ಹೇಗ್: ಭಾರತದ ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಿದ್ದು, ಧಾರ್ಮಿಕ ಮತ್ತು ಅಲ್ಪಸಂಖ್ಯಾತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಡಚ್ ಪ್ರಧಾನಿ ರಾಬ್ ಜೆಟ್ಟನ್ ಅವರ ಹೇಳಿಕೆಗಳನ್ನು ನವದೆಹಲಿ ತಿರಸ್ಕರಿಸಿದೆ. ದೇಶವು ಎಲ್ಲರಿಗೂ ಮುಕ್ತ ಸ್ವಾತಂತ್ರ್ಯದ ಹಕ್ಕು ನೀಡಿರುವ "ಚೈತನ್ಯಶೀಲ ಪ್ರಜಾಪ್ರಭುತ್ವ" ರಾಷ್ಟ್ರ ಎಂದು ಪ್ರತಿಪಾದಿಸಿದೆ.
ಪ್ರಧಾನಿ ನರೇಂದ್ರ ಮೋದಿಯ ನೆದರ್‌ಲ್ಯಾಂಡ್ಸ್ ಭೇಟಿ ಸಂದರ್ಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು, ದೇಶದ ಬಗ್ಗೆ ಸರಿಯಾಗಿ ತಿಳಿಯದೆ ಈ ರೀತಿಯ ಹೇಳಿಕೆ ನೀಡಲಾಗಿದೆ. ಭಾರತದ ನಾಗರಿಕತೆ ಮತ್ತು ಬಹುತ್ವ ಆಳವಾದದ್ದು ಎಂದರು.
ಡಜ್ ಪ್ರಧಾನಿ ಜ್ಞಾನದ ಕೊರತೆಯಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಹೇಳಿದರು. ಭಾರತವು 1.4 ಶತಕೋಟಿ ಜನರ ದೇಶ, ವಿಶ್ವದ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶ. 5, 000 ವರ್ಷಗಳಿಗೂ ಹಳೆಯದಾದ ನಾಗರಿಕತೆಯ ದೇಶ. ಇದು ವೈವಿಧ್ಯಮಯ ದೇಶ. ಸಂಸ್ಕೃತಿ, ಭಾಷೆ, ಆಹಾರ, ಧರ್ಮದ ವಿಷಯದಲ್ಲಿ ವೈವಿಧ್ಯತೆ ಹೊಂದಿರುವ ರಾಷ್ಟ್ರ. ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳು ಹುಟ್ಟಿಕೊಂಡ ರಾಷ್ಟ್ರ ಎಂದರು.
ಯಹೂದಿ ಧರ್ಮವು 2500 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿತ್ತು. ನಿರಂತರವಾಗಿ ಸಹಬಾಳ್ವೆ ನಡೆಸಿತು. ಯಹೂದಿ ಜನರು ಎಂದಿಗೂ ಕಿರುಕುಳ ಎದುರಿಸದ ಕೆಲವೇ ದೇಶಗಳಲ್ಲಿ ಭಾರತವು ಬಹುಶಃ ಒಂದಾಗಿದೆ... ಯೇಸುಕ್ರಿಸ್ತನ ಪುನರುತ್ಥಾನದ ನಂತರ ಕ್ರಿಶ್ಚಿಯನ್ ಧರ್ಮ ಭಾರತಕ್ಕೆ ಬಂದಿತು. ಪ್ರವಾದಿ ಮುಹಮ್ಮದ್ ಅವರ ಕಾಲದಲ್ಲಿ ಇಸ್ಲಾಂ ಭಾರತಕ್ಕೆ ಬಂದು ಪ್ರವರ್ಧಮಾನಕ್ಕೆ ಬಂದಿತು ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರ ಎರಡು ದಿನಗಳ ನೆದರ್ಲ್ಯಾಂಡ್ಸ್ ಪ್ರವಾಸದ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿ ಇಲ್ಲದಿರುವುದನ್ನು ಡಚ್ ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಅಲ್ಲದೇ ಮುಸ್ಲಿಂ ಮತ್ತು ಸಣ್ಣ ಸಮುದಾಯಗಳ ಹಕ್ಕುಗಳು ಸೇರಿದಂತೆ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಈ ಮಾತಿನ ಚಕಮಕಿ ನಡೆಯಿತು.
ಇತ್ತೀಚೆಗೆ ದೇಶದ ಹಲವಾರು ಪ್ರದೇಶಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ಉಲ್ಲೇಖಿಸಿದ ಸಿಬಿ ಜಾರ್ಜ್, ಭಾರತವು "ಚೈತನ್ಯಶೀಲ ಪ್ರಜಾಪ್ರಭುತ್ವ" ರಾಷ್ಟ್ರವಾಗಿದ್ದು, ಅಲ್ಲಿ "ಶಾಂತಿಯುತ ಅಧಿಕಾರ ಪರಿವರ್ತನೆ" ಒಂದು ಪ್ರಮುಖ ಲಕ್ಷಣವಾಗಿದೆ ಎಂದು ಹೇಳಿದರು. "ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 90% ಕ್ಕಿಂತ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ. ಇದು ಭಾರತದ ಸೌಂದರ್ಯ ಎಂದು ಅವರು ಹೇಳಿದರು.
ಭಾರತ ಪ್ರಜಾಪ್ರಭುತ್ವ ತತ್ವಗಳ ಮೇಲೆ "ರಾಜಿ" ಮಾಡಿಕೊಳ್ಳದೆ ಆರ್ಥಿಕ ಯಶಸ್ಸನ್ನು ಸಾಧಿಸಿದೆ. ನಾವು ಬಡತನವನ್ನು ತೊಡೆದುಹಾಕಲು ಹಿಂಸಾಚಾರಕ್ಕೆ ಹೋಗಲಿಲ್ಲ. ಬದಲಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ಹೋದೆವು. "ನಾವು ವಿಶ್ವದ ಒಟ್ಟು ಜನಸಂಖ್ಯೆಯ ಆರನೇ ಒಂದು ಭಾಗದಲ್ಲಿದ್ದೇವೆ. ಎಲ್ಲರೂ ಶಾಂತಿಯುತವಾಗಿ ಜೀವನ ಸಾಗಿಸುತ್ತಿದ್ದಾರೆ. ನಾವು ಸ್ವಾತಂತ್ರರಾದಾಗ, ಭಾರತದಲ್ಲಿ ಅಲ್ಪಸಂಖ್ಯಾತ ಜನಸಂಖ್ಯೆಯು ಶೇಕಡಾ 11 ರಷ್ಟಿತ್ತು. ಈಗ ಅದು ಶೇ. 20 ಕ್ಕಿಂತ ಹೆಚ್ಚಿದೆ."ಇದು ಭಾರತದ ಸೌಂದರ್ಯ. ಆದ್ದರಿಂದ, ಭಾರತ ಎಂದರೇನು ಮತ್ತು ಅದು ಹೇಗೆ ಪ್ರಗತಿ ಹೊಂದುತ್ತಿದೆ ಎಂಬುದರ ಬಗ್ಗೆ ನಿಮ್ಮ ಹೆಚ್ಚಿನ ಆಸಕ್ತಿ ಇರಲಿ ಎಂದು ಮನವಿ ಮಾಡಿದರು.
ಡಚ್ ಪ್ರಧಾನಿ ಏನು ಹೇಳಿದ್ರು?
ಡಚ್ ಪತ್ರಿಕೆ ಡಿ ವೋಕ್ಸ್‌ಕ್ರಾಂಟ್ ಪ್ರಕಾರ, ಪ್ರಧಾನಿ ಮೋದಿಯನ್ನು ಭೇಟಿ ಮಾಡುವ ಮೊದಲು ಪಿಎಂ ಜೆಟ್ಟನ್, ಭಾರತದಲ್ಲಿನ ಬೆಳವಣಿಗೆಗಳ ಬಗ್ಗೆ ಡಚ್ ಸರ್ಕಾರಕ್ಕೂ ಕಳವಳವಿದೆ. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾತ್ರವಲ್ಲ. ಅಲ್ಲಿ ತೀವ್ರ ಒತ್ತಡದಲ್ಲಿರುವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆಯೂ ಇದೆ" ಎಂದು ಹೇಳಿದ್ದರು ಎನ್ನಲಾಗಿದೆ