ನಿತ್ಯೋತ್ಸವ

ಇಂದು ವಿದ್ಯೆ, ಹಣ ಎರಡಕ್ಕೂ ಬಹಳ ಪ್ರಾಮುಖ್ಯತೆ. ಎಲ್ಲಿ ವಿದ್ಯೆ ಇದೆಯೋ ಅಲ್ಲಿ...
ನಿತ್ಯೋತ್ಸವ
Updated on: 

ಇಂದು ವಿದ್ಯೆ, ಹಣ ಎರಡಕ್ಕೂ ಬಹಳ ಪ್ರಾಮುಖ್ಯತೆ. ಎಲ್ಲಿ ವಿದ್ಯೆ ಇದೆಯೋ ಅಲ್ಲಿ ಗಳಿಕೆಯೂ ಚೆನ್ನಾಗಿರುತ್ತದೆ. ವಿದ್ಯೆ, ಬುದ್ಧಿ, ಎರಡನ್ನೂ ಬಳಸಿ ಜೀವನ ನಡೆಸಿದರೆ ಹಣ ಒಳ್ಳೆಯ ರೀತಿಯಲ್ಲಿ ಬಳಕೆಯಾಗುತ್ತದೆ.


'ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತೀ,
ಕರ ಮೂಲೇ ಸ್ಥಿತಾಗೌರೀ, ಪ್ರಭಾತೇ ಕರದರ್ಶನಂ'

ಕೈಯ ಬೆರಳ ತುದಿಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ. ಏಕೆಂದರೆ ನಾವು ಬೆರಳ ತುದಿಯಲ್ಲಿ ಹಣದ ಸ್ಪರ್ಶ ಮಾಡುತ್ತೇವೆ. ಅಲ್ಲದೇ ಅದೇ ರೀತಿ ಕರದ ಮಧ್ಯ ಭಾಗದಲ್ಲಿ ಸರಸ್ವತಿ ಆರ್ಥಾತ್ ವಿದ್ಯಾದೇವಿಯಾದ ಶಾರದೆ ನೆಲೆಸಿರುತ್ತಾಳೆ. ಹೇಗೆಂದರೆ ಹಿಂದೆ ತಾಳೆ ಗರಿಯ ಸಹಾಯದಿಂದ ಬರೆಯುತ್ತಿದ್ದರು. ಆಗ ಇದನ್ನು ಹಿಡಿದುಕೊಳ್ಳಲು ಕೈಯನ್ನು ಮುಷ್ಠಿ ಮಾಡಿದಾಗ ಆ ತಾಳೆಗರಿ ಕೈಯ ಮಧ್ಯಭಾಗದಲ್ಲಿರುತ್ತಿತ್ತು. ಆದ್ದರಿಂದಲೇ ಶಾರದೆ ಕರಮಧ್ಯದಲ್ಲಿ ಇದ್ದಾಳೆ ಎಂದು ಹಿರಿಯರು ತಿಳಿಸುತ್ತಾರೆ.
ಇನ್ನು ಪಾರ್ವತಿ ಇಡೀ ಬೊಗಸೆಯ ಸಹಾಯದಿಂದ ಹೂವನ್ನು ಅರ್ಪಿಸಿ ಶಿವನನ್ನು ಒಲಿಸಿರುತ್ತಾಳೆ. ಆದ್ದರಿಂದ ಕರದ ಮೂಲೆಯಲ್ಲಿ ಪಾರ್ವತಿ ನೆಲೆಸಿರುತ್ತಾಳೆ. ಬೆಳಗ್ಗೆ ಎದ್ದ ತಕ್ಷಣ ನಾವು ನಮ್ಮ ಕೈಯನ್ನು ನೋಡಿದರೆ ಈ ಮೂರು ದೇವತೆಗಳನ್ನು ನೋಡಿದಂತಾಗುತ್ತದೆ.
ಮೊದಲು ಲಕ್ಷ್ಮೀ ಮತ್ತು ಶಾರದೆಯ ಸ್ಥಾನ ಕೈಯಲ್ಲಿ ಬೇರೆ ಬೇರೆಯಾಗಿದ್ದರೂ ಈಗಿನ ಕಾಲಕ್ಕೆ ಹೋಲಿಸಿದಾಗ ಇಬ್ಬರ ಸ್ಥಾನವೂ ಒಂದೇ. ಹಣವನ್ನೂ ಬೆರಳಿನ ತುದಿಯಿಂದ ಎಣಿಸಿದರೆ ಪೆನ್ನನ್ನೂ ನಾವು ಬೆರಳಿನ ತುದಿಯ ಸಹಾಯದಿಂದ ಬಳಸಿ ಬರೆಯುತ್ತೇವೆ ಮತ್ತು ಮುಂದೆ ಹೋದಾಗ ಕಂಪ್ಯೂಟರ್ ಟೈಪ್ ಮಾಡಲೂ ಅದೇ ಬೆರಳುಗಳನ್ನು ಬಳಸಿದರೆ ಲಕ್ಷ್ಮಿಯನ್ನು ಹೋಲುವ ಕ್ರೆಡಿಟ್ ಕಾರ್ಡನ್ನು ಅದೇ ಬೆರಳುಗಳಲ್ಲೇ ಬಳಸುತ್ತೇವೆ. ಒಟ್ಟಿನಲ್ಲಿ ಹೇಳುವುದಾದರೆ ಲಕ್ಷ್ಮೀ, ಸರಸ್ವತಿ ಇಬ್ಬರೂ ಒಟ್ಟಿಗೇ ಇದ್ದರೆ ಜೀವನ ಸುಗಮ.

ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ
ವಿಷ್ಣುಪತ್ನಿ ನಮಸ್ತಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ॥

ಮಹಾವಿಷ್ಣುವಿನ ಪತ್ನಿಯಾದ ಭೂದೇವಿಯೇ, ಸಮುದ್ರವೇ ನಿನಗೆ ಉಡುವ ಬಟ್ಟೆಗಳು, ಪರ್ವತಗಳೇ ನಿನ್ನ ಸ್ತನಗಳು ನಿನಗೆ ನಮಸ್ಕಾರ ನನ್ನ ಪಾದಸ್ಪರ್ಶದಿಂದಾದ ಅಪರಾಧವನ್ನು ಮನ್ನಿಸು.
ನಾವು ಎದ್ದ ತಕ್ಷಣ ಭೂದೇವಿಯನ್ನು ತುಳಿಯುತ್ತಾ ನಡೆಯುತ್ತೇವೆ. ನಮ್ಮನ್ನು ಹೊತ್ತುಕೊಳ್ಳುವ ಈ ತಾಯಿಯನ್ನು ತುಳಿದ ಕ್ಷಣ ಬೆಳಗಿನ ಹೊತ್ತು ನನ್ನನ್ನು ಕ್ಷಮಿಸು ಎಂದು ಕೇಳಲೇಬೇಕು. ನಮ್ಮ ಭಾರವನ್ನು ಪ್ರತಿನಿತ್ಯ ಹೊರುವ ಈ ಭೂಮಿಯನ್ನು ನಾವು ಕ್ಷಣಕಾಲವದರೂ ನಮಸ್ಕರಿಸಬೇಕು.

ಸಹನಾ ಭವತು ಸಹನಾ ಭುನಕ್ತು, ಸಹ ವೀರ್ಯಂ ಕರವಾವಹೈ
ತೇಜಸ್ವಿನಾವಧೀತಮಸ್ತು ಮಾವಿದ್ವಿಷಾವಹೈ ಓಂ ಶಾಂತಿಃ, ಶಾಂತಿಃ, ಶಾಂತಿಃ

ಭಗವಂತ ನಮ್ಮನ್ನು ಕಾಪಾಡಲು ನಾವು ಒಟ್ಟಿಗೆ ಕೆಲಸ ಮಾಡೋಣ. ತೇಜಸ್ವಿಗಳಾಗೋಣ. ನಮ್ಮಲ್ಲಿ ದ್ವೇಷ ಬಾರದಿರಲಿ. ಊಟಕ್ಕಿಂತ ಮೊದಲು ಈ ಶ್ಲೋಕ ಪಠಣ ಮಾಡಿದರೆ ಒಳ್ಳೆಯದು. ಇದು ಮೊದಲಲ್ಲಿ ಬರುವ ಪ್ರಾರ್ಥನೆ. ಐಕ್ಯತಾ ಭಾವನೆ ಬರುವ ಶ್ಲೋಕ ಅಂದರೆ ಐಕ್ಯತಾ ಮಂತ್ರ ಎನ್ನಬಹುದು.
ಮುಖ್ಯವಾಗಿ ಇದರಲ್ಲಿ ನಾವು ಒಟ್ಟಿಗೆ ತಿನ್ನೋಣ, ದುಡಿಯೋಣ, ಅಧ್ಯಯನ ಮಾಡೋಣ ಎಂಬ ಅರ್ಥವಲ್ಲದೆ ಊಟದಲ್ಲಿ ಎಲ್ಲರೂ ಸಮಾನವಾಗಿರಬೇಕು ಅನ್ನೋ ಒಳ್ಳೆಯ ಅರ್ಥವಿದೆ.

'ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ
ಶಯನೇಯಃ ಸ್ಮರೇನಿತ್ಯಂ ದುಃಸಪ್ನಂ ತಸ್ಯನಶ್ಯತಿ'

ರಾಮನು ಭುಮಿಯಲ್ಲಿ ಅತ್ಯಂತ ದೀರ್ಘ ಕಾಲ್ನಡಿಗೆ ಮಾಡಿದವನು.  ಅತ್ಯಂತ ಹೆಚ್ಚು ತೇಜಸನ್ನು ಹೊಂದದವನು ಈ ಸುಬ್ರಹ್ಮಣ್ಯ ದೇವರು. ಹನುಮಂತ ಅತ್ಯಂತ ದೀರ್ಘಕಾಲ ವಾಯು ಮಾರ್ಗದಲ್ಲಿ ಸಂಚರಿಸುವಂತಹ ಶಕ್ತಿಯನ್ನು ಹೊಂದಿದವನು. ವೈನತೇಯ (ಗರುಡ) ಇವನು ಕ್ಷೀರ ಸಾಗರದಲ್ಲಿರುವವನು. ವೈಕೋದರ (ಭೀಮ) ಇವನು ವಾಯು ಪುತ್ರ. ತೋಳದಂತಹ ಹೊಟ್ಟೆಯನ್ನು ಹೊಂದಿದವನು.
ಯಾವುದೇ ಪ್ರಾಣಿಯಾದರೂ ಹೊಟ್ಟೆ ತುಂಬಿದ ಮೇಲೆ ತನ್ನ ಪಕ್ಕ ಒಳ್ಳೆಯ ಆಹಾರ ಇದ್ದರೂ ತಿನ್ನದು. ಆದರೆ ತೋಳ ಹಾಗಲ್ಲ. ಎಷ್ಟು ತಿಂದರೂ ಪುನಃ ತಿನ್ನುವಂತಹ ಶಕ್ತಿಯನ್ನು ಹೊಂದಿದೆ. ಅದೇ ರೀತಿ ಭೀಮನೂ ಆದ್ದರಿಂದಲೇ ಇವನಿಗೆ ವೈಕೋದರ ಎಂಬ ಹೆಸರು ಬಂತು. ಈ ಐದೂ ಜನರನ್ನು ರಾತ್ರಿ ಮಲಗುವ ಮುನ್ನ ಈ ಶ್ಲೋಕ ಪಠಣ ಮಾಡಿ ಮಲಗಿದರೆ ರಾತ್ರಿ ಕೆಟ್ಟ ಕನಸು ಬೀಳುವುದಿಲ್ಲ.
 ಈ ನಾಲ್ಕೂ ಶ್ಲೋಕಗಳನ್ನು ನಮ್ಮ ನಿತ್ಯ ಬದುಕಿಗೆ ಅತ್ಯಂತ ಹತ್ತಿರವಾದವು. ಮುಂದೆ ನಮ್ಮ ಉನ್ನತಿಗೆ ಪೂರಕವಾದವುಗಳು. ಇದನ್ನು ನಿತ್ಯವೂ ಪಠಿಸಿ ಆಯಾಯ ಕೆಲಸಗಳನ್ನು ಮಾಡಿದರೆ ಮಾಡುವ ಕೆಲಸ ಸರಾಗವಾಗಿ ಸಾಗುತ್ತದೆ.

- ಕೃಷ್ಣವೇಣಿ ಪ್ರಸಾದ್ ಮುಳಿಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com