ಮಸ್ಕತ್: ಒಮಾನ್ ಕರಾವಳಿಯ ಹಾರ್ಮುಜ್ ಜಲಸಂಧಿಯ (Strait of Hormuz) ಬಳಿ ಸಂಚರಿಸುತ್ತಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದ್ದು, ಬೆಂಕಿ ಹೊತ್ತಿಕೊಂಡು ಹಡಗು ನಿಷ್ಕ್ರಿಯಗೊಂಡಿದೆ. ಈ ಆಯಕಟ್ಟಿನ ಜಲಮಾರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಹಾನಿಗೊಳಗಾದ ನಾಲ್ಕನೇ ಹಡಗು ಇದಾಗಿದೆ ಎಂದು ಬ್ರಿಟನ್‌ನ ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ತಿಳಿಸಿದೆ. ಇರಾನ್ ನೌಕಾಪಡೆಯೂ ಘಟನೆಯನ್ನು ದೃಢಪಡಿಸಿದ್ದು, ಟ್ಯಾಂಕರ್‌ಗೆ ಗಣನೀಯ ಹಾನಿಯಾಗಿದೆ ಎಂದು ಹೇಳಿದೆ.
ಒಮನ್ ಸಮೀಪ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಯುಕೆಎಂಟಿಒ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದೆ.
ದಾಳಿಯಿಂದ ಹಡಗು ಕಾರ್ಯನಿರ್ವಹಿಸುವ ಸ್ಥಿತಿಯನ್ನು ಕಳೆದುಕೊಂಡಿದ್ದು, ಅದರ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಹಾನಿಯ ಪ್ರಮಾಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಸಂಸ್ಥೆ ತಿಳಿಸಿದೆ.
ಆದರೆ, ಇರಾನ್ ನೌಕಾಪಡೆಯ ಪ್ರಕಾರ, ಈ ತೈಲ ಟ್ಯಾಂಕರ್ ನಿರ್ಬಂಧಿತ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿತ್ತು. ಅಲ್ಲದೆ, ಅದರ ಸಂಚಾರ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿತ್ತು.
ಹಾರ್ಮುಜ್ ಜಲಸಂಧಿಯ ಪೂರ್ವ ಭಾಗದಲ್ಲಿರುವ ನಿರ್ಬಂಧಿತ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್ ತನ್ನ ಸಂಚಾರ ವ್ಯವಸ್ಥೆಯನ್ನು ಆಫ್ ಮಾಡಿಕೊಂಡಿತ್ತು ಎಂದು ಇರಾನ್ ನೌಕಾಪಡೆಯ ಸಾರ್ವಜನಿಕ ಸಂಪರ್ಕ ವಿಭಾಗ ಹೇಳಿದೆ. ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿ ಈ ಹೇಳಿಕೆಯನ್ನು ಪ್ರಕಟಿಸಿದೆ.
ಸಶಸ್ತ್ರ ಪಡೆಗಳೊಂದಿಗೆ ಯಾವುದೇ ಸಮನ್ವಯ ಸಾಧಿಸದೆ, ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಸಂಚರಿಸುವ ಹಡಗುಗಳು ಸಮುದ್ರದಲ್ಲಿನ ನೆಲಬಾಂಬ್‌ಗಳು ಮತ್ತು ಬೆಂಕಿಯ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ನೌಕಾಪಡೆ ಎಚ್ಚರಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತವಾಗಿ ಸಂಚರಿಸಲು ಇರಾನ್ ಪಡೆಗಳೊಂದಿಗೆ ಸಮನ್ವಯ ಸಾಧಿಸುವುದು ಕಡ್ಡಾಯ ಎಂದು ಪ್ರತಿಪಾದಿಸಿರುವ ನೌಕಾಪಡೆ, ಈ ಪ್ರದೇಶದಲ್ಲಿ ಸಂಚರಿಸುವ ಎಲ್ಲ ಹಡಗುಗಳು ಸಮುದ್ರಯಾನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದೆ.
ಇದಕ್ಕೂ ಒಂದು ದಿನ ಮೊದಲು ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಂದು ತೈಲ ಟ್ಯಾಂಕರ್ ಮೇಲೆ ಅಪರಿಚಿತ ವಸ್ತುವಿನಿಂದ ದಾಳಿ ನಡೆದಿತ್ತು. ಇದರಿಂದ ಹಡಗಿನ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ತಿಳಿಸಿತ್ತು.
ವ್ಯಾಂಗಾರ್ಡ್ ಎಂಬ ಭದ್ರತಾ ಮೇಲ್ವಿಚಾರಣಾ ಸಂಸ್ಥೆಯು ಆ ಟ್ಯಾಂಕರ್ ಅನ್ನು ಪನಾಮ ಧ್ವಜ ಹೊಂದಿದ್ದ 'ಒಎನ್ ಫೀನಿಕ್ಸ್' ಎಂದು ಗುರುತಿಸಿತ್ತು. ಒಮನ್ ಕರಾವಳಿಯಿಂದ ಮೂರು ನಾಟಿಕಲ್ ಮೈಲು ದೂರದಲ್ಲಿ ಹಡಗಿನ ಮೇಲೆ ದಾಳಿ ನಡೆದಿತ್ತು ಎಂದು ತಿಳಿಸಿತ್ತು. ಎರಡೂ ಸಂಸ್ಥೆಗಳು ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ದೃಢಪಡಿಸಿದ್ದವು.
ಇದಕ್ಕೂ ಕೆಲವು ಗಂಟೆಗಳ ಮೊದಲು ಎರಡು ತೈಲ ಟ್ಯಾಂಕರ್‌ಗಳು ನೌಕಾ ನೆಲಬಾಂಬ್‌ಗಳಿಗೆ ಡಿಕ್ಕಿ ಹೊಡೆದಿದ್ದವು. ನಿಷೇಧಿತ ಮಾರ್ಗದ ಮೂಲಕ ಹಾರ್ಮುಜ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಇರಾನ್ ಹೇಳಿತ್ತು. ಇದರಿಂದ ಎರಡೂ ಹಡಗುಗಳಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿತ್ತು.
ಈ ಪ್ರದೇಶದಲ್ಲಿ ಹಡಗುಗಳ ಸಂಚಾರದ ಮೇಲೆ ಹಲವು ವಾರಗಳಿಂದ ನಿರ್ಬಂಧಗಳಿದ್ದು, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಫೆಬ್ರವರಿಯಲ್ಲಿ ಯುದ್ಧ ಆರಂಭಿಸಿದ ಬಳಿಕ ಸಂಘರ್ಷ ನಿರಂತರವಾಗಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ನಿರ್ಬಂಧಿತ ಸಮುದ್ರ ಪ್ರದೇಶ ಪ್ರವೇಶಿಸದಂತೆ ಇರಾನ್ ಹಲವು ಬಾರಿ ಹಡಗು ನಿರ್ವಾಹಕರಿಗೆ ಎಚ್ಚರಿಕೆ ನೀಡಿದೆ.
ಇರಾನ್ ಪಡೆಗಳು ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ನಿಗದಿಪಡಿಸಿರುವ ಮಾರ್ಗದಲ್ಲೇ ಸಂಚರಿಸಬೇಕು ಎಂದು ಟೆಹರಾನ್ ಹಡಗು ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಜಲಸಂಧಿಯು ಇರಾನ್-ಅಮೆರಿಕ ಸಂಘರ್ಷದ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿದೆ.