

ಗಣಪತಿ ಜನಪ್ರಿಯ ದೇವತೆ. ಈತ ಶಿವನ ಗಣದವರಿಗೆ ನಾಯಕ. ಧಾರ್ಮಿಕ ಮತ್ತು ಲೌಕಿಕವಾದ ಕಾರ್ಯಗಳು ಗಣೇಶನ ಪೂಜೆಯಿಲ್ಲದೆ ಪ್ರಾರಂಭವಾಗದು. ಏಕೆಂದರೆ ಈತ ವಿಘ್ನರಾಜನಾಗಿರುವುದರಿಂದ. ಬಾಲ ಗಣಪ ಚುರುಕು ಬುದ್ಧಿವುಳ್ಳವನು. ರಾವಣನಿಂದ ಆತ್ಮಲಿಂಗವನ್ನು ತೆಗೆದುಕೊಂಡ ಪ್ರಸಂಗವೇ ಇದಕ್ಕೆ ಸಾಕ್ಷಿ.
ಜಾತಕನ ಲಗ್ನದಲ್ಲಿ ಗುರು ಅಥವಾ ಬುಧ ಗ್ರಹವಿದ್ದು, ಆ ಗ್ರಹದ ಉಚ್ಚಸ್ಥಾನದ ರಾಶಿ ಆಗಿದ್ದರೆ ಆ ವ್ಯಕ್ತಿಗಳು ಚುರುಕು ಬುದ್ಧಿಯುಳ್ಳವರಾಗಿರುತ್ತಾರೆ. ಈ ಗಣಪ ಬೇರೆ ದೇವರ ಹಾಗಲ್ಲ. ಆನೆಯ ಮುಖ, ಸಣ್ಣ ಕಣ್ಣು, ದೊಡ್ಡ ಕಿವಿ, ದೊಡ್ಡ ಬಾಯಿ, 4 ಕೈಗಳು, ಹೊಟ್ಟೆಗೆ ಸುತ್ತಿದ ಹಾವು. ಇವುಗಳನ್ನೆಲ್ಲಾ ನಮ್ಮ ಜಾತಕಕ್ಕೆ ಹೋಲಿಸಿ ವಿವರಿಸಿದಾಗ ಗ್ರಹಗಳ ದೋಷಗಳನ್ನು ಗಣೇಶನ ಆರಾಧನೆಯಿಂದ ನಿವಾರಿಸಿಕೊಳ್ಳಬಹುದು.
ಕಣ್ಣು
ಗಣೇಶನ ಕಣ್ಣು ಸಣ್ಣದಾಗಿರುವುದು. ಇದರ ಅರ್ಥ ಪ್ರತಿಯೊಂದನ್ನು ಸೂಕ್ಷ್ಮ ದೃಷ್ಟಿಯಿಂದ ಗಮನಿಸಬೇಕು ಎಂದು. ಲಗ್ನದ ಹಿಂದಿನ ಮತ್ತು ಮುಂದಿನ ಮನೆಗಳು. ಎರಡು ಕಣ್ಣುಗಳು. ಇದರಲ್ಲಿ ರವಿಗ್ರಹ ಎಡಕಣ್ಣು, ಚಂದ್ರಗ್ರಹ ಬಲಕಣ್ಣು. ಈ ಗ್ರಹಗಳು ಲಗ್ನದ ಹಿಂದೆ ಮುಂದೆ ಇದ್ದರೆ ಆ ವ್ಯಕ್ತಿಯದು ಚಿಕ್ಕ ಕಣ್ಣುಗಳಿರುತ್ತದೆ ಮಾತ್ರವಲ್ಲದೆ ಆತನಿಗೆ ಕಣ್ಣಿನ ದೋಷವೂ ಬರಬಹುದು.
ಕಿವಿ
ಗಣಪತಿಯ ಕಿವಿ ದೊಡ್ಡ ಮೊರದಂತೆ ಇರುವುದು. ದೂರದಲ್ಲಿ ಧಾನ್ಯವನ್ನು ಕೇರಿದಾಗ ಹೊಟ್ಟು ಮತ್ತು ಜೊಳ್ಳನ್ನು ಬೇರೆ ಬೇರೆಯಾಗಿಸಿ ಗಟ್ಟಿಯಾದ ಬೀಜ ಉಳಿಯುವುದು. ಅದರಂತೆ ನಾವು ಸಹ ಕೆಟ್ಟ ವಿಷಯವನ್ನು ಕೇಳದೆ ಒಳ್ಳೆಯ ವಿಷಯ ಆಲಿಸಬೇಕು. ಕುಜಗ್ರಹ ಪಾಪಗ್ರಹದ ದೃಷ್ಟಿಗೆ ಬಿದ್ದಾಗ ಕಿವಿಯ ತೊಂದರೆ ಬರಬಹುದು.
ಬಾಯಿ
ಗಣಪತಿಯ ಬಾಯಿ ಸೊಂಡಿಲಿನಿಂದ ಮುಚ್ಚಿರುವುದು ಅಂದರೆ ಅವಶ್ಯಕತೆ ಇದ್ದಷ್ಟು ಮಾತ್ರ ಮಾತನಾಡಬೇಕೆಂಬ ಅರ್ಥ ತಿಳಿಸುತ್ತದೆ. ಲಗ್ನದಿಂದ ಎರಡನೇ ಮನೆ ಮಾತಿನ ಅಧಿಪತಿ. ಅಲ್ಲಿ ಚಂದ್ರ ಗ್ರಹ ಇದ್ದರೆ ಆತನು ಹೆಚ್ಚು ಮಾತುಗಾರನಲ್ಲ. ಮತ್ತು ಆ ವ್ಯಕ್ತಿ ಕೆಟ್ಟ ಮಾತುಗಳನ್ನು ಆಡುವುದಿಲ್ಲ.
ಕೈಗಳು
ಗಣಪತಿಯ ಕೈಗಳಲ್ಲಿ ಪಾಶ, ಅಂಕುಶ, ಮೋದಕ ಇದೆ. ಪಾಶ ಧರ್ಮದ ಸಂಕೇತ. ಈ ಬದುಕು ಧರ್ಮವೆಂಬ ಪಾಶದಲ್ಲಿ ರೂಪಗೊಳ್ಳಲಿ ಎಂದು. ದಂತ- ಅನರ್ಥದ ಸಂಕೇತ, ದುಡ್ಡಿನ ಮದ ಅನರ್ಥಕ್ಕೆ ಅವಕಾಶ. ನಿಮ್ಮ ಮದದ ನಿಯಂತ್ರಣಕ್ಕೆ ನಿನ್ನ ಹಲ್ಲನ್ನು ಮುರಿದು ಹಿಡಿದುಕೊಳ್ಳಿ ಎಂಬುದು. ಅಂಕುಶ- ಕಾಮದ ಸಂಕೇತ. ಅಂದರೆ ನಿನ್ನ ಆಸೆಗೆ ಮಿತಿಯಿರಲಿ ಎಂದು.
ಮೋದಕ
ಅಭಯದ ಸಂಕೇತ. ಅಂದರೆ ಎಲ್ಲಾ ಭಯವನ್ನು ಮೀರಿ ನಿಂತ ಆನಂದದ ಸ್ಥಿತಿ. ಲಗ್ನದಲ್ಲಿ ಕುಜ ಅಥವಾ ರವಿಗ್ರಹ ಇದ್ದರೆ ಅಹಂಕಾರ ಹೆಚ್ಚು ಇರುವುದು. ಗುರು ಲಗ್ನದಲ್ಲಿ ಅಥವಾ 9ರಲ್ಲಿ ಇದ್ದರೆ ಧಾರ್ಮಿಕ ಕಾರ್ಯ ಹೆಚ್ಚು ಮಾಡುತ್ತಾರೆ.
ಗಣಪತಿಯು ಆನೆ ಮುಖವನ್ನು ಹೊಂದಿರುವನು. ಆನೆ ಕಾಡಿನಲ್ಲಿ ಹೋಗುವಾಗ ಮರಗಿಡಗಳನ್ನೆಲ್ಲಾ ಮುರಿಯುತ್ತಾ ಸಾಗುತ್ತದೆ. ಇದೇ ರೀತಿ ನಾವು ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಮುನ್ನುಗ್ಗಬೇಕು. ಜಾತಕದ ಲಗ್ನದಲ್ಲಿ ರಾಹು, ಶನಿ, ಕೇತು ಗ್ರಹಗಳು ಇದ್ದರೆ ಅಥವಾ ಅವುಗಳು 7, 10, 12ನೇ ಮನೆಯಲ್ಲಿದ್ದರೆ ತೊಂದರೆ ಹೆಚ್ಚುತ್ತದೆ.
ಗಣೇಶ ಗೀತಪ್ರಿಯ, ಸಂಗೀತ, ನೃತ್ಯ ಯಕ್ಷಗಾನ ಚಿತ್ರಕಲೆ ಹಾಗೂ ಎಲ್ಲಾ ಲಲಿತ ಕಲೆಗಳಲ್ಲೂ ಮೊದಲು ಗಣೇಶನದ್ದೇ ಗಾನ ಆಗಬೇಕು. ಈ ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ಜಾತಕದಲ್ಲಿ ಶುಕ್ರ ಗ್ರಹ ಉತ್ತಮ ಸ್ಥಿತಿಯಲ್ಲಿದ್ದರೆ ಅಂದರೆ 2, 5, 7, 11ರಲ್ಲಿ ಇದ್ದರೆ ಉಚ್ಚ ಸ್ಥಾನದಲ್ಲಿದ್ದರೆ ಆ ವ್ಯಕ್ತಿಗಳಿಗೆ ಸಂಗೀತ ಕಲೆಯಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಗಣಪತಿಗೆ ಆಡಂಬರದ ಪೂಜೆ ಬೇಕಿಲ್ಲ. ಕೇವಲ ಗರಿಕೆಯಿಂದ ಪೂಜಿಸಿದರೆ ಆತನ ಕೃಪಾಕಟಾಕ್ಷ ದೊರೆಯುತ್ತದೆ. ಸಂಕಷ್ಟ ನಿವಾರಣೆ ಆಗುವುದು.
- ಪ್ರಕಾಶ ಬಾಬು, ಕೆ.ಆರ್.