ಸಿಂಗಾಪುರ: ಗಲ್ಫ್ ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಹಾರ್ಮುಜ್ ಜಲಸಂಧಿ ಬಹುತೇಕ ಮುಚ್ಚಿರುವುದರಿಂದ ತೈಲ ಟ್ಯಾಂಕರ್‌ಗಳು ಸೇರಿದಂತೆ ವ್ಯಾಪಾರಿ ಹಡಗುಗಳು ಏಷ್ಯಾದಾದ್ಯಂತ ಬಂದರುಗಳಲ್ಲಿ ಕ್ಯೂನಲ್ಲಿ ನಿಂತಿವೆ. ನಿರ್ವಾಹಕರು ಸ್ಪಷ್ಟತೆಗಾಗಿ ಕಾಯುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ಗುರುವಾರ ತಿಳಿಸಿದೆ.
ಸಿಂಗಾಪುರ ಸೇರಿದಂತೆ ಏಷ್ಯಾದ ಪ್ರಮುಖ ಬಂದರುಗಳಲ್ಲಿ ದೀರ್ಘ ಕ್ಯೂಗಳು ಮತ್ತು ವಿಳಂಬಗಳ ಮಾಹಿತಿ ನೋಡಿದರೆ, ಮುಂಬರುವ ವಾರಗಳಲ್ಲಿ ಗಲ್ಪ್ ಕೊಲ್ಲಿ ಪ್ರದೇಶದಲ್ಲಿ ಸರಕುಗಳನ್ನು ಸಾಗಿಸುವ ಹೆಚ್ಚಿನ ಹಡಗುಗಳು ಸಿಂಗಾಪುರ್ ಮತ್ತು ಮಲೇಷ್ಯಾದ ತಾಂಜಂಗ್ ಪೆಲೆಪಾಸ್ ಮತ್ತು ಕ್ಲಾಂಗ್ ಬಂದರುಗಳಲ್ಲಿ ಲಂಗರು ಹಾಕಬಹುದು ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ಹೇಳಿದೆ.
ಫೆಬ್ರವರಿ 28 ರಿಂದ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿ ನಡೆಸುವುದರೊಂದಿಗೆ ಆರಂಭವಾದ ಯುದ್ಧ ಇದೀಗ ಇಡೀ ಗಲ್ಫ್ ಪ್ರದೇಶಕ್ಕೆ ಹರಡಿದೆ. ಹಾರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಪೂರೈಕೆಗೆ ಆಯಕಟ್ಟಿನ ಪ್ರಮುಖ ಮಾರ್ಗವಾಗಿದೆ.
ಪರ್ಷಿಯನ್ ಕೊಲ್ಲಿಯನ್ನು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುವ ಕಿರಿದಾದ ಹಡಗು ಮಾರ್ಗವಾದ ಜಲಸಂಧಿಯು ಮುಚ್ಚಲ್ಪಟ್ಟಿದೆ. ಇದರಿಂದಾಗಿ ಕಂಟೇನರ್, ಡ್ರೈ ಬಲ್ಕ್ ಮತ್ತು ಎಲ್ ಪಿಜಿ ತೈಲ ಪೂರೈಕೆಯ ಹಡಗುಗಳು ಸೇರಿದಂತೆ ಪ್ರತಿದಿನ ನೂರಾರು ಹಡಗುಗಳು ನಿಲ್ಲುವಂತಾಗಿವೆ.
ಗಲ್ಫ್ ಬಂದರುಗಳಿಗೆ ಹೋಗುವ ಹೆಚ್ಚಿನ ಸಂಖ್ಯೆಯ ಹಡಗುಗಳು ತಮ್ಮ ಸಿಬ್ಬಂದಿ ಮತ್ತು ಹಡಗಿನ ಸುರಕ್ಷತೆಗೆ ಹೆದರಿ ಹೆಚ್ಚಾಗಿ ಸಿಂಗಾಪುರದಂತಹ ಟ್ರಾನ್ಸ್‌ಶಿಪ್‌ಮೆಂಟ್ ಬಂದರುಗಳಲ್ಲಿ ಲಂಗರು ಹಾಕಲು ಆಯ್ಕೆ ಮಾಡಿಕೊಂಡಿವೆ ಎಂದು ಸಿಂಗಾಪುರದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿವೆ.
ಹಡಗುಗಳು ಗಲ್ಫ್ ಪ್ರದೇಶದಿಂದ ಸಿಂಗಾಪುರಕ್ಕೆ ಪ್ರಯಾಣಿಸಲು ಸುಮಾರು ಐದರಿಂದ ಏಳು ವಾರಗಳನ್ನು ತೆಗೆದುಕೊಳ್ಳುತ್ತದೆ. ಹಡಗುಗಳಿಗೆ ಅಡಚಣೆ ಪರಿಸ್ಥಿತಿ ಹೆಚ್ಚಾಗುತ್ತಿದ್ದಂತೆಯೇ ಅನಿಶ್ಚಿತತೆಯಿಂದ ತಪ್ಪಿಸಿಕೊಳ್ಳಲು ಪರ್ಯಾಯ ಮಾರ್ಗವಾಗಿ ಏಷ್ಯಾದ ಬಂದರುಗಳಲ್ಲಿ ಕ್ಯೂನಲ್ಲಿ ನಿಂತಿವೆ ಎಂದು ಸಿಂಗಾಪುರ ಮೂಲದ ಪೂರೈಕೆ-ಸರಪಳಿಯ ಗುಪ್ತಚರ ವೇದಿಕೆಯಾದ ಪೋರ್ಟ್‌ಕಾಸ್ಟ್ ವರದಿ ಮಾಡಿದೆ.
ಕಳೆದ ಕೆಲವು ವಾರಗಳ ಏಷ್ಯಾದ ಬಂದರುಗಳಲ್ಲಿ ಲಂಗರು ಹಾಕುವ ಹಡಗುಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ತೋರಿಸುತ್ತದೆ ಎಂದು ಪೋರ್ಟ್‌ಕಾಸ್ಟ್‌ನ ಮಾರುಕಟ್ಟೆ ನಿರ್ದೇಶಕ ದೇವಾಂಶ್ ಭಿಕಾಜೀ ಹೇಳಿದ್ದಾರೆ.
ಹಾರ್ಮುಜ್ ಸಂಪೂರ್ಣವಾಗಿ ಮುಚ್ಚಿಲ್ಲವಾದರೂ, ಹಡುಗಳ ಸಂಚಾರಕ್ಕೆ ಗಮನಾರ್ಹ ಪ್ರಮಾಣದಲ್ಲಿ ಅಡಚಣೆ ಉಂಟಾಗುತ್ತಿದೆ. ನಿರ್ವಾಹಕರು ಸ್ಪಷ್ಟತೆಗಾಗಿ ಕಾಯುತ್ತಿರುವಾಗ ಹಡಗುಗಳು ಪರ್ಯಾಯ ಬಂದರುಗಳಲ್ಲಿ ಲಂಗರು ಹಾಕಿವೆ ಎಂದು ಭಿಕಾಜೀ ತಿಳಿಸಿದ್ದಾರೆ.
ಸಂಘರ್ಷ ಪ್ರಾರಂಭವಾಗುವ ಒಂದು ದಿನದ ಮುನ್ನ 141 ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಸಾಗಿದ್ದವು. ಇವುಗಳಲ್ಲಿ ಶೇ. 80 ಕ್ಕಿಂತ ಹೆಚ್ಚು ಹೆಚ್ಚು ಹಡಗುಗಳು ಏಷ್ಯಾದ ಬಂದರುಗಳಿಗೆ ಮತ್ತು ಉಳಿದವು ಯುರೋಪ್ ಮತ್ತು ಇತರ ಪ್ರದೇಶಗಳಿಗೆ ತೆರಳಿದವು ಎಂದು ಮೂಲಗಳು ತಿಳಿಸಿವೆ.