ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಶೆನ್‌ಝೆನ್‌ನ ಕೈಲಿನ್ ವಿಲ್ಲಾದಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (ಎಡ), ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (ಮಧ್ಯ) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಬಲ). 
ವಿದೇಶ

ಚೀನಾದಲ್ಲಿ ಐತಿಹಾಸಿಕ ತ್ರಿಪಕ್ಷೀಯ ಸಭೆ ಮುಕ್ತಾಯ; ಶಾಂತಿ ಘೋಷಣೆಗೆ ಟ್ರಂಪ್, ಪುಟಿನ್- ಕ್ಸಿ ಜಿನ್ ಪಿಂಗ್ ಸಹಿ

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಈ ಸಭೆಯು ಸುಮಾರು 90 ನಿಮಿಷಗಳ ಕಾಲ ನಡೆಯಿತು. ಕಾರ್ಯತಂತ್ರದ ಸ್ಥಿರತೆ ಮತ್ತು ಅಂತರರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಬದ್ಧತೆಯನ್ನು ಮೂವರು ನಾಯಕರು ಪುನರುಚ್ಚರಿಸಿದರು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಚೀನಾದ ಶೆನ್‌ಜೆನ್‌ನಲ್ಲಿ ನಡೆದ ಮೊಟ್ಟಮೊದಲ ತ್ರಿಪಕ್ಷೀಯ ಸಭೆಯ ಬಳಿಕ ಜಂಟಿ ಶಾಂತಿ ಘೋಷಣೆಯನ್ನು ಅಂಗೀಕರಿಸಿದರು. ಸಭೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ, ಉಕ್ರೇನ್ ಮತ್ತು ಇರಾನ್‌ನಲ್ಲಿನ ಯುದ್ಧಗಳು ಹಾಗೂ ಜಾಗತಿಕ ಇಂಧನ ಭದ್ರತೆ ಕುರಿತು ಚರ್ಚಿಸಿದರು.

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಈ ಸಭೆಯು ಸುಮಾರು 90 ನಿಮಿಷಗಳ ಕಾಲ ನಡೆಯಿತು. ಕಾರ್ಯತಂತ್ರದ ಸ್ಥಿರತೆ ಮತ್ತು ಅಂತರರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಬದ್ಧತೆಯನ್ನು ಮೂವರು ನಾಯಕರು ಪುನರುಚ್ಚರಿಸಿದರು ಎಂದು ಕ್ರೆಮ್ಲಿನ್ ಪ್ರಕಟಿಸಿರುವ ಘೋಷಣೆಯಲ್ಲಿ ತಿಳಿಸಲಾಗಿದೆ.

ಪರಮಾಣು ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಯಲು ಮೂರು ದೇಶಗಳು ಮಾತುಕತೆ ನಡೆಸಲಿವೆ ಎಂದು ಘೋಷಣೆಯಲ್ಲಿ ಹೇಳಲಾಗಿದೆ. ಅಲ್ಲದೆ, ಪರಮಾಣು ಯುದ್ಧದಲ್ಲಿ ಯಾರೂ ಗೆಲ್ಲಲು ಸಾಧ್ಯವಿಲ್ಲ ಮತ್ತು ಅಂತಹ ಯುದ್ಧ ಎಂದಿಗೂ ನಡೆಯಬಾರದು ಎಂಬ ನಿಲುವನ್ನೂ ಪುನರುಚ್ಚರಿಸಲಾಗಿದೆ.

ಸಭೆಯ ಆತಿಥ್ಯ ವಹಿಸಿದ್ದ ಕ್ಸಿ, ವಿಶ್ವ ಶಾಂತಿಯನ್ನು ಉತ್ತೇಜಿಸುವ ಕುರಿತು ಮೂರು ದೇಶಗಳು ಚರ್ಚಿಸಲಿವೆ ಎಂದರು. ಎರಡನೇ ಮಹಾಯುದ್ಧದಲ್ಲಿ ವಿಜಯ ಸಾಧಿಸಿದ ರಾಷ್ಟ್ರಗಳೆಂಬ ಹಂಚಿಕೆಯ ಇತಿಹಾಸವನ್ನು ಉಲ್ಲೇಖಿಸಿದ ಪುಟಿನ್, ಅಂತರರಾಷ್ಟ್ರೀಯ ಶಾಂತಿಯನ್ನು ಕಾಪಾಡುವ ಜವಾಬ್ದಾರಿ ಈ ದೇಶಗಳ ಮೇಲಿದೆ ಎಂದು ಹೇಳಿದರು.

ಫೆಬ್ರವರಿಯಲ್ಲಿ ನ್ಯೂ ಸ್ಟಾರ್ಟ್ (New START) ಒಪ್ಪಂದದ ಅವಧಿ ಮುಕ್ತಾಯಗೊಂಡ ಬಳಿಕ ವಾಷಿಂಗ್ಟನ್ ಮತ್ತು ಮಾಸ್ಕೋ ನಡುವೆ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದ ಇಲ್ಲದಿರುವುದು ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದಿದೆ.

ಚೀನಾವನ್ನೂ ಒಳಗೊಂಡ ಹೊಸ ಮತ್ತು ಆಧುನೀಕೃತ ಪರಮಾಣು ಶಸ್ತ್ರಾಸ್ತ್ರ ಒಪ್ಪಂದಕ್ಕೆ ಮಾತುಕತೆ ನಡೆಸಲು ಟ್ರಂಪ್ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದರೆ, ಅಮೆರಿಕ ಮತ್ತು ರಷ್ಯಾಗಿಂತ ಗಣನೀಯವಾಗಿ ಕಡಿಮೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾ, ತನ್ನ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಮಿತಿ ವಿಧಿಸುವ ಪ್ರಸ್ತಾಪಕ್ಕೆ ಈವರೆಗೆ ಹೆಚ್ಚಿನ ಒಲವು ತೋರಿಸಿಲ್ಲ.

ಉಕ್ರೇನ್ ಮತ್ತು ಇರಾನ್‌ನಲ್ಲಿನ ಯುದ್ಧಗಳ ಬಗ್ಗೆಯೂ ನಾಯಕರು ಚರ್ಚಿಸಿದರು. ಎರಡೂ ದೇಶಗಳ ನಾಯಕರೊಂದಿಗಿನ ಸಂಬಂಧವನ್ನು ಬಳಸಿಕೊಂಡು ಸಂಘರ್ಷಗಳನ್ನು ಅಂತ್ಯಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ.

ಉಕ್ರೇನ್ ಸಂಘರ್ಷವು ವಾಷಿಂಗ್ಟನ್ ಮತ್ತು ಮಾಸ್ಕೋ ನಡುವಿನ ಪ್ರಮುಖ ಭಿನ್ನಾಭಿಪ್ರಾಯವಾಗಿ ಮುಂದುವರಿದಿದೆ. ರಷ್ಯಾ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸಲು ಟ್ರಂಪ್ ಆಡಳಿತ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿದೆ. 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಬಳಿಕ ಚೀನಾ ಮಾಸ್ಕೋ ಜೊತೆ ನಿಕಟ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕಾಯ್ದುಕೊಂಡಿದೆ.

ಇರಾನ್ ಸಂಘರ್ಷದ ಬಗ್ಗೆಯೂ ಚರ್ಚೆ ನಡೆದಿದ್ದು, ಪ್ರಾದೇಶಿಕ ಭದ್ರತೆ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಪೂರೈಕೆಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.

ಆದರೆ, ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಅಥವಾ ಎರಡೂ ಸಂಘರ್ಷಗಳ ಕುರಿತು ಯಾವುದೇ ನಿರ್ದಿಷ್ಟ ಒಪ್ಪಂದ ಅಥವಾ ಜಂಟಿ ಪ್ರಕಟಣೆ ಸಭೆಯಲ್ಲಿ ಹೊರಬಂದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

ಟ್ರಂಪ್ ಅವರು ಕ್ಸಿ ಮತ್ತು ಪುಟಿನ್ ಜೊತೆ ಪ್ರತ್ಯೇಕ ಸಭೆಗಳನ್ನು ನಡೆಸಿದ ಬಳಿಕ ಈ ತ್ರಿಪಕ್ಷೀಯ ಮಾತುಕತೆ ನಡೆದಿದೆ. ಕ್ಸಿ ಜೊತೆಗಿನ ಟ್ರಂಪ್ ಸಭೆ ಸುಮಾರು ಒಂದು ಗಂಟೆ ನಡೆದರೆ, ಪುಟಿನ್ ಜೊತೆಗಿನ ಪ್ರತ್ಯೇಕ ಸಭೆ ಸುಮಾರು 40 ನಿಮಿಷಗಳ ಕಾಲ ನಡೆಯಿತು.

ಪರಮಾಣು ಶಸ್ತ್ರಾಸ್ತ್ರಗಳು, ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರಾದೇಶಿಕ ಸಂಘರ್ಷಗಳ ಕುರಿತ ಭಿನ್ನಾಭಿಪ್ರಾಯಗಳು ಮೂರು ದೇಶಗಳ ನಡುವಿನ ಸಂಬಂಧವನ್ನು ಪರೀಕ್ಷಿಸುತ್ತಿರುವ ಸಂದರ್ಭದಲ್ಲಿ ನಡೆದ ಈ ಸಭೆಯು ಅಪರೂಪದ ರಾಜತಾಂತ್ರಿಕ ಬೆಳವಣಿಗೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿ

ಖ್ಯಾತ ನಟನಾಗಿದ್ದರೇ ಹೆಂಡತಿ ಕಾಲಿಗೆ ಬೀಳುತ್ತಿದ್ದರಾ? 'ಪ್ರೇಮದ ಊರಲಿ' ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಮಿಕ ಪೋಸ್ಟ್!

ಭೂಗತಪಾತಕಿ ದಾವೋದ್ ಇಬ್ರಾಹಿಂ ಆಡಿ ಬೆಳೆದಿದ್ದ ಮುಂಬೈ ನಿವಾಸ ಧ್ವಂಸ!

ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ: ಮತ್ತೆ ಎಚ್​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್; ಪತ್ನಿ ಕರೀನಾ ಕಪೂರ್ ಜೊತೆಗಿನ ವಿವಾದ ಇದಕ್ಕೆ ಕಾರಣನಾ? ಪೊಲೀಸರಿಂದ ತನಿಖೆ ಶುರು!