ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ 
ವಿದೇಶ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ಪಾಕಿಸ್ತಾನದ ಸರಗೋಧಾ ನಿವಾಸಿ ಹಫೀಜ್ ಮುಹಮ್ಮದ್ ಸಯೀದ್, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, 1967ರ ಅಡಿಯಲ್ಲಿ ಭಾರತದಿಂದ ಗೊತ್ತುಪಡಿಸಲಾದ ಭಯೋತ್ಪಾದಕನಾಗಿದ್ದಾನೆ.

ನ್ಯೂಯಾರ್ಕ್‌: ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ 81ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಅಧಿವೇಶನದ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ತೀವ್ರ ಮುಖಭಂಗವಾಗಿದೆ.

ಜಾಗತಿಕ ಭಯೋತ್ಪಾದಕ ಹಾಗೂ ಲಷ್ಕರ್-ಎ-ತೊಯ್ಬಾ (LeT) ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಪಾಕಿಸ್ತಾನದ ಭಯೋತ್ಪಾದನೆ ಪೋಷಣೆಯ ಕುರಿತು ಭಾರತೀಯ ವರದಿಗಾರರು ಕೇಳಿದ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಅವರು ಮೌನವಾಗಿ ಜಾಗ ಖಾಲಿ ಮಾಡಿದ್ದಾರೆ.

ಗುರುವಾರ ವಿಶ್ವಸಂಸ್ಥೆಯ ಕೇಂದ್ರ ಕಚೇರಿಗೆ ಶೆಹಬಾಜ್ ಷರೀಫ್ ಪ್ರವೇಶಿಸುತ್ತಿದ್ದ ವೇಳೆ ಪತ್ರಕರ್ತರು, “ಪ್ರಧಾನಿ ಅವರೇ, ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಯಾವಾಗ ನಿಲ್ಲಿಸುತ್ತೀರಿ?” ಎಂದು ಪ್ರಶ್ನಿಸಿದರು. ಇದಕ್ಕೆ ಪಾಕಿಸ್ತಾನ ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಬಳಿಕ ವಿಶ್ವಸಂಸ್ಥೆಯ ಕಚೇರಿಯಿಂದ ಹೊರಬರುವಾಗಲೂ ಪತ್ರಕರ್ತರು, “ಲಷ್ಕರ್-ಇ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಯಾವಾಗ ಕಾನೂನು ಕ್ರಮ ಕೈಗೊಳ್ಳುತ್ತೀರಿ?” ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೂ ಶೆಹಬಾಜ್ ಷರೀಫ್ ಉತ್ತರಿಸದೆ ಮುಂದೆ ಸಾಗಿದರು.

ಪಾಕಿಸ್ತಾನದ ಸರಗೋಧಾ ನಿವಾಸಿ ಹಫೀಜ್ ಮುಹಮ್ಮದ್ ಸಯೀದ್, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, 1967ರ ಅಡಿಯಲ್ಲಿ ಭಾರತದಿಂದ ಗೊತ್ತುಪಡಿಸಲಾದ ಭಯೋತ್ಪಾದಕನಾಗಿದ್ದಾನೆ.

ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದ ಸ್ಥಾಪಕನಾಗಿರುವ ಸಯೀದ್, 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದು, ಭಾರತಕ್ಕೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ.

ಇತ್ತೀಚೆಗೆ 2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಾರ್ಯಕರ್ತರ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಪೂರಕ ಆರೋಪಪಟ್ಟಿಯಲ್ಲಿ ಗೊತ್ತುಪಡಿಸಲಾದ ಭಯೋತ್ಪಾದಕ ಹಾಗೂ ಎಲ್‌ಇಟಿ ಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್ ಅವರನ್ನು 8ನೇ ಆರೋಪಿಯಾಗಿ ಹೆಸರಿಸಲಾಗಿದ್ದು, ದಾಳಿಯ ಹಿಂದಿನ ದೊಡ್ಡ ಸಂಚಿನಲ್ಲಿ ಅವರು ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಇದಕ್ಕೂ ಒಂದು ದಿನ ಮೊದಲು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ವಾಗ್ದಾಳಿ ನಡೆಸಿತ್ತು. ಸಾಲದ ಹೊರೆಯಲ್ಲಿ ಸಿಲುಕಿರುವ ಪಾಕಿಸ್ತಾನ ತನ್ನ ಆರ್ಥಿಕತೆಯತ್ತ ಗಮನ ಹರಿಸುವ ಬದಲು, ಇತರರ ಪ್ರದೇಶಗಳ ಮೇಲೆ ಕಣ್ಣಿಡುವುದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದರಲ್ಲಿ ತೊಡಗಿದೆ ಎಂದು ಟೀಕಿಸಿತ್ತು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ತನ್ನ ಉತ್ತರಿಸುವ ಹಕ್ಕನ್ನು ಚಲಾಯಿಸಿದ ಭಾರತೀಯ ರಾಜತಾಂತ್ರಿಕ ಕ್ಷಿತಿಜ್ ತ್ಯಾಗಿ, ಪಾಕಿಸ್ತಾನದ ದಿಕ್ಕುತಪ್ಪಿಸುವ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸಿದರು.

ಪಾಕಿಸ್ತಾನದ ಆಕ್ರಮಣಕಾರಿ ನಿಲುವು ಅದರ ಸಂಕಷ್ಟದಲ್ಲಿರುವ ಆರ್ಥಿಕ ವ್ಯವಸ್ಥೆಯನ್ನು ರಕ್ಷಿಸಲು ಯಾವುದೇ ರೀತಿಯಲ್ಲೂ ನೆರವಾಗುವುದಿಲ್ಲ ಎಂದು ಹೇಳಿದರು.

ಪಾಕಿಸ್ತಾನದ ಆದ್ಯತೆಗಳು ಮೂಲಭೂತವಾಗಿಯೇ ತಪ್ಪು ದಿಕ್ಕಿನಲ್ಲಿವೆ ಎಂದು ಹೇಳಿದ ಕ್ಷಿತಿಜ್ ತ್ಯಾಗಿ, ಪಾಕಿಸ್ತಾನ ತನ್ನ ಜನರ ಅಭಿವೃದ್ಧಿಯತ್ತ ಗಮನ ಹರಿಸುವುದೇ ಉತ್ತಮ. ಇತರರ ಪ್ರದೇಶಗಳ ಮೇಲೆ ಕಣ್ಣಿಡುವುದಾಗಲಿ, ಭಯೋತ್ಪಾದನೆಯನ್ನು ರಫ್ತು ಮಾಡುವುದಾಗಲಿ ಅದರ ಜನರಿಗೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಇಂತಹ ಕ್ರಮಗಳು ಮತ್ತು ಮಂಡಳಿಯಲ್ಲಿ ನಡೆಸುವ ನಾಟಕೀಯ ಪ್ರದರ್ಶನಗಳು, ಅದರ ಆರ್ಥಿಕತೆ ಅವಲಂಬಿಸಿರುವ ಸಾಲಗಳನ್ನು ಮರುಪಾವತಿಸಲು ಯಾವುದೇ ಸಹಾಯ ಮಾಡುವುದಿಲ್ಲ ಎಂದು ಹೇಳಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ನಾಗರಿಕರ ಮೇಲಿನ ದಮನ ಮತ್ತು ಗಂಭೀರ ಮಾನವೀಯ ಬಿಕ್ಕಟ್ಟಿನತ್ತಲೂ ಕ್ಷಿತಿಜ್ ತ್ಯಾಗಿ ಗಮನ ಸೆಳೆದರು. ಅಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದು, ರಾಜ್ಯದ ಹಿಂಸಾತ್ಮಕ ಕ್ರಮಗಳನ್ನು ಎದುರಿಸಿವೆ. ಆಹಾರ, ಇಂಧನ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಪೂರೈಕೆಯ ಮೇಲೂ ನಿರ್ಬಂಧ ಹೇರಲಾಗಿದೆ ಎಂದು ಹೇಳಿದರು.

ಪಾಕಿಸ್ತಾನದ ಆಡಳಿತದಲ್ಲಿನ ಈ ವೈರುಧ್ಯಗಳನ್ನು ಎತ್ತಿ ತೋರಿಸಿದ ಕ್ಷಿತಿಜ್ ತ್ಯಾಗಿ, “ಜೂನ್‌ನಿಂದ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿ ಹಲವಾರು ನಾಗರಿಕರು ಹತ್ಯೆಯಾಗಿರುವುದು, ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಿರುವುದು, ಆಹಾರ ಮತ್ತು ಔಷಧಿಗಳ ಪೂರೈಕೆಯನ್ನು ತಡೆಹಿಡಿದಿರುವ ಬಗ್ಗೆ ಕಳೆದ ಶುಕ್ರವಾರ ಈ ಮಂಡಳಿಗೆ ತಿಳಿಸಲಾಗಿತ್ತು.

ಆ ವಿಚಾರಗಳನ್ನು ಪ್ರಸ್ತಾಪಿಸಿದಾಗ ಪಾಕಿಸ್ತಾನದ ಉತ್ತರ ಕೇವಲ ನಿಯಮಾವಳಿಯ ಆಕ್ಷೇಪವಾಗಿತ್ತು. ಈ ಮಂಡಳಿಯ ಪರಿಶೀಲನೆಗೆ ಒಳಪಡುವ ಎಲ್ಲ ವಸ್ತುನಿಷ್ಠ ಮಾನದಂಡಗಳನ್ನು ಪೂರೈಸುವ ನಿಯೋಗ ಯಾವುದಾದರೂ ಇದ್ದರೆ, ಅದು ಪಾಕಿಸ್ತಾನವೇ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್