ನಾನು ನನ್ನ ಮನಸು

ಪ್ರತಿಯೊಬ್ಬರೂ ಬದುಕಿನ ಪಯಣದಲ್ಲಿ ಒಂದಲ್ಲಾ ಒಂದು ರೀತಿಯ ಹೊರೆಯನ್ನು ಹೊತ್ತು ಸಾಗುತ್ತಿರುತ್ತಾರೆ....
ನಾನು ನನ್ನ ಮನಸು
Updated on: 

ಕಟ್ಟಿಗೇ ಹೊರೆಯನು ಹೊತ್ತರೂ ತಲೆ ಮೇಲೆ
ತುರುಬೀನೋಳಿರಲೊಂದು ಹೂವು
ಹೊರೆ ಭಾರವಾದಾಗ ಹೂವಿನ ಕಂಪೊಳು
ಕಡಿಮೆಯೆಂದೆನಿಪುದು ನೋವು

ಹಿರಿಯ ಕವಿ ಎಸ್.ವಿ. ಪರಮೇಶ್ವರಭಟ್ಟರ 'ಇಂದ್ರಛಾಪ'ದ ಈ ಸಾಲುಗಳು ಬದುಕಿಗೆ ಸದಭಿರುಚಿಯ ಅಗತ್ಯವನ್ನು ಸಾರಿ ಹೇಳುತ್ತವೆ. ಪ್ರತಿಯೊಬ್ಬರೂ ಬದುಕಿನ ಪಯಣದಲ್ಲಿ ಒಂದಲ್ಲಾ ಒಂದು ರೀತಿಯ ಹೊರೆಯನ್ನು ಹೊತ್ತು ಸಾಗುತ್ತಿರುತ್ತಾರೆ. ಒತ್ತಡ, ಉದ್ವೇಗ, ಆತಂಕಗಳಿಗೆ ಎಡೆಮಾಡಿಕೊಡುವ ಈ ಭಾರವನ್ನು ಸಂಪೂರ್ಣವಾಗಿ ಕಳೆದುಕೊಂಡವರು ಯಾರೂ ಇರಲಾರರು.
ಆದರೆ, ಅನಿವಾರ್ಯವಾದ ಈ ಹೊರೆ ಭಾರದ ನೋವನ್ನಂತೂ ಖಂಡಿತಾ ಕಡಿಮೆ ಮಾಡಿಕೊಳ್ಳಬಹುದು. ತುರುಬಿನಲ್ಲಿ ಹೂವೊಂದಿದ್ದರೆ ಅದರ ಕಂಪಿನಿಂದ ಭಾರ ತುಸು ತಗ್ಗಿದಂತೆ ಅನಿಸುತ್ತದೆ. ದಾರಿ ಸುಗಮವೆಂದೆನಿಸುತ್ತದೆ. ಅಂತೆಯೇ ಜೀವನ ಪಯಣದಲ್ಲಿ ಒಳ್ಳೆಯ ಅಭಿರುಚಿಗಳು ತುರುಬಿನ ಹೂವು ಬೀರುವ ಸುಮಧುರ ಕಂಪಿನಂತೆ ದುಃಖವನ್ನು ಕಡಿಮೆಗೊಳಿಸಿ ಮನಸ್ಸಿಗೆ ಸಾಂತ್ವನ ನೀಡುತ್ತವೆ.
ಬಾಯಿರುಚಿ ದೇಹಕ್ಕೆ ಹೇಗೋ ಹಾಗೆ ಅಭಿರುಚಿ ಎಂಬುದು ಮನಸ್ಸಿನ ಅಗತ್ಯ. ಒಳ್ಳೆಯ ಆಹಾರ ಸೇವಿಸಿದರೆ ದೈಹಿಕ ಆರೋಗ್ಯ ಚೆನ್ನಾಗಿರುವಂತೆ, ಸದಭಿರುಚಿ ಹೊಂದಿರುವವರ ಮಾನಸಿಕ ಆರೋಗ್ಯ ಸ್ವಸ್ಥವಾಗಿರುತ್ತದೆ. ವ್ಯಕ್ತಿತ್ವ ಸದೃಢವಾಗಿರುತ್ತದೆ. ಹಸಿವಾಗಿದೆ ಎಂದು ಹಾದಿಬೀದಿಯ ಆಹಾರ ತಿಂದರೆ ಆರೋಗ್ಯ ಕೆಡುವಂತೆ ಅಭಿರುಚಿ ಕೆಟ್ಟರೆ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಆಗ ವ್ಯಕ್ತಿತ್ವ ಅರಳುವುದರ ಬದಲು ನರಳುತ್ತದೆ.
ಬರಿಯ ಪದವಿ, ಹುದ್ದೆಗಳು ಒಳ್ಳೆಯ ಅಭಿರುಚಿಗೆ ಮೂಲವಾಗುವುದಿಲ್ಲ. ಇಂದಿನ ಯುವಜನ ತೀಕ್ಷ್ಣಮತಿಗಳಾಗಿದ್ದಾರೆ. ತಂತ್ರಜ್ಞಾನದ ನಾಗಾಲೋಟದಲ್ಲಿ ಬಹಳ ಮುಂದಿದ್ದಾರೆ, ನಿಜ. ಆದರೆ ಸಂಕಷ್ಟ ಬಂದಾಗ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಸದಭಿರುಚಿಯ ಕೊರತೆ. ಓದು ಒಂದು ಅತ್ಯುತ್ತಮ ಅಭಿರುಚಿ. ಆದರೆ ಇಂದಿನ ಜನಕ್ಕೆ ಓದಲು ಬಿಡುವೇ ಇಲ್ಲ. ಇಂದಿನ ಅಂತರ್ಜಾಲ ಯುಗದಲ್ಲಿ ಪತ್ರ ವಿನಿಮಯದಂಥ ಮೂಲಭೂತ ಓದೂ ಮಾಯವಾಗಿದೆ.
ಮನರಂಜನೆಗೆ ಕೈಬೆರಳ ತುದಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಲಭ್ಯವಿರುವುದರಿಂದ, ವಿರಾಮದ ಬಹುಭಾಗ ಟಿ.ವಿ. ಯ ಮುಂದೆಯೇ ಕಳೆದುಹೋಗುತ್ತದೆ. ಅದರಲ್ಲಿ ಮೂಡಿಬರುವ ನೂರಾರು ವಾಹಿನಿಗಳು ಉಣಬಡಿಸುವ ಮನರಂಜನೆಯಾದರೂ ಎಂಥದ್ದು? ಅಸೂಯೆ ಬಿತ್ತುವ, ಅಂತ್ಯ ಕಾಣದ ಅರ್ಥಹೀನ ಧಾರಾವಾಹಿಗಳು. ಗುಂಪುಗಾರಿಕೆ ಮೊದಲಾದ ನಕಾರಾತ್ಮಕ ಭಾವನೆಗಳನ್ನೇ ಸಾರುವ ರಿಯಾಲಿಟಿ ಶೋಗಳು. ಇವು ಮೊದಲೇ ಹಾಳಾದ ಮನಸ್ಸನ್ನು ಇನ್ನಷ್ಟು ಹಾಳುಗೆಡವುತ್ತವೆ.
'ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು' ಎಂಬ ವರಕವಿ ಬೇಂದ್ರೆಯವರ ಜನಪ್ರಿಯ ಕವನದ ಸಾಲಿನಂತೆ, ಸಮಾಜದಲ್ಲಿಂದು ಹಣವೇ ಪ್ರಧಾನವಾಗಿದೆ. ಬಹುಪಾಲು ಜನರಲ್ಲಿ ಹಣ ಗಳಿಕೆಯೇ ಬದುಕಿನ ಏಕೈಕ ಗುರಿ ಎಂಬ ಮನೋಭಾವವಿರುವುದರಿಂದ ಸದಭಿರುಚಿಗಳನ್ನು ರೂಢಿಸಿಕೊಳ್ಳುವ ಮನಸ್ಥಿತಿ ಮಾಯವಾಗುತ್ತಿದೆ.
ಆದರೆ ಹಣದಿಂದ ನೆಮ್ಮದಿ, ಆತ್ಮಶಾಂತಿಗಳನ್ನು ಖರೀದಿಸುವುದು ಅಸಾಧ್ಯ. ಒಳ್ಳೆಯತನ, ಮಾನವೀಯ ನಡವಳಿಕೆಗಳೇ ಆತ್ಮಸಂತೋಷದ ಮೂಲ. ಅವು ಪ್ರಾಪ್ತವಾಗುವುದು ಸದಭಿರುಚಿಗಳಿಂದ. ಉತ್ತಮ ಸಂಗೀತವನ್ನು ಕೇಳಿದಾಗ ಮನಸ್ಸು ಅರಳುತ್ತದೆ. ನೊಂದವರಿಗೆ ನೆರವಿನ ಹಸ್ತ ಚಾಚಿದಾಗ ತೃಪ್ತಿ ಲಭಿಸುತ್ತದೆ. ಸುಂದರ ಪ್ರಕೃತಿಯನ್ನು ಆಸ್ವಾದಿಸಿದಾಗ ಮನಸ್ಸು ಹಗುರವಾಗುತ್ತದೆ.
ಒಳ್ಳೆಯ ಚಿತ್ರ ನೋಡಿದಾಗ ಅಥವಾ ಬರೆದಾಗ ಮನದ ಕಲ್ಪನಾ ಲೋಕಕ್ಕೆ ರೆಕ್ಕೆ ಮೂಡುತ್ತದೆ. ಒಳ್ಳೆಯ ಕಾದಂಬರಿಯೊಂದನ್ನು ಓದಿದಾಗ ಅದರ ಪಾತ್ರವೇ ನಾವಾಗುತ್ತೇವೆ. ಅಲ್ಲಿನ ಸನ್ನಿವೇಶ ಮನದ ಪರದೆಯ ಮೇಲೆ ಮೂಡುತ್ತದೆ. ಇವೆಲ್ಲಾ ಸದಭಿರುಚಿಯ ವಿವಿಧ ಸ್ವರೂಪಗಳು.
ಇವು ಮನಸ್ಸನ್ನು ಉಲ್ಲಸಿತಗೊಳಿಸುವ ದಿವ್ಯೌಷಧಗಳು. ಮನಸ್ಸು ನಿರಾತಂಕವಾದಾಗ ನಮ್ಮ ಮೇಲೆ ನಮಗೆ ನಂಬಿಕೆ ಮೂಡುತ್ತದೆ. ನಮ್ಮ ಆಂತರಿಕ ಶಕ್ತಿಗಳು ನಮಗೆ ಗೋಚರಿಸಲಾರಂಭಿಸುತ್ತವೆ. ಮನಸ್ಸು ಸಣ್ಣತನದ ವ್ಯಾಧಿಯಿಂದ ನರಳದಂತೆ ಮಾಡಬೇಕಾದರೆ ಸದಭಿರುಚಿಗಳನ್ನು ನಮ್ಮದಾಗಿಸಿಕೊಳ್ಳಬೇಕು. ಇದು ನಮ್ಮ ಆಳದ ಸಂಪತ್ತಾದ ವ್ಯಕ್ತಿತ್ವದ ವಿಕಸನಕ್ಕೆ ಸೋಪಾನ.

- ಎಚ್.ಎಸ್. ನವೀನ ಕುಮಾರ್ ಹೊಸದುರ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com