ಪ್ಯಾರಿಸ್ ನಲ್ಲಿ ಹಿಂದು ಧಾರ್ಮಿಕ ನಿಯೋಗ 
ವಿದೇಶ

ಹಿಂದು ಧಾರ್ಮಿಕ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ? ಪ್ಯಾರಿಸ್‌ನ Eiffel Tower ಬಂದ್, ಭಾರೀ ವಿವಾದ..!

ಭೇಟಿಯ ವೇಳೆ ಮಹಿಳಾ ಉದ್ಯೋಗಿಗಳನ್ನು ಅವರ ಲಿಂಗದ ಆಧಾರದ ಮೇಲೆ ‘ಪಕ್ಕಕ್ಕೆ ಸರಿಸಿ, ಬದಲಿಗೆ ಪುರುಷರನ್ನು ನಿಯೋಜಿಸಿ, ಕಾಣಿಸದಂತೆ ಮಾಡಲಾಗಿದೆ’ ಎಂದು ಐಫೆಲ್ ಟವರ್ ಸಿಬ್ಬಂದಿ ಆರೋಪಿಸಿದ್ದಾರೆ.

ಪ್ಯಾರಿಸ್: ಹಿಂದೂ ಧಾರ್ಮಿಕ ನಿಯೋಗವೊಂದರ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಆವರಣದಿಂದ ದೂರ ಸರಿಸಿ, ಅವರ ಬದಲಿಗೆ ಪುರುಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಫ್ರಾನ್ಸ್‌ನ ಐಫೆಲ್ ಟವರ್ (Eiffel Tower) ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಹಿಂದೂ ಸಂಘಟನೆಯೊಂದರ ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕರ್ತವ್ಯದಿಂದ ದೂರವಿಟ್ಟು, ತಾರತಮ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಿಬ್ಬಂದಿಗಳು ದಿಢೀರ್ ಮುಷ್ಕರ ಹೂಡಿರುವುದು ಇದಕ್ಕೆ ಕಾರಣವಾಗಿದೆ.

ಈ ವಿವಾದವು ಕಳೆದ ವಾರ ನಡೆದ ಸುಮಾರು 100 ಸದಸ್ಯರಿದ್ದ ಬಿಎಪಿಎಸ್ (Bochasanwasi Akshar Purushottam Swaminarayan Sanstha) ನಿಯೋಗದ ಖಾಸಗಿ ಭೇಟಿಗೆ ಸಂಬಂಧಿಸಿದೆ.

ಪ್ಯಾರಿಸ್ ಹೊರವಲಯದಲ್ಲಿ ಬಿಎಪಿಎಸ್‌ನ ದೇವಾಲಯ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ನಿಯೋಗ ಫ್ರಾನ್ಸ್‌ಗೆ ಆಗಮಿಸಿತ್ತು.

ಭೇಟಿಯ ವೇಳೆ ಮಹಿಳಾ ಉದ್ಯೋಗಿಗಳನ್ನು ಅವರ ಲಿಂಗದ ಆಧಾರದ ಮೇಲೆ ‘ಪಕ್ಕಕ್ಕೆ ಸರಿಸಿ, ಬದಲಿಗೆ ಪುರುಷರನ್ನು ನಿಯೋಜಿಸಿ, ಕಾಣಿಸದಂತೆ ಮಾಡಲಾಗಿದೆ’ ಎಂದು ಐಫೆಲ್ ಟವರ್ ಸಿಬ್ಬಂದಿ ಆರೋಪಿಸಿದ್ದಾರೆ.

ಮಹಿಳಾ ಸಿಬ್ಬಂದಿ ಮತ್ತು ಗುತ್ತಿಗೆದಾರ ಸಂಸ್ಥೆಗಳ ಮಹಿಳಾ ಉದ್ಯೋಗಿಗಳಿಗೆ ನಿಯೋಗವನ್ನು ಸ್ವಾಗತಿಸುವ ಸಂದರ್ಭದಲ್ಲಿ ತಾವು ಕಾಣಿಸಿಕೊಳ್ಳದಂತೆ ಸೂಚಿಸಲಾಗಿತ್ತು ಎಂದು ಸಿಬ್ಬಂದಿಗಳು ಹೇಳಿದ್ದಾರೆ.

ಕೆಲವರನ್ನು ತಮ್ಮ ಕೆಲಸದ ಸ್ಥಳದಿಂದ ತೆರಳಿ ಬೇರೆ ಪ್ರದೇಶಗಳಿಗೆ ಹೋಗುವಂತೆ ಸೂಚಿಸಲಾಗಿತ್ತು. ಕೆಲವು ಸ್ಥಳಗಳಲ್ಲಿ ಅವರ ಬದಲಿಗೆ ಪುರುಷರನ್ನು ನಿಯೋಜಿಸಲಾಗಿತ್ತು. ನಿಯೋಗ ಅಲ್ಲಿರುವವರೆಗೆ ಕೆಲವು ಪ್ರದೇಶಗಳಲ್ಲಿ ಮಹಿಳಾ ಸಿಬ್ಬಂದಿ ಸಂಚರಿಸದಂತೆಯೂ ಸೂಚಿಸಲಾಗಿತ್ತು ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಮಹಿಳೆಯರೊಂದಿಗೆ ಸಂಪರ್ಕ ತಪ್ಪಿಸುವಂತೆ ಮನವಿ?

ಐಫೆಲ್ ಟವರ್ ನಿರ್ವಹಿಸುವ SETE ಸಂಸ್ಥೆ, ಹಿಂದೂ ನಿಯೋಗವು ಭೇಟಿಯ ವೇಳೆ ಮಹಿಳೆಯರೊಂದಿಗೆ ಸಂವಹನವನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಮನವಿ ಮಾಡಿತ್ತು ಎಂದು ಒಪ್ಪಿಕೊಂಡಿದೆ. ಆದರೆ, ಇಂತಹ ಷರತ್ತುಗಳನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಸಂಸ್ಥೆ ತಿಳಿಸಿದೆ.

ಈ ಷರತ್ತುಗಳು SETEಯ ಮೌಲ್ಯಗಳಿಗೆ ಹಾಗೂ ಮಹಿಳಾ-ಪುರುಷ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿವೆ ಎಂದು ಸಂಸ್ಥೆ ಹೇಳಿದೆ.ಇದೇ ವೇಳೆ ಘಟನೆಯ ಪರಿಣಾಮಗಳನ್ನು ಸ್ವೀಕರಿಸುವುದಾಗಿ SETE ಭರವಸೆ ನೀಡಿದೆ.

ಐಫೆಲ್ ಟವರ್‌ನ ಅಧ್ಯಕ್ಷ ಏರಿಯಲ್ ವೈಲ್, ಇಂತಹ ಕ್ರಮ ಯಾವುದೇ ರೀತಿಯಲ್ಲೂ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಫ್ರಾನ್ಸ್‌ನ ಗಣರಾಜ್ಯ ಮೌಲ್ಯಗಳು ಹಾಗೂ ಮಹಿಳಾ-ಪುರುಷ ಸಮಾನತೆಗೆ ಐಫೆಲ್ ಟವರ್ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಬಿಎಪಿಎಸ್‌ ಕ್ಷಮೆಯಾಚನೆ

ವಿವಾದದ ಬಳಿಕ ಬಿಎಪಿಎಸ್‌ ಕೂಡ ಪ್ರತಿಕ್ರಿಯಿಸಿದ್ದು, ಸಿಬ್ಬಂದಿ ವ್ಯಕ್ತಪಡಿಸಿರುವ ಆತಂಕವನ್ನು ಗೌರವಿಸುವುದಾಗಿ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದೆ.

ತಮ್ಮ ನಿಯೋಗ ದೊಡ್ಡದಾಗಿದ್ದ ಕಾರಣ, ಇತರ ಪ್ರವಾಸಿಗರಿಗೆ ತೊಂದರೆಯಾಗದಂತೆ ಸಾಮಾನ್ಯ ಸಮಯ ಆರಂಭವಾಗುವ ವೇಳೆಯಲ್ಲಿ ಐಫೆಲ್ ಟವರ್ ತಂಡದೊಂದಿಗೆ ಸಮನ್ವಯ ಮಾಡಿಕೊಂಡು ಭೇಟಿಯನ್ನು ಆಯೋಜಿಸಲಾಗಿತ್ತು ಎಂದು ಬಿಎಪಿಎಸ್ ಹೇಳಿದೆ.

ಯಾರಿಗೂ ಐಫೆಲ್ ಟವರ್ ಪ್ರವೇಶ ನಿರಾಕರಿಸಲಾಗಿಲ್ಲ ಎಂದು ತಮ್ಮ ತಿಳುವಳಿಕೆಯಂತೆ ಹೇಳಿರುವ ಬಿಎಪಿಎಸ್, ಘಟನೆಯಿಂದ ಯಾರಿಗಾದರೂ ನೋವು ಅಥವಾ ಅನಾನುಕೂಲ ಉಂಟಾಗಿದ್ದರೆ ಪ್ರಾಮಾಣಿಕ ಕ್ಷಮೆಯಾಚಿಸುವುದಾಗಿ ತಿಳಿಸಿದೆ.

ಪ್ಯಾರಿಸ್ ಮೇಯರ್ ಎಮ್ಯಾನುಯೆಲ್ ಗ್ರೆಗ್ವಾರ್, ಘಟನೆ ಕುರಿತು ಶೀಘ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಸಿಬ್ಬಂದಿಯ ಆಕ್ರೋಶದ ಬಗ್ಗೆ ತಮಗೆ ಮಾಹಿತಿ ಇದ್ದು, ಅವರ ಅಸಮಾಧಾನ ನ್ಯಾಯಸಮ್ಮತವಾಗಿದೆ ಎಂದು ತಿಳಿಸಿದ್ದಾರೆ.

ಫ್ರಾನ್ಸ್‌ನ ಸಮಾನತೆ ಸಚಿವೆ ಔರೋರ್ ಬೆರ್ಜ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಫ್ರಾನ್ಸ್‌ನಲ್ಲಿ ಮಹಿಳೆಯರಿಗೆ ತಮ್ಮ ಅಸ್ತಿತ್ವವನ್ನು ಮರೆಮಾಚುವಂತೆ ಸೂಚಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಧರ್ಮ ಅಥವಾ ಸಿದ್ಧಾಂತವು ಗಣರಾಜ್ಯದ ಕಾನೂನುಗಳಿಗಿಂತ ಮೇಲಲ್ಲ ಎಂದು ತಿಳಿಸಿದ್ದಾರೆ.

ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ಕೂಡ ಘಟನೆಯನ್ನು ಖಂಡಿಸಿದ್ದು, ಮಹಿಳೆಯರ ಉಪಸ್ಥಿತಿಯನ್ನು ಸೀಮಿತಗೊಳಿಸುವುದನ್ನು ಫ್ರಾನ್ಸ್ ಎಂದಿಗೂ ಒಪ್ಪುವುದಿಲ್ಲ ಎಂದಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮಧ್ಯಮಪಂಥೀಯ ನಾಯಕ ಗ್ಯಾಬ್ರಿಯೆಲ್ ಅಟ್ಟಾಲ್ ಕೂಡ, ಫ್ರಾನ್ಸ್‌ನಲ್ಲಿ ಮಹಿಳೆಯರಿಗೆ ಅವರ ಸ್ಥಾನವನ್ನು ಯಾರೂ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರತಿ ವರ್ಷ ಸುಮಾರು 70 ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಐಫೆಲ್ ಟವರ್ ಸೋಮವಾರ ಬಂದ್ ಆಗಿತ್ತು. ಸಿಬ್ಬಂದಿ ಪ್ರತಿನಿಧಿಯ ಪ್ರಕಾರ, ಮಂಗಳವಾರದಿಂದ ಗೋಪುರ ಎಂದಿನಂತೆ ಕಾರ್ಯನಿರ್ವಹಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ.20 ರಿಂದ 108 ಸೇವೆ ಬಂದ್: ಸರ್ಕಾರಕ್ಕೆ ಸಿಬ್ಬಂದಿ ಡೆಡ್‌ಲೈನ್; 3,500 ನೌಕರರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ!

ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್: ವೃತ್ತಿಪರ ಕೋರ್ಸ್‌ಗಳಲ್ಲಿ ಶೇ. 7.5 ರಷ್ಟು ಒಳಮೀಸಲಾತಿ, ಕರಡು ನಿಯಮ ಪ್ರಕಟ!

ಅಧಿಕಾರ ಬರುತ್ತದೆ, ಹೋಗುತ್ತದೆ ನಿಜ, ಕನಿಷ್ಠ ಸೌಜನ್ಯವೂ ಇಲ್ಲವೇ: ಬೈರತಿ ಸುರೇಶ್ ನಡವಳಿಕೆಗೆ ಮಹಾದೇವಪ್ಪ ಅಸಮಾಧಾನ

KPSC Scam: ನಿನಗೆ 5 ರೂಪಾಯಿ ರೇಷನ್ ಕೂಡ ಸಿಗದ ಹಾಗೆ ಮಾಡುತ್ತೇವೆ; ಅಕ್ರಮ ವಿರುದ್ಧ ದೂರು ದಾಖಲಿಸಿದ್ದವರಿಗೆ ಬೆದರಿಕೆ ಕರೆ

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು