ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕದೊಂದಿಗೆ ಮಾತುಕತೆ ನಡೆಸಲು ಇರಾನ್ ಮುಂದೆ ಬಂದಿದ್ದು, ಕತಾರ್ ದೇಶದ ಮಧ್ಯಸ್ಥಿಕೆಯ ಮೂಲಕ ವಾಷಿಂಗ್ಟನ್‌ಗೆ ಎಚ್ಚರಿಕೆಯೊಂದನ್ನು ರವಾನಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಬರೋಬ್ಬರಿ ಏಳು ಕಠಿಣ ಷರತ್ತುಗಳನ್ನು ಇಟ್ಟಿರುವ ಇರಾನ್, ಈ ಬೇಡಿಕೆಗಳನ್ನು ತಿರಸ್ಕರಿಸಿದರೆ ಜಾಗತಿಕ ಮಟ್ಟದಲ್ಲಿ "ನಿರ್ಣಾಯಕ ಯುದ್ಧ" (Decisive War) ಎದುರಿಸಬೇಕಾಗುತ್ತದೆ ಎಂದು ಡೆಡ್‌ಲೈನ್ ನೀಡಿದೆ. ಈ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ರಜಾದಿನದ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವೈಟ್ ಹೌಸ್‌ಗೆ ಧಾವಿಸಿದ್ದಾರೆಂದು ತಿಳಿದುಬಂದಿದೆ.
ಕತಾರ್ ಮೂಲಕ ಇರಾನ್ ತನ್ನ ಷರತ್ತುಗಳನ್ನು ಅಮೆರಿಕಕ್ಕೆ ತಲುಪಿಸಲಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ತಿಳಿಸಿದ್ದಾರೆ.
‘ಯುದ್ಧವನ್ನು ಎಲ್ಲ ರಂಗಗಳಲ್ಲೂ ಅಂತ್ಯಗೊಳಿಸುವುದು, ಸ್ಥಗಿತಗೊಳಿಸಿರುವ ಇರಾನ್‌ನ ಹಣವನ್ನು ಬಿಡುಗಡೆ ಮಾಡುವುದು ಹಾಗೂ ನೌಕಾ ದಿಗ್ಬಂಧನವನ್ನು ಕೊನೆಗೊಳಿಸುವುದು ನಮ್ಮ ಪ್ರಮುಖ ಷರತ್ತುಗಳಾಗಿವೆ’ ಎಂದು ರೆಜಾಯಿ ಹೇಳಿದ್ದಾರೆ.
ಎಕ್ಸ್‌ನಲ್ಲಿ ಪ್ರತ್ಯೇಕ ಪೋಸ್ಟ್ ಮಾಡಿರುವ ಅವರು, ಅಮೆರಿಕದೊಂದಿಗೆ ಯಾವುದೇ ಮಾತುಕತೆ ಆರಂಭಿಸುವ ಮೊದಲು ಇರಾನ್ 7 ಷರತ್ತುಗಳನ್ನು ಘೋಷಿಸಿದೆ ಎಂದು ತಿಳಿಸಿದ್ದಾರೆ.
‘ವಾಷಿಂಗ್ಟನ್ ತಾನು ಸೃಷ್ಟಿಸಿರುವ ಸಂಕಷ್ಟದಿಂದ ಹೊರಬರಲು ಮತ್ತು ಮತ್ತಷ್ಟು ಸಿಲುಕಿಕೊಳ್ಳುವುದನ್ನು ತಪ್ಪಿಸಲು ಬಯಸಿದರೆ, ಇರಾನ್‌ನ ಹಕ್ಕುಗಳು ಹಾಗೂ ಷರತ್ತುಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇಲ್ಲ’ ಎಂದು ಹೇಳಿದ್ದಾರೆ.
‘ಈ ಷರತ್ತುಗಳನ್ನು ಒಪ್ಪಿಕೊಳ್ಳುವುದು ವಾಷಿಂಗ್ಟನ್‌ನ ಹಿತದಲ್ಲಿದೆ. ಟ್ರಂಪ್ ಅವರ ಬೆದರಿಕೆಗಳಿಂದ ಯಾವುದೇ ಫಲಿತಾಂಶ ದೊರೆಯುವುದಿಲ್ಲ. ನಾವು ನಿರ್ಣಾಯಕ ಯುದ್ಧಕ್ಕೆ ಸಿದ್ಧರಾಗಿದ್ದೇವೆ. ಗಲ್ಫ್ ಪ್ರದೇಶದಿಂದ ಗಲ್ಫ್ ಆಫ್ ಓಮನ್ ಹಾಗೂ ಅರಬ್ಬಿ ಸಮುದ್ರದವರೆಗೆ ಇರುವ ಅಮೆರಿಕದ ನೌಕಾ ಪಡೆಗಳ ಮೇಲೆ ಇರಾನ್‌ನ ಪ್ರಸ್ತುತ ಸೇನಾ ಯೋಜನೆ ಕೇಂದ್ರೀಕೃತವಾಗಿದೆ ಎಂದು ರೆಜಾಯಿ ಹೇಳಿದ್ದಾರೆ.
ಅಮೆರಿಕದ ಹಡಗು ಅಥವಾ ವಿಮಾನವಾಹಕ ನೌಕೆಯ ಸಮೀಪದಲ್ಲಿ ಇರಾನ್ ಇತ್ತೀಚೆಗೆ ಬಹು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಹಡಗು ನಿರೋಧಕ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದೆ. ಭವಿಷ್ಯದಲ್ಲಿ ಇರಾನ್ ಪ್ರತೀಕಾರದ ಕ್ರಮ ಕೈಗೊಂಡರೆ, ಅದು ವ್ಯಾಪಕವಾಗಿರಬಹುದು. ಈ ವೇಳೆ ಈ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮಾತ್ರವಲ್ಲದೆ, ಅಮೆರಿಕದ ವಾಣಿಜ್ಯ ಹಿತಾಸಕ್ತಿಗಳು ಹಾಗೂ ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳನ್ನೂ ಗುರಿಯಾಗಿಸಬಹುದು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಯುದ್ಧ ಶೀಘ್ರದಲ್ಲೇ ಅಂತ್ಯಗೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಪ್ರಾಯೋಗಿಕವಾಗಿ ಯುದ್ಧ ಇನ್ನೂ ಮುಂದುವರಿದಿದೆ’ ಎಂದು ಹೇಳಿದ್ದಾರೆ. ಆದರೆ, ಸಂಘರ್ಷವನ್ನು ಸಾಧ್ಯವಾದಷ್ಟು ಬೇಗ ಅಂತ್ಯಗೊಳಿಸುವ ಉದ್ದೇಶದಿಂದ ಇರಾನ್ ಕಾರ್ಯತಂತ್ರ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ.
ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತನಾಡಿರುವ ಅವರು, ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ತಡೆ ಒಪ್ಪಂದದಿಂದ ಹೊರಬರುವ ಬಗ್ಗೆ ತೆಹ್ರಾನ್ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ, ಅಮೆರಿಕದ ಕ್ರಮಗಳು ಇರಾನ್ ಅಂತಹ ನಿರ್ಧಾರ ಕೈಗೊಳ್ಳುವಂತೆ ಮಾಡಬಹುದು ಎಂದು ಎಚ್ಚರಿಸಿದ್ದಾರೆ.
ಇರಾನ್‌ನ ಪರಮಾಣು ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಧಾರ್ಮಿಕ ಆದೇಶವನ್ನು ಇರಾನ್ ಮುಂದುವರಿಸಿಕೊಂಡು ಬರುತ್ತಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಬಾಬ್ ಅಲ್-ಮಂದೆಬ್ ಜಲಸಂಧಿಯನ್ನು ಇರಾನ್ ಬಂದ್ ಮಾಡಬಹುದು ಎಂಬ ಊಹಾಪೋಹಗಳನ್ನೂ ರೆಜಾಯಿ ತಳ್ಳಿಹಾಕಿದ್ದಾರೆ. ಈ ಜಲಮಾರ್ಗವು ಹೌತಿ ಚಳವಳಿಗೆ ಸಂಬಂಧಿಸಿದ ‘ಯೆಮೆನ್‌ನ ವಿಚಾರ’ ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ, ಇರಾನ್ ಮತ್ತು ಒಮಾನ್ ನಡುವೆ ಒಪ್ಪಂದ ಘೋಷಿಸುವ ಹಂತಕ್ಕೆ ಮಾತುಕತೆಗಳು ತಲುಪಿದ್ದವು. ಆದರೆ, ನಂತರ ಅದನ್ನು ಮುಂದೂಡಲಾಗಿದೆ. ಒಪ್ಪಂದದ ಚೌಕಟ್ಟು ಇನ್ನೂ ಸಿದ್ಧವಾಗಿದ್ದು, ಅದನ್ನು ಬಹಿರಂಗಪಡಿಸುವ ಮೊದಲು ಪ್ರಾದೇಶಿಕ ರಾಷ್ಟ್ರಗಳ ಅನುಮೋದನೆ ಅಗತ್ಯವಾಗಬಹುದು ಎಂದು ರೆಜಾಯಿ ಹೇಳಿದ್ದಾರೆ.
ಅಲ್ ಜಜೀರಾ ವರದಿ ಪ್ರಕಾರ, ಕಳೆದ ತಿಂಗಳು ತಿಳಿವಳಿಕೆ ಒಪ್ಪಂದದ ಅವಧಿ ಮುಕ್ತಾಯಗೊಂಡ ಬಳಿಕ ಕತಾರ್ ಮತ್ತು ಪಾಕಿಸ್ತಾನವು ಟೆಹ್ರಾನ್ ಹಾಗೂ ವಾಷಿಂಗ್ಟನ್ ನಡುವೆ ಮಾತುಕತೆ ಪುನರಾರಂಭಿಸಲು ಪ್ರಯತ್ನಿಸುತ್ತಿವೆ.
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಆರಂಭವಾದ ಸಂಘರ್ಷಕ್ಕೆ ಅಂತ್ಯ ಹಾಡಲು ಪ್ರಾದೇಶಿಕ ರಾಷ್ಟ್ರಗಳೂ ಪ್ರಯತ್ನಿಸುತ್ತಿವೆ.
ಈ ನಡುವೆ ಇರಾನ್‌ನ ಭದ್ರತಾ ಮಂಡಳಿ ಕಾರ್ಯದರ್ಶಿ ಮತ್ತೊಂದು ಅಮೆರಿಕದ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.
ಇರಾನ್‌ನ ಸೇನಾ ಮೌಲ್ಯಮಾಪನದ ಪ್ರಕಾರ ಮತ್ತೊಂದು ದಾಳಿ ನಡೆಯುವ ಸಾಧ್ಯತೆ ‘ಬಹಳಷ್ಟಿದೆ’ ಎಂದು ಅವರು ಹೇಳಿದ್ದಾರೆ.
ಇಂತಹ ಪರಿಸ್ಥಿತಿಯನ್ನು ಎದುರಿಸಲು ಇರಾನ್ ಸಿದ್ಧವಾಗಿದ್ದು, ಹಿಂದಿನ ಎರಡು ಸುತ್ತಿನ ಸಂಘರ್ಷಗಳ ಬಳಿಕ ತನ್ನ ಸೇನಾ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ, ಸೆಪ್ಟೆಂಬರ್ 18ರಿಂದ 28ರವರೆಗೆ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ವಾರದಲ್ಲಿ ಭಾಗವಹಿಸಲು ಇರಾನ್ ನಿಯೋಗಕ್ಕೆ ಅಮೆರಿಕದ ವಿದೇಶಾಂಗ ಇಲಾಖೆ ವೀಸಾ ನೀಡಿದೆ ಎಂದು ಅನಾಡೋಲು ಸುದ್ದಿ ಸಂಸ್ಥೆ ವರದಿ ಮಾಡಿದೆ.