ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಚೀನಾ ನಿರ್ಮಿಸುತ್ತಿರುವ ಬಹುಕೋಟಿ ವೆಚ್ಚದ ತರ್ಬೆಲಾ ಅಣೆಕಟ್ಟು ವಿಸ್ತರಣಾ ಯೋಜನೆಗೆ ಮತ್ತೊಂದು ಹಿನ್ನಡೆಯಾಗಿದ್ದು, ಕಾಮಗಾರಿ ನಡೆಯುತ್ತಿದ್ದ ವೇಳೆ ಸುರಂಗ ಕೊರೆಯುವಾಗ ಬೃಹತ್ ಬಂಡೆ ಕುಸಿದು ನೀರು ನಿರ್ಮಾಣ ಸ್ಥಳಕ್ಕೆ ನುಗ್ಗಿದೆ.
ಪಾಕಿಸ್ತಾನದ ತರ್ಬೆಲಾ ಅಣೆಕಟ್ಟಿನ ಐದನೇ ಹಂತದ ವಿಸ್ತರಣಾ ಜಲವಿದ್ಯುತ್ ಯೋಜನೆಯ ಕಾಮಗಾರಿ ವೇಳೆ ಈ ಘಟನೆ ಸಂಭವಿಸಿದೆ. 1,530 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಈ ಯೋಜನೆಗೆ ಚೀನಾ ಕಂಪನಿಗಳೂ ಕೈಜೋಡಿಸಿವೆ.
ಸಂಪರ್ಕ ಸುರಂಗ ನಿರ್ಮಾಣಕ್ಕಾಗಿ ಬಂಡೆ ಕೊರೆಯುತ್ತಿದ್ದಾಗ ದುರ್ಬಲವಾಗಿದ್ದ ಬಂಡೆಯ ಬೃಹತ್ ಭಾಗವೊಂದು ಕುಸಿದಿದೆ. ಇದರಿಂದ ನೀರು ಸುರಂಗದೊಳಗೆ ನುಗ್ಗಿ ವಿದ್ಯುತ್ ಉತ್ಪಾದನಾ ಘಟಕದ ಪ್ರದೇಶಕ್ಕೂ ಹರಿದಿದೆ.
ಇದರಿಂದ ಕಾರ್ಮಿಕರನ್ನು ತುರ್ತಾಗಿ ಸ್ಥಳಾಂತರಿಸಲಾಗಿದ್ದು, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಲ್ಲಾ ಕಾರ್ಮಿಕರು ಸುರಕ್ಷಿತ
ಘಟನೆ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನದ ಜಲ ಮತ್ತು ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ (ವಾಪ್ಡಾ), ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಅಥವಾ ಸಾವು ಸಂಭವಿಸಿಲ್ಲ ಎಂದು ತಿಳಿಸಿದೆ.
ಮುಖ್ಯ ಸುರಂಗ, ವಿದ್ಯುತ್ ಉತ್ಪಾದನಾ ಘಟಕ, ನೀರು ಹೊರಹರಿಯುವ ಮಾರ್ಗ ಹಾಗೂ ಸ್ವಿಚ್‌ಯಾರ್ಡ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸದ್ಯ ಕಾಮಗಾರಿ ಸ್ಥಳದಲ್ಲಿ ನುಗ್ಗಿರುವ ನೀರನ್ನು ಹೊರಹಾಕುವ ಕಾರ್ಯ (Dewatering) ಆರಂಭಿಸಲಾಗಿದೆ. ಯೋಜನೆಗೆ ಆಗಿರುವ ಹಾನಿ ಮತ್ತು ಮುಂದಿನ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು 'ಡಾನ್' ವರದಿ ಮಾಡಿದೆ.
ಇದೇ ಮೊದಲೇನಲ್ಲ; ಈ ಹಿಂದೆ ಕೂಡ ಕುಸಿದಿತ್ತು
ತರ್ಬೆಲಾ ಅಣೆಕಟ್ಟು ಯೋಜನೆಯಲ್ಲಿ ಈ ರೀತಿಯ ಅವಘಡ ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆಯಷ್ಟೇ ಇದೇ ಯೋಜನೆಯಲ್ಲಿ ನೀರು ತಡೆಗಟ್ಟಲು ನಿರ್ಮಿಸಿದ್ದ ತಾತ್ಕಾಲಿಕ ಅಣೆಕಟ್ಟು (ಕಾಫರ್‌ಡ್ಯಾಮ್) ಕುಸಿದಿತ್ತು.
ಈ ಘಟನೆ ಕುರಿತು ಸರ್ಕಾರ ನಡೆಸಿದ ತನಿಖೆಯಲ್ಲಿ ಅನುಮತಿಯಿಲ್ಲದೆ ವಿನ್ಯಾಸ ಬದಲಾವಣೆ ಮಾಡಿರುವುದು ಹಾಗೂ ಗುತ್ತಿಗೆದಾರರು, ಸಲಹೆಗಾರರು ಮತ್ತು ವಾಪ್ಡಾ ನಡುವಿನ ಒಪ್ಪಂದದ ಲೋಪಗಳು ಅವಘಡಕ್ಕೆ ಕಾರಣವಾಗಿವೆ ಎಂದು ತಿಳಿದುಬಂದಿತ್ತು.
ಹಿಂದಿನ ಅವಘಡದಿಂದ ಯೋಜನೆ ಕನಿಷ್ಠ ಎರಡು ವರ್ಷ ವಿಳಂಬವಾಗಿತ್ತು. ಅಲ್ಲದೆ, ಯೋಜನೆಯ ವೆಚ್ಚವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆರಂಭದಲ್ಲಿ 82 ಶತಕೋಟಿ ಪಾಕಿಸ್ತಾನಿ ರೂಪಾಯಿ (PKR) ಎಂದು ಅಂದಾಜಿಸಲಾಗಿದ್ದ ಯೋಜನಾ ವೆಚ್ಚ ಇದೀಗ 317 ಶತಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಶೇ.285ಕ್ಕೂ ಹೆಚ್ಚು ಹೆಚ್ಚಳವಾಗಿದೆ.
2026ರ ಬದಲು 2028ಕ್ಕೆ ಪೂರ್ಣಗೊಳಿಸುವ ಗುರಿ
ಚೀನಾ ಕಂಪನಿಗಳು ಭಾಗಿಯಾಗಿರುವ ಈ ಜಲವಿದ್ಯುತ್ ಯೋಜನೆಯನ್ನು ಆರಂಭದಲ್ಲಿ 2026ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಸರಣಿ ಅವಘಡಗಳು ಮತ್ತು ಕಾಮಗಾರಿ ವಿಳಂಬದಿಂದಾಗಿ ಇದೀಗ 2028ರ ಜೂನ್‌ಗೆ ಪೂರ್ಣಗೊಳಿಸುವ ಹೊಸ ಗುರಿ ನಿಗದಿಪಡಿಸಲಾಗಿದೆ.
ಈ ಯೋಜನೆಗೆ ವಿಶ್ವಬ್ಯಾಂಕ್ ಮತ್ತು ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗಳು ಸಾಲದ ರೂಪದಲ್ಲಿ ಭಾಗಶಃ ಹಣಕಾಸು ನೆರವು ನೀಡುತ್ತಿವೆ.