'ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ...' ಶುಕ್ಲ ಪಕ್ಷದ ತದಿಗೆಯಂದು ಸ್ವರ್ಣ ಗೌರಿ ವ್ರತ- ಬಾಗಿನ ಕೊಡುವ ಹಿನ್ನೆಲೆ!

ಭಾದ್ರಪದ ಮಾಸದ ಮೂರನೇ ದಿನದಂದು ಗೌರಿ ಹಬ್ಬವನ್ನು ಆಚರಿಸಲಾಗುವುದು. ಗಣೇಶ ಹಬ್ಬಕ್ಕೂ ಮುನ್ನ ಗೌರಿ ಭೂ ಲೋಕದ ತನ್ನ ತವರು ಮನೆಗೆ ಬರುತ್ತಾಳೆ ಎಂಬ ಪ್ರತೀತಿ ಇದೆ. ಗೌರಿ ಬಂದ ಬಳಿಕ ಆಕೆಯ ಮಗ ಗಜಾನನ ಮರುದಿನವಾದ ಚುತುರ್ಥಿಯ ದಿನದಂದು ಬರುತ್ತಾನೆ .
Representational image
ಸಾಂದರ್ಭಿಕ ಚಿತ್ರ
Updated on

ಸ್ವರ್ಣ ಗೌರಿ ವ್ರತವು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಗಣೇಶ ಚತುರ್ಥಿಯ ಹಿಂದಿನ ದಿನ ಭಾದ್ರಪದ ಮಾಸದ ತದಿಗೆಯಂದು ಆಚರಿಸಲಾಗುತ್ತದೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ತಾಯಿ ಗೌರಿಯನ್ನು (ಪಾರ್ವತಿ ದೇವಿ) ಮಣ್ಣಿನ ಮೂರ್ತಿಯಲ್ಲಿ ಅಥವಾ ಕಳಶದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ. ಹದಿನಾರು ಮೊಳ ಗೌರಿದಾರ ಮತ್ತು ಅರಿಶಿನ, ಕುಂಕುಮ,ಬಾಳೆಹಣ್ಣು, ಧಾನ್ಯಗಳನ್ನು ಒಳಗೊಂಡ ಬಾಗಿನವನ್ನು ನೀಡಲಾಗುತ್ತದೆ. ಮುತ್ತೈದೆಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಮತ್ತು ಕುಟುಂಬದ ಸುಖ-ಶಾಂತಿಗಾಗಿ ಈ ವ್ರತವನ್ನು ಆಚರಿಸುತ್ತಾರೆ.

ಭಾದ್ರಪದ ಮಾಸದ ಮೂರನೇ ದಿನದಂದು ಗೌರಿ ಹಬ್ಬವನ್ನು ಆಚರಿಸಲಾಗುವುದು. ಗಣೇಶ ಹಬ್ಬಕ್ಕೂ ಮುನ್ನ ಗೌರಿ ಭೂ ಲೋಕದ ತನ್ನ ತವರು ಮನೆಗೆ ಬರುತ್ತಾಳೆ ಎಂಬ ಪ್ರತೀತಿ ಇದೆ. ಗೌರಿ ಬಂದ ಬಳಿಕ ಆಕೆಯ ಮಗ ಗಜಾನನ ಮರುದಿನವಾದ ಚುತುರ್ಥಿಯ ದಿನದಂದು ಬರುತ್ತಾನೆ ಎಂಬ ನಂಬಿಕೆಯಿದೆ.

ಪಾರ್ವತಿಯ ಅವತಾರವಾದ ಗೌರಿ ಶಕ್ತಿ ರೂಪಿಣಿಯ ಸೌಮ್ಯ ಸ್ವರೂಪ. ಈಕೆಯನ್ನು ಸ್ವರ್ಣಗೌರಿಯಾಗಿ ಈ ದಿನ ಪೂಜಿಸಲಾಗುವುದು. ವಿಶೇಷವಾಗಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಗೌರಿ ಹಬ್ಬದಂದು ಸ್ವರ್ಣ ಗೌರಿ ವ್ರತ ಆಚರಿಸಲಾಗುವುದು.

ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ ಗೌರಿ ಹಬ್ಬ ಭಾದ್ರಪದ ಶುದ್ಧ ತದಿಗೆ ದಿನ ಬರುತ್ತದೆ. ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಗೌರಿ ಹಬ್ಬವನ್ನು ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಯಲ್ಲಿ ಬಂತು ಎನ್ನುವ ಕುರಿತು ಸುಂದರವಾದ ಪೌರಾಣಿಕ ಕಥೆ ಚಾಲ್ತಿಯಲ್ಲಿದೆ.

ಬಾಗಿನದ ಮಹತ್ವ

ತವರು ಮನೆಗೆ ಬರುವ ಮಗಳ ಮುಂದಿನ ಜೀವನ ಸುಖ–ಸಂತೋಷದಿಂದ ಸಾಗಲಿ ಎಂದು ಮೊರದಲ್ಲಿ ಮಂಗಳದ್ರವ್ಯಗಳನ್ನಿತ್ತು ಗೌರವಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಮೊರದಲ್ಲಿ ಅಥವಾ ಬುಟ್ಟಿಯಲ್ಲಿ ಸೀರೆ, ಬಳೆ, ಅರಿಶಿನ-ಕುಂಕುಮ, ತೆಂಗಿನಕಾಯಿ, ಅಕ್ಕಿ, ಸ್ವಲ್ಪ ಹಣ, ಹಣ್ಣು-ಸಿಹಿ ತುಂಬಿದ ಉಡುಗೊರೆ ಇದರಲ್ಲಿ ಇರುತ್ತದೆ. ಗೌರಿ ದೇವಿಯನ್ನು ತವರಿನ ಮಗಳು ಎಂದೇ ಭಾವಿಸುವ ಹಿನ್ನೆಲೆಯಲ್ಲಿ ಈ ಪದ್ಧತಿ ಚಾಲ್ತಿಗೆ ಬಂದಿದೆ. ಸಾಮಾನ್ಯವಾಗಿ ಗೌರಿ ಹಬ್ಬದ ದಿನ ಅಥವಾ ಮರುದಿನ, ಗಣೇಶನ ಹಬ್ಬದ ದಿನ ಮಹಿಳೆಯರು ಬಾಗಿನ ಕೊಡುವುದು-ತೆಗೆದುಕೊಳ್ಳುವುದು ವಾಡಿಕೆ. ಕೆಲವು ಕಡೆ ಗೌರಿ ಬಾಗಿನದಲ್ಲಿ ಷೋಡಶ ಲಕ್ಷ್ಮಿಯರ ಸಂಕೇತವಾಗಿ ಹದಿನಾರು ಬಗೆಯ ಮಂಗಳ ದ್ರವ್ಯಗಳನ್ನು ಇಟ್ಟು ನೀಡಲಾಗುತ್ತದೆ.

ಸೌಭಾಗ್ಯಪ್ರದವಾದ ವ್ರತವಾಗಿ ಪ್ರಸಿದ್ಧಿ. ಮದುವೆಯಾದ ಹೆಣ್ಣು ಮಕ್ಕಳಿಗೆ ಮೊದಲ ವರ್ಷದ ಗೌರಿ ಹಬ್ಬ ತುಂಬಾ ವಿಶೇಷ. ಸಾಮಾನ್ಯವಾಗಿ ಹದಿನಾರು ಮೊರದ ಬಾಗಿನಗಳನ್ನು ತಯಾರಿಸಿ ಮೊದಲು ಗೌರಿಗೆ ಅರ್ಪಿಸಲಾಗುತ್ತದೆ. ಬಳಿಕ ಇದನ್ನು ಹದಿನೈದು ಮುತ್ತೈದೆ ಯರಿಗೆ ಕೊಡಲಾಗುತ್ತದೆ. ಮಿಕ್ಕಿದ ಒಂದು ಬಾಗಿನವನ್ನು ದೇವರ ಮನೆಯಲ್ಲಿ ಗೌರಿಯ ಮುಂದೆ ಇಡುವುದು ಪದ್ಧತಿ. ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿಯು ಸೌಭಾಗ್ಯ ರೂಪದಲ್ಲಿ ನೆಲಸಿರುತ್ತಾಳೆ ಎಂಬ ನಂಬಿಕೆ ಇರುವುದರಿಂದ ಸೆರಗು ಹಿಡಿದು ಮೊರದ ಬಾಗಿನ ಕೊಟ್ಟರೆ ಮುತ್ತೈದೆಯರು ಸೆರಗೊಡ್ಡಿ ಬಾಗಿನ ಸ್ವೀಕರಿಸುತ್ತಾರೆ.

ಸ್ವರ್ಣ ಗೌರಿ ಕಥೆ

ಚಂದ್ರಪ್ರಭ ಎನ್ನುವ ಅರಸನು ಭೇಟೆಯಾಡಲು ಅರಣ್ಯಕ್ಕೆ ಹೋದಾಗ ಅಲ್ಲಿ ಒಂದು ಸುಂದರವಾದ ನೈಸರ್ಗಿಕ ಸಂಪತ್ತುಳ್ಳ ಸರೋವರದ ಬಳಿ ಅನೇಕ ಅಪ್ಸರೆಯರು ಸ್ವರ್ಣಗೌರಿ ಪೂಜೆಯನ್ನು ಮಾಡುವುದರಲ್ಲಿ ನಿರತರಾಗಿರುವುದನ್ನು ಕಾಣುತ್ತಾನೆ.

ಪೂಜೆಯ ನಂತರ ಪೂಜೆಯ ಮಹತ್ವದ ಬಗ್ಗೆ ತಮಗೆ ತಿಳಿಸಬೇಕು ಎಂದು ಕೇಳುತ್ತಾನೆ. ಆ ಅಪ್ಸರೆಯರು ವ್ರತದ ಬಗ್ಗೆ ತಿಳಿಸುವರು. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಇದನ್ನು ಭಾದ್ರಪದ ಶುದ್ಧ ತದಿಗೆ ದಿನ ಆಚರಿಸಬೇಕೆಂದು ತಿಳಿಸಿ 16 ಗಂಟು ಹಾಕಿದ ದಾರವನ್ನು ಕೊಡುತ್ತಾರೆ.

ರಾಜನು ಅರಮನೆಗೆ ಬಂದ ನಂತರ ತನ್ನ ಇಬ್ಬರು ಪತ್ನಿಯರಿಗೆ ಆ ದಾರವನ್ನು ಕೊಡಲು, ಮೊದಲನೆ ಪತ್ನಿ ಆ ದಾರವನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆದಳು. ಆ ಗಿಡವು ದಾರದ ಮಹಿಮೆಯಿಂದ ತಕ್ಷಣ ಚಿಗುರಿ ಬೆಳೆಯತೊಡಗಿತು. ಅದನ್ನು ಕಂಡ ಕಿರಿಯ ಪತ್ನಿಯು ಆ ದಾರವನ್ನು ಧರಿಸಿ ರಾಜನು ಹೇಳಿದ ಕ್ರಮದಲ್ಲಿ ಸ್ವರ್ಣಗೌರಿ ವ್ರತವನ್ನು ಆಚರಿಸಿದಳು.

ನಂತರ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿ ಸತಿಪತಿಯರು ಮುಕ್ತಿಯನ್ನು ಪಡೆದರೆಂಬ ಪ್ರತೀತಿ ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ. ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಗೌರವಪೂರ್ಣವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ.

ಅಕ್ಕ ತಂಗಿಯರಿಗೆ ಸಹೋದರನು ಬಾಗಿನ ಕೊಡಬೇಕಾಗುತ್ತದೆ. ಈ ಬಾಗಿನವನ್ನು ಪಡೆಯುವುದರಿಂದ ಮುತ್ತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ. ಆದ್ದರಿಂದ ಸುಮಂಗಲಿಯರು ಗೌರಿಯನ್ನು ಪೂಜಿಸುವವರ ಮನೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.

ಮುತ್ತೈದೆಯರು ಸ್ವರ್ಣಗೌರಿ ವ್ರತವನ್ನು ನಿಷ್ಠೆಯಿಂದ ಆಚರಿಸಿದಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ, ಅವಿವಾಹಿತರಿಗೆ ವಿವಾಹಯೋಗ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ದೊರೆಯುತ್ತದೆ ಎನ್ನುವುದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ.

Representational image
ಶಿರಚ್ಛೇದಕ್ಕೂ ಮುನ್ನ ಇದ್ದ 'ನರಮುಖ ವಿನಾಯಕ': ಜಗತ್ತಿನಲ್ಲಿಯೇ ಅತ್ಯಂತ ಅಪರೂಪವಾಗಿರುವ 'ಆದಿ ಗಣೇಶ' ದೇವಾಲಯ ಎಲ್ಲಿದೆ ಗೊತ್ತೆ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com