ಪಾಕಿಸ್ತಾನದ ರಾಜಕೀಯ ನಾಯಕತ್ವವು ಮಿಲಿಟರಿಯ ಸೂಚನೆಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಕ್ಕೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿಲ್ಲ ಎಂದು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ವಾಗ್ದಾಳಿ ನಡೆಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೇ ಸಮಿತಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ವಿಶೇಷ ವರದಿಗಾರರೊಂದಿಗೆ ನಡೆದ ಸಂವಾದದಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಪ್ರಥಮ ಕಾರ್ಯದರ್ಶಿ ರಘು ಪುರಿ ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ರಾಜಕೀಯ ನಾಯಕತ್ವವು ಮಿಲಿಟರಿಯ ಸೂಚನೆಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಕ್ಕೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿಲ್ಲ ಎಂದು ಟೀಕಿಸಿದ್ದಾರೆ.
ತನ್ನ ದೇಶದ ಆರ್ಥಿಕ ಬಿಕ್ಕಟ್ಟು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಇತರೆ ಆಂತರಿಕ ಬಿಕ್ಕಟ್ಟುಗಳಿಂದ ಜಾಗತಿಕ ಗಮನವನ್ನು ಬೇರೆಡೆ ಸೆಳೆಯಲು ಇಸ್ಲಾಮಾಬಾದ್ ನವದೆಹಲಿಯ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಅಲ್ಲದೆ, ಪಾಕಿಸ್ತಾನದ ನಿಜವಾದ ಆಡಳಿತಗಾರರು ಅಲ್ಲಿನ ಸೇನೆಯೇ ಎಂದು ಪ್ರತಿಪಾದಿಸಿದೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಪ್ರದೇಶಗಳನ್ನು ತೆರವುಗೊಳಿಸುವುದಷ್ಟೇ ಬಾಕಿ ಉಳಿದಿರುವ ವಿಷಯ ಎಂದೂ ಸ್ಪಷ್ಟಪಡಿಸಿದ್ದಾರೆ.
ಕುಸಿಯುತ್ತಿರುವ ಆರ್ಥಿಕತೆ, ಎಲ್ಲೆಡೆ ವ್ಯಾಪಿಸಿರುವ ಕಾನೂನುಬಾಹಿರತೆ ಮತ್ತು ಖೈಬರ್ ಪಖ್ತುಂಖ್ವಾದಿಂದ ಬಲೂಚಿಸ್ತಾನದವರೆಗೆ ನಡೆಯುತ್ತಿರುವ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇದಕ್ಕಿಂತ ಉತ್ತಮ ಮಾರ್ಗ ಬೇರೇನಿದೆ? ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ರಾಜಕೀಯ ನಾಯಕತ್ವದ ಮೇಲೆ ಅಲ್ಲಿನ ಸೇನೆಯು ಈಗಲೂ ನಿರ್ಣಾಯಕ ಅಧಿಕಾರ ಹೊಂದಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಸರ್ಕಾರವನ್ನು 'ಫಾರ್ಮ್ 47 ಸರ್ಕಾರ' ಎಂದು ಉಲ್ಲೇಖಿಸಿದ ಅವರು, ಸೇನೆಯ ಸೂಚನೆಗಳನ್ನು ಮೀರಿ ನಡೆಯುವ ಧೈರ್ಯವೂ ಆ ಸರ್ಕಾರಕ್ಕಿಲ್ಲ ಎಂದು ಟೀಕಿಸಿದ್ದಾರೆ.
2024ರ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಅಧಿಕೃತ ಕ್ರೋಡೀಕೃತ ಫಲಿತಾಂಶಗಳನ್ನು 'ಫಾರ್ಮ್ 47' ಎಂದು ಕರೆಯಲಾಗುತ್ತದೆ. ಈ ಚುನಾವಣೆಯಲ್ಲಿ ಅಕ್ರಮಗಳು ಮತ್ತು ಮತಗಳ್ಳತನ ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದವು.
ಅಲ್ಪಸಂಖ್ಯಾತರ ಹಕ್ಕುಗಳ ವಿಚಾರದಲ್ಲಿ ಪಾಕಿಸ್ತಾನದ ದಾಖಲೆಯನ್ನು ಪ್ರಶ್ನಿಸಿದ ಪುರಿ, ಸ್ವಾತಂತ್ರ್ಯಾನಂತರ ಆ ದೇಶದಲ್ಲಿನ ಅಲ್ಪಸಂಖ್ಯಾತರ ಜನಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಹೇಳಿದ್ದಾರೆ. ಆದರೆ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಗುರಿಯಾಗಿಸಿಕೊಂಡು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸುತ್ತಿದೆ ಎಂದು ಟೀಕಿಸಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಕುರಿತು ಪಾಕಿಸ್ತಾನದ ಹಕ್ಕು ಮಂಡಿಕೆಯನ್ನು ತಿರಸ್ಕರಿಸಿದ ಅವರು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಪ್ರದೇಶಗಳನ್ನು ತೆರವುಗೊಳಿಸುವುದೊಂದೇ ಬಾಕಿ ಉಳಿದಿರುವ ವಿಷಯ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪ್ರತಿನಿಧಿಯು ತಮ್ಮದೇ ದೇಶದ ಜನರ ಸಲಹೆಯನ್ನು ಆಲಿಸಬೇಕು, ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಮೊದಲು ತಮ್ಮ ನಾಗರಿಕರ ಕಲ್ಯಾಣದತ್ತ ಗಮನಹರಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ವಿಶೇಷ ವರದಿಗಾರರ ವರದಿಯನ್ನು ಉಲ್ಲೇಖಿಸಿದ ಅವರು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಮುಖ್ಯವಾಗಿ ಆಯಾ ದೇಶಗಳ ಸಾರ್ವಭೌಮ ಜವಾಬ್ದಾರಿಯಾಗಿದೆ ಎಂಬ ಅಭಿಪ್ರಾಯಕ್ಕೆ ಭಾರತ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.
ಸಾರ್ವಭೌಮ ಸಮಾನತೆಯ ತತ್ವದ ಪ್ರಕಾರ, ದೇಶವೊಂದರ ಆಂತರಿಕ ವಿಚಾರಗಳನ್ನು ಅದರ ನಿಯಮಗಳು ಮತ್ತು ಕಾನೂನುಗಳಿಗೆ ಅನುಗುಣವಾಗಿ ನಿರ್ವಹಿಸಬೇಕು. ಇಂತಹ ಸಂಕೀರ್ಣ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ವೇದಿಕೆಗಳಲ್ಲಿ ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಚರ್ಚಿಸಲು ಭಾರತ ಸಿದ್ಧವಿದೆ ಎಂದರು.
ಇದೇ ವೇಳೆ ಭಾರತವನ್ನು ವಿಶ್ವದ ಅತ್ಯಂತ ಬಹುಧರ್ಮೀಯ, ಬಹುಜನಾಂಗೀಯ ಮತ್ತು ಬಹುಭಾಷಾ ಸಮಾಜಗಳಲ್ಲಿ ಒಂದೆಂದು ಬಣ್ಣಿಸಿದ ಪುರಿ, ವೈವಿಧ್ಯತೆಯು ಭಾರತದ ನಾಗರಿಕತೆಯ ಮೂಲ ಆಶಯದ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ.
ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ ಎಂದ ಅವರು, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದಲ್ಲಿ ಹಲವು ಭದ್ರತೆಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಭಾರತದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳು, ಸರ್ಕಾರಿ ಸಂಸ್ಥೆಗಳು, ಸಶಸ್ತ್ರ ಪಡೆಗಳು, ಕಾನೂನು ಜಾರಿ ಸಂಸ್ಥೆಗಳು, ಚಲನಚಿತ್ರೋದ್ಯಮ ಮತ್ತು ಕಾರ್ಪೊರೇಟ್ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೆ ಹೋಲಿಸಿದರೆ, ಪಾಕಿಸ್ತಾನದಲ್ಲಿ ಇಂತಹ ಉದಾಹರಣೆಗಳನ್ನು ಹುಡುಕುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.