ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛರ್‌ಗೆ ಚಾಕುವಿನಿಂದ ಇರಿದಿದ್ದ ಸಹ ಪೈಲಟ್ ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 30ರಂದು ಅಲ್-ಹಮ್ಮಾಮಿ ದುಬೈ-ಟೆಲ್ ಅವೀವ್ ವಿಮಾನವನ್ನು ಹೈಜಾಕ್ ಮಾಡಲು ಅಥವಾ ಹಾನಿಗೊಳಿಸಲು ಯತ್ನಿಸಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಈ ಘಟನೆಯ ಬೆನ್ನಲ್ಲೇ ಸಹ ಪೈಲಟ್‌ನ ಹಿನ್ನೆಲೆ ಕುರಿತು ತೀವ್ರ ಪರಿಶೀಲನೆ ಆರಂಭವಾಗಿದೆ. ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಆಮೂಲಾಗ್ರ ವಿಚಾರಧಾರೆ ಹೊಂದಿದ್ದಾನೆ ಎಂಬ ಕಾರಣಕ್ಕೆ ಒಮಾನ್ ಅಧಿಕಾರಿಗಳು ಈ ಹಿಂದೆ ಆತನಿಗೆ ವಿಮಾನ ಹಾರಾಟ ನಡೆಸದಂತೆ ನಿರ್ಬಂಧ ಹೇರಿದ್ದರು.
ಒಮಾನ್ ತಂದೆ ಹಾಗೂ ಸಿರಿಯಾ ಮೂಲದ ತಾಯಿಗೆ ಜನಿಸಿದ ಅಲ್-ಹಮ್ಮಾಮಿ, ಘಟನೆ ನಡೆದ ವೇಳೆ ಫ್ಲೈದುಬೈಯ FZ1073 ವಿಮಾನದ ಸಹ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಫ್ಲೈದುಬೈ ಸೇರುವ ಮೊದಲು ಸುಮಾರು ಏಳು ವರ್ಷಗಳ ಕಾಲ ಒಮಾನ್ ಏರ್‌ನಲ್ಲಿ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ.
2025ರ ಜೂನ್‌ನಲ್ಲಿ ರಾಯಲ್ ಏರ್ ಮರಾಕ್‌ಗೆ ಸೇರಿದ್ದ ಆತ, ಕಳೆದ ಜನವರಿಯಲ್ಲಿ ಆ ಸಂಸ್ಥೆ ತೊರೆದಿದ್ದನು. ಆತನ ಹೆಸರಿನ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಉಲ್ಲೇಖಿಸಲಾಗಿದೆ. 2023ರಲ್ಲಿ ಬ್ರಿಟನ್‌ನ ಬಕಿಂಗ್‌ಹ್ಯಾಮ್‌ಶೈರ್ ನ್ಯೂ ವಿಶ್ವವಿದ್ಯಾಲಯದಿಂದ ಏವಿಯೇಷನ್ ಮ್ಯಾನೇಜ್‌ಮೆಂಟ್ ಪದವಿ ಪಡೆದಿರುವುದಾಗಿಯೂ ಆ ಪ್ರೊಫೈಲ್‌ನಲ್ಲಿ ತಿಳಿಸಲಾಗಿದೆ.
ವಿಮಾನದಲ್ಲಿ 174 ಪ್ರಯಾಣಿಕರಿದ್ದರು. ಕಾಕ್‌ಪಿಟ್‌ನಲ್ಲಿದ್ದ ಭಾರತೀಯ ಕ್ಯಾಪ್ಟನ್ ಮಚ್ಛರ್ ಮೇಲೆ ಅಲ್-ಹಮ್ಮಾಮಿ ಹಲ್ಲೆ ನಡೆಸಿದ್ದಾನೆ. ಸಹ ಪೈಲಟ್ ಚಾಕುವಿನಿಂದ ಇರಿದು ಕ್ಯಾಪ್ಟನ್‌ಗೆ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಆದರೆ ಮಚ್ಛರ್ ಪ್ರತಿರೋಧಿಸಿ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು.
ಬಳಿಕ ಪ್ರಯಾಣಿಕರು ಕಾಕ್‌ಪಿಟ್ ಪ್ರವೇಶಿಸಿ ಅಲ್-ಹಮ್ಮಾಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ವಿಮಾನದಿಂದ ತುರ್ತು ಸಂಕೇತ ರವಾನಿಸಲಾಗಿದ್ದು, 34,000 ಅಡಿ ಎತ್ತರದಿಂದ ವಿಮಾನವು 17,000 ಅಡಿಗಿಂತಲೂ ಹೆಚ್ಚು ವೇಗವಾಗಿ ಕೆಳಗಿಳಿಯಿತು. ನಂತರ ಸೌದಿ ಅರೇಬಿಯಾದ ತಬೂಕ್‌ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ತಿರುಗಿಸಲಾಯಿತು.
ವಿಮಾನ ಇಳಿದ ಕೂಡಲೇ ಸೌದಿ ಅಧಿಕಾರಿಗಳು ಅಲ್-ಹಮ್ಮಾಮಿಯನ್ನು ವಶಕ್ಕೆ ಪಡೆದರು.
ಒಮಾನ್ ಅಧಿಕಾರಿಗಳು ಈ ಹಿಂದೆ ಹೇರಿದ್ದ ಎನ್ನಲಾದ ವಿಮಾನ ಹಾರಾಟ ನಿಷೇಧವು ಅಲ್-ಹಮ್ಮಾಮಿಯ ಹಿನ್ನೆಲೆಯ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ವಿಷಯದ ಬಗ್ಗೆ ಮಾಹಿತಿ ಹೊಂದಿರುವವರನ್ನು ಉಲ್ಲೇಖಿಸಿ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದು, ಆಮೂಲಾಗ್ರ ವಿಚಾರಧಾರೆಗೆ ಸಂಬಂಧಿಸಿದ ಆತಂಕವೇ ನಿಷೇಧಕ್ಕೆ ಕಾರಣವಾಗಿತ್ತು ಎಂದು ತಿಳಿಸಿದೆ.
ಈ ಆತಂಕಗಳು ಆತ ಒಮಾನ್ ಏರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಿಂದಲೇ ಆರಂಭವಾಗಿದ್ದವು ಎಂದು ವರದಿಯಾಗಿದೆ. ಉಗ್ರವಾದಿ ವಿಚಾರಧಾರೆ ಕುರಿತು ಆತಂಕ ವ್ಯಕ್ತವಾದ ಬಳಿಕ ಅಲ್-ಹಮ್ಮಾಮಿಯನ್ನು ವಿಮಾನ ತರಬೇತಿಯಿಂದ ತೆಗೆದುಹಾಕಿ, ವಿಮಾನಯಾನ ಸಂಸ್ಥೆಯ ಮತ್ತೊಂದು ಹುದ್ದೆಗೆ ವರ್ಗಾಯಿಸಲಾಗಿತ್ತು.
2024ರಲ್ಲಿ ಆತನ ಬಳಿ ಉಗ್ರವಾದಕ್ಕೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದವು ಎಂದೂ ವರದಿಗಳು ತಿಳಿಸಿವೆ.
ಈ ಹಿಂದಿನ ಹಿನ್ನೆಲೆಯ ಹೊರತಾಗಿಯೂ ಆತ ಮತ್ತೆ ವಿಮಾನ ಹಾರಾಟಕ್ಕೆ ಹೇಗೆ ಮರಳಿದ ಮತ್ತು ಕಮರ್ಷಿಯಲ್ ಪ್ರಯಾಣಿಕ ವಿಮಾನದ ಸಹ ಪೈಲಟ್ ಆಗಿ ಹೇಗೆ ನೇಮಕಗೊಂಡ ಎಂಬ ಪ್ರಶ್ನೆಗಳು ಎದ್ದಿವೆ. ಫ್ಲೈದುಬೈಗೆ ನೇಮಕಗೊಳ್ಳುವ ಮೊದಲು ಒಮಾನ್ ತನ್ನ ಆತಂಕಗಳನ್ನು ಇತರ ದೇಶಗಳು ಅಥವಾ ವಿಮಾನಯಾನ ಸಂಸ್ಥೆಗಳೊಂದಿಗೆ ಹಂಚಿಕೊಂಡಿತ್ತೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಸಹ ಪೈಲಟ್ ಆಗಿ ಆತನ ನೇಮಕಕ್ಕೆ ಸಂಬಂಧಿಸಿದಂತೆ ಈಗ ಎದುರಾಗಿರುವ ಪ್ರಶ್ನೆಗಳಲ್ಲಿ ಇದೂ ಒಂದಾಗಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಆದಾಗ್ಯೂ, ಹಲ್ಲೆಯ ಹಿಂದಿನ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಸಂಘರ್ಷಕ್ಕೆ ಕಾರಣವೇನು ಅಥವಾ ಸಹ ಪೈಲಟ್ ತನ್ನ ಮೇಲೆ ಹಲ್ಲೆ ನಡೆಸಲು ಏನು ಪ್ರೇರೇಪಿಸಿತು ಎಂಬುದನ್ನು ಮಚ್ಛಾರ್ ಬಹಿರಂಗಪಡಿಸಿಲ್ಲ.
ಘಟನೆ ಕುರಿತು ಯುಎಇ ವಿಶೇಷ ತನಿಖೆಗೆ ಆದೇಶಿಸಿದೆ. ಯುಎಇ ಅಟಾರ್ನಿ ಜನರಲ್ ಪ್ರಕಾರ, ಹಲ್ಲೆಯ ಸಂದರ್ಭಗಳು ಮತ್ತು ಉದ್ದೇಶಗಳನ್ನು ತನಿಖೆ ಪರಿಶೀಲಿಸಲಿದೆ. ಅಲ್ಲದೆ, ಘಟನೆಗೆ ಯಾವುದೇ ಭಯೋತ್ಪಾದಕ ಚಟುವಟಿಕೆಯ ಸಂಬಂಧವಿದೆಯೇ ಅಥವಾ ಇದಕ್ಕೆ ಪೂರ್ವಯೋಜನೆ ಅಥವಾ ನಿರ್ದೇಶನವಿತ್ತೇ ಎಂಬುದನ್ನೂ ತನಿಖೆ ನಿರ್ಧರಿಸಲಿದೆ.
ಮಚ್ಛಾರ್ ಗಂಭೀರವಾಗಿ ಗಾಯಗೊಂಡಿದ್ದು, ಯುಎಇಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಹಲ್ಲೆಯ ನಂತರ ಎದುರಾದ ಭಯಾನಕ ಕ್ಷಣಗಳನ್ನು ವಿವರಿಸಿದರು. ತಾವು ಜೀವಕ್ಕಾಗಿ ಹೋರಾಡುತ್ತಿದ್ದರೂ, ಇತರರು ಸಾಯಬಾರದು ಎಂದು ದೃಢನಿಶ್ಚಯ ಹೊಂದಿದ್ದೆ ಎಂದು ಮಚ್ಛಾರ್ ಹೇಳಿದ್ದಾರೆ.
ಘಟನೆ ವೇಳೆ ಮಚ್ಛಾರ್ ತೋರಿದ ಧೈರ್ಯವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಳಿಕ ಶ್ಲಾಘಿಸಿ, ಅವರನ್ನು “ನಿಜವಾದ ಹೀರೋ” ಎಂದು ಕರೆದಿದ್ದಾರೆ.
ಘಟನೆಗೆ ಸಂಬಂಧಿಸಿದ ತನಿಖೆ ಮುಂದುವರಿದಿದ್ದು, ಅಧಿಕಾರಿಗಳು ಹಲ್ಲೆಯ ಸಂದರ್ಭಗಳು ಹಾಗೂ ಅಲ್-ಹಮ್ಮಾಮಿಯ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.