ನಮನ ಮನನ

ಶಿರಬಾಗಿ ನಮಸ್ಕರಿಸುವ ಸತ್ಸಂಪ್ರದಾಯ ನಮ್ಮ ಭಾರತ ದೇಶದ್ದು. ದೇವರಿಗೆ, ಗುರುಹಿರಿಯರಿಗೆ, ತಂದೆ ತಾಯಿಗೆ ಅಷ್ಟೇ ಅಲ್ಲ,...
ನಮನ ಮನನ
Updated on: 

ಒಬ್ಬರನ್ನೊಬ್ಬರು ಭೇಟಿಯಾದಾಗ ಶುಭಾಶಯ ಹೇಳುವುದು ಇಂದು ನಿನ್ನೆಯದಲ್ಲ. ಬೇರೆಬೇರೆ ದೇಶಗಳಲ್ಲಿ  ಬೇರೆ ಬೇರೆ ರೀತಿಯಾಗಿ ಗ್ರೀಟ್ ಮಾಡುವ ಪದ್ಧತಿ ಇದೆ. ಪಾಶ್ಚಾತ್ಯ ದೇಶಗಳಲ್ಲಿ ಹಸ್ತಲಾಘವ ಮಾಡುವ ರೂಢಿ ಇದ್ದರೆ, ಅರಬ್ ದೇಶಗಳಲ್ಲಿ ಆಲಂಗಿಸಿ ಶುಭ ಹಾರೈಸುವ ಸಂಪ್ರದಾಯವನ್ನು ಕಾಣುತ್ತೇವೆ.
ಶಿರಬಾಗಿ ನಮಸ್ಕರಿಸುವ ಸತ್ಸಂಪ್ರದಾಯ ನಮ್ಮ ಭಾರತ ದೇಶದ್ದು. ದೇವರಿಗೆ, ಗುರುಹಿರಿಯರಿಗೆ, ತಂದೆ ತಾಯಿಗೆ ಅಷ್ಟೇ ಅಲ್ಲ, ದೇವರೆಂದೇ ಪೂಜಿಸುವ ಗಿಡ ಮರಗಳಿಗೆ, ಸೂರ್ಯ ಚಂದ್ರರಿಗೆ, ಪ್ರಕೃತಿ ಮಾತೆಗೆ ಹೀಗೆ ಪೂಜನೀಯ ಭಾವ ಇರುವ ಎಲ್ಲದಕ್ಕೂ ಕೃತಜ್ಞತಾ ಭಾವ ತೋರಿಸುವ ವಿಶೇಷ ರೀತಿಯೇ ನಮಸ್ಕಾರ ಎಂದು ಕರೆಸಿಕೊಳ್ಳುತ್ತದೆ.
ಇಂದಿನ ವೇಗದ ಜೀವನದಲ್ಲಿ ನಮ್ಮ ಸಂಸ್ಕೃತಿಯ ಸತ್ಸಂಪ್ರದಾಯದ ಪ್ರತೀಕವಾದ ಶಿರಬಾಗಿ ನಮಸ್ಕಾರ  ಮಾಡುವ ಪದ್ಧತಿಯನ್ನು ನಾವೆಲ್ಲ ಮರೆತಿದ್ದೇವೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ. ನಾವಿಂದು ಹಾಯ್, ಹಲೋ ಸಂಸ್ಕೃತಿಗೆ ವಾಲುತ್ತಿದ್ದೇವೆ. ಕರಗಳನ್ನು ಜೋಡಿಸಿ ಮುಗಿಯುವ ರೂಢಿಯೂ ಮಾಯವಾಗುತ್ತಿದೆ. ಅಲ್ಲಲ್ಲಿ ಬಾಯಿ ಮಾತಿನ ನಮಸ್ಕಾರ ಕೇಳುತ್ತಿದ್ದೇವೆ. ಅರ್ಧ ಕೈಯನ್ನು ಮೇಲೆತ್ತಿ ನಮಸ್ಕರಿಸುವುದನ್ನು ನೋಡುತ್ತಿದ್ದೇವೆ.
ಬಹು ಪ್ರಾಚೀನ ಕಾಲದಿಂದಲೂ ನಮಸ್ಕಾರ ತನ್ನದೇ ಆದ ಪಾವಿತ್ರ್ಯತೆ ಹೊಂದಿದೆ. ರಾಜಮಹಾರಾಜರೂ ಸಾಧು ಸಂತರಿಗೆ ಋಷಿ ಮುನಿಗಳಿಗೆ ಶಿರಬಾಗಿ ನಮಸ್ಕರಿಸಿ ಆಶೀರ್ಮಾದ ಪಡೆದ ಉದಾಹರಣೆಗಳನ್ನು ಇತಿಹಾಸದಲ್ಲಿ ಓದುತ್ತೇವೆ.
ಶಿರ ಬಾಗಿ ನಮಸ್ಕರಿಸಲು ಯಾವುದೇ ಜಾತಿ ಭೇದವಿಲ್ಲ. ಇದನ್ನು ನಾವು ಬಸವಣ್ಣನವರ ಕಾಲದಲ್ಲಿ ಗಮನಿಸಬಹುದು. ಹನ್ನೆರಡನೇ ಶತಮಾನದಲ್ಲಿ ನಮಸ್ಕಾರಕ್ಕೊಂದು ವಿಶೇಷ ಹಿರಿಮೆ ಗರಿಮೆ ದೊರೆತಿದ್ದನ್ನು  ಕಾಣುತ್ತೇವೆ.
ಹಲವು ನಮನ
ನಮಸ್ಕಾರಗಳಲ್ಲಿ ಹಲವು ಪ್ರಕಾರಗಳಿವೆ. ಎರಡೂ ಕೈಗಳನ್ನು ಜೋಡಿಸಿ ಮಾಡುವ ನಮಸ್ಕಾರ, ಸಾಷ್ಟಾಂಗ ನಮಸ್ಕಾರ (ಎರಡೂ ಮಂಡಿ, ಎರಡೂ ಕೈ ಎರಡೂ ಕಾಲು, ಹಣೆ ಮತ್ತು ಎದೆ ಈ ಎಂಟೂ ಅಂಗಗಳು ನೆಲಕ್ಕೆ ತಾಗುವಂತೆ ನಮಸ್ಕರಿಸುವ ವಿಧಾನ), ಉದ್ದಂಡ ನಮಸ್ಕಾರ (ಕೋಲಿನಂತೆ ಉದ್ದವಾಗಿ ಮಲಗಿ, ಎರಡೂ ಕೈಗಳನ್ನು ಉದ್ದವಾಗಿ ಚಾಚಿ, ನಮಸ್ಕರಿಸುವ ಪದ್ಧತಿ), ಹನುಮಾನ ನಮಸ್ಕಾರ (ಎರಡೂ ತೋಳುಗಳನ್ನು ಎದೆಯ ಸಮಕ್ಕೆ ಮೇಲೆತ್ತಿ ಕರಗಳನ್ನು ಎದೆಗೆ ತಾಗುವಂತೆ ಜೋಡಿಸಿ ಮಾಡುವ ನಮಸ್ಕಾರ) ಪಾದಕ್ಕೆ ಹಣೆ ಹಚ್ಚಿ ಮಾಡುವ ನಮಸ್ಕಾರ, ಪಾದಗಳನ್ನು ಮುಟ್ಟಿ ಮಾಡುವ ನಮಸ್ಕಾರ, ಪ್ರದಕ್ಷಿಣೆ ನಮಸ್ಕಾರ (ಕರಗಳನ್ನು ಜೋಡಿಸಿ ದೇವರಿಗೆ ಸುತ್ತು ಹಾಕುವದು), ಉದಯಿಸುವ ಸೂರ್ಯನಿಗೊಂದು ಪ್ರೀತಿಯ ಸಲಾಂ ಅದುವೇ ಸೂರ್ಯ ನಮಸ್ಕಾರ ಹೀಗೆ ವಿವಿಧ ರೀತಿಯಲ್ಲಿ ಶರೀರದ ಅಂಗಾಂಗಳನ್ನು ಉಪಯೋಗಿಸಿ ನಮಸ್ಕರಿಸುವ ಪದ್ಧತಿಗಳಿವೆ.
ಸಂಗೀತ, ನಾಟ್ಯ, ಯಕ್ಷಗಾನ, ಕರಾಟೆ, ಯೋಗಗಳಲ್ಲಿಯೂ ವಿವಿಧ ರೀತಿಯ ನಮಸ್ಕಾರಗಳನ್ನು  ನೋಡುತ್ತೇವೆ. ಮಾನವ ತಾನು ಪ್ರೀತಿಯಿಂದ ಸಾಕಿದ ಪ್ರಾಣಿಗಳಾದ ಎತ್ತು, ನಾಯಿ, ಮಂಗಗಿಳಿಗೆ ನಮಸ್ಕಾರ ಮಾಡುವುದನ್ನು ಕಲಿಸಿದ್ದಾನೆ. ಇಷ್ಟೇ ಅಲ್ಲ ಕಾಡು ಪ್ರಾಣಿಯಾದ ಆನೆಗೂ.
ಮಾನವ ಜೀವನದ ವಿಶೇಷ ಘಟ್ಟವಾದ ವಿವಾಹದಲ್ಲಿ ನಮಸ್ಕಾರ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಈ ಶುಭ ಸಂದರ್ಭದಲ್ಲಿ ನವವಿವಾಹಿತರು ತಮಗೆ ಜನುಮ ನೀಡಿದ ತಂದೆ ತಾಯಿಗಳಿಗೆ, ಅರಿವು ನೀಡಿದ ಗುರುಗಳಿಗೆ, ಸದಾ ತಮ್ಮ ಹಿತವನ್ನೇ ಬಯಸಿದ ಹಿರಿಯರಿಗೆ ನಮಸ್ಕರಿಸಿ, ತಮ್ಮ ಕೃತಜ್ಞತೆಯನ್ನು ತೋರಿಸುತ್ತಾರೆ. ಪಾದಕ್ಕೆರಗಿ ನಮಸ್ಕರಿಸಿದಾಗ ಅವರು  ಪ್ರತಿಯಾಗಿ ಒಳ್ಳೆಯ ಮನಸ್ಸಿನಿಂದ ಆಶೀರ್ವಾದ ಮಾಡಿದಾಗ  ಶಿರೋಭಾಗದಲ್ಲಿ ಸಾತ್ವಿಕ ಶಕ್ತಿಯು ಪ್ರವಹಿಸಿ ನವ ವಧೂವರರ ಶರೀರದಲ್ಲಿ ಸಂಚಯವಾಗುತ್ತದೆ.
ನಮ್ಮ ಜೀವನದಲ್ಲಿ ಇಂತಹ ಮಹತ್ತರ ಪಾತ್ರ ವಹಿಸುವ ನಮಸ್ಕಾರ, ಗೌರವ ಸೂಚಿಸುವ, ಕೃತಜ್ಞತೆಯನ್ನು  ಅರ್ಪಿಸುವ ಸತ್ಸಂಪ್ರದಾಯ.
ಆದರೆ ಇದನ್ನು ನಾವು ಇತ್ತೀಚೆಗೆ ಉಪೇಕ್ಷಿಸುತ್ತಿದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯ ಮೋಹದಲ್ಲಿ ಬಿದ್ದಿರುವ ನಾವು ಗೊಡ್ಡ ಸಂಪ್ರದಾಯ ಎಂದು ಮೂಗು ಮುರಿಯುತ್ತಿದ್ದೇವೆ. ನಮ್ಮತನವನ್ನು ಕಳೆದುಕೊಳ್ಳದೆ ಬಿಟ್ಟು, ನಮ್ಮ ಸಂಸ್ಕೃತಿಯ ಅತ್ಯುತ್ತಮ ಪ್ರತೀಕವಾದ ನಮಸ್ಕಾರವನ್ನು ನಾವೂ ರೂಢಿಸಿಕೊಳ್ಳೋಣ, ಮಕ್ಕಳಿಗೂ ಇದರ ಮಹತ್ವ ತಿಳಿಸಿ ಸಂಸ್ಕಾರವಂತರನ್ನಾಗಿ ಮಾಡಿ ನಮ್ಮ  ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ.

- ಜಯಶ್ರೀ ಅಬ್ಬಿಗೇರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com