

ರಾತ್ರಿ ಸಮಯದಲ್ಲಿ ನೀಲಾಂಬರ (ಆಕಾಶ)ವನ್ನು ನೋಡಿದರೆ ಅಗಣಿತ ಮಿನುಗುವ ಚುಕ್ಕೆಗಳೂ, ತೇಜಃಪುಂಜ ನಕ್ಷತ್ರಗಳು ನಮ್ಮ ಕಣ್ಣಿಗೆ ಗೋಚರವಾಗುವುದು. ಆದರೆ ಭಾರತೀಯ ವೇದಾಂಗ ಜ್ಯೋತಿಷ್ಯ ಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುವರು. ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ವಿಶೇಷತೆಯನ್ನು ಕೊಟ್ಟಿದ್ದಾರೆ.
ಇವುಗಳಲ್ಲಿ ಮೂಲ, ಆಶ್ಲೇಷ, ವಿಶಾಖ ಮತ್ತು ಜ್ಯೇಷ್ಠ ನಕ್ಷತ್ರಗಳು ಸ್ತ್ರೀಯರಿಗೆ ಮಾತ್ರ ಬಹಳ ದೋಷಕಾಕರಗಳು ಎಂದು ಹೇಳಲಾಗಿದೆ.
27 ನಕ್ಷತ್ರಗಳನ್ನು 3 ಗುಂಪುಗಳಾಗಿ ಮಾಡಿರುತ್ತಾರೆ. ಅಶ್ವಿನಿಯಿಂದ ಆಶ್ಲೇಷ ನಕ್ಷತ್ರದ ತನಕ ಒಂದು ಗುಂಪು. ಮುಖ ನಕ್ಷತ್ರದಿಂದ ಜ್ಯೇಷ್ಠ ನಕ್ಷತ್ರದ ತನಕ ಇನ್ನೊಂದು ಗುಂಪು. ಮೂಲ ನಕ್ಷತ್ರದಿಂದ ರೇವತಿ ನಕ್ಷತ್ರ ತನಕ ಮತ್ತೊಂದು ಗುಂಪು.
ಇವುಗಳಲ್ಲಿ ಅಶ್ವಿನಿ, ಮಖ ಮತ್ತು ಮೂಲ ನಕ್ಷತ್ರ ಮೊದಲನೇ ನಕ್ಷತ್ರಗಳು. ಮೂಲಾ ನಕ್ಷತ್ರ ಮೊದಲನೆಯದು ಆಗಿದ್ದರಿಂದ ಅದಕ್ಕೆ ಋಷಿಮುನಿಗಳು ಮೂಲ ನಕ್ಷತ್ರ ಎಂದು ಕರೆದರು. ಇದರ ಅಧಿಪತಿ ಕೇತು ಗ್ರಹ. ಮೂಲ ನಕ್ಷತ್ರದ 1ನೇ ಪಾದದಲ್ಲಿ ಹೆಣ್ಣು ಮಗು ಜನಿಸಿದರೆ 8 ವರ್ಷದವರೆಗೆ ಮಗು ತಂದೆಯನ್ನು ನೋಡಬಾರದು ಎಂದಿದೆ. 2ನೇ ಪಾದವಾದರೆ ತಾಯಿಗೆ ದೋಷ, 3ನೇ ಪಾದವಾದರೆ ತಂದೆಗೆ ಬರುವ ಆದಾಯದಲ್ಲಿ ನಷ್ಟ, 4ನೇ ಪಾದವಾದವಾದರೆ ಶುಭ ಎಂದು ಹಲವರ ನಂಬಿಕೆ.
ಮೂಲಾ ನಕ್ಷತ್ರದಲ್ಲಿ ಹೆಣ್ಣು ಮಗು ಜನಿಸಿದರೆ ಮದುವೆಯ ನಂತರ ಪತ್ನಿಯ ತಂದೆಗೆ (ಮಾವ) ತೊಂದರೆ ಆಗುವುದು ಎಂದು ಹೇಳಿದೆ.
ಜಾತಕದಲ್ಲಿ ಚಂದ್ರನಿಗೆ ಶುಭ ದೃಷ್ಟಿ ಇದ್ದರೆ, ಯಾವ ಭಾವಕ್ಕೆ ದೋಷ ಆಗಿದೆಯೋ ಆ ಭಾವದ ಅಧಿಪತಿ 9ನೇ ಮನೆಯಲ್ಲಿ ಅಥವಾ ಶುಭ ಸ್ಥಾನದಲ್ಲಿದ್ದರೆ, ಶುಭ ಗ್ರಹಗಳಿಂದ ದೃಷ್ಟಿಸಿದರೆ, ಚಂದ್ರನಾಗಲಿ, ಭಾವಾಧಿಪತಿಯಾಗಲಿ ಬಲಿಷ್ಟನಾಗಿದ್ದರೆ, ಚಂದ್ರನಿಗೆ ಗುರು ದೃಷ್ಟಿ ಇದ್ದರೆ ಈ ಸಂದರ್ಭಗಳಲ್ಲಿ ಮೂಲಾ ನಕ್ಷತ್ರದ ದೋಷಗಳೆಲ್ಲಾ ಪರಿಹಾರವಾಗುವುದು.
ಇದನ್ನು ಗಣನೆಗೆ ತೆಗೆದುಕೊಳ್ಳದೆ ಮೂಲಾ ನಕ್ಷತ್ರ ಎಂದ ತಕ್ಷಣ ಕೆಟ್ಟ ನಕ್ಷತ್ರ ಎಂದು ನಿರ್ಧರಿಸುವುದು ಸರಿಯಲ್ಲ. ಸಾಕ್ಷಾತ್ ಸರಸ್ವತಿ ದೇವಿಯ ಜನನವಾಗಿದ್ದು ಈ ನಕ್ಷತ್ರದಲ್ಲಿಯೇ. ನವರಾತ್ರಿಯ ಸಮಯದಲ್ಲಿ ಮೂಲಾ ನಕ್ಷತ್ರದ ದಿನ ಸರಸ್ವತಿ ದೇವಿಯನ್ನು ವಿಶೇಷ ರೀತಿಯಲ್ಲಿ ಪೂಜಿಸುವರು.
ಅಂದು ಅವಳು ಜನಿಸಿದ ದಿನ ಎಂದು ಸರಸ್ವತಿಯನ್ನು ಆವಾಹನೆ ಮಾಡಿ ಪುಸ್ತಕಗಳನ್ನು ಇಟ್ಟು ಪೂಜಿಸುವರು. ಸಾಕ್ಷಾತ್ ಸರಸ್ವತಿ ದೇವಿಯದೇ ಮೂಲ ನಕ್ಷತ್ರವಾಗಿದ್ದರಿಂದ ಈ ನಕ್ಷತ್ರವನ್ನು ಒಳ್ಳೆಯ ನಕ್ಷತ್ರ ಎಂದೇ ಗರಿಗಣಿಸಬಹುದು.
ವಿವಾಹ, ವಿದ್ಯಾರಂಭ, ಯಾತ್ರೆ, ಸೀಮಂತ, ಶಿಶುವನ್ನು ತೊಟ್ಟಿಲಿಗೆ ಹಾಕುವುದು ಇನ್ನೂ ಮುಂತಾದ ಶುಭ ಕಾರ್ಯಗಳನ್ನು ಈ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಆದ್ದರಿಂದ ಮೂಲ ನಕ್ಷತ್ರ ಶುಭ ನಕ್ಷತ್ರವೇ ಆಗಿದೆ. ಮಾಹಿತಿಗೆ 9886013956.
- ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್.
Advertisement