

ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಃ
ನಿತ್ಯ ಸನ್ನಿಹಿತೋ ಮೃತ್ಯುಃ ಕರ್ತವ್ಯೋ ಧರ್ಮ ಸಂಗ್ರಹಃ ॥
ಧರ್ಮಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಪ್ರಕಾರ ಪಿತೃ, ದೇವತೆಗಳಿಗೆ ಪಿಂಡದಾನ ಮಾಡುವುದರಿಂದ ಆ ವ್ಯಕ್ತಿಗೆ ದೀರ್ಘಾಯು, ಪುತ್ರ- ಪೌತ್ರಾದಿ, ಯಶಸ್ಸು, ಧನ, ಪಶು, ಸುಖ, ಸಂಪತ್ತು ಸಾಧನಗಳು ಪ್ರಾಪ್ತವಾಗುತ್ತವೆ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲದೆ, ಪಿತೃಗಳ ಕೃಪಾಕಟಾಕ್ಷದಿಂದ ಎಲ್ಲಾ ಪ್ರಕಾರದ ಸಮೃದ್ಧಿ, ಸೌಭಾಗ್ಯ, ರಾಜ್ಯ, ಮೋಕ್ಷಗಳು ದೊರಕುತ್ತವೆ. ಪರಲೋಕದಲ್ಲಿರುವ ಪಿತೃ, ದೇವತೆಗಳು ಆಶ್ವೀಜ ಮಾಸದಲ್ಲಿ ಬರುವ ಪಿತೃಪಕ್ಷದಲ್ಲಿ ತಮ್ಮ ಪುತ್ರ- ಪೌತ್ರಾದಿಗಳು ಪಿಂಡದಾನ ಹಾಗೂ ತರ್ಪಣ ನೀಡಿ ತಮ್ಮನ್ನು ಸಂತುಷ್ಟಗೊಳಿಸುತ್ತಾರೆ ಎಂಬ ಆಶಾಭಾವದಿಂದ ಕಾದಿರುತ್ತಾರೆ.
ಆಯುಃ ಪುತ್ರಾನ್ ಯಶಃ ಸ್ವರ್ಗ ಕೀರ್ತಿ ಪುಷ್ಟಿ ಬಲಂ ಯಿಮ
ಪಶೂನ್ ಸೌಖ್ಯಮ್ ಧನಂ ಧಾನ್ಯಂ ಪ್ರಾಪ್ನುಯಾತ್ ಪಿತೃಪೂಜನಾತ್ ॥
ಇದೇ ಆಶಾ ಭಾವನೆಯೊಂದಿಗೆ ನಮ್ಮ ಪಿತೃದೇವತೆಗಳು ಪಿತೃ ಲೋಕದಿಂದ ಪೃಥ್ವಿ ಲೋಕಕ್ಕೆ ಬರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಧರ್ಮಿಯರು ತಮ್ಮ ಪೂರ್ವಜರಿಗೆ ಅವರ ಋಣವನ್ನು ತೀರಿಸಲೋಸುಗ ಶ್ರಾದ್ಧ, ತರ್ಪಣಗಳನ್ನು ತಮ್ಮ ತಮ್ಮ ಶ್ರಾದ್ಧಾನುಸಾರ ಆಚರಿಸಿ, ಪಿತೃಗಣವನ್ನು ಸಂತೋಷ ಪಡಿಸುವುದು ಅವರ ಆದ್ಯ ಕರ್ತವ್ಯವಾಗಿದೆ.
ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ಮಾಸ ಬರುವ ಅಮಾವಾಸ್ಯೆ ಪಿತೃ ಪೂಜೆಗೆ ಪುಣ್ಯಮಯ ತಿಥಿ ಎಂದು ಹೇಳಲಾಗಿದೆ. ಆದರೆ ಅಶ್ವಯುಜ ಮಾಸದ ಅಮವಾಸ್ಯೆ ಪಿತೃ ದೇವತೆಗಳಿಗೆ ಅತ್ಯಂತ ವಿಶಿಷ್ಟವಾದ ಪರಮ ಪುಣ್ಯ ದಿನ. ಈ ಅಮವಾಸ್ಯೆಯನ್ನು ಪಿತೃ ವಿಸರ್ಜನಿ ಅಮವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ ಎಂದು ಕರೆಯುತ್ತಾರೆ.
ಇಂದಿನ ಸಾಮಾಜಿಕ ಒತ್ತಡಗಳ ಮಧ್ಯ ಪಿತೃ ಪಕ್ಷದ ಸಮಯದಲ್ಲಿ ನಿಶ್ಚಿತ ತಿಥಿಯಂದು ತರ್ಪಣ ಕೊಡಲು ಸಾಧ್ಯವಾಗದಿದ್ದಲ್ಲಿ ಅಂಥ ವ್ಯಕ್ತಿಗಳು ಮಹಾಲಯ ಅಮವಾಸ್ಯೆಯ ತರ್ಪಣ ಶ್ರಾದ್ಧಾದಿಗಳನ್ನು ಆಚರಿಸಬಹುದಾಗಿದೆ. ಇದೇ ದಿನ ನಮ್ಮ ಪೂರ್ವಿಕರ ಸಂತೃಪ್ತಿಗೋಸ್ಕರ ವಸ್ತ್ರದಾನ, ಸ್ವಯಂಪಾಕ ದಾನ, ಭೋಜನಾದಿಗಳನ್ನು ಮಾಡಿಸುವುದು ಅತ್ಯಂತ ಶ್ರೇಯಸ್ಕರ.
ಮಹಾಲಯ ಅಮವಾಸ್ಯೆಯಂದು ಪರಲೋಕದ ಪಿತೃಗಳನ್ನು ಬ್ರಹ್ಮರೂಪದಿಂದ ಆಹ್ವಾನಿಸಿ, ಪಿಂಡ, ತಿಲ ತಪರ್ಣ, ಶ್ರಾದ್ಧಾದಿಗಳನ್ನು ಕೈಗೊಂಡು ನಮ್ಮನ್ನು ಹೊತ್ತು, ಹೆತ್ತು, ಸಾಕಿ, ಸಲಹಿದ ತಂದೆ ತಾಯಿಯರಿಗೆ ತಿಲಾಂಜಲಿ ನೀಡುವುದರಿಂದ ಪಿತೃಶಾಪಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಬಹುದು.
ಪರ್ವಕಾಲ
ಪಿತೃಪಕ್ಷದ ಹದಿನೈದು ದಿನಗಳೂ ಒಂದು ಪರ್ವಕಾಲವೇ. ಈ ಸಮಯದಲ್ಲಿ ಹಿಂದೂ ಧರ್ಮೀಯರು ಸಂಯಮ ಪೂರ್ವಕವಾಗಿ ಪಿತೃಗಣಗಳಿಗೆ ಶ್ರಾದ್ಧ ತರ್ಪಣಾದಿಗಳನ್ನು ಅರ್ಪಿಸಿ, ಅವರನ್ನು ಸಂತುಷ್ಟಗೊಳಿಸಬೇಕು. ಆದರೆ ಕಾರ್ಯ ಬಾಹುಳ್ಯದಿಂದ ಸಂಬಂಧಪಟ್ಟ ತಿಥಿಯಂದು ಆಚರಿಸಲು ಸಾಧ್ಯವಿಲ್ಲದಾಗ, ಪಿತೃವಿಸರ್ಜನೆ ಅಮವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ ದಿನ ಪ್ರಾತಃ ಸ್ನಾನ ಶೌಚಾದಿಗಳಿಂದ ನಿವೃತ್ತರಾಗಿ ಗಾಯತ್ರಿ ಮಂತ್ರ ಹೇಳುತ್ತಾ, ಪ್ರತ್ಯಕ್ಷ ದೈವವಾದ ಸೂರ್ಯನಾರಾಯಣನಿಗೆ ಅರ್ಘ್ಯ ನೀಡಬೇಕು.
ಆ ದಿನ ಮನೆಯಲ್ಲಿ ಮಡಿಯಿಂದ ತಯಾರಿಸಿದ ಸಕಲ ಭೋಜನ ಪದಾರ್ಥಗಳನ್ನು ಪಂಚಬಲಿ ಇಟ್ಟು ಅಂದರೆ ಸರ್ವ ಪ್ರಥಮ ಗೋವಿಗೂ ನಂತರ ನಾಯಿಗೂ, ಕಾಗೆಗಳಿಗೂ (ಇವರೇ ಪಿತೃ ದೇವತೆಗಳು), ನಂತರ ದೇವತೆಗಳಿಗೂ, ಕಡೆಯದಾಗಿ ಇರುವೆಗಳಿಗೂ ಭೋಜನದ ಅಂಶವನ್ನು ಇಡಬೇಕು. ನಂತರ ಪಿತೃ ದೇವತೆಗಳಲ್ಲಿ ಅನನ್ಯ ಶ್ರದ್ಧಾಭಕ್ತಿಗಳಿಂದ ನಮಿಸಿ, ನಮಗೆ ಮಂಗಳವನ್ನು ಪ್ರದಾನ ಮಾಡಿ ಎಂದು ಪ್ರಾರ್ಥಿಸಿ ತಾವೂ ಭೋಜನ ಮಾಡಬೇಕು. ರಾತ್ರಿ ಊಟ ಮಾಡಬಾರದು. ಇದರಿಂದ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿಗಳೂ, ಅಂತ್ಯದಲ್ಲಿ ಮೋಕ್ಷವೂ ದೊರೆಯುತ್ತದೆ.
ಸ್ವಪಿಂಡ ದಾನ
'ಜಾತಸ್ಯ ಹೀ ದ್ರುವೋ ಮೃತ್ಯುಃ' ಎಂಬ ಶ್ರೀಕೃಷ್ಣನ ವಾಣಿಯಂತೆ, ಮನುಷ್ಯನಾಗಿ ಹುಟ್ಟಿದವನಿಗೆ ಮೃತ್ಯುವೇ ಅಂತಿಮ ಸತ್ಯ. ಎಲ್ಲರೂ ಒಂದು ದಿನ ಹೋಗಲೇಬೇಕು. ಇದನ್ನೆಲ್ಲ ಅರಿತಿದ್ದ ನಮ್ಮ ಋಷಿ- ಮುನಿಗಳು, ಧರ್ಮಶಾಸ್ತ್ರವನ್ನು ಬಲ್ಲವರು 'ಸ್ವಪಿಂಡ ದಾನ'ದ ಮಧ್ಯಮ ಮಾರ್ಗವನ್ನು ತಿಳಿಯ ಹೇಳಿದ್ದಾರೆ. ಕೆಲವು ವೈದಿಕ ಧರ್ಮಾಚಾರಿಗಳು ಭಾರತದ ಮಹಾ ಪುಣ್ಯಕ್ಷೇತ್ರ ವಿಷ್ಣುಪಾದವಿರುವ ಗಯಾದಲ್ಲಿ ಸ್ವಪಿಂಡ ದಾನವನ್ನು ತಾವೇ ಮಾಡಿಕೊಂಡು ಸದ್ಗತಿಗೆ ಭಾಜನರಾಗುತ್ತಾರೆ.
ಈ ಕೈಂಕರ್ಯವನ್ನು ಸಾಮಾನ್ಯರು ಮಹಾಲಯ ಅಮವಾಸ್ಯೆಯಂದು ಪುಣ್ಯ ನದಿ, ಸಂಗಮ, ಸಮುದ್ರತಟಗಳಲ್ಲಿ ಮಾಡಬಹುದು. ಮನೆಯಲ್ಲಾದರೂ ಮಾಡಬಹುದು. ಈ ಆಚರಣೆಯನ್ನು ಬಲ್ಲ ಆಚಾರ್ಯರಿಂದ ಮಾಡಿಸಿ, ದಾನ-ಧರ್ಮಾದಿಗಳನ್ನು ಮಾಡಿ, ಬಡವರಿಗೆ ಭೋಜನ ಮಾಡಿಸಬೇಕು. ಸ್ವಪಿಂಡ ದಾನ ಮಾಡುವಾಗ ಜಲತರ್ಪಣ ನೀಡುತ್ತಾ 'ಪದ್ಮ ಪುರಾಣ'ದಲ್ಲಿ ಬರುವ ಶ್ರೀಯಮ ಸ್ತೋತ್ರವನ್ನು ಹೇಳಿಕೊಳ್ಳಬೇಕು. ಅಥವಾ ಈ ಮಂತ್ರವನ್ನಾದರೂ ಹೇಳಿಕೊಳ್ಳಬೇಕು.
ಓಂ ಯಮಾಯ ಸ್ವಧಾ ತಸ್ಮೈ ನಮಃ
ಓಂ ಧರ್ಮರಾಜಾಯ ಸ್ವಧಾ ತಸ್ಮೈ ನಮಃ
ಓಂ ಮೃತ್ಯುವೇ ಸ್ವಧಾ ತಸ್ಮೈ ನಮಃ
ಓಂ ಅನ್ತಕಾಯ ಸ್ವಧಾ ತಸ್ಮೈ ನಮಃ
ಓಂ ವೈವ ಸ್ವತಾಯ ಸ್ವಧಾ ತಸ್ಮೈ ನಮಃ
ಓಂ ಕಾಲಾಯ ಸ್ವಧಾ ತಸ್ಮೈ ನಮಃ
ಓಂ ಸರ್ವ ಪ್ರಾಣ ಹರಾಯ ಸ್ವಧಾ ತಸ್ಮೈ ನಮಃ ॥
ಈ ರೀತಿಯಾಗಿ ನಾವು ಜೀವಿಸಿರುವಾಗಲೇ ನಮ್ಮ ಮರಣಾನಂತರ ಸುಖ ಪ್ರಾಪ್ತಿಗೆ ತರ್ಪಣ, ಶ್ರಾದ್ಧ, ಪಿಂಡದಾನಗಳನ್ನು ಯಥೋಚಿತವಾದ ಸಮಯದಲ್ಲಿ ನೆರವೇರಿಸಿಕೊಂಡಲ್ಲಿ ಮೋಕ್ಷಕ್ಕೆ ಭಾಜನರಾಗುತ್ತೇವೆ. ಇದು ಧರ್ಮ ಸೂಕ್ಷ್ಮ ವಿಚಾರವಾಗಿದೆ. ಮಾಹಿತಿಗಾಗಿ ಸಂಪರ್ಕಿಸಿ, ಮೊ. 9740973224.
- ವಿ. ಕೇಶವಮೂರ್ತಿ