ಬಮಾಕೊ: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಯೊಂದಿಗೆ ನಂಟು ಹೊಂದಿರುವ ಉಗ್ರರು ಭೀಕರ ದಾಳಿ ನಡೆಸಿದ್ದು, ಸುಮಾರು 70 ನಾಗರಿಕರನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಡೈಲಿ ಮೇಲ್ ವರದಿ ಮಾಡಿದ್ದು, ಮೃತರಲ್ಲಿ ಕೆಲವರನ್ನು ಜೀವಂತವಾಗಿಯೇ ಸುಟ್ಟಿರುವ ಆರೋಪ ಕೇಳಿಬಂದಿದೆ. ಅಲ್ಖೈದಾ ನಂಟಿನ ಉಗ್ರರೊಂದಿಗೆ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಹಿಂಸಾಚಾರ ನಡೆದಿದೆ.
ಮೂಲಗಳ ಪ್ರಕಾರ ಮಾಲಿಯ ಪೂರ್ವ ಭಾಗದ ಮೆನಾಕಾ ಪ್ರದೇಶದಲ್ಲಿ ವಾರಾಂತ್ಯದಲ್ಲಿ ಈ ದಾಳಿಗಳು ನಡೆದಿವೆ. ಸರ್ಕಾರದ ಪರವಾಗಿರುವ ಪಡೆಗಳು ಐಸಿಸ್ಗೆ ಮಾಹಿತಿ ನೀಡುತ್ತಿದ್ದಾರೆಂದು ಶಂಕಿಸಲಾದ ವ್ಯಕ್ತಿಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಪ್ರತೀಕಾರವಾಗಿ ಉಗ್ರರು ಈ ಕೃತ್ಯ ಎಸಗಿರಬಹುದು ಎಂದು ಭದ್ರತಾ ಮೂಲಗಳು ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಐದು ಪ್ರದೇಶಗಳಲ್ಲಿ ದಾಳಿ
ಇಸ್ಲಾಮಿಕ್ ಸ್ಟೇಟ್ ಸಾಹೆಲ್ ಪ್ರಾಂತ್ಯ (ISSP) ಸಂಘಟನೆಯ ಉಗ್ರರು ಮೆನಾಕಾ ಪ್ರದೇಶದ ಕನಿಷ್ಠ ಐದು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಮಂಗಳವಾರದ ವೇಳೆಗೆ ಸಾವಿನ ನಿಖರ ಸಂಖ್ಯೆ ಇನ್ನೂ ದೃಢಪಟ್ಟಿರಲಿಲ್ಲ. ವಿವಿಧ ಮೂಲಗಳ ಪ್ರಕಾರ, ಮೃತಪಟ್ಟವರ ಸಂಖ್ಯೆ 48ರಿಂದ 70ಕ್ಕೂ ಅಧಿಕ ಇರಬಹುದು.
ಭಾನುವಾರ ನಡೆದ ಪ್ರತೀಕಾರದ ದಾಳಿಗಳ ವೇಳೆ ಉಗ್ರರು ಮನೆಗಳಿಗೆ ಬೆಂಕಿ ಹಚ್ಚಿ, ಜಾನುವಾರುಗಳನ್ನು ಕದ್ದಿದ್ದಾರೆ. ಇದರಿಂದ ನೂರಾರು ನಾಗರಿಕರು ತಮ್ಮ ಮನೆಗಳನ್ನು ತೊರೆದು ಮೆನಾಕಾ ಪಟ್ಟಣಕ್ಕೆ ಪಲಾಯನ ಮಾಡಿದ್ದಾರೆ. ಕೆಲವರು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದರೆ, ಇತರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ದಾಳಿಯ ಹೊಣೆಯನ್ನು ಐಸಿಸ್ ನಂಟಿನ ಸಂಘಟನೆ ಅಧಿಕೃತವಾಗಿ ಹೊತ್ತುಕೊಂಡಿಲ್ಲ.
ರಷ್ಯಾ ಬೆಂಬಲಿತ ಪಡೆಗಳ ವಿರುದ್ಧ ಆರೋಪ
ಇನ್ನು ಮಾಲಿ ಸೇನೆಯೊಂದಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸರ್ಕಾರದ ಪರವಾದ ಮಿಲಿಟಿಯಾ ಪಡೆ ಮತ್ತು ರಷ್ಯಾದ ಅರೆಸೇನಾ ಸಂಘಟನೆಯಾದ ಆಫ್ರಿಕಾ ಕಾರ್ಪ್ಸ್ ಕಳೆದ ವಾರ ನಾಗರಿಕರ ಮೇಲೆ ದೌರ್ಜನ್ಯ ಎಸಗಿವೆ ಎಂಬ ಆರೋಪಗಳಿವೆ. ಇದಕ್ಕೆ ಪ್ರತಿಯಾಗಿ ಐಸಿಸ್ ನಂಟಿನ ಉಗ್ರರು ದಾಳಿ ನಡೆಸಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಮೆನಾಕಾದ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರ ಪ್ರಕಾರ, ಮಾಲಿ ಸೇನೆ ಮತ್ತು ಆಫ್ರಿಕಾ ಕಾರ್ಪ್ಸ್ ಜೊತೆಗಿದ್ದ ಎಂಎಸ್ಎ (MSA) ಮಿಲಿಟಿಯಾ ಪಡೆ, ಐಸಿಸ್ಗೆ ಮಾಹಿತಿ ನೀಡುತ್ತಿದ್ದಾರೆಂದು ಶಂಕಿಸಲಾದ ನಾಗರಿಕರ ಮೇಲೆ ದೌರ್ಜನ್ಯ ನಡೆಸಿದೆ. ಸುಮಾರು 12 ಜನರನ್ನು ಹತ್ಯೆ ಮಾಡಲಾಗಿದ್ದು, ಮನೆಗಳಿಗೆ ಬೆಂಕಿ ಹಚ್ಚಿ ಇತರ ಆಸ್ತಿಗಳನ್ನೂ ಕಳವು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಆರೋಪಗಳ ಕುರಿತು ಪ್ರತಿಕ್ರಿಯೆ ಕೋರಿ ಸಂಪರ್ಕಿಸಿದಾಗ, ಮಾಲಿ ಸೇನೆಯ ವಕ್ತಾರರು ಮತ್ತು ಬಮಾಕೊದಲ್ಲಿರುವ ರಷ್ಯಾ ರಾಯಭಾರ ಕಚೇರಿ ಪ್ರತಿಕ್ರಿಯಿಸಿಲ್ಲ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ನಾಗರಿಕರನ್ನು ಹತ್ಯೆ ಮಾಡಿರುವ ಆರೋಪಗಳನ್ನು ಮಾಲಿ ಈ ಹಿಂದೆಯೂ ನಿರಾಕರಿಸಿದೆ.
2012ರಿಂದ ಉಗ್ರರ ವಿರುದ್ಧ ಹೋರಾಟ
ಮಾಲಿಯಲ್ಲಿ 2012ರಿಂದಲೂ ಉಗ್ರರ ದಾಳಿಗಳು ನಡೆಯುತ್ತಿವೆ. ತುಆರೆಗ್ ಪ್ರತ್ಯೇಕತಾವಾದಿಗಳು ಮತ್ತು ಅಲ್ಖೈದಾ ನಂಟಿನ ಉಗ್ರರು ದೇಶದ ಉತ್ತರ ಭಾಗದಲ್ಲಿ ಪ್ರಾಬಲ್ಯ ಸಾಧಿಸಿದ ಬಳಿಕ ಫ್ರಾನ್ಸ್ ಸೇನೆ ಮಧ್ಯಪ್ರವೇಶಿಸಿತ್ತು.
ಅಲ್ಖೈದಾದ ಪ್ರಾದೇಶಿಕ ಘಟಕವಾದ ಜಮಾತ್ ನುಸ್ರತ್ ಅಲ್-ಇಸ್ಲಾಮ್ ವಾಲ್-ಮುಸ್ಲಿಮೀನ್ (JNIM) ಮತ್ತು ತುಆರೆಗ್ ನೇತೃತ್ವದ ಅಜವಾದ್ ಲಿಬರೇಷನ್ ಫ್ರಂಟ್ ಏಪ್ರಿಲ್ನಲ್ಲಿ ದೇಶಾದ್ಯಂತ ದಾಳಿಗಳನ್ನು ನಡೆಸಿದ್ದವು. ಈ ದಾಳಿಗಳಲ್ಲಿ ರಕ್ಷಣಾ ಸಚಿವರು ಮೃತಪಟ್ಟಿದ್ದು, ರಾಜಧಾನಿ ಬಮಾಕೊದ ಪ್ರಮುಖ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆದಿತ್ತು.
ಇತ್ತೀಚಿನ ವಾರಗಳಲ್ಲಿ JNIM ಮತ್ತು ISSP ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಕಳೆದ ವಾರ ನೆರೆಯ ಬುರ್ಕಿನಾ ಫಾಸೊದಲ್ಲಿ JNIM ನಡೆಸಲು ಉದ್ದೇಶಿಸಿದ್ದ ಹೊಂಚುದಾಳಿಯನ್ನು ವಿಫಲಗೊಳಿಸಿದ ಬಳಿಕ, 400 JNIM ಉಗ್ರರನ್ನು ಹತ್ಯೆ ಮಾಡಿರುವುದಾಗಿ ISSP ಹೇಳಿಕೊಂಡಿದೆ. ಈ ಹೇಳಿಕೆ ದೃಢಪಟ್ಟರೆ, ಎರಡೂ ಸಂಘಟನೆಗಳ ನಡುವಿನ ಅತ್ಯಂತ ಭೀಕರ ಏಕೈಕ ಕಾಳಗವಾಗಲಿದೆ.
ಸಂಘರ್ಷಗಳ ಮೇಲ್ವಿಚಾರಣೆ ನಡೆಸುವ ಆರ್ಮ್ಡ್ ಕಾನ್ಫ್ಲಿಕ್ಟ್ ಲೊಕೇಶನ್ ಆ್ಯಂಡ್ ಈವೆಂಟ್ ಡೇಟಾ (ACLED) ಸಂಸ್ಥೆಯ ಪ್ರಕಾರ, 2019ರಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ISSP ಮತ್ತು JNIM ಸಂಘಟನೆಗಳು ನಂತರ ನೂರಾರು ಬಾರಿ ಘರ್ಷಣೆ ನಡೆಸಿದ್ದು, 2,000ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿವೆ.