ವಾಷಿಂಗ್ಟನ್ (ಅಮೆರಿಕ): ತಾನು ಮಾಡಿದರೆ ಸಂಸಾರ, ಬೇರೆಯವರು ಮಾಡಿದರೆ ವ್ಯಭಿಚಾರ ಎಂಬಂತೆ ವರ್ತಿಸುವುದು ಅಮೆರಿಕಕ್ಕೆ ಹೊಸದೇನಲ್ಲ. ಅದರಂತೆ, ರಷ್ಯಾ ವಿಚಾರದಲ್ಲಿಯೂ ಅಮೆರಿಕದ ಈ ಕಪಟ ಬುದ್ದಿ ಮತ್ತೆ ಜಗ್ಗಜಾಹೀರಾಗಿದೆ. ಒಂದೆಡೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಇತರ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳಲು ಮುಂದಾಗಿರುವ ಅಮೆರಿಕ, ಮತ್ತೊಂದೆಡೆ ತನ್ನ ಸ್ವಂತ ಪರಮಾಣು ರಿಯಾಕ್ಟರ್‌ಗಳ ಅಗತ್ಯಕ್ಕಾಗಿ ರಷ್ಯಾದಿಂದ ಯುರೇನಿಯಂ ಆಮದು ಮಾಡಿಕೊಳ್ಳಲು ಮಾತ್ರ ರಹಸ್ಯವಾಗಿ ವಿನಾಯಿತಿ ನೀಡಿದೆ. ಈ ಮೂಲಕ ಇಡೀ ಜಗತ್ತಿಗೆ ನೀತಿಯ ಪಾಠ ಹೇಳಿ, ತನ್ನ ಸ್ವಾರ್ಥಕ್ಕಾಗಿ ನಿಯಮಗಳನ್ನೇ ಗಾಳಿಗೆ ತೂರಿದ ಅಮೆರಿಕದ ಅಸಲಿ ಬೂಟಾಟಿಕೆಯು ಚರ್ಚೆಗೆ ಗ್ರಾಹಸವಾಗಿದೆ. ಆ ಕುರಿತ ವರದಿ ಇಲ್ಲಿದೆ:
ರಷ್ಯಾ ತೈಲ ಖರೀದಿದಾರರ ವಿರುದ್ಧ ಅಮೆರಿಕ ಕಠಿಣ ಕ್ರಮ
ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಇತ್ತೀಚೆಗೆ ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ 2026 ಎಂಬ ಪ್ರಮುಖ ಮಸೂದೆಯನ್ನು ಅಂಗೀಕರಿಸಿದೆ. ಈ ಹೊಸ ನಿಯಮದ ಪ್ರಕಾರ, ರಷ್ಯಾದಿಂದ ಕಚ್ಚಾ ತೈಲ ಅಥವಾ ನೈಸರ್ಗಿಕ ಅನಿಲವನ್ನು ಖರೀದಿಸುವ ಅಥವಾ ರಷ್ಯಾದ ಮೇಲಿನ ನಿರ್ಬಂಧಗಳನ್ನು ತಪ್ಪಿಸಲು ಸಹಾಯ ಮಾಡುವ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷರು ಶೇಕಡಾ 100 ರಷ್ಟು ಭಾರಿ ಸುಂಕ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಬಹುದು. ಅದರಂತೆ, ರಷ್ಯಾದಿಂದ ರಿಯಾಯಿತಿ ದರದಲ್ಲಿ ಇಂಧನ ಖರೀದಿಸುತ್ತಿರುವ ಭಾರತ ಮತ್ತು ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಈ ಮಸೂದೆಯನ್ನು ತರಲಾಗಿದೆ.
ಯುರೇನಿಯಂ ಖರೀದಿಗೆ ಅಮೆರಿಕದ 'ರಹಸ್ಯ ವಿನಾಯಿತಿ'
ಮತ್ತೊಂದೆಡೆ, ರಷ್ಯಾದ ತೈಲ ಕೊಳ್ಳುವ ಇತರ ದೇಶಗಳಿಗೆ ದಂಡ ವಿಧಿಸುವ ಇದೇ ಕಾಯ್ದೆಯಲ್ಲಿ, ಅಮೆರಿಕ ತನ್ನದೇ ಆದ ಪರಮಾಣು ಅಗತ್ಯಗಳಿಗಾಗಿ ರಷ್ಯಾದಿಂದ ಯುರೇನಿಯಂ ಖರೀದಿಸಲು ವಿಶೇಷ ವಿನಾಯಿತಿಯನ್ನು ಕಾಯ್ದಿರಿಸಿಕೊಂಡಿದೆ. ಈ ಮಸೂದೆಯ ಸೆಕ್ಷನ್ 114 ರ ಪ್ರಕಾರ, ಅಮೆರಿಕ-ರಷ್ಯಾ ನಾಗರಿಕ ಪರಮಾಣು ಸಹಕಾರ ಒಪ್ಪಂದಗಳ ಅಡಿಯಲ್ಲಿ ನಡೆಯುವ ಚಟುವಟಿಕೆಗಳಿಗೆ ಯಾವುದೇ ಕಠಿಣ ನಿರ್ಬಂಧಗಳು ಅನ್ವಯಿಸುವುದಿಲ್ಲ. ಅದರಂತೆ, ಅಮೆರಿಕದ ಪರಮಾಣು ರಿಯಾಕ್ಟರ್‌ಗಳಿಗೆ ಅಗತ್ಯವಿರುವ ಲೋ-ಎನ್ರಿಚ್ಡ್ ಯುರೇನಿಯಂ ಮತ್ತು ವೈದ್ಯಕೀಯ ಐಸೊಟೋಪ್‌ಗಳ ಆಮದಿಗೆ ವಿಶೇಷ ವಿನಾಯಿತಿ ಮತ್ತು ರಿಯಾಯಿತಿ ವ್ಯವಸ್ಥೆಗಳನ್ನು ಮುಂದುವರಿಸಲಾಗಿದೆ.
ಹಾಗಾದ್ರೆ, ಅಮೆರಿಕ ಈ ದ್ವಂದ್ವ ನೀತಿ ಅನುಸರಿಸುತ್ತಿರುವುದು ಯಾಕೆ?
ಅಮೆರಿಕವು ತನ್ನ ಒಟ್ಟು ವಿದ್ಯುತ್ ಉತ್ಪಾದನೆಯ ಸುಮಾರು ಐದನೇ ಒಂದು ಭಾಗವನ್ನು (20%) ಪರಮಾಣು ಶಕ್ತಿಯಿಂದ ಪಡೆಯುತ್ತದೆ. ಈ ಪರಮಾಣು ಸ್ಥಾವರಗಳಿಗೆ ಬೇಕಾಗುವ ಸಮೃದ್ಧ ಯುರೇನಿಯಂ ಇಂಧನಕ್ಕಾಗಿ ಅಮೆರಿಕ ಇಂದಿಗೂ ರಷ್ಯಾದ ಮೇಲೆ ಶೇಕಡಾ 20 ಕ್ಕಿಂತ ಹೆಚ್ಚು ಅವಲಂಬಿತವಾಗಿದೆ. ಅದರಲ್ಲೂ, ರಷ್ಯಾದ ಸರಕಾರಿ ಸ್ವಾಮ್ಯದ ರೊಸಾಟಮ್ ಸಂಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಅಮೆರಿಕದಲ್ಲೇ ವಿದ್ಯುತ್ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕವಿದೆ.
ಹೀಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ರಷ್ಯಾದ ಇಂಧನ ಪೂರೈಕೆ ಸರಪಳಿಯನ್ನು ತಕ್ಷಣವೇ ಬದಲಾಯಿಸುವುದು ಕಷ್ಟ ಎಂಬ ಕಾರಣಕ್ಕೆ ಅಮೆರಿಕ ಇತರ ದೇಶಗಳಿಗೆ ತೈಲ ನಿರ್ಬಂಧ ಹೇರುತ್ತಿದ್ದರೂ, ರಷ್ಯಾದಿಂದ ತನಗೆ ಬೇಕಾದ ಯುರೇನಿಯಂ ಹರಿವನ್ನು ಮಾತ್ರ ಸುರಕ್ಷಿತವಾಗಿ ಕಾಯ್ದುಕೊಂಡಿದೆ.