ಮಿಯಾಮಿ: ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ದುರಂತವೊಂದು ತಪ್ಪಿದ್ದು, ಎರಡು ಬೋಯಿಂಗ್ ವಿಮಾನಗಳು ಡಿಕ್ಕಿಯಾಗಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ ವಿಮಾನಗಳು ಟ್ಯಾಕ್ಸಿವೇ ಮೂಲಕ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪನಾಮಾದಿಂದ ಬಂದಿದ್ದ ಕೋಪಾ ಏರ್‌ಲೈನ್ಸ್‌ನ ಪ್ರಯಾಣಿಕರ ವಿಮಾನ ಮತ್ತು ಯುಪಿಎಸ್ ಕಾರ್ಗೊ ವಿಮಾನ ಪರಸ್ಪರ ಡಿಕ್ಕಿಯಾಗಿವೆ.
ಕೋಪಾ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನದಲ್ಲಿ 166 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಇದ್ದರು. ವಿಮಾನದ ರೆಕ್ಕೆಯ ತುದಿ, ಟೇಕ್‌ಆಫ್‌ಗೆ ಸಿದ್ಧವಾಗುತ್ತಿದ್ದ ಯುಪಿಎಸ್‌ನ ಬೋಯಿಂಗ್ 767 ಕಾರ್ಗೊ ವಿಮಾನದ ಮುಂಭಾಗಕ್ಕೆ ತಾಗಿದೆ. ರಾತ್ರಿ ಸುಮಾರು 9.15ರ ವೇಳೆಗೆ ಈ ಘಟನೆ ಸಂಭವಿಸಿದೆ.
ಇಬ್ಬರಿಗೆ ಸಣ್ಣಪುಟ್ಟ ಗಾಯ
ಡಿಕ್ಕಿಯ ಬಳಿಕ ಕೋಪಾ ಏರ್‌ಲೈನ್ಸ್ ವಿಮಾನವನ್ನು ಟರ್ಮಿನಲ್‌ಗೆ ತರಲಾಗಿದ್ದು, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮಾನ ನಿಲ್ದಾಣದ ವೈದ್ಯಕೀಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಉಳಿದ ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕೋಪಾ ಏರ್‌ಲೈನ್ಸ್ ಹೇಳಿದೆ.
'ಯಾರೋ ನಮಗೆ ಡಿಕ್ಕಿ ಹೊಡೆದರು' ಎಂದ ಪೈಲಟ್
ವಿಮಾನಗಳ ಡಿಕ್ಕಿಯ ಬಳಿಕ ವಾಯು ಸಂಚಾರ ನಿಯಂತ್ರಣ ಕೊಠಡಿಯೊಂದಿಗೆ ಪೈಲಟ್‌ಗಳು ನಡೆಸಿದ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಯಾರೋ ನಮಗೆ ಡಿಕ್ಕಿ ಹೊಡೆದಿದ್ದಾರೆ" ಎಂದು ಕೋಪಾ ವಿಮಾನದ ಪೈಲಟ್ ನಿಯಂತ್ರಣ ಕೊಠಡಿಗೆ ತಿಳಿಸಿದ್ದಾರೆ. ಈ ವೇಳೆ ಯುಪಿಎಸ್ ವಿಮಾನದ ಪೈಲಟ್ ಪ್ರತಿಕ್ರಿಯಿಸಿ, "ನಾವು ಸ್ವಲ್ಪ ಮುಂದೆ ಹೋಗಿದ್ದೆವು. ಆಗ ನಮ್ಮ ರೆಕ್ಕೆ ಅವರ ವಿಮಾನಕ್ಕೆ ತಾಗಿದೆ" ಎಂದು ಹೇಳಿದ್ದಾರೆ.
ನಂತರ ಕೋಪಾ ವಿಮಾನದ ಪೈಲಟ್, "ನಮ್ಮ ಎಡಭಾಗದ ರೆಕ್ಕೆಯ ತುದಿ ಹಾನಿಗೊಂಡಿರುವಂತೆ ಕಾಣುತ್ತಿದೆ" ಎಂದು ತಿಳಿಸಿದ್ದಾರೆ.
ಎರಡು ತಿಂಗಳಲ್ಲಿ 2ನೇ ದೊಡ್ಡ ಅವಘಡ
ಮಿಯಾಮಿ ವಿಮಾನ ನಿಲ್ದಾಣದಲ್ಲಿ ಎರಡು ತಿಂಗಳ ಅಂತರದಲ್ಲಿ ಸಂಭವಿಸಿದ ಎರಡನೇ ಪ್ರಮುಖ ವಿಮಾನ ಅವಘಡ ಇದಾಗಿದೆ. ಸೆಪ್ಟೆಂಬರ್ 6ರಂದು ಅಮೆಜಾನ್‌ನ ಕಾರ್ಗೊ ವಿಮಾನವೊಂದು ರನ್‌ವೇಯಿಂದ ನಿಯಂತ್ರಣ ತಪ್ಪಿ ಹೊರಗೆ ನುಗ್ಗಿತ್ತು. ಈ ವೇಳೆ ವಾಹನಗಳಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಮೃತಪಟ್ಟಿದ್ದರು. ಮತ್ತ ಐವರಿಗೆ ಗಾಯಗಳಾಗಿದ್ದವು.
ಸೆಪ್ಟೆಂಬರ್ 6ರಂದು ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಿಂದ ಬಂದಿದ್ದ ಬೋಯಿಂಗ್ 767 ವಿಮಾನ ಮಧ್ಯಾಹ್ನ ಸುಮಾರು 2 ಗಂಟೆಗೆ ರನ್‌ವೇಯಲ್ಲಿ ಇಳಿಯುವ ಪ್ರಯತ್ನದ ವೇಳೆ ನಿಯಂತ್ರಣ ತಪ್ಪಿತ್ತು. ತನಿಖಾಧಿಕಾರಿಗಳು ಬಿಡುಗಡೆ ಮಾಡಿದ ವಿಮಾನ ದತ್ತಾಂಶದ ಪ್ರಕಾರ, ವಿಮಾನವು ಲ್ಯಾಂಡಿಂಗ್ ರದ್ದುಗೊಳಿಸಲು ಪ್ರಯತ್ನಿಸಿತ್ತು. ಬಳಿಕ ಬೇಲಿ ಮುರಿದು ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು.