

ಹಿಂದೂಗಳಿಗೆ ಅಷ್ಟಾದಶ ಪುರಾಣ ಅತ್ಯಂತ ಮಹತ್ವದ್ದು, ಅದರಲ್ಲಿ 'ವರಾಹ ಪುರಾಣ'ವೂ ಒಂದು. ಮಹಾವಿಷ್ಣು ಲೋಕೋದ್ಧಾರಕ್ಕಾಗಿ ಎತ್ತಿದ ಅಸಂಖ್ಯಾತ ಅಂಶಾವತಾರ, ಪೂರ್ಣಾವತಾರಗಳಲ್ಲಿ ವರಾಹಾವತಾರವೂ ಒಂದು.
ಕೃತಯುಗದಲ್ಲಿ ಹಿರಣ್ಯಾಕ್ಷನೆಂಬ ಅಸುರ ಭೂಮಂಡಲ (ಭೂದೇವಿ)ವನ್ನು ಅಪಹರಿಸಿ ರಸಾತಳ ಲೋಕದಲ್ಲಿ ಮುಚ್ಚಿಡುತ್ತಾನೆ. ಆಗ ಮಹಾವಿಷ್ಣು ಕೋರೆಗಳುಳ್ಳ ಬೃಹತ್ ವರಾಹ (ಹಂದಿಯ) ರೂಪವನ್ನು ತಳೆದು ರಸಾತಳಕ್ಕೆ ಹೋಗಿ ಹಿರಣ್ಯಾಕ್ಷನೊಂದಿಗೆ ಘೋರ ಯುದ್ಧ ಮಾಡಿ, ಅಂತ್ಯದಲ್ಲಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಂಡಲವನ್ನು ಅದರ ಸ್ವಸ್ಥಾನದಲ್ಲಿ ಇರಿಸಿದನು.
ಇದೇ ಸಮಯದಲ್ಲಿ ಮಹಾವಿಷ್ಣು ಭೂದೇವಿಗೆ ಬೋಧಿಸಿದ 24,000 ಶ್ಲೋಕಗಳೇ ವರಾಹ ಪುರಾಣ. ಕಾಲಾಂತರದಲ್ಲಿ ವೇದವ್ಯಾಸರು ಇದನ್ನು ರಚಿಸಿ ಲೋಕಾರ್ಪಣೆಗೊಳಿಸಿದರು. ಈ ಪುರಾಣದಲ್ಲಿ ಮುಕ್ತಿ ಪಥ, ಹಿಂದೂಗಳು ಆಚರಿಸತಕ್ಕ ಧಾರ್ಮಿಕ ಆಚರಣೆಗಳು, ಹಬ್ಬ-ಹರಿದಿನ, ವ್ರತಗಳು ವಿವರಿಸಲ್ಪಟ್ಟಿದೆ.
ಈ ಪುರಾಣದಲ್ಲಿ ಹಲವು ಮಹತ್ವದ ಕಥೆಗಳು ಬರುತ್ತವೆ.
ಈ ಪುರಾಣದಲ್ಲಿ ತಿಥಿ ದೇವತೆಗಳ ವರ್ಣನೆ ಈ ರೀತಿ ವಿವರಿಸಲ್ಪಟ್ಟಿದೆ.
ವಹ್ನಿ ಸಷ್ಟರಿಮಾದ್ರಿಜಾ ಗಣಪತಿಃ ಸರ್ಪಃ ಕುಮಾರೋ ರವಿಃ
ಗೌರೀಶೋ ವಸು ನಾಗ ಧರ್ಮ ಹರಯಃ ಕಾಮಃ ಕಲೀಂದೋಪಿಕಾ ॥
ಪಾಡ್ಯಮಿಗೆ- ಅಗ್ನಿ, ದ್ವಿತೀಯಕ್ಕೆ - ಬ್ರಹ್ಮ, ತೃತೀಯಕ್ಕೆ - ಪಾರ್ವತಿ, ಚೌತಿಗೆ - ವಿಘ್ನೇಶ್ವರ, ಪಂಚಮಿಗೆ - ಆದಿಶೇಷ, ಷಷ್ಠಿಗೆ - ಕುಮಾರಸ್ವಾಮಿ, ಸಪ್ತಮಿಗೆ - ರವಿ, ಅಷ್ಟಮಿಗೆ - ಈಶ್ವರ, ನವಮಿಗೆ - ವಸುದೇವತೆಗಳು, ದಶಮಿಗೆ - ನಾಗ, ಏಕಾದಶಿಗೆ - ಯಮ, ದ್ವಾದಶಿಗೆ - ಹರ, ತ್ರಯೋದಶಿಗೆ - ಮನ್ಮಥ, ಚತುರ್ದಶಿಗೆ - ಕಲಿ, ಹುಣ್ಣಿಮೆಗೆ - ಚಂದ್ರ, ಅಮಾವಾಸ್ಯೆಗೆ - ಪಿತೃ ದೇವತೆಗಳು ಎಂದು.
ವರಾಹ ಪುರಾಣದಲ್ಲಿ ಸನಾತನ ಧರ್ಮದ ವಿವರಣೆ ಇದೆ. ಕರ್ಮ ಸಿದ್ಧಾಂತದ ವಿವರಣೆ ಇದೆ. ಜನನ- ಮರಣವೆಂಬ ವಿಷ ಸಂಕೋಲೆಯಿಂದ ಹೇಗೆ ಬಿಡುಗಡೆ ಹೊಂದಬೇಕೆಂಬ ವಿವರಣೆಯೂ ನಚಿಕೇತ ಹಾಗೂ ಯಮರಾಜನ ಸಂವಾದ ರೂಪದಲ್ಲಿದೆ. ಹಾಗೂ ಮಾನವನು ಮಾಡಿದ ಪಾಪಗಳಿಗೆ ಯಮರಾಜನು ವಿಧಿಸುವ ಶಿಕ್ಷೆಗಳ ವಿವರಣೆ ಇದೆ.
ಈ ಸಂದರ್ಭದಲ್ಲಿ ಸಶರೀರನಾಗಿ ನರಲೋಕವನ್ನು ಸಂದರ್ಶನ ಮಾಡಿದ ಬಾಲಕ ನಚಿಕೇತನಿಗೆ ಯಮರಾಜ 3 ವರಗಳನ್ನು ನೀಡುತ್ತಾನೆ. ಅದರಲ್ಲಿ ಮೂರನೇ ವರ ಅತ್ಯಂತ ಸಂಕೀರ್ಣವೂ, ಕುತೂಹಲವೂ ಆಗಿದೆ. ಅದೇನೆಂದರೆ, ಶರೀರ - ಇಂದ್ರಿಯಗಳನ್ನು ಮೀರಿ ಆತ್ಮಜ್ಞಾನಕ್ಕೆ ಸಂಬಂಧಿಸಿದ್ದು.
ಶರೀರೇಂದ್ರಿಯಗಳು ನಾಶವಾದ ಮೇಲೆ, ಅಂದರೆ ಮನುಷ್ಯ ಸತ್ತಮೇಲೆ ಗೋಚರ ವಸ್ತುವು ನಾಶವಾಗಿ ಅದಕ್ಕಿಂತ ಭಿನ್ನವಾದ ಆತ್ಮ ವಸ್ತುವು ಇದೆಯೋ ಇಲ್ಲವೋ ಎಂಬ ವಿಚಾರದಲ್ಲಿ ಪ್ರತ್ಯಕ್ಷದಿಂದಾಗಲೀ, ಅನುಮಾನದಿಂದಾಗಲೀ ನಿರ್ಣಯಿಸಲು ಆಗುವುದಿಲ್ಲ. ಈ ನಿರ್ಣಯ ಜ್ಞಾನದಿಂದಲೇ ಪರಮ ಪುರುರ್ಷಾವು ಲಭಿಸುತ್ತದೆಯಾದ್ದರಿಂದ, ಇಂಥ ಪರಮಜ್ಞಾನವು ನನಗೆ ಲಭಿಸುವಂತೆ ವರವನ್ನು ಕೊಡು ಎಂದು ಬೇಡುತ್ತಾನೆ.
ಆಗ ಯಮರಾಜ ಗತ್ಯಂತರವಿಲ್ಲದೆ, ನಿತ್ಯಾನಿತ್ಯ ವಸ್ತು ವಿವೇಕವನ್ನೂ, ವಿದ್ಯಾ ಅವಿದ್ಯಗಳ ಪರಿಜ್ಞಾನವನ್ನೂ ಹೊಂದಲು ಓಂ ಎಂಬ ಶಬ್ಧದಿಂದ ಮಾತ್ರ ಸಾಧ್ಯ, ಇದು ಪರಬ್ರಹ್ಮನ ಪ್ರತೀಕ, ಇದು ಅಕ್ಷರವಾದದ್ದು, ಇದನ್ನೇ ಉಪಾಸನಾ ರೂಪದಿಂದ ತಪಸ್ಸೆಂದು ಸ್ವೀಕರಿಸಿ ಅಹಂ ಬ್ರಹ್ಮಾಸ್ಮಿ ಎಂಬ ವಿವೇಕವನ್ನು ಹೊಂದಿ ಬ್ರಹ್ಮಭೂತನಾಗಿ, ಬ್ರಹ್ಮದಲ್ಲೇ ಲೀನನಾದಲ್ಲಿ ಬ್ರಹ್ಮಜ್ಞಾನ ಪ್ರಾಪ್ತವಾಗುತ್ತದೆ. ಇದುವೇ ಜೀವನ್ಮುಕ್ತಿ, ಎಂದು ಹೇಳಿ ನಚಿಕೇತನ ಮೂರನೇ ವರಕ್ಕೇ ಉತ್ತರವನ್ನು ನೀಡುತ್ತಾನೆ.
ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠವಾದುದು, ಮನಸ್ಸಿಗಿಂತ ಬುದ್ಧಿ ಉತ್ತಮವಾದುದು, ಬುದ್ಧಿಗಿಂತ ಮಹತ್ ಎಂಬ ಆತ್ಮನು ಅಧಿಕನು, ಮಹತ್ತಿಗಿಂತ ಅವ್ಯಕ್ತದ ಬ್ರಹ್ಮನು ಉತ್ತಮನು.
ಇಂಥ ಅಸಂಖ್ಯಾತ ಅತ್ಯಪೂರ್ವ ವಿಚಾರಗಳುಳ್ಳ ವರಾಹ ಪುರಾಣ ನಮ್ಮ ಹಿಂದು ಸಂಸ್ಕೃತಿಯ ಗರಿಮೆಗೆ ಸಾಕ್ಷೀಭೂತವಾಗಿದೆ. ಮಾಹಿತಿಗೆ ಮೊ. 9740973224 ಸಂಪರ್ಕಿಸಿ.
- ವಿ. ಕೇಶವಮೂರ್ತಿ