ಯುವೆನೊ ಬ್ಯಾಂಕ್ ದಿವಾಳಿ ಹಿಂದೆ ಪರಾಗ್ವೆ ಅಧ್ಯಕ್ಷನ ಕೈವಾಡ? Online Desk
ವಿದೇಶ

ದೇಶದ ಅರ್ಧದಷ್ಟು ಜನರ ಡೆಪಾಸಿಟ್ ಇದ್ದ ಬ್ಯಾಂಕ್ ಆರ್ಥಿಕ ಪತನ: ಯುವೆನೊ ಬ್ಯಾಂಕ್ ದಿವಾಳಿ ಹಿಂದೆ ಪರಾಗ್ವೆ ಅಧ್ಯಕ್ಷನ ಕೈವಾಡ?

ದಕ್ಷಿಣ ಅಮೆರಿಕಾದ ಪರಾಗ್ವೆ ದೇಶದ ಪ್ರಮುಖ ಡಿಜಿಟಲ್ ಬ್ಯಾಂಕ್ ಆದ ಯುನೊ ಬ್ಯಾಂಕ್ ಭ್ರಷ್ಟಾಚಾರದಿಂದಾಗಿ ದಿವಾಳಿಯಾಗಿದ್ದು, ಈ ಆರ್ಥಿಕ ಹಗರಣವು ಅಲ್ಲಿನ ಅಧ್ಯಕ್ಷರನ್ನೇ ಅಧಿಕಾರದಿಂದ ಕೆಳಗಿಳಿಸುವ ಮೂಲಕ ಇಡೀ ದೇಶದ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಆ ಕುರಿತ ವರದಿ ಇಲ್ಲಿದೆ:

ಅಸುನ್ಸಿಯಾನ್ (ಪರಾಗ್ವೆ): ಒಂದು ಕಾಲದಲ್ಲಿ ಡಿಜಿಟಲ್ ಕ್ರಾಂತಿಯ ಮುಂಚೂಣಿಯಲ್ಲಿದ್ದ ಜನಪ್ರಿಯ ಬ್ಯಾಂಕ್ ಒಂದರ ದಿಢೀರ್ ಕುಸಿತವು ಇಡೀ ದೇಶದ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಅದರಲ್ಲೂ, ಲಕ್ಷಾಂತರ ಜನರ ಜೀವಮಾನದ ಉಳಿತಾಯ ಒಂದೇ ರಾತ್ರಿಗೆ ಕರಗಿಹೋಗಿ, ಕೋಪಗೊಂಡ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸುವಂತಾಗಿದೆ. ಹೌದು, ಪರಾಗ್ವೆಯ ಒಟ್ಟು ಜನಸಂಖ್ಯೆಯ ಸುಮಾರು ಅರ್ಧದಷ್ಟು ಗ್ರಾಹಕರನ್ನು ಹೊಂದಿದ್ದ ಯುನೊ ಬ್ಯಾಂಕ್ ದಿವಾಳಿಯಾಗಿ ತನಿಖೆಗೆ ಒಳಗಾಗುತ್ತಿದ್ದಂತೆ, ರಾತ್ರೋರಾತ್ರಿ ಜನರ ಬ್ಯಾಂಕ್ ಕಾರ್ಡ್‌ಗಳು, ಮೊಬೈಲ್ ಆಪ್‌ಗಳು ಮತ್ತು ನಗದು ವರ್ಗಾವಣೆ ಸಂಪೂರ್ಣ ಸ್ಥಗಿತಗೊಂಡವು. ತಮ್ಮದೇ ಕಷ್ಟದ ಹಣ ಮತ್ತು ಪಿಂಚಣಿ ಹಣವನ್ನು ಹಿಂಪಡೆಯಲು ಲಕ್ಷಾಂತರ ಜನ ಬೀದಿಗೆ ಬಂದು ಬ್ಯಾಂಕ್‌ಗಳ ಮುಂಭಾಗ ಕಣ್ಣೀರಿಡುತ್ತಾ ಸಾಲಾಗಿ ನಿಲ್ಲುವಂತಾಯಿತು. ಆ ಕುರಿತ ವರದಿ ಇಲ್ಲಿದೆ:

ಏನಿದು ಬ್ಯಾಂಕಿಂಗ್ ಬಿಕ್ಕಟ್ಟು?

ಪರಾಗ್ವೆಯ ಅತ್ಯಂತ ವೇಗವಾಗಿ ಬೆಳೆದ ಡಿಜಿಟಲ್ ಬ್ಯಾಂಕ್ ಆದ ಯುವೆನೊ ಬ್ಯಾಂಕ್ ಅನ್ನು ಅಲ್ಲಿನ ಕೇಂದ್ರೀಯ ಬ್ಯಾಂಕ್ ನವೆಂಬರ್ 2026ರ ಆರಂಭದಲ್ಲಿ ಮುಚ್ಚಲು ಆದೇಶಿಸಿತು. ಬ್ಯಾಂಕಿನ ಆರ್ಥಿಕ ಸ್ಥಿರತೆಯು ಕಾನೂನಾತ್ಮಕ ಮಿತಿಗಿಂತ ಅರ್ಧಕ್ಕಿಂತಲೂ ಕಡಿಮೆ ಕುಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು.

ಅರ್ಧದಷ್ಟು ಜನರಿಗೆ ಹಣವಿಲ್ಲದ್ದೇಕೆ?

ಈ ಬ್ಯಾಂಕ್ ದೇಶದ ಸಣ್ಣ ವ್ಯಾಪಾರಿಗಳು, ಬಡವರು ಮತ್ತು ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಆಫರ್‌ಗಳನ್ನು ನೀಡಿ ಭಾರಿ ಜನಪ್ರಿಯತೆ ಗಳಿಸಿತ್ತು. ದೇಶದ ವಯಸ್ಕ ಜನಸಂಖ್ಯೆಯ ಸುಮಾರು ಶೇ. 60 ರಷ್ಟು (ಅಂದರೆ ಸುಮಾರು 30 ಲಕ್ಷ ಜನ) ಈ ಬ್ಯಾಂಕಿನ ಗ್ರಾಹಕರಾಗಿದ್ದರು. ಹಾಗಾಗಿ, ಈ ಬ್ಯಾಂಕ್ ಮುಚ್ಚಿದ್ದರಿಂದ ರಾತ್ರೋರಾತ್ರಿ ಜನರ ಖಾತೆಗಳು ಫ್ರೀಜ್ ಆದವು. ಜನರು ದಿನಸಿ, ಹಾಲು, ಬ್ರೆಡ್ ಕೊಳ್ಳಲು ಅಥವಾ ಸಂಬಳ ಪಡೆಯಲು ಮತ್ತು ಹಣ ವರ್ಗಾವಣೆ ಮಾಡಲು ಸಾಧ್ಯವಾಗದೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಅದರಲ್ಲೂ, ದೇಶದ ಸರ್ಕಾರಿ ನೌಕರರ ನಿವೃತ್ತಿ ಪಿಂಚಣಿ ಮತ್ತು ಆರೋಗ್ಯ ನಿಧಿಯ ಸುಮಾರು 380 ಮಿಲಿಯನ್ ಡಾಲರ್ ಸಾರ್ವಜನಿಕ ಹಣವನ್ನು ಇದೇ ಬ್ಯಾಂಕಿನಲ್ಲಿ ಹೂಡಿಕೆ ಮಾಡಲಾಗಿದ್ದು, ಅದು ಕೂಡ ಸಿಲುಕಿಕೊಂಡಿದೆ.

ಮುಂದುವರೆದು, ಭ್ರಷ್ಟಾಚಾರದ ಆರೋಪಗಳು ನೇರವಾಗಿ ಪರಾಗ್ವೆಯ ಪ್ರಸ್ತುತ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರ ಮೇಲೆಯೇ ಕೇಳಿಬಂದವು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಅವರು ತಮ್ಮ ಸಾಮಾಜಿಕ ಜಾಲತಾಣ 'X' ನಲ್ಲಿ ರಾಜೀನಾಮೆ ಘೋಷಿಸಿದರು. ಆದರೆ, ಅವರ ರಾಜೀನಾಮೆಯನ್ನು ತಿರಸ್ಕರಿಸಿದ ಅಲ್ಲಿನ ಸಂಸತ್ತು ನವೆಂಬರ್ 6ರಂದು ಸರ್ವಾನುಮತದಿಂದ ಅವರ ವಿರುದ್ಧ ದೋಷಾರೋಪಣೆ ನಿರ್ಣಯ ಅಂಗೀಕರಿಸಿ ಅಧಿಕಾರದಿಂದ ವಜಾಗೊಳಿಸಿತು ಮತ್ತು ಸದ್ಯ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ಹಾಗಾದ್ರೆ, ಅಕ್ರಮಗಳು ನಡೆದಿದ್ದು ಹೇಗೆ?

ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರು ಈ ಹಿಂದೆ ಇದೇ ಬ್ಯಾಂಕ್‌ನ ಹೋಲ್ಡಿಂಗ್ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದರು. ದೇಶದ ಅಧ್ಯಕ್ಷರಾದ ನಂತರ ಅವರು ಯುನೊ ಬ್ಯಾಂಕ್‌ನ ಮಾಜಿ ಮುಖ್ಯಸ್ಥರನ್ನೇ ದೇಶದ ಸೆಂಟ್ರಲ್ ಬ್ಯಾಂಕ್‌ನ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಈ ಅಧಿಕಾರ ದುರ್ಬಳಕೆಯನ್ನು ಬಳಸಿಕೊಂಡು ಬ್ಯಾಂಕ್ ನಿಯಮಗಳನ್ನು ಗಾಳಿಗೆ ತೂರಿ, ತನ್ನದೇ ಮಾಲೀಕರ ಒಡೆತನದ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಅಕ್ರಮ ಸಾಲ ನೀಡಿತ್ತು. ಅಷ್ಟೇ ಅಲ್ಲದೆ, ಸರ್ಕಾರದ ಸುಮಾರು $355 ಮಿಲಿಯನ್ ಪಿಂಚಣಿ ಹಣವನ್ನು ಕಾನೂನು ಬಾಹಿರವಾಗಿ ಇದೇ ಬ್ಯಾಂಕ್‌ನಲ್ಲಿ ಇಡಲಾಗಿತ್ತು. ಇನ್ನು, ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಂಸ್ಥಾಪಕ ಮಿಗುಯೆಲ್ ವಾಸ್ಕ್ವೆಜ್, ಬ್ಯಾಂಕ್ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಗುಸ್ಟಾಲೆ ಸೇರಿದಂತೆ 8 ಕ್ಕೂ ಹೆಚ್ಚು ಉನ್ನತಾಧಿಕಾರಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಸದ್ಯ ಅಧ್ಯಕ್ಷರ ಪದಚ್ಯುತಿಯ ನಂತರ ಉಪಾಧ್ಯಕ್ಷರಾಗಿದ್ದ ಪೆಡ್ರೊ ಅಲ್ಲಿಸಾನಾ ಅವರನ್ನು ಪರಾಗ್ವೆಯ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬ್ಯಾಂಕಿನ ಗ್ರಾಹಕರಿಗೆ ಠೇವಣಿ ವಿಮೆ ಅಡಿಯಲ್ಲಿ (ಸುಮಾರು $35,000 ವರೆಗೆ) ಹಣವನ್ನು ಹಂತಹಂತವಾಗಿ ಮರಳಿ ನೀಡುವ ಪ್ರಕ್ರಿಯೆಯನ್ನು ಕೇಂದ್ರೀಯ ಬ್ಯಾಂಕ್ ಆರಂಭಿಸಿದೆಯಾದರೂ, ದೇಶದ ಆರ್ಥಿಕ ವಿವಾಸ ಸಂಪೂರ್ಣವಾಗಿ ಕುಸಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಶುದ್ಧೀಕರಣವಾಗುವರೆಗೂ ಆಯೋಗದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಮುಂದೂಡಿ: HD ಕುಮಾರಸ್ವಾಮಿ

2028ರ ಅಧ್ಯಕ್ಷೀಯ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜೆಡಿ ವ್ಯಾನ್ಸ್ ಟ್ರಂಪ್‌ರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ!

'ಕುಮಾರಸ್ವಾಮಿ ತ್ಯಾಪೆ ಗಿರಾಕಿ, ಇವರಿಗೆ ಅಧಿಕಾರ ಬಿಟ್ಟುಕೊಡಲು ಬಿಜೆಪಿಯಲ್ಲಿ CM ಆಗುವಂತಹ ಗಂಡಸರು ಇಲ್ವಾ'?

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಬೇಡಿಕೆಗೆ ಕೋರ್ಟ್ ಅಸ್ತು; ಆದರೆ ಷರತ್ತುಗಳು ಅನ್ವಯ!

'ಅವರ ಸೀರೆ, ಎದೆಯ ಮೇಲೂ ರಕ್ತ': ಇಂದಿರಾ ಗಾಂಧಿ ಹತ್ಯೆಯ ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಸೋನಿಯಾ!