2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಅಮೆರಿಕ ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ ಇರಾನ್ ಯುದ್ಧವೇ ಕಾರಣ ಎಂದು ದೂಷಿಸುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ.
ವ್ಯಾನ್ಸ್ ಅವರ ಹೇಳಿಕೆಗಳನ್ನು 'ತೀರಾ ಮತ್ತು ದೊಡ್ಡ ರಾಜಕೀಯ ತಪ್ಪು' ಎಂದು ಬಣ್ಣಿಸಿದ ಬೋಲ್ಟನ್, ಆರ್ಥಿಕ ಪರಿಸ್ಥಿತಿ, ಏರುತ್ತಿರುವ ಬೆಲೆಗಳು ಮತ್ತು ಟ್ರಂಪ್ ಅವರ ಸುಂಕ ನೀತಿಗಳ ಬಗ್ಗೆ ಮತದಾರರಲ್ಲಿ ವ್ಯಾಪಕ ಅಸಮಾಧಾನವಿತ್ತು ಅದನ್ನು ರಿಪಬ್ಲಿಕನ್ ಪಕ್ಷವು ನಿರ್ಲಕ್ಷಿಸಿತ್ತು ಎಂದು ಹೇಳಿದರು. ವ್ಯಾನ್ಸ್ ಅವರ ಇಂತಹ ಹೇಳಿಕೆಗೆ ಒಂದು ಪ್ರಮುಖ ಕಾರಣವೆಂದರೆ, ಅದು ಅವರ 2028ರ ಅಧ್ಯಕ್ಷೀಯ ನಾಮನಿರ್ದೇಶನ ಪ್ರಚಾರದ ಆರಂಭವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಅವರು ಇಲ್ಲಿ ರಾಜಕೀಯವಾಗಿ ಬಹಳ ಅಪಾಯಕಾರಿ ಹೆಜ್ಜೆಯನ್ನು ಇಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮತದಾರರ ಅಸಮಾಧಾನಕ್ಕೆ ಇರಾನ್ ಯುದ್ಧವು ಕೇವಲ ಒಂದು ಕಾರಣವಷ್ಟೇ, ಟ್ರಂಪ್ ಅವರ ಸುಂಕ ನೀತಿಗಳು ನಿರಂತರವಾಗಿ ಬೆಲೆಗಳ ಹೆಚ್ಚಳ ಅಸಮಾಧಾನಕ್ಕೆ ಕಾರಣವಾಗಿವೆ ಎಂದು ಎತ್ತಿ ತೋರಿಸಿದರು. 2024ರ ಅಧ್ಯಕ್ಷೀಯ ಪ್ರಚಾರದ ವೇಳೆ, ಬೈಡನ್ ಆಡಳಿತದಲ್ಲಿನ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಅವರು ಅದನ್ನು ಈಡೇರಿಸುವಲ್ಲಿ ವಿಫಲರಾದರು ಎಂದು ಬೋಲ್ಟನ್ ಹೇಳಿದರು.
"ಮತದಾರರು ಅವರ ಮಾತನ್ನು ನಂಬಿದ್ದರು. ಬೈಡನ್ ಮತ್ತು ಹ್ಯಾರಿಸ್ಗಿಂತ ಟ್ರಂಪ್ ಈ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಬಲ್ಲರು ಎಂದು ಅವರು ನಂಬಿದ್ದರು. ಹೀಗಾಗಿ ಅವರು ಆಯ್ಕೆಯಾಗಿ ಅಧಿಕಾರಕ್ಕೆ ಬಂದರು. ಆದರೆ ಆ ಭರವಸೆಗಳನ್ನು ಈಡೇರಿಸಲಿಲ್ಲ. ಬದಲಾಗಿ, ಅವರು ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಿದರು ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿದರು.
ಇರಾನ್ ಯುದ್ಧವು ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಮತ್ತು ಅನಿಲ ಬೆಲೆಗಳ ಹೆಚ್ಚಳಕ್ಕೆ ಕಾರಣವಾಯಿತು. ಅಮೆರಿಕದ ಗ್ರಾಹಕರಿಗೆ ಇಂಧನದ ವೆಚ್ಚವನ್ನು ದುಪ್ಪಟಾಗಿಸಿತು ಎಂಬುದನ್ನೂ ಬೋಲ್ಟನ್ ಒತ್ತಿ ಹೇಳಿದರು. ಗ್ರಾಹಕರು ವಿರೋಧಿಸಿದ್ದು ಪೆಟ್ರೋಲ್ನ ಹೆಚ್ಚಿನ ಬೆಲೆಯನ್ನು ಆದರೆ ಟ್ರಂಪ್ ಅದನ್ನು ಸರಿಪಡಿಸಲು ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಅವರು ಸೇರಿಸಿದರು.