ಪವರ್ ಡ್ರೈವ್

ಪವರ್ ಡ್ರೈವ್
Updated on: 

ಹೆಚ್ಚು ಪವರ್. ಸಕತ್ ಸ್ಟೈಲ್. ಒಂದಷ್ಟು ಹೆಚ್ಚು ಐಷಾರಾಮಿ ಸೌಲಭ್ಯಗಳು. ಸ್ಪೋರ್ಟ್ಸ್ ಲುಕ್.
ಇವು ಟಾಟಾ ಸಂಸ್ಥೆಯ ಹೊಸ ಕಾರು ವಿಸ್ಟಾ ಡಿ90ಯ ವೈಶಿಷ್ಟ್ಯಗಳು. ನೀವು ಇಂಡಿಕಾ ವಿಸ್ಟಾ ಮಾಲಿಕರಾಗಿದ್ದರೆ ನೋಡಿದ ತಕ್ಷಣ ನಿಮಗೆ ಅದರ ಬದಲಾವಣೆಗಳು ಗೋಚರಿಸಬಹುದು. ಹಿಂಬದಿ ಸ್ಪಾಯ್ಲರ್, ಮುಂಬದಿ ಬಂಪರ್‌ಗೆ ಒಂದಷ್ಟು ಡಿಸೈನ್ ಮತ್ತು ಮ್ಯಾಗ್‌ವೀಲ್‌ಗಳು ತಕ್ಷಣ ಗಮನ ಸೆಳೆಯುತ್ತವೆ. ಆದರೆ ಒಳಗೆ ಹೆಚ್ಚೇನೂ ಬದಲಾವಣೆಯಾಗಿಲ್ಲ. ಸ್ಪೀಡೋಮೀಟರ್ ಮರಳಿ ಚಾಲಕನ ಎದುರಿಗೆ ಬಂದಿದೆ. ಡ್ಯಾಶ್‌ಬೋರ್ಡ್ ಮಧ್ಯದಲ್ಲಿ ಹೊರಗಿನ ಹವಾಮಾನ, ಸಮಯ ಮತ್ತು ನಿಮ್ಮ ಕಾರು ಪ್ರತಿ ಲೀಟರ್ ಡೀಸೆಲ್‌ಗೆ ಎಷ್ಟು ಕಿ.ಮೀ. ಚಲಿಸುತ್ತಿದೆ ಎಂಬ ಲೆಕ್ಕ. ಇಲೆಕ್ಟ್ರಾನಿಕಲಿ ನಿಯಂತ್ರಿಸಬಹುದಾದ ಕನ್ನಡಿಗಳು ಮತ್ತು ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ ಕೂಡ ಇವೆ. ಆಡಿಯೋ ನಿಯಂತ್ರಣಗಳನ್ನು ಸ್ಟಿಯರಿಂಗ್‌ನಲ್ಲೇ ನೀಡಲಾಗಿದೆ.

ದೂರದಿಂದ ನೋಡಿದರೆ ವಿಸ್ಟಾ ಮತ್ತು ವಿಸ್ಟಾ ಡಿ90ಗೆ ವ್ಯತ್ಯಾಸ ಕಾಣದು. ವಿಸ್ಟಾ ಡಿ90ಯ ಮುಖ್ಯ ಬದಲಾವಣೆಯೆಂದರೆ ಎಂಜಿನ್. 90ಪಿಎಸ್ ಎಂಜಿನ್ ಇರುವುದೇ ಪ್ರಮುಖ ಅಂಶ. ಇತ್ತೀಚೆಗೆ ವಿಸ್ಟಾ ಡಿ90 ಕಾರನ್ನು ಚಲಾಯಿಸಿ ಪರೀಕ್ಷಿಸುವ ಅವಕಾಶ 'ಕನ್ನಡಪ್ರಭ'ಕ್ಕೆ ಲಭ್ಯವಾಗಿತ್ತು. 3 ದಿನ ಕಾರು ಚಲಾಯಿಸಿದ ಅನುಭವದಲ್ಲಿ ಹೇಳುವುದಾದರೆ...
ನೀವು ನಗರದಲ್ಲೇ ಹೆಚ್ಚು ಓಡಾಡುವವರಾಗಿದ್ದರೆ ವಿಸ್ಟಾಕ್ಕೂ ವಿಸ್ಟಾ ಜಿ90ಗೂ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ನಿಜ ಹೇಳಬೇಕೆಂದರೆ ಇಂಡಿಕಾ ವಿಸ್ಟಾವೇ ನಗರದಲ್ಲಿ ಒಂದು ಕೈ ಮೇಲು. ಯಾಕೆಂದರೆ ಇದರಲ್ಲಿ ಎಂಜಿನ್ 2000 ಆರ್‌ಪಿಎಂ ತಲುಪುತ್ತಿದ್ದಂತೆ ಜೆಟ್ ತೆರೆದುಕೊಳ್ಳುತ್ತದೆ. ಪರಿಣಾಮವಾಗಿ ಕಾರು ಶರವೇಗ ಪಡೆದುಕೊಳ್ಳುತ್ತದೆ. ಇಂದರಿಂದ ನಗರದಲ್ಲಿ ಓವರ್‌ಟೇಕಿಂಗ್ ಸುಲಭ.

ಆದರೆ ವಿಸ್ಟಾ ಡಿ90ಯಲ್ಲಿ ಎಂಜಿನ್ 3000 ಆರ್‌ಪಿಎಂ ನಂತರ ಜೆಟ್ ತೆರೆದುಕೊಳ್ಳುತ್ತದೆ. ಪರಿಣಾಮವಾಗಿ ನಗರದಲ್ಲಿ ಸಾಕಷ್ಟು ಸಂದರ್ಭಗಳಲ್ಲಿ ಜೆಟ್ ತೆರೆದುಕೊಳ್ಳುವ ಮತ್ತು ಶರವೇಗ ಪಡೆದುಕೊಳ್ಳುವ ಅವಕಾಶ ಸಿಗುವುದೇ ಇಲ್ಲ. ಅಲ್ಲದೇ ಜೆಟ್ ತೆರೆದುಕೊಳ್ಳಬೇಕೆಂದರೆ ಆ್ಯಕ್ಸಿಲರೇಟರ್ ಸಾಕಷ್ಟು ತುಳಿಯಬೇಕಾದ ಅನಿವಾರ್ಯವೂ ಇದೆ. ಹೀಗಾಗಿ ನಗರದಲ್ಲಿ ವಿಸ್ಟಾ ಡಿ90ಗಿಂತ ಹಳೆಯ ವಿಸ್ಟಾ ಮೇಲು.

ಆದರೆ ಹೆದ್ದಾರಿಗಳಲ್ಲಿ ವಿಸ್ಟಾ ಡಿ90 ಹಳೆಯ ವಿಸ್ಟಾವನ್ನು ಮೀರಿ ನಿಲ್ಲುತ್ತದೆ. ಹೆದ್ದಾರಿಗಳಲ್ಲಿ ಹೆಚ್ಚು ಓಡಾಡುವ ಮತ್ತು ದೂರದ ಪ್ರಯಾಣ ಮಾಡುವವರಿಗೆ ವಿಸ್ಟಾ ಡಿ90 ಹೇಳಿ ಮಾಡಿಸಿದ ಕಾರು. ಹಳೆಯ ವಿಸ್ಟಾಗಿಂತ ಹೆಚ್ಚಿನ ಐಶಾರಾಮಿ ಸೌಲಭ್ಯಗಳಿರುವುದು ಪ್ರಮುಖ ಆಕರ್ಷಣೆ. ಹೊರಗಡೆಯ ಸ್ಪೋರ್ಟ್ಸ್ ಲುಕ್ ಕೂಡ ನಿಮ್ಮನ್ನು ಆಕರ್ಷಿಸಬಲ್ಲದು. ಗ್ರಾಹಕರ ಅನುಕೂಲಕ್ಕೆಂದು ಸೀಟುಗಳ ಗಾತ್ರವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಲಾಗಿದೆ. ಆದರೆ ಸಹಜವಾಗಿ ಇದು ಅರಿವಿಗೆ ಬರುವುದೇ ಇಲ್ಲ.
ಇನ್ನು ಟಾಟಾ ಸಂಸ್ಥೆ ಹಣಕ್ಕೆ ತಕ್ಕ ಮೌಲ್ಯ ಒದಗಿಸುವುದರಲ್ಲಿ ಎತ್ತಿದ ಕೈ. ವಿಸ್ಟಾ ಡಿ90 6-7 ಲಕ್ಷದ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಸ್ಪೋರ್ಟ್ಸ್ ಲುಕ್, ಒಂದಷ್ಟು ಹೆಚ್ಚಿನ ಶಕ್ತಿ ಮತ್ತು ಐಷಾರಾಮ ಬೇಕೆಂದಿದ್ದರೆ ವಿಸ್ಟಾ ಡಿ90 ಖರೀದಿಸಬಹುದು. ಇಲ್ಲವಾದಲ್ಲಿ ಹಳೆಯ ಇಂಡಿಕಾ ವಿಸ್ಟಾವೇನು ಸಾಮರ್ಥ್ಯದಲ್ಲಿ ಕಡಿಮೆಯಿಲ್ಲ. ಐಶಾರಾಮಿ ಸೌಲಭ್ಯಗಳು ಕೊಂಚ ಕಡಿಮೆ.

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com