

ಸರ್ವಶಕ್ತನಾದ ಭಗವಂತ ಜಗತ್ತಿನಲ್ಲಿ ಎಲ್ಲವನ್ನೂ ಎಲ್ಲ ಜೀವಿಗಳಿಗಾಗಿ ಸೃಷ್ಟಿಸಿದ. ಮನುಷ್ಯರಲ್ಲಿ ಸಂವೇದನಾಶೀಲತೆಯನ್ನು ತುರುಕಿದ. ಮನುಷ್ಯೇತರ ಜೀವಿಗಳಿಗೆ ಅಭಿವ್ಯಕ್ತಿ ಸಾಮರ್ಥ್ಯವನ್ನು ನೀಡದೆ ವಂಚಿಸಿದ. ಒಟ್ಟಿನಲ್ಲಿ ನಮ್ಮಲ್ಲಿ ಸಂವೇದನಾಶೀಲತೆ ಸೃಷ್ಟಿಸಿದ್ದರಿಂದ ವಿವೇಕಿಗಳಾದ ನಾವು ಆತ್ಮ ಚಿಂತನೆಯಿಂದ ಭಗವಂತನಿಗೆ ಕೃತಜ್ಞತೆಯನ್ನು ಅರ್ಪಿಸುವುದು ಅಗತ್ಯ.
ಅಳುತ್ತಲೇ ಹುಟ್ಟುವ ಮನುಷ್ಯ ಬದುಕಿನಲ್ಲಿ ಎಷ್ಟು ಸುಖ- ಸಂತೋಷಗಳನ್ನು ಅನುಭವಿಸಿದರೂ ತೃಪ್ತನಾಗದೇ, ಸಾಯುವತನಕ ಭಗವಂತನನ್ನು ದೂಷಿಸುತ್ತಲೇ ಇರುತ್ತಾನೆ. ಮನುಷ್ಯೇತರ ಜೀವಿಗಳು ಮಾತ್ರ ಯಾರನ್ನೂ ದೂಷಿಸದೇ ತಮ್ಮಷ್ಟಕ್ಕೆ ತಾವಿರುತ್ತವೆ. ಅಕಾಲ ಮರಣಕ್ಕೆ ತುತ್ತಾದ ಚಿಕ್ಕ ಮಕ್ಕಳನ್ನು ಮಸಣಕ್ಕೆ ಒಯ್ಯುವಾಗಲೂ ನಾವು ಚಿರಂಜೀವಿಗಳೆಂದು ಭಾವಿಸುತ್ತಾ ಸಂಗ್ರಹಶೀಲರಾಗಿಯೇ ಇರುತ್ತೇವೆ.
'ಇನ್ನಷ್ಟು ಕೊಡು, ಮತ್ತಷ್ಟು ಕೊಡು' ಎಂದು ಪ್ರಾರ್ಥಿಸುತ್ತಲೇ ಇರುತ್ತೇವೆ. ಸಂಗ್ರಹಿಸಿ ಸುಖಿಸಲಿಕ್ಕಾಗಿಯೇ ಜನ್ಮಿಸಿದ್ದೇವೆಂದು ಕುಣಿದಾಡುತ್ತೇವೆಯೇ ಹೊರತು ಬದುಕಿನ ಉದ್ದೇಶದ ಕುರಿತು ಚಿಂತಿಸುವುದಿಲ್ಲ. ನಿರಂತರ ಸಂಗ್ರಹದಲ್ಲೇ ನಿರತರಾಗಿ ತ್ಯಾಗದ ಬಗೆಗೆ ಯೋಚಿಸುವುದಿಲ್ಲ. 'ತ್ಯಾಗೇನೈಕೇ ಅಮೃತತ್ವಮಾನಶುಃ' ತ್ಯಾಗದಿಂದ ಮಾತ್ರವೇ ಅಮೃತತ್ವ- ಅಂದರೆ ಸುಖವೆಂಬುದನ್ನು ಮರೆತು, ಸುಖದ ಭ್ರಮಾಜಾಲದಲ್ಲಿ ಸಿಲುಕಿ ಭಗವಂತನನ್ನು ಚಿಂತಿಸದೆ ಕಷ್ಟ- ದುಃಖಗಳ ಕಂದಕದಲ್ಲಿ ಬೀಳುತ್ತೇವೆ.
ನಮ್ಮೀ ತೊಳಲಾಟವನ್ನು ಕಬೀರರು ಹೀಗೆ ವರ್ಣಿಸುತ್ತಾರೆ; 'ಸುಖದ ಸುಪ್ಪತ್ತಿಗೆಯಲ್ಲಿದ್ದು, ಭಗವಂತನನ್ನು ಮರೆತಿದ್ದೇವೆ. ಕಷ್ಟ- ದುಃಖಗಳನ್ನು ಪರಿಹರಿಸುವಂತೆ ಕೂಗುತ್ತೇವೆ. ಸುಖದಲ್ಲಿ ಅವನನ್ನು ಭಜಿಸಿದ್ದರೆ ಕಷ್ಟವೇ ಬರುತ್ತಿರಲಿಲ್ಲವಲ್ಲ.'
ನಮಗೆ ಪುಣ್ಯದ ಫಲಬೇಕು. ಆದರೆ ಸತ್ಕಾರ್ಯದಲ್ಲಿ, ಭಗವತ್ ಚಿಂತನೆಯಲ್ಲಿ ಪ್ರವೃತ್ತಿ ಇಲ್ಲ. ಪಾಪದ ಫಲ ನಮಗೆ ಬೇಡ. ಆದರೂ ನಾವು ನಿರಂತರ ಪಾಪ ಕಾರ್ಯದಲ್ಲೇ ಪ್ರವೃತ್ತರಾಗುತ್ತೇವೆ. ಇದೇ ಬುದುಕಿನ ವಿಪರ್ಯಾಸ. 'ಪುಣ್ಯಸ್ಯ ಫಲಮಿಚ್ಚಂತಿ, ಪುಣ್ಯಂ ನೇಚ್ಚಂತಿ ಮಾನವಾಃ ನಪಾಪ ಫಲಮಿಚ್ಚಂತಿ ಪಾಪಂ ಕುರ್ವಂತಿ ಯತ್ನತಃ' ಮುಷ್ಟಿಯಲ್ಲಿರುವ ಮೂರು ಕಾಸನ್ನು ಬಿಸುಟು ಕೈಗೆಟುಕದ ಆರು ಕಾಸಿಗೆ ತಿಣುಕುವಂತೆ ನಮಗೆ ಸುಲಭ ಲಭ್ಯವಾದ ಸಾಧಾರಣ ಸುಖವನ್ನು ಒದೆಯುತ್ತಾ ಮೃಗ ಮರೀಚಿಕೆಯಂಥ ವೈಭವದಿಂದ ಹಿಂದೆ ಓಡುತ್ತಿರುತ್ತೇವೆ.
ಸುಖ-ದುಃಖ, ಸಿರಿತನ ನಾವು ಬಳಸುವ ಮಾನದಂಡವನ್ನು ಅವಲಂಬಿಸಿದೆ. ತಾರಸಿ ಮನೆಯಲ್ಲಿ ವಾಸಿಸುವವನು ಸುಖಿಯೂ ಹೌದು, ದುಃಖಿಯೂ ಹೌದು. ಗುಡಿಸಲು ವಾಸಿಗಿಂತ ಈತ ಸುಖಿ, ಅರಮನೆ ವಾಸಿಗಿಂತ ಈತ ದುಃಖಿ. ಆದ್ದರಿಂದ ಸುಖ-ದುಃಖ, ಸಿರಿತನ ಬಡತನ ಸಾಪೇಕ್ಷವಾಗಿದ್ದು, ದೊರೆತಿದುದರಲ್ಲಿ ತೃಪ್ತಿಪಟ್ಟು, ಅಷ್ಟನ್ನಾದರೂ ಅನುಗ್ರಹಿಸಿ ಭಗವಂತನಿಗೆ ಕೃತಜ್ಞನಾಗಿರುವುದೇ ನಿಜವಾದ ಸುಖ- ಎಂಬ ಗೀತಾಚಾರ್ಯನ ವಚನದಂತೆ ಸಕಲ ಜೀವಿಗಳಿಗೂ ಒಳಿತನ್ನೇ ಚಿಂತಿಸುವವನ ಹತ್ತಿರಕ್ಕೆ ಎಂದೂ ಕಷ್ಟ ದುಃಖಗಳು ಸುಳಿಯಲಾರವು. ನಮಗೆ ಯಾರ್ಯಾರು ಏನನ್ನು ನೀಡುತ್ತಾರೆ, ನೀಡಿದ್ದಾರೆ ಎನ್ನುವುದಕ್ಕಿಂತ ನಾವು ಯಾರ್ಯಾರಿಗೆ ಏನೇನು ನೀಡುತ್ತೇವೆ, ನೀಡಿದ್ದೇವೆ ಎಂಬುದನ್ನು ಚಿಂತಿಸಬೇಕು.
- ಎಸ್. ವೆಂಕಟರಮಣ ಅಡಿಗ