

ವಯಸ್ಸಿಗೆ ಬಂದ ಮಕ್ಕಳನ್ನು ಕಂಡಾಗ ಎಲ್ಲಾ ಪೋಷಕರಿಗೆ ಮನಸ್ಸಿನಲ್ಲಿ ಕಾಡುವ ಚಿಂತೆ ಒಂದೇ, ಅವರ ಮದುವೆ. ಮಕ್ಕಳ ಮದುವೆ ಚೆನ್ನಾಗಿ ನಡೆಯಬೇಕು, ಗುಣವಂತ ಹಾಗೂ ಧನವಂತರೊಂದಿಗೆ ಸಂಬಂಧ ಬೆಳಸಬೇಕೆಂಬ ಕನಸು ಈ ಪೋಷಕರದ್ದು.
ಇಂಥ ಕನಸುಗಳು ನನಸಾಗಬೇಕಾದಲ್ಲಿ ಮಕ್ಕಳ ಜಾತಕವೂ ಪೂರಕವಾಗಿರಬೇಕು. ಅಷ್ಟೇ ಅಲ್ಲದೆ, ಮದುವೆಯ ಮುನ್ನ ಜಾತಕಗಳು ಬಂದಾಗ ಬಹಳ ಎಚ್ಚರವಹಿಸಿ ತಮಗೆ ಯೋಗ್ಯವಾದ ಜಾತಕವನ್ನು ಆರಿಸಬೇಕು. ಇನ್ನು ವಿವಾಹ ನಿಶ್ಚಯಿಸುವ ಸಂದರ್ಭದಲ್ಲಿ ಎಲ್ಲರೂ ಕೆಲವು ತಪ್ಪುಗಳನ್ನು ಮಾಡುತ್ತಾರೆ.
ಹೆಸರು ಬಲ
ಹುಡುಗನ ಹಾಗೂ ಹುಡುಗಿಯ ಜನ್ಮದಿನಾಂಕ, ಸಮಯ ಹಾಗೂ ಸ್ಥಳವನ್ನು ಆಧರಿಸಿ ಇಬ್ಬರ ಜಾತಕವನ್ನು ತಯಾರಿಸಿ ವಿವಾಹಕ್ಕೆ ಯೋಗ್ಯವೇ ಎಂದು ಗುಣಿಸಬೇಕು ವಿನಃ ಕೇವಲ ಹುಡುಗನ ಹೆಸರು ಹಾಗೂ ಹುಡುಗಿಯ ಹೆಸರು ಮಾತ್ರ ತೆಗೆದುಕೊಂಡು ವಿವಾಹಕ್ಕೆ ಯೋಗ್ಯವೇ ಎಂದು ನೋಡಬಾರದು. ಹೀಗೆ ಕೇವಲ ಹೆಸರು ಬಲದ ಮೇಲೆ ವಿವಾಹ ನಿಶ್ಚಯಿಸುವುದು ಅಶಾಸ್ತ್ರೀಯ. ಭವಿಷ್ಯದಲ್ಲಿ ತೊಂದರೆಗಳೂ ಆಗಬಹುದು.
ಗಣಕೂಟ
ಇನ್ನು ವಧು- ವರ ಇಬ್ಬರ ನಕ್ಷತ್ರಾನುಸಾರ 18ಕ್ಕಿಂತ ಹೆಚ್ಚು ಗುಣಗಳು ಬಂದ ತಕ್ಷಣ ವಿವಾಹಕ್ಕೆ ಸಮ್ಮತಿಸುವುದು ತಪ್ಪು. ಕಾರಣ ಇಬ್ಬರ ಜಾತಕಗಳನ್ನು ಪರಿಶೀಲಿಸಿ ಇಬ್ಬರಲ್ಲಿ ಯಾರೊಬ್ಬರಿಗಾಗಲಿ ದ್ವಿಕಳತ್ರ ದೋಷವಿದ್ದರೆ, ಪರಿಹಾರ ಮಾಡಿಸಿ ನಂತರ ವಿವಾಹ ಮಾಡಬೇಕು.
ಕಾಲ
ಕೇವಲ ನಮ್ಮ ತಾತ್ಕಾಲಿಕ ಅನುಕೂಲತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಲ್ಯಾಣ ಮಂಟಪ ಸಿಗುವುದಿಲ್ಲ, ನೆಂಟರು ಬರುವುದಿಲ್ಲ ಎಂದು ತಮಗೆ ಸರಿಯೆನಿಸಿದ ದಿನ ವಿವಾಹ ನಿಶ್ಚಯಿಸುತ್ತಾರೆ. ಅದೂ ತಪ್ಪೇ. ವಿವಾಹವನ್ನು ಯಾವಾಗಲೂ ಉತ್ತರಾಯಣದಲ್ಲಿ ಹಾಗೂ ಶುಕ್ಲ ಪಕ್ಷದಲ್ಲಿ ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ ಈ ತಿಥಿಗಳಲ್ಲಿ ಹಾಗೂ ವೃಷಭ, ಮಿಥುನ, ಕರ್ಕ, ಕನ್ಯಾ, ತುಲಾ, ಧನು, ಮೀನ ಈ ಲಗ್ನಗಳಲ್ಲಿ ಯಾವುದಾದರು ಆರಿಸಿ ವಿವಾಹ ಮಾಡುವುದು ಉತ್ತಮ.
ಅಶಾಸ್ತ್ರೀಯ ವಿವಾಹ
ವಿವಾಹಕ್ಕೂ ಮುನ್ನಾ ದಿನವೇ ಸಾಯಂಕಾಲ ಆರತಕ್ಷತೆ ಮಾಡುವ ಅತ್ಯಂತ ಅಶಾಸ್ತ್ರೀಯ ಪದ್ಧತಿಯನ್ನು ಇಂದು ಕಾಣುತ್ತಿದ್ದೇವೆ. ಅಲ್ಲಿ ಕೇವಲ ಫೋಟೋ, ವಿಡಿಯೋಗಳಿಗಾಗಿ ವಧು-ವರರಿಬ್ಬರು ನಿಗದಿಯಾದ ವಿವಾಹ ಶುಭ ಮುಹೂರ್ತಕ್ಕೂ ಮುನ್ನವೇ ಪರಸ್ಪರ ಮುಖದರ್ಶನ ಹಾಗೂ ಪರಸ್ಪರ ಮಾಲಾಧಾರಣೆ ಮಾಡಿಸಿ ಬಿಡುತ್ತಾರೆ. ಇದರಿಂದಾಗಿ ಮರುದಿನ ಶುಭ ಮುಹೂರ್ತದಲ್ಲಿ ಮದುವೆಯಲ್ಲಿ ಮಾಡುವ ತೆರೆಬಟ್ಟೆ ಶಾಸ್ತ್ರ ಹಾಗೂ ಮಾಲಾಧಾರಣೆಗೆ ಏನೂ ಪ್ರಾಮುಖ್ಯತೆ ಉಳಿದಿರುವುದಿಲ್ಲ.
ಹೀಗೆ ಹೇಳುತ್ತಾ ಹೋದಂತೆ ಹತ್ತು ಹಲವು ದೋಷಗಳು ಸಿಗುತ್ತವೆ. ಎಲ್ಲಕ್ಕಿಂತ ಮೊದಲು ನಾವು ನಮ್ಮ ಜಾಣ ಕಿವುಡುತನವನ್ನು ತೊರೆಯಬೇಕು. ಅತ್ಯಂತ ಶುಭಪ್ರದವಾಗಿ ಶಾಸ್ತ್ರೋಕ್ತವಾಗಿ ವಿವಾಹ ಮಾಡುವ ವಿಷಯದಲ್ಲಿ ಪ್ರಯತ್ನಿಸಬೇಕು. ಹೆಚ್ಚಿನ ಮಾಹಿತಿಗೆ, ಮೊ. 9845682380 ಸಂಪರ್ಕಿಸಿ.
- ವಿಠ್ಠಲ್ ಭಟ್