ಯಾರು ಮಕ್ಕಳಿಗೆ ಮೊದಲ ಗುರುವಾಗಿ, ಉತ್ತಮ ಸಂಸ್ಕಾರಗಳನ್ನು ಕಲಿಸಿ, ಉತ್ತಮ ಪ್ರಜೆಯನ್ನಾಗಿಸಬೇಕೋ ಅಂಥ ತಾಯಂದಿರು ಇಂದು ಹೊರಗೆ ದುಡಿಯುವುದರಿಂದ ಇಂದು ಮಾತೃ ವಾತ್ಸಲ್ಯ ದೂರದ ಮಾತಾಗಿದೆ.
ಮನೆಯ ಕೆಲಸ ಮಾಡಿ, ಹೊರಗೂ ದುಡಿದು ಆಕೆ ಸುಸ್ತಾಗುತ್ತಿದ್ದಾಳೆ. ಇನ್ನು ಮಗು, ಗಂಡನ ಬಗ್ಗೆ ಯೋಚಿಸಲು ಆಕೆಗೆ ಸಮಯವೇ ಇಲ್ಲದಂತಾಗಿದೆ.
ಅವಳಿಗೆ ತಾಳ್ಮೆಯಾದರೂ ಹೇಗೆ ಬರಬೇಕು? ಉತ್ತಮ ಪ್ರಜೆಗಳನ್ನು ಆಕೆ ರೂಪಿಸುವುದಾದರೂ ಹೇಗೆ? ಇಂದು ಅನೇಕ ಮಕ್ಕಳಿಗೆ ತಾಯಿಯ ಶಿಕ್ಷಣ ಸಿಗುತ್ತಿಲ್ಲ. ಇಷ್ಟೆಲ್ಲಾ ಕಷ್ಟವಾದರೂ ಇಂದು ಮಹಿಳೆಯರು ಏತಕ್ಕಾಗಿ ದುಡಿಯುತ್ತಿದ್ದಾರೆ ಎಂಬುದು ಮತ್ತೊಂದು ಜಿಜ್ಞಾಸೆ. ಇದಕ್ಕೆ ಉತ್ತರ ಬಹಳ ಸುಲಭವಾಗಿ ದೊರೆಯುತ್ತದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದೇ ಕಾರಣವೆಂದರೆ ತಪ್ಪಾಗದು.
ಹಿಂದೆ ಒಬ್ಬರ ಸಂಪಾದನೆಯಲ್ಲೇ ಸಂಸಾರ ನೆಮ್ಮದಿ ಕಾಣುತ್ತಿತ್ತು. ಆದರೆ ಇಂದು ಮನುಷ್ಯನ ಮೌಲ್ಯವೊಂದು ಬಿಟ್ಟು ಬೇರೆಯೆಲ್ಲದರ ಬೆಲೆಯೂ ಹೆಚ್ಚುತ್ತಿದೆ. ದುಡ್ಡಿಗಾಗಿ ದುಡಿತ. ಆದರೂ ಪದಾರ್ಥಗಳ ಅಭಾವ ತಪ್ಪಿಲ್ಲ. ಇದರಿಂದ ಮನೆಯವರೆಲ್ಲರ ಮಾನಸಿಕ ನೆಮ್ಮದಿಗೂ ಭಂಗ ಬಂದಿದೆ. ಮಹಿಳೆಯರು ಉದ್ಯೋಗಕ್ಕೆ ಬರುವುದರಿಂದ ಅವಳ ಮನಸ್ಸು ಮನೆಯ ಕೆಲಸದಲ್ಲಿ ತೊಡಗಲು ಹಿಂದಾಗುತ್ತದೆ. ಹೊರಗೆ ದುಡಿದು ಬರುವುದರಿಂದ ಆಯಾಸಗೊಂಡ ಅವಳು ತನ್ನ ಮನೆಯ ಕೆಲಸಗಳನ್ನು ಗಮನವಿಟ್ಟು ಮಾಡಲು ಸಾಧ್ಯವಾಗುತ್ತಿಲ್ಲ. ಅಂತೆಯೇ ಅವಳು ತನ್ನ ಗೃಹಿಣಿ ಧರ್ಮವನ್ನು ಸಮರ್ಪಕವಾಗಿ ಸಾಧಿಸಲು ಕಷ್ಟವಾಗುತ್ತಿದೆ. ಅನೇಕ ರೀತಿಯ ಪ್ರತಿಭೆಗಳನ್ನು ಹೊಂದಿದ್ದರೂ ಅದನ್ನು ಹೊರ ತರಲು ಪ್ರಾಯೋಗಿಕವಾಗಿ ಕಷ್ಟವಾಗುತ್ತದೆ.
ಈ ನಡುವೆ ಧ್ಯಾನದ ಕಡೆಗೆ ಮನಸ್ಸು ಮಾಡಿದರೆ, ಒಂದಿಷ್ಟು ನೆಮ್ಮದಿಯನ್ನು ಕಂಡುಕೊಳ್ಳಬಹುದು.
= ಶಿವರಾಮ ಭಟ್