ಕನಸಿದ್ದೋನೆ ಬಾಸು!

ಕನಸಿದ್ದೋನೆ ಬಾಸು!
Updated on: 

'ಕಲೆ ಎಷ್ಟೇ ಇದ್ದರೇನು? ಕನಸಿರದ ಬಾಳು ಬಾಳೇ...' ಎಂಬ ಕವಿವಾಣಿಯಂತೆ, ಬದುಕನ್ನು ವರ್ಣಮಯವಾಗಿಸಲು ಕನಸು ಬೇಕೇಬೇಕು. ನಾಳಿನ ಕನಸು ನಮ್ಮೊಳಗೆ ಇದ್ದಾಗ ಮಾತ್ರ, ಬದುಕುವ ಉತ್ಸಾಹ ನಮ್ಮೊಳಗೆ ತುಂಬಿಕೊಳ್ಳುತ್ತದೆ. ಆದರೆ ಕನಸನ್ನು ನನಸಾಗಿಸಲು ಪರಿಶ್ರಮ ಬೇಕೇಬೇಕು.
ಕನಸೆಂದರೆ, ನೀವು ನಿದ್ರಿಸಿದಾಗ ಕಾಣುವುದಲ್ಲ. ನಿಮ್ಮನ್ನು ನಿದ್ರಿಸಲು ಬಿಡದಿರುವುದು ಎನ್ನುತ್ತಾರೆ ಎ.ಪಿ.ಜೆ. ಅಬ್ದುಲ್ ಕಲಾಂ. ಕನಸೆಂದರೆ ಕೇವಲ ಭ್ರಮಾಲೋಕದಲ್ಲಿನ ತೇಲಾಟವಲ್ಲ. ಅದು ನಮ್ಮ ಗುರಿಯ ಸಾಕಾರದ ಕುರಿತಾದ ಕಲ್ಪನೆ. ನಾನು ಏನಾಗಬೇಕು ಎಂದು ಕನಸು ಕಂಡು, ಅದನ್ನು ನಮ್ಮೊಳಗೆ ಅಂತರ್ಗತ ಗೊಳಿಸಿಕೊಳ್ಳಬೇಕು. ನಂತರ ಅದನ್ನು ವಾಸ್ತವವಾಗಿಸಲು ಕಾರ್ಯತತ್ಪರನಾಗಬೇಕು.
ಸ್ವರಾಜ್ಯದ ಕನಸು ಕಂಡ ಗಾಂಧೀಜಿಯವರು, ಅದನ್ನು ನನಸಾಗಿಸಲು ಪಟ್ಟ ಪರಿಶ್ರಮ ಅಪಾರ. ಇಂದಿನ ಆಧುನಿಕ ಸೌಲಭ್ಯ ವೈಜ್ಞಾನಿಕ ಆವಿಷ್ಕಾರಗಳ ಫಲ. ಈ ಎಲ್ಲಾ ಆವಿಷ್ಕಾರಗಳು, ಸಾಧಕರು ಕಂಡ ಕನಸಿನಿಂದ ರೂಪುಗೊಂಡವು. ಕನಸು ಬರಿಯ ಹಗಲುಗನಸಾಗಿ, ಕೈಗೆಟುಕದ ಹುಳಿದ್ರಾಕ್ಷಿಯಾಗಬಾರದು.
ಕನಸು ಕ್ರಿಯಾಶೀಲತೆಯ ಮೊದಲ ಹಂತ. ಕಲಾವಿದ ಕನಸುಗಾರನಾಗಿರುತ್ತಾನೆ. ಕನಸಿಗೊಂದು ಸ್ವರೂಪ ನೀಡುವಾಗ, ಕ್ರಿಯಾಶೀಲತೆ ಜಾಗೃತಗೊಳ್ಳುತ್ತದೆ. ಆಗ ಹೊಸ ಸೃಷ್ಟಿ ಸಾಧ್ಯವಾಗುತ್ತದೆ. ಧನಾತ್ಮಕವಾದ ಕನಸು  ಕಾಣಬೇಕು. ಆ ಕನಸನ್ನು ಗುರಿಯಾಗಿ ರೂಪಿಸಿಕೊಳ್ಳಬೇಕು. ಆ ಗುರಿಯತ್ತ ಅವಿರತವಾಗಿ ತುಡಿಯಬೇಕು, ಅದು ಸಾಧನೆಯಾಗಿ ಹೊರಹೊಮ್ಮುತ್ತದೆ.
ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೀಗೆ ಹೇಳುತ್ತಾರೆ, 'ಕನಸು ಕಾಣುವುದು ಎಷ್ಟು ಮುಖ್ಯವೋ ಅದನ್ನು ನನಸಾಗಿಸುವತ್ತ ನಡೆಯುವುದೂ ಅಷ್ಟೇ ಮುಖ್ಯ. ಕನಸನ್ನು ನನಸಾಗಿಸುವ ನಿಮ್ಮ ನಡೆಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಇರಲಿ. ಆಗ ನಿಮ್ಮ ಕನಸು ಖಂಡಿತಾ ನನಸಾಗುತ್ತದೆ'. ಶತಕಗಳ ಶತಕ ಬಾರಿಸುತ್ತಾ 40ರ ಹರೆಯದಲ್ಲೂ ಅದೇ ಉತ್ಸಾಹದೊಡನೆ ಮೈದಾನಕ್ಕಿಳಿವ ಸಚಿನ್ ಅವರ ಯಶಸ್ಸಿನ ಗುಟ್ಟೇ ಇದು.
ಕನಸನ್ನು ನನಸಾಗಿಸುವ ಹಾದಿ
ನಿಮ್ಮ ಕನಸೇನೆಂದು ಮೊದಲು ನಿರ್ಧರಿಸಿ. ಮೊದಲು ನಿಮ್ಮ ಕನಸು ಏನು ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಬ್ಬ ವ್ಯಕ್ತಿ ಎಲ್ಲವೂ ಆಗಲಾರ. ನಿಮ್ಮ ಸಾಮರ್ಥ್ಯ, ಸಂದರ್ಭಗಳಿಗೆ ಅನುಗುಣವಾಗಿ, ಆಸಕ್ತಿಗೆ ಪೂರಕವಾದ ಕನಸು ಕಾಣಬೇಕು. ಕನಸನ್ನು ನನಸಾಗಿಸುವ ನಿಮ್ಮ ಹಾದಿ ಕಷ್ಟಕರವಾಗಿದ್ದರೂ, ನಿಮಗೆ ಖುಷಿ ನೀಡುವಂತಿರಬೇಕು.
ಕನಸನ್ನು ಅಂತರ್ಗತಗೊಳಿಸಿ...
ಇದು ಕನಸನ್ನು ನನಸಾಗಿಸುವ ಹಾದಿಯ ಎರಡನೇ ಮೆಟ್ಟಿಲು. ನಿಮ್ಮ ಕನಸು ಶಕ್ತಿಯುತವಾಗಿದ್ದಲ್ಲಿ, ಅದು ನಿಮ್ಮ ತುಡಿತವಾಗುತ್ತದೆ. ನಿಮ್ಮ ಮನದಾಳದಲ್ಲಿ ಬೇರೂರಿ ಕಾರ್ಯಗತವಾಗುತ್ತದೆ. ದೇಹವನ್ನು ಪ್ರೇರೇಪಿಸುತ್ತದೆ. ನಿಮ್ಮೆಲ್ಲಾ ಕಾರ್ಯಚಟುವಟಿಕೆಗಳನ್ನೂ ನಿಮ್ಮ ಕನಸಿನತ್ತ ಕೇಂದ್ರೀಕರಿಸಬೇಕು.
ಕನಸನ್ನು ಗುರಿಯಾಗಿಸಿ...
ಅಂತರ್ಗತಗೊಂಡ ನಿಮ್ಮ ಕನಸನ್ನು ನಿಮ್ಮ ಗುರಿಯಾಗಿ ಪರಿವರ್ತಿಸಿ. ಅದರ ಸಾಧನೆಗೆ ಬೇಕಾಗುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಿ. ನಿಮ್ಮ ಗುರಿ ನಿರ್ದಿಷ್ಟತೆಯನ್ನು ಸಾಧಿಸಬಲ್ಲದ್ದಾಗಿರಲಿ.
ಸಮಯದ ಚೌಕಟ್ಟು
ಗುರಿಯಾಗಿ ಮಾರ್ಪಟ್ಟ ಕನಸನ್ನು ನನಸಾಗಿಸಲು ಸಮಯದ ಚೌಕಟ್ಟು ಹಾಕಿಕೊಳ್ಳಿ. ಗುರಿಸಾಧನೆಗೆ ಬೇಕಾಗುವ ಸಮಯ, ನಿಮ್ಮ ಗುರಿಯನ್ನು ಅವಲಂಬಿಸಿರುತ್ತದೆ. ಕೆಲವು ಗುರಿ ತಲುಪಲು ಕಡಿಮೆ ಸಮಯ ಸಾಕು. ಇನ್ನು ಕೆಲವು ದೀರ್ಘಾವಧಿ ಗುರಿಗಳಾಗಿರುತ್ತವೆ. ಈ ದಿನದ ಗುರಿ, ಈ ತಿಂಗಳ ಗುರಿ, ಈ ವರ್ಷದ ಗುರಿ, ಕೊನೆಗೆ ಜೀವನದ ಗುರಿ... ಹೀಗೆ ಗುರಿಗನುಸಾರವಾದ ಸಮಯ ನಿಗದಿ ಮಾಡಿಕೊಂಡು ಅದರಂತೆ ಕಾರ್ಯೋನ್ಮುಖರಾಗಿ.
ಪ್ರಗತಿ ಪರಿಶೀಲನೆ, ವಿಮರ್ಶೆ
ಗುರಿಯತ್ತ ನೀವು ಸಾಗುತ್ತಿರುವ ಮಾರ್ಗದ ಕುರಿತು ನೀವೇ ಪ್ರಾಮಾಣಿಕ ವಿಮರ್ಶೆ ಮಾಡಿಕೊಳ್ಳಿ. ನಿಗದಿತ ಸಮಯ ಚೌಕಟ್ಟಿನಲ್ಲಿ ಸಾಧ್ಯವಾಗದ ಕೆಲಸಗಳ ಕುರಿತು, ಪೂರ್ವಗ್ರಹಗಳಿರದೇ ಆಲೋಚಿಸಿ ಮಾಡಬೇಕಾದ ಬದಲಾವಣೆಗಳೇನೆಂಬುದನ್ನು ಚಿಂತಿಸಿ. ಅನುಭವಿಗಳ ಸಲಹೆ ಪಡೆಯಿರಿ. ನಮ್ಮ ತಪ್ಪು ಏನೆಂದು ಗುರುತಿಸಿಕೊಳ್ಳಿ. ತಪ್ಪು ಮರುಕಳಿಸದಂತೆ ಜಾಗ್ರತೆ ವಹಿಸಿ.
ಸೋಲುಗಳಿಗೆ ಕುಗ್ಗದಿರಿ...
ಕನಸು ಸೃಜನಶೀಲತೆಯ ಪ್ರತೀಕ. ಅದನ್ನು ನನಸಾಗಿಸುವ ಪ್ರಕ್ರಿಯೆಯೇ ಕ್ರಿಯಾಶೀಲತೆ. ಸಕಾರಾತ್ಮಕವಾದ ಕನಸು ಕಂಡು, ಅದನ್ನು ಸರಿಯಾದ ರೀತಿಯಲ್ಲಿ ಸಾಕಾರಗೊಳಿಸಿಕೊಳ್ಳುವುದೇ ಬದುಕಿನ ಸಾರ್ಥಕತೆ.

-ಎಚ್.ಎಸ್. ನವೀನಕುಮಾರ್ ಹೊಸದುರ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com