ಕೋವಿಡ್ ಲಸಿಕೆ (ಸಂಗ್ರಹ ಚಿತ್ರ) 
ವಿದೇಶ

ಇದೊಂದು ಕೆಲಸ ಮಾಡಿದ್ರೆ, ಮುಂದಿನ ಸಾಂಕ್ರಾಮಿಕದಲ್ಲಿ 27 ಲಕ್ಷಕ್ಕೂ ಅಧಿಕ ಜನರ ಜೀವ ಉಳಿಸಬಹುದು: ಅಧ್ಯಯನ

ಮುಂದಿನ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಲಸಿಕೆಗಳನ್ನು ದೇಶಗಳ ಖರೀದಿ ಸಾಮರ್ಥ್ಯದ ಬದಲಾಗಿ ಜನಸಂಖ್ಯೆಯ ಆಧಾರದ ಮೇಲೆ ಹೆಚ್ಚು ನ್ಯಾಯಯುತವಾಗಿ ಹಂಚಿಕೆ ಮಾಡಿದರೆ ಹೆಚ್ಚುವರಿ 27 ಲಕ್ಷ ಜೀವ..

ವಾಷಿಂಗ್ಟನ್: ಜಾಗತಿಕ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕೋವಿಡ್ ಮಾಹಾಮಾರಿ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ.. ಅದಾಗಲೇ ಮತ್ತೊಂದು ಸಾಂಕ್ರಾಮಿಕದ ಕುರಿತು ಸುದ್ದಿಗಳು ಹರಿದಾಡುತ್ತಿದೆ.

ಹೌದು.. ಮುಂದಿನ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಲಸಿಕೆಗಳನ್ನು ದೇಶಗಳ ಖರೀದಿ ಸಾಮರ್ಥ್ಯದ ಬದಲಾಗಿ ಜನಸಂಖ್ಯೆಯ ಆಧಾರದ ಮೇಲೆ ಹೆಚ್ಚು ನ್ಯಾಯಯುತವಾಗಿ ಹಂಚಿಕೆ ಮಾಡಿದರೆ ಹೆಚ್ಚುವರಿ 27 ಲಕ್ಷ ಜೀವಗಳನ್ನು ಉಳಿಸಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಆದರೆ ಇಂತಹ ಸಮಾನ ಹಂಚಿಕೆಯ ವ್ಯವಸ್ಥೆಯಿಂದ ಶ್ರೀಮಂತ ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ಹೇಳಿದೆ. ಭವಿಷ್ಯದಲ್ಲಿ ಸಂಭವಿಸಬಹುದಾದ ಜಾಗತಿಕ ಫ್ಲೂ ಸಾಂಕ್ರಾಮಿಕವನ್ನು ಆಧರಿಸಿ ನಡೆಸಿದ ಮಾದರಿ ಅಧ್ಯಯನದಲ್ಲಿ, ಲಸಿಕೆ ಅಭಿವೃದ್ಧಿಯನ್ನು ತ್ವರಿತಗೊಳಿಸಿದರೆ ಸಂಭವನೀಯ ಸಾವಿನ ಸಂಖ್ಯೆಯನ್ನು 5.85 ಕೋಟಿಯಿಂದ 2.39 ಕೋಟಿಗೆ ಇಳಿಸಬಹುದು ಎಂದು ಅಂದಾಜಿಸಲಾಗಿದೆ.

ಅದರ ಬಳಿಕ ಲಸಿಕೆಗಳನ್ನು ಖರೀದಿ ಸಾಮರ್ಥ್ಯದ ಆಧಾರದ ಬದಲು ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಸಮಾನವಾಗಿ ಹಂಚಿಕೆ ಮಾಡಿದರೆ ಜಾಗತಿಕವಾಗಿ ಮತ್ತಷ್ಟು 27 ಲಕ್ಷ ಸಾವುಗಳನ್ನು ತಪ್ಪಿಸಬಹುದು ಎಂದು ಅಧ್ಯಯನ ತಿಳಿಸಿದೆ.

ಹೆಚ್ಚು ಆದಾಯ ಹೊಂದಿದ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಏರಿಕೆ!

ಆದರೆ ಹೆಚ್ಚಿನ ಆದಾಯ ಹೊಂದಿರುವ ದೇಶಗಳಲ್ಲಿ ಇಂತಹ ವ್ಯವಸ್ಥೆಯಿಂದ ಸಾವಿನ ಸಂಖ್ಯೆ 24 ಲಕ್ಷದಿಂದ 39 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಮಾದರಿ ಅಂದಾಜಿಸಿದೆ. NUS-Lancet Prime ಆಯೋಗದ ಹೊಸ ವರದಿಯ ಭಾಗವಾಗಿ ಈ ಅಧ್ಯಯನ ಪ್ರಕಟವಾಗಿದೆ. ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಕೇವಲ ವೈದ್ಯಕೀಯ ಸಿದ್ಧತೆ ಮಾತ್ರವಲ್ಲದೆ, ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡ ಸಮಗ್ರ ವ್ಯವಸ್ಥೆ ಅಗತ್ಯ ಎಂದು ಆಯೋಗ ಒತ್ತಿಹೇಳಿದೆ.

“ಸಹಕಾರ ಮತ್ತು ಒಗ್ಗಟ್ಟು ಅಗತ್ಯ ಸೇವೆಗಳಲ್ಲಿ ಮುಂಚೂಣಿಯಲ್ಲಿರುವವರ, ಅದರಲ್ಲೂ ಸಾಂಕ್ರಾಮಿಕವನ್ನು ನಿಯಂತ್ರಿಸಲು ನೆರವಾಗುವ ಆರೋಗ್ಯ ಕಾರ್ಯಕರ್ತರ ಜೀವಗಳನ್ನು ಉಳಿಸುತ್ತದೆ” ಎಂದು ಆಯೋಗದ ಸಹ-ಅಧ್ಯಕ್ಷೆ ಹಾಗೂ ನ್ಯೂಜಿಲೆಂಡ್‌ನ ಮಾಜಿ ಪ್ರಧಾನಿ ಹೆಲೆನ್ ಕ್ಲಾರ್ಕ್ ಹೇಳಿದ್ದಾರೆ.

“ಹೆಚ್ಚು ಸಮಾನತೆಯ ವಿಧಾನ ಜಾಗತಿಕವಾಗಿ ಕಡಿಮೆ ಸಾವುಗಳಿಗೆ ಕಾರಣವಾಗುತ್ತದೆ ಮತ್ತು ರಕ್ಷಣೆ ಅತ್ಯಂತ ಅಗತ್ಯವಿರುವವರಿಗೆ ನ್ಯಾಯಯುತ ಅವಕಾಶ ಒದಗಿಸುತ್ತದೆ. ಮುಂದಿನ ಸಾಂಕ್ರಾಮಿಕದಲ್ಲಿ ಅಗತ್ಯವಿರುವವರಿಗೆ ಲಸಿಕೆ ಮತ್ತು ಚಿಕಿತ್ಸೆಗಳು ಮೊದಲು ತಲುಪಲು ಪ್ರಾದೇಶಿಕ ಸಂಶೋಧನೆ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದು ಅತ್ಯಗತ್ಯ” ಎಂದು ಅವರು ಹೇಳಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಲಸಿಕೆ ಮೇಲಿನ ವಿಶ್ವಾಸವೂ ನಿರ್ಣಾಯಕ

ಇದೇ ವೇಳೆ ಜನರಲ್ಲಿ ಲಸಿಕೆಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದರೆ ಸಾವಿನ ಸಂಖ್ಯೆಯನ್ನು ಮತ್ತಷ್ಟು 19 ಲಕ್ಷದಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನದ ಮಾದರಿ ತಿಳಿಸಿದೆ.

ಆಯೋಗವು ಕೋವಿಡ್-19 ಅಥವಾ ಇತರ ಬಿಕ್ಕಟ್ಟುಗಳಿಂದ ತೀವ್ರವಾಗಿ ಬಾಧಿತವಾಗಿದ್ದ ಸಮುದಾಯಗಳನ್ನು ಒಳಗೊಂಡಂತೆ 20 ದೇಶಗಳಲ್ಲಿ ಸಂಶೋಧನೆ ನಡೆಸಿದೆ. ಇಂಡೋನೇಷ್ಯಾದ ನಿರಾಶ್ರಿತರು, ಇಥಿಯೋಪಿಯಾದ ಆಂತರಿಕವಾಗಿ ಸ್ಥಳಾಂತರಗೊಂಡ ಜನರು ಹಾಗೂ ಬ್ರಿಟನ್‌ನಲ್ಲಿ ಕೋವಿಡ್‌ನಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರನ್ನೂ ಸಂಶೋಧನೆಯಲ್ಲಿ ಒಳಪಡಿಸಲಾಗಿತ್ತು.

ವ್ಯವಸ್ಥೆಯಲ್ಲಿನ ದುರ್ಬಲತೆಗಳು ಅನಾರೋಗ್ಯ, ಸಾವು, ಜೀವನೋಪಾಯದ ನಷ್ಟ ಮತ್ತು ಜನರ ಯೋಗಕ್ಷೇಮದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಆಯೋಗದ ಸಹ-ಅಧ್ಯಕ್ಷೆ ಹಾಗೂ ಇಂಪೀರಿಯಲ್ ಕಾಲೇಜ್ ಲಂಡನ್‌ನ ಪ್ರೊಫೆಸರ್ ಹೆಲೆನಾ ಲೆಗಿಡೊ-ಕ್ವಿಗ್ಲಿ ಹೇಳಿದ್ದಾರೆ.

“ಜನದಟ್ಟಣೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ವ್ಯಕ್ತಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಗುರುತಿನ ದಾಖಲೆಗಳಿಲ್ಲದ ವ್ಯಕ್ತಿಗೆ ಸರ್ಕಾರಿ ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಸ್ಥಳೀಯ ಪ್ರಬಲ ಭಾಷೆ ಮಾತನಾಡದ ವ್ಯಕ್ತಿಗೆ ಆರೋಗ್ಯ ಸಲಹೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ಸಿದ್ಧತೆ ಕುರಿತು ಹೊಸ ರೂಪುರೇಷೆ

2023ರಲ್ಲಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ ಮತ್ತು ‘ದಿ ಲ್ಯಾನ್ಸೆಟ್’ ಜಂಟಿಯಾಗಿ ಈ ಆಯೋಗವನ್ನು ರಚಿಸಿದ್ದವು. ಆರೋಗ್ಯ, ಹಣಕಾಸು, ಯೋಜನೆ ಮತ್ತು ಸಮುದಾಯ ಸೇರಿದಂತೆ ವಿವಿಧ ಕ್ಷೇತ್ರಗಳ 41 ತಜ್ಞರು ಆಯೋಗದಲ್ಲಿದ್ದಾರೆ.

ಸಾಂಪ್ರದಾಯಿಕವಾಗಿ ಸಾಂಕ್ರಾಮಿಕ ಸಿದ್ಧತೆಯನ್ನು ತಾಂತ್ರಿಕ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳ ಪರಿಶೀಲನಾ ಪಟ್ಟಿಗೆ ಸೀಮಿತಗೊಳಿಸಲಾಗುತ್ತಿದೆ. ಆದರೆ ಅಗತ್ಯವಿರುವ ಪ್ರತಿಯೊಬ್ಬರಿಗೂ ಸಂಪನ್ಮೂಲಗಳು ನಿಜವಾಗಿಯೂ ತಲುಪುತ್ತವೆಯೇ ಎಂಬುದನ್ನು ಸೂಕ್ತವಾಗಿ ಪರಿಶೀಲಿಸಲಾಗುತ್ತಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಸಂಶೋಧನೆಯ ಆಧಾರದ ಮೇಲೆ ರೂಪಿಸಿರುವ ಕಾರ್ಯಯೋಜನೆಯಲ್ಲಿ, ಸಾಂಕ್ರಾಮಿಕ ಸಿದ್ಧತಾ ಯೋಜನೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯಗೊಳಿಸುವುದು, ಜನರ ರಕ್ಷಣೆಗೆ ಸರ್ಕಾರಗಳು ಬದ್ಧವಾಗಿರುವುದು ಮತ್ತು ಅದಕ್ಕೆ ಹೊಣೆಗಾರರಾಗಿರುವಂತೆ ಮಾಡುವಂತೆ ಕರೆ ನೀಡಲಾಗಿದೆ. ನ್ಯೂಯಾರ್ಕ್‌ನಲ್ಲಿ ಶುಕ್ರವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಂಕ್ರಾಮಿಕ ಸಿದ್ಧತೆ ಕುರಿತ ಉನ್ನತ ಮಟ್ಟದ ಸಭೆಗೂ ಮುನ್ನ ಈ ವರದಿ ಪ್ರಕಟಿಸಲಾಗಿದೆ.

ಆಫ್ರಿಕಾದ ದೇಶಗಳನ್ನೂ ಪರಿಗಣಿಸಿ

ಆಫ್ರಿಕಾದ ದೇಶಗಳು ಕೋವಿಡ್ ಲಸಿಕೆ ಪಡೆಯುವ ವಿಚಾರದಲ್ಲಿ ಸರದಿಯ ಕೊನೆಯ ಭಾಗದಲ್ಲಿದ್ದವು ಎಂದು ಅಮ್ರೆಫ್ ಹೆಲ್ತ್ ಆಫ್ರಿಕಾದ ಜಾಗತಿಕ ಸಿಇಒ ಡಾ. ಗಿಥಿಂಜಿ ಗಿತಾಹಿ ಹೇಳಿದ್ದಾರೆ. ಅಧ್ಯಯನದ ಫಲಿತಾಂಶಗಳು “ಮನವರಿಕೆ ಮಾಡುವಂತೆಯೂ ಗಂಭೀರವಾಗಿ ಚಿಂತನೆಗೆ ಹಚ್ಚುವಂತೆಯೂ ಇವೆ” ಎಂದು ಅವರು ಹೇಳಿದ್ದಾರೆ.

ರಾಜಧಾನಿಗಳಲ್ಲಿನ ಸಭಾಂಗಣಗಳಲ್ಲಿ ರೂಪಿಸುವ ಯೋಜನೆಗಳು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ, ವಿಶ್ವಾಸಾರ್ಹ ಮಾಹಿತಿ ಪಡೆಯಬಹುದೇ, ಚಿಕಿತ್ಸೆ ಪಡೆಯಬಹುದೇ ಅಥವಾ ಲಸಿಕೆ ಪಡೆಯಬಹುದೇ ಎಂಬ ವಾಸ್ತವ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುವಲ್ಲಿ ವಿಫಲವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಂಕ್ರಾಮಿಕ ಆರಂಭವಾದ ಬಳಿಕ ಜನರ ವಿಶ್ವಾಸವನ್ನು ತಕ್ಷಣ ನಿರ್ಮಿಸಲು ಸಾಧ್ಯವಿಲ್ಲ. ಮುಂದಿನ ಬಿಕ್ಕಟ್ಟಿಗೂ ಮುನ್ನವೇ ಸಮುದಾಯಗಳ ಮಾತು ಆಲಿಸುವ ಆರೋಗ್ಯ ವ್ಯವಸ್ಥೆಗಳ ಮೂಲಕ ವಿಶ್ವಾಸವನ್ನು ಗಳಿಸಬೇಕು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

ಕರ್ನಾಟಕದ 4 ನಾಲ್ಕು MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ ಆಯೋಗ

ಜಾಗತಿಕ ವ್ಯವಸ್ಥೆ ಒತ್ತಡದಲ್ಲಿದೆ, ಬಹುಪಕ್ಷೀಯತೆಗೆ ಸುಧಾರಣೆ ಅಗತ್ಯ: ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಕರೆ

ಜೀವ ಪಣಕ್ಕಿಟ್ಟು 3 ಕಿ.ಮೀ ಬೆನ್ನಟ್ಟಿ ಆನೆಮರಿ ರಕ್ಷಿಸಿದ ಮೀನುಗಾರರು, ಕೊನೆಗೂ ತಾಯಿ ಮಡಿಲು ಸೇರಿದ ಪುಟ್ಟ ಕಂದ! Video

'ಚೀಟಿಂಗ್ ಸಮರ್ಥಿಸುತ್ತಿಲ್ಲ.. ಆದ್ರೆ ವ್ಯವಸ್ಥೆ ಸರಿಯಾಗಬೇಕು, ಸಾಹಿಲ್ ಸಾವಿಗೆ ನ್ಯಾಯಬೇಕು': ಪ್ರತಿಭಟನಾ ನಿರತ IIT Bombay ವಿದ್ಯಾರ್ಥಿಗಳು!