್ಧಿ, ಸುಸ್ಥಿರತೆ ಮತ್ತು ಸಂಪರ್ಕ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ಕಡೆಯ ಸಹಕಾರ ವಿಸ್ತರಿಸುತ್ತಿದೆ.
ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕವೇ ಜಾಗತಿಕ ಅಪಾಯಗಳನ್ನು ಕಡಿಮೆ ಮಾಡಬಹುದು ಮತ್ತು ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಬಹುದು. ಪರಸ್ಪರ ಅವಲಂಬನೆಯನ್ನು ಸಮತೋಲನಗೊಳಿಸುವುದು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಮುಂದಿರುವ ಪ್ರಮುಖ ಗುರಿಯಾಗಬೇಕು" ಎಂದು ಹೇಳಿದರು.
ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಸೇರಿ ಸುಮಾರು 2 ಬಿಲಿಯನ್ ಜನಸಂಖ್ಯೆಯನ್ನು ಪ್ರತಿನಿಧಿಸುತ್ತಿದ್ದು, ಸುರಕ್ಷಿತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶ ನಿರ್ಮಾಣದಲ್ಲಿ ಎರಡಕ್ಕೂ ಮಹತ್ವದ ಹೊಣೆಗಾರಿಕೆ ಇದೆ.
ರತ ಮತ್ತು ಆಸಿಯಾನ್ ರಾಷ್ಟ್ರಗಳು ಹಲವು ದಶಕಗಳಿಂದ ಇಡೀ ಪ್ರದೇಶದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿವೆ. ಜಗತ್ತು ವೇಗವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ಎರಡು ಪ್ರದೇಶಗಳು ಒಟ್ಟಾಗಿ ಮುನ್ನಡೆಯುವುದರಿಂದ ಮಾತ್ರ ಸುರಕ್ಷಿತ ಮತ್ತು ಸ್ಥಿರ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಎರಡು ದಿನಗಳ ಫಿಲಿಪ್ಪೀನ್ಸ್ ಪ್ರವಾಸದಲ್ಲಿರುವ ಜೈಶಂಕರ್, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಸಚಿವರೊಂದಿಗೆ ನಡೆಯಲಿರುವ ಕ್ವಾಡ್ (Quad) ವಿದೇಶಾಂಗ ಸಚಿವರ ಸಭೆಯಲ್ಲೂ ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ, ಸಮುದ್ರ ಸಹಕಾರ, ಪ್ರಾದೇಶಿಕ ಸ್ಥಿರತೆ ಹಾಗೂ ಜಾಗತಿಕ ಸವಾಲುಗಳಿಗೆ ಒಗ್ಗಟ್ಟಿನ ಪ್ರತಿಕ್ರಿಯೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.