ನವನೇತಮ್ ನವಿ ಪಿಳ್ಳೈ Online Desk
ವಿದೇಶ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

ಭಾರತೀಯ ಮೂಲದ, ದಕ್ಷಿಣ ಆಫ್ರಿಕಾದ ಪ್ರಸಿದ್ಧ ನ್ಯಾಯಶಾಸ್ತ್ರಜ್ಞೆ ನವನೇತಮ್ ನವಿ ಪಿಳ್ಳೈಅವರಿಗೆ 2026ರ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಓಸ್ಲೋ (ನಾರ್ವೆ): ಭಾರತೀಯ ಮೂಲದ, ದಕ್ಷಿಣ ಆಫ್ರಿಕಾದ ಪ್ರಸಿದ್ಧ ನ್ಯಾಯಶಾಸ್ತ್ರಜ್ಞೆಯಾದ 84 ವರ್ಷದ ನವನೇತಮ್ ನವಿ ಪಿಳ್ಳೈ ಅವರಿಗೆ 2026ರ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ನಾರ್ವೇಜಿಯನ್ ನೊಬೆಲ್ ಸಮಿತಿಯು ಇಂದು ಓಸ್ಲೋದಲ್ಲಿ ಈ ಅಧಿಕೃತ ಪ್ರಕಟಣೆಯನ್ನು ಮಾಡಿದ್ದು,"ಶಾಂತಿ ಮತ್ತು ಅಂತರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವಲ್ಲಿ ಅವರು ನಡೆಸಿದ ಸುದೀರ್ಘ ಪ್ರಯತ್ನಗಳಿಗಾಗಿ" ಈ ಅತ್ಯುನ್ನತ ಗೌರವವನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ನಾರ್ವೆ ನೊಬೆಲ್ ಸಮಿತಿಯು, "287 ನಾಮನಿರ್ದೇಶನಗಳಿಂದ - 208 ವ್ಯಕ್ತಿಗಳು ಮತ್ತು 79 ಸಂಸ್ಥೆಗಳು - ಅಂತಿಮವಾಗಿ ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಹೋರಾಟಗಾರ್ತಿ ನವನೇತಮ್ ನವಿ ಪಿಳ್ಳೈ ಅವರನ್ನು ಆಯ್ಕೆ ಮಾಡಲಾಗಿದೆ" ಎಂದು ಘೋಷಿಸಿದೆ. ಈ ಕುರಿತು ಮಾತನಾಡಿದ ನೊಬೆಲ್ ಸಮಿತಿಯ ಅಧ್ಯಕ್ಷರಾದ ಜೋರ್ಗನ್ ವಾಟ್ನೆ ಫ್ರೈಡ್ನೆಸ್ ಅವರು, "ನವಿ ಪಿಳ್ಳೈ ಅವರನ್ನು ಅಸಾಧಾರಣ ಧೈರ್ಯ ಮತ್ತು ಸಮಗ್ರತೆಯೊಂದಿಗೆ ಜಾಗತಿಕ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ದಾರಿ ತೋರಿಸಿದ ಮಹಾನ್ ವ್ಯಕ್ತಿ" ಎಂದು ಶ್ಲಾಘಿಸಿದ್ದಾರೆ. ಏತನ್ಮಧ್ಯೆ, ಈ ಪ್ರಶಸ್ತಿಯು 12 ಮಿಲಿಯನ್ ಸ್ವೀಡಿಷ್ ಕ್ರೋನರ್ (ಅಂದಾಜು $1.2 ಮಿಲಿಯನ್ ಡಾಲರ್ ಅಥವಾ ಸುಮಾರು 10 ಕೋಟಿ ರೂಪಾಯಿ) ನಗದು ಬಹುಮಾನವನ್ನು ಒಳಗೊಂಡಿದೆ

ಯಾರು ಈ ನವಿ ಪಿಳ್ಳೈ?

1941ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ತಮಿಳು ಮೂಲದ ಭಾರತೀಯ ಕುಟುಂಬದಲ್ಲಿ ಜನಿಸಿದ ನವನೇತಮ್ ನವಿ ಪಿಳ್ಳೈ ಅವರು ದಕ್ಷಿಣ ಆಫ್ರಿಕಾದ ಪ್ರಸಿದ್ಧ ಮಾನವ ಹಕ್ಕುಗಳ ವಕೀಲರು ಮತ್ತು ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರಾಗಿದ್ದು, ಇಲ್ಲಿನ ವರ್ಣಭೇದ ನೀತಿಯ ವಿರುದ್ಧ ಸುದೀರ್ಘ ಹೋರಾಟ ನಡೆಸಿದ್ದರು. ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು.

ದಕ್ಷಿಣ ಆಫ್ರಿಕಾದ ಹೈಕೋರ್ಟ್‌ನ ಮೊದಲ ಬಿಳಿಯರಲ್ಲದ ಮಹಿಳಾ ನ್ಯಾಯಾಧೀಶರಾಗಿರುವ ಪಿಳ್ಳೈ, 2008 ರಿಂದ 2014 ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ರ್ವಾಂಡಾದ ಅಂತರರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನ ನ್ಯಾಯಾಧೀಶರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಅವರು "ಲೈಂಗಿಕ ಅತ್ಯಾಚಾರವನ್ನು ಜನಾಂಗೀಯ ಹತ್ಯೆಯ ಒಂದು ರೂಪ" ಎಂದು ವ್ಯಾಖ್ಯಾನಿಸುವ ಐತಿಹಾಸಿಕ ತೀರ್ಪನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿರುವ ಪಿಳ್ಳೈ, ಇತ್ತೀಚಿನ ವರ್ಷಗಳಲ್ಲಿ ಅವರು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಪ್ರದೇಶಗಳಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ತನಿಖೆ ನಡೆಸಿದ ವಿಶ್ವಸಂಸ್ಥೆಯ ಸ್ವತಂತ್ರ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್‌ನಲ್ಲಿ ಆಡ್ಹಾಕ್ ನ್ಯಾಯಾಧೀಶರಾಗಿದ್ದಾರೆ.

ಏನಿದು ನೊಬೆಲ್ ಶಾಂತಿ ಪ್ರಶಸ್ತಿ?

ನೊಬೆಲ್ ಶಾಂತಿ ಪ್ರಶಸ್ತಿಯು ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುವ ವಿಶ್ವದ ಅತ್ಯಂತ ಪ್ರತಿಷ್ಠಿತ ಗೌರವವಾಗಿದೆ. ಸ್ವೀಡನ್ ದೇಶದ ಪ್ರಸಿದ್ಧ ವಿಜ್ಞಾನಿ ಹಾಗೂ ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ 1901 ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರಗಳ ನೊಬೆಲ್ ಪ್ರಶಸ್ತಿಗಳನ್ನು ಸ್ವೀಡನ್‌ನಲ್ಲಿ ನೀಡಿದರೆ, ಶಾಂತಿ ಪ್ರಶಸ್ತಿಯನ್ನು ಮಾತ್ರ ನಾರ್ವೆ ದೇಶದ ಓಸ್ಲೋದಲ್ಲಿ ನೀಡಲಾಗುತ್ತದೆ.

ಮುಂದುವರೆದು, ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ. ಆಲ್ಫ್ರೆಡ್ ನೊಬೆಲ್ ಅವರ ಪುಣ್ಯತಿಥಿಯಾದ ಡಿಸೆಂಬರ್ 10ರಂದು ನಾರ್ವೆಯ ಓಸ್ಲೋ ನಗರದಲ್ಲಿ ಅಧಿಕೃತವಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಏತನ್ಮಧ್ಯೆ, ಇತಿಹಾಸದಲ್ಲಿ ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಮದರ್ ತೆರೇಸಾ ಮತ್ತು ಮಲಾಲಾ ಯೂಸುಫ್‌ಜಾಯಿ ಅವರಂತಹ ಮಹಾನ್ ನಾಯಕರಿಗೆ ಹಾಗೂ ವಿಶ್ವಸಂಸ್ಥೆ (UN), ರೆಡ್ ಕ್ರಾಸ್‌ನಂತಹ ಜಾಗತಿಕ ಸಂಸ್ಥೆಗಳಿಗೆ ಈ ಪ್ರಶಸ್ತಿ ಸಂದಿದೆ. 2026ರ ಸಾಲಿಗೆ ಭಾರತೀಯ ಮೂಲದ ನವಿ ಪಿಳ್ಳೈ ಅವರಿಗೆ ಈ ಗೌರವ ಲಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video

'ಪೋಷಕರು ನನ್ನ ಆ ಖಾಸಗಿ ವಿಡಿಯೋ ನೋಡಿದ್ದರು, ಏರ್‌ಪೋರ್ಟ್‌ನಲ್ಲೇ ಕುಳಿತು ಅತ್ತಿದ್ದೆ: ವೈರಲ್‌ ಪಾರ್ಟಿ ಬಗ್ಗೆ ಅಪೂರ್ವ ಮುಖಿಜಾ! Video

ಪ್ರಜ್ವಲ್​​ ರೇವಣ್ಣಗೆ ಬಿಗ್ ಶಾಕ್; ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಮಾಜಿ ಸಂಸದನ ಶಿಫ್ಟ್!