ಅಮೆರಿಕ: ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ 7 ದಿನಗಳ ಯೋಜನೆ ಮುಂದಿಟ್ಟಿದೆ ಎಂದು ಇರಾನ್ ಪ್ರಸ್ತಾಪ ಮುಂದಿಟ್ಟ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವದ ತೈಲ ಪೂರೈಕೆಗೆ ಪ್ರಮುಖವಾಗಿರುವ ಈ ಜಲಮಾರ್ಗವು ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ. ಸುಮಾರು ಏಳು ತಿಂಗಳಿನಿಂದ ನಡೆಯುತ್ತಿರುವ ಈ ಸಂಘರ್ಷ ಸದ್ಯ ಸ್ಥಗಿತ ಸ್ಥಿತಿಯಲ್ಲಿದೆ.
ಆದರೆ, ಈ ವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವ ನಾಯಕರ ವಿಶ್ವಸಂಸ್ಥೆ ಸಭೆಯ ವೇಳೆ ನಡೆದ ಹೊಸ ಮಧ್ಯಸ್ಥಿಕೆ ಪ್ರಯತ್ನಗಳು ಒಪ್ಪಂದವೊಂದರತ್ತ ಮುನ್ನಡೆಯುವ ಬಗ್ಗೆ ಆಶಾವಾದ ಮೂಡಿಸಿವೆ.
ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಡೊನಾಲ್ಡ್ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದಕ್ಕೂ ಮುನ್ನ ಅವರು ಯುದ್ಧವನ್ನು ಕೊನೆಗೊಳಿಸಲು ಹಾಗೂ ಪ್ರಮುಖ ಹಡಗು ಸಂಚಾರ ಮಾರ್ಗವನ್ನು ಮತ್ತೆ ತೆರೆಯಲು ಇರಾನ್ ವಿಧಿಸಿರುವ ಷರತ್ತುಗಳನ್ನು ತಿಳಿಸಿದ್ದರು.
ಇರಾನ್, ಕತಾರ್ ಮೂಲಕ ಅಮೆರಿಕಕ್ಕೆ ಏಳು ದಿನಗಳ ನಿರ್ದಿಷ್ಟ ಯೋಜನೆಯೊಂದನ್ನು ತಿಳಿಸಿದೆ. ಅಗತ್ಯ ಷರತ್ತುಗಳನ್ನು ಈಡೇರಿಸಿದರೆ, ಜಲಸಂಧಿಯನ್ನು ಮತ್ತೆ ತೆರೆಯಬಹುದು ಮತ್ತು ಏಳು ದಿನಗಳೊಳಗೆ ಸಾಮಾನ್ಯ ಸಮುದ್ರ ಸಂಚಾರವನ್ನು ಪುನಃಸ್ಥಾಪಿಸಬಹುದು ಎಂದು ಅರಾಘ್ಚಿ ವಿಶ್ವಸಂಸ್ಥೆಯಲ್ಲಿ ಹೇಳಿದರು.
ಈಗ ಆಯ್ಕೆ ಅಮೆರಿಕದ ಕೈಯಲ್ಲಿದೆ. ಇರಾನ್ ಬಲವಂತ, ಬೆದರಿಕೆ ಅಥವಾ ಒತ್ತಡವನ್ನು ಒಪ್ಪಿಕೊಳ್ಳುವುದಿಲ್ಲ. ಒತ್ತಡಕ್ಕೆ ಮಣಿದು ತನ್ನ ಸಾರ್ವಭೌಮ ಹಕ್ಕುಗಳನ್ನು ಇರಾನ್ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.
ಆದರೆ, ಅವರ ಹೇಳಿಕೆ ಹೊರಬಂದ ಕೆಲವೇ ಗಂಟೆಗಳಲ್ಲಿ, ಟ್ರಂಪ್ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತು. ಈ ವಿಷಯದ ಬಗ್ಗೆ ಮಾಹಿತಿ ಹೊಂದಿರುವ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ.
ಇರಾನ್ ತನ್ನ ಬೇಡಿಕೆಗಳನ್ನು ಈಡೇರಿಸಲಿದೆ ಎಂಬ ಬಗ್ಗೆ 80 ವರ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅನುಮಾನವಿದೆ. ಅಲ್ಲದೆ, ಮತ್ತೆ ಬಾಂಬ್ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅವರು ಭಾವಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಥಗಿತಗೊಂಡಿರುವ ಆಸ್ತಿಗಳು
ಕನಿಷ್ಠ 12 ಬಿಲಿಯನ್ ಡಾಲರ್ ಮೌಲ್ಯದ ಇರಾನ್‌ನ ಸ್ಥಗಿತಗೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡುವುದು, ಇರಾನ್‌ನ ತೈಲದ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವುದು ಹಾಗೂ ಇರಾನ್ ವಿರುದ್ಧದ ಅಮೆರಿಕದ ನೌಕಾ ದಿಗ್ಬಂಧನವನ್ನು ಅಂತ್ಯಗೊಳಿಸುವುದೂ ಈ ಯೋಜನೆಯಲ್ಲಿದೆ ಎಂದು ವರದಿಯಾಗಿದೆ. ಕದನ ವಿರಾಮದ ಏಳನೇ ದಿನ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಿದೆ.
ಅಮೆರಿಕದ ಸಿಬಿಎಸ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಕದನ ವಿರಾಮಕ್ಕೆ ಅವರು ಒಪ್ಪಿಕೊಂಡ ದಿನದಿಂದಲೇ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ ಸಹಿ ಮಾಡಲಾದ ತಿಳುವಳಿಕೆ ಒಪ್ಪಂದದ (MOU) ಆಧಾರದ ಮೇಲೆ ನಾವು ಈ ಹಿಂದೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದೆವು. ಅದೇ ರೀತಿಯಲ್ಲಿ ಮುಂದುವರಿಯಲು ಅಮೆರಿಕ ಒಪ್ಪಿಕೊಂಡರೆ, ಎಲ್ಲವೂ ಹಿಂದಿನಂತೆಯೇ ಆಗಲಿದೆ ಎಂದು ಹೇಳಿದರು.
ಯೆಮನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸುವುದೂ ಇರಾನ್ ನ ಬೇಡಿಕೆಗಳಲ್ಲಿ ಒಂದಾಗಿದೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್‌ನ ವಕ್ತಾರ ಹೊಸೇನ್ ಮೊಹೆಬಿ ಎಎಫ್‌ಪಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಯುದ್ಧವನ್ನು ಅಂತ್ಯಗೊಳಿಸುವುದು, ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು ಹಾಗೂ ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ಆರಂಭಿಸುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ಜೂನ್‌ನಲ್ಲಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಆದರೆ, ಕೆಲವೇ ಸಮಯದ ಬಳಿಕ ಆ ಒಪ್ಪಂದ ವಿಫಲವಾಯಿತು. ಜಲಮಾರ್ಗದಲ್ಲಿ ಅನುಮೋದಿತ ಮಾರ್ಗದಿಂದ ಹಡಗುಗಳು ಬೇರೆಡೆಗೆ ತೆರಳಿವೆ ಎಂದು ಆರೋಪಿಸಿ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿತ್ತು.
ಭದ್ರತೆ ಮತ್ತು ಸಾರ್ವಭೌಮತ್ವದ ಕಾರಣಗಳನ್ನು ಉಲ್ಲೇಖಿಸಿ ಹಡಗುಗಳು ಜಲಸಂಧಿಯ ಮೂಲಕ ಸಂಚರಿಸುವ ಮೊದಲು ಅನುಮತಿ ಪಡೆಯಬೇಕು ಎಂದು ಇರಾನ್ ಹೇಳುತ್ತದೆ. ಅನುಮತಿಯನ್ನು ಪಾಲಿಸಲು ನಿರಾಕರಿಸುವ ಹಡಗುಗಳನ್ನು ನಿಯಮಿತವಾಗಿ ಗುರಿಯಾಗಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವೂ ಇರಾನ್‌ನ ಕರಾವಳಿ ಪ್ರದೇಶಗಳ ಮೇಲೆ ಆಗಾಗ್ಗೆ ಬಾಂಬ್ ದಾಳಿ ನಡೆಸುತ್ತಿದೆ.