ಬಲೂಚಿಸ್ತಾನದ ನಂತರ ಸಿಂಧ್‌ನಲ್ಲಿ ಪ್ರತ್ಯೇಕತೆಯ ಕೂಗು: ತೀವ್ರಗೊಂಡ 'ಸಿಂಧುದೇಶ' ಕೂಗು!
ಪಾಕಿಸ್ತಾನದ ಸಿಂಧ್ ಪ್ರಾಂತ್ಯವನ್ನು ವಿಭಜಿಸಿ ಹೊಸ ಆಡಳಿತಾತ್ಮಕ ಪ್ರಾಂತ್ಯಗಳನ್ನು ರಚಿಸುವ ಪಾಕ್ ಸರ್ಕಾರ ಮತ್ತು ಸೇನೆಯ ಪ್ರಸ್ತಾವನೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಪ್ರತ್ಯೇಕ ಸಿಂಧುದೇಶ ರಾಷ್ಟ್ರ ರಚನೆಯ ಕೂಗು ಮತ್ತೆ ತೀವ್ರಗೊಂಡಿದೆ. ಆ ಕುರಿತ ವರದಿ ಇಲ್ಲಿದೆ:
ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳನ್ನು ವಿಭಜಿಸಿ 12 ರಿಂದ 15 ಹೊಸ ಆಡಳಿತ ಘಟಕಗಳನ್ನು ರಚಿಸುವ ಸರ್ಕಾರ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಲೂಚಿಸ್ತಾನದ ಪ್ರತ್ಯೇಕತಾ ಹೋರಾಟದ ನಡುವೆಯೇ, ಕರಾಚಿ ಸೇರಿದಂತೆ ಸಿಂಧ್ ಪ್ರಾಂತ್ಯದಾದ್ಯಂತ ಸಾವಿರಾರು ಸಿಂಧಿ ರಾಷ್ಟ್ರೀಯವಾದಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ಬಗ್ಗೆ ಇಲ್ಲಿದೆ ಮಾಹಿತಿ:
ಈಗ ದಿಢೀರ್ ಪ್ರತಿಭಟನೆ ಭುಗಿಲೇಳಲು ಕಾರಣವೇನು?
ಪಾಕಿಸ್ತಾನದ ಪ್ರಸ್ತುತ ಇರುವ 4 ಪ್ರಾಂತ್ಯಗಳನ್ನು (ಪಂಜಾಬ್, ಸಿಂಧ್, ಖೈಬರ್ ಪಖ್ತುಂಖ್ವಾ, ಬಲೂಚಿಸ್ತಾನ) ವಿಭಜಿಸಿ 12 ರಿಂದ 15 ಸಣ್ಣ ಆಡಳಿತ ಪ್ರಾಂತ್ಯಗಳನ್ನಾಗಿ ಮಾಡಲು ಇಸ್ಲಾಮಾಬಾದ್ ಸರ್ಕಾರ ಮತ್ತು ಫೀಲ್ಡ್ ಮಾರ್ಷಲ್/ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮುಂದಾಗಿದ್ದಾರೆ ಎಂಬ ವರದಿಗಳು ಈ ಆಕ್ರೋಶಕ್ಕೆ ಕಿಡಿ ಹಚ್ಚಿವೆ. ಅದರಲ್ಲೂ, ಈ ವಿಭಜನೆಯ ಮೂಲಕ ದೇಶದ ಆರ್ಥಿಕ ರಾಜಧಾನಿ ಕರಾಚಿಯನ್ನು ಸಿಂಧ್ ಪ್ರಾಂತ್ಯದಿಂದ ಬೇರ್ಪಡಿಸುವ ಹುನ್ನಾರ ನಡೆದಿದೆ ಎಂಬುದು ಸಿಂಧಿ ಜನರ ಪ್ರಮುಖ ಆರೋಪವಾಗಿದೆ. ಇದರೊಂದಿಗೆ, ಪಂಜಾಬ್ ಪ್ರಾಬಲ್ಯದ ಸೇನಾ ಆಡಳಿತವು ಸಿಂಧ್ ಪ್ರಾಂತ್ಯದ ನೈಸರ್ಗಿಕ ಸಂಪನ್ಮೂಲಗಳು, ಕೃಷಿ ಭೂಮಿ ಮತ್ತು ಕರಾವಳಿಯನ್ನು ಕಬಳಿಸಲು ಹಾಗೂ ಸಿಂಧಿಗಳ ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸಲು ಈ ಸಂಚು ರೂಪಿಸಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಕರಾಚಿಯಲ್ಲಿ ಬೃಹತ್ ರ‍್ಯಾಲಿ
ಜಿಯೇ ಸಿಂಧ್ ರಹಬರ್ ಕಮಿಟಿ ನೇತೃತ್ವದಲ್ಲಿ ನಾಲ್ಕು ಪ್ರಮುಖ ಸಿಂಧಿ ರಾಷ್ಟ್ರೀಯವಾದಿ ಪಕ್ಷಗಳು, ವಕೀಲರು ಮತ್ತು ನಾಗರಿಕ ಸಂಘಟನೆಗಳು ಕರಾಚಿಯಲ್ಲಿ ಕೆಂಪು ಧ್ವಜ ಮತ್ತು ಸಾಂಪ್ರದಾಯಿಕ ಸಿಂಧಿ 'ಅಜ್ರಕ್' ಶಾಲು ಧರಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಿಯೇ ಸಿಂಧ್ ಮುತ್ತಹಿದಾ ಮಹಾಜ್ ಕಾರ್ಯಕರ್ತರು "ಸಿಂಧ್ ಪಾಕಿಸ್ತಾನವಲ್ಲ" ಮತ್ತು "ನಮಗೆ ಸ್ವತಂತ್ರ ಸಿಂಧುದೇಶ ಬೇಕು" ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ, ವಿಭಜನೆಗೆ ಮುಂದಾದರೆ ಪಂಜಾಬ್ ಪ್ರಾಂತ್ಯಕ್ಕೆ ಸರಬರಾಜಾಗುವ ಸರಕು ಮತ್ತು ಇಂಧನವನ್ನು ತಡೆದು ಆರ್ಥಿಕ ದಿಗ್ಬಂಧನ ಹೇರುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಮುಂದುವರೆದು, ನವೆಂಬರ್ 24 ರಂದು ಸಿಂಧ್ ವಿಧಾನಸಭೆಯಲ್ಲಿ ಭಾರಿ ಗದ್ದಲ ನಡೆದಿದ್ದು, ಸಿಂಧ್ ಪ್ರಾಂತ್ಯವನ್ನು ವಿಭಜಿಸುವ ಯಾವುದೇ ಪ್ರಸ್ತಾವನೆಯನ್ನು ತಿರಸ್ಕರಿಸುವ ಅಧಿಕೃತ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಕೂಡ ಪ್ರಾಂತ್ಯ ವಿಭಜಿಸಿದರೆ ದೇಶದಲ್ಲಿ ರಕ್ತಪಾತವಾಗಬಹುದು ಎಂದು ಎಚ್ಚರಿಸಿದ್ದಾರೆ. ಮತ್ತೊಂದೆಡೆ, ಸರ್ಕಾರದ ಮಿತ್ರಪಕ್ಷವಾದ MQM-P ಹೊಸ ಪ್ರಾಂತ್ಯಗಳ ರಚನೆಯನ್ನು ಬೆಂಬಲಿಸುತ್ತಿದೆ. ಇದರ ನಡುವೆ ನವೆಂಬರ್ 29 ರಂದು ಕರಾಚಿಯಲ್ಲಿ ಸಿಂಧಿ ರಾಷ್ಟ್ರೀಯವಾದಿಗಳು ಬೃಹತ್ ಮೆರವಣಿಗೆಗೆ ಕರೆ ನೀಡಿದ್ದರೆ, ಅದೇ ದಿನ ಹೊಸ ಪ್ರಾಂತ್ಯಗಳ ರಚನೆ ಬೆಂಬಲಿಸಿ MQM-P ಕೂಡ ರ‍್ಯಾಲಿ ಆಯೋಜಿಸಿರುವುದರಿಂದ ಪಾಕಿಸ್ತಾನದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೇರಿದೆ.
ಏನಿದು ಸಿಂಧುದೇಶ ಚಳವಳಿ?
1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ಪ್ರತ್ಯೇಕಗೊಂಡ ನಂತರ, 1972ರಲ್ಲಿ ಸಿಂಧಿ ರಾಷ್ಟ್ರೀಯವಾದಿ ನಾಯಕ ಜಿ.ಎಂ. ಸೈಯದ್ ಅವರು 'ಜಿಯೇ ಸಿಂಧ್ ಮಹಾಜ್' ಸ್ಥಾಪಿಸಿ ಪ್ರತ್ಯೇಕ 'ಸಿಂಧುದೇಶ' ಚಳವಳಿಗೆ ಚಾಲನೆ ನೀಡಿದರು. ಸಿಂಧೂ ನದಿ ಕಣಿವೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳಲು ಪಾಕಿಸ್ತಾನದಿಂದ ಬೇರ್ಪಟ್ಟು ಸಾರ್ವಭೌಮ ರಾಷ್ಟ್ರವಾಗಬೇಕು ಎಂಬುದು ಈ ಚಳವಳಿಯ ಮುಖ್ಯ ಉದ್ದೇಶವಾಗಿದೆ.