ತಕ್ಕೋ ತುಕ್ಕು ಮದ್ದು

ತಕ್ಕೋ ತುಕ್ಕು ಮದ್ದು
Updated on: 

ಮಳೆಗಾಲ ಬಂದರೆ ಸಾಕು. ವಾಹನ ಮಾಲೀಕರಿಗೆ ಎಲ್ಲಿಲ್ಲದ ತಲೆಬಿಸಿ. ವಾಹನವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸವಾಲಾದರೆ, ವಾಹನಕ್ಕೆ ತುಕ್ಕು ಹಿಡಿಯುವುದು ದೊಡ್ಡ ತಲೆನೋವು. ಎಷ್ಟೇ ಕಾಳಜಿ ವಹಿಸಿದರೂ, ಆ್ಯಂಟಿರಸ್ಟ್ ಹಚ್ಚಿದರೂ ಎಲ್ಲೋ ಒಂದು ಕಡೆ ತುಕ್ಕುಹಿಡಿದೇ ಹಿಡಿಯುತ್ತದೆ. ಈ ಸಮಸ್ಯೆ ಕಾರುಗಳಿಗಿಂತ ಬೈಕ್‌ಗಳಿಗೇ ಹೆಚ್ಚು. ಇದಕ್ಕೆ ಬೈಕ್ ಹೊಂದಿರುವವರೇ ಪರಿಹಾರ ಕೈಗೊಳ್ಳಲು ಸಾಧ್ಯವಿದೆ. ಆದರೆ ನಾವು ಪ್ರತಿಯೊಂದಕ್ಕೂ ಕಂಪನಿ ಸರ್ವೀಸ್ ರೂಂಗೆ ಹೋಗುವ ಹವ್ಯಾಸ ಬೆಳೆಸಿಕೊಳ್ಳುತ್ತಿದ್ದೇವೆ.
ಆದರೆ ನಮ್ಮ ಬೈಕನ್ನು ನಾವೇ ನಿರ್ವಹಿಸುವ ಸುಲಭ ದಾರಿಗಳು ಸಾಕಷ್ಟಿವೆ. ಅಂತಹ ಕೆಲವು ಸಲಹೆಗಳು ನಿಮಗಾಗಿ.

ತುಕ್ಕು ಬಾರದಂತೆ ತಿಕ್ಕು
ಬೈಕನ್ನು ಆಗಾಗ ಸ್ವಚ್ಛಗೊಳಿಸುವುದು ಮತ್ತು ಮಣ್ಣು ಸೇರದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ ಅಂಶ. ನೀವು ಬೈಕನ್ನು ಸ್ವಚ್ಛವಾಗಿಟ್ಟುಕೊಂಡರೆ ತುಕ್ಕು ಹಿಡಿಯುವುದನ್ನು ಬಹುತೇಕ ತಡೆದಂತೆಯೇ. ಆದರೂ ತುಕ್ಕು ಕಾಣಿಸಿಕೊಂಡಿತು ಅಂದುಕೊಳ್ಳಿ. ಆಗ...
ವಾಹನವನ್ನು ಶಾಂಪೂ ಹಾಕಿ ತೊಳೆದು, ಒಣ ಬಟ್ಟೆಯಿಂದ ಸರಿಯಾಗಿ ಒರೆಸಿ. ಅಂಗಡಿಗಳಲ್ಲಿ ದೊರೆಯುವಎಣ್ಣೆ ಜಿಡ್ಡು ಹಿಡಿದ ಪಾತ್ರಗಳನ್ನು ತೊಳೆಯಲೆಂದೇ ಮಾಡಲಾಗಿರುವ ಸ್ಟೀಲಿನ ಬ್ರೆಶ್ ಥರ ಇರುವ ಸಾಧನದಿಂದ ತುಕ್ಕು ಹಿಡಿದಿರುವ ಜಾಗವನ್ನು ತಿಕ್ಕಿ. ದೊಡ್ಡ ಪ್ರಮಾಣದ ತುಕ್ಕು ಹೋದ ನಂತರ ಸ್ಯಾಂಡ್‌ಪೇಪರ್ ನಂತರ ಸಾಧನದಿಂದ ತುಕ್ಕು ಹಿಡಿದಿರುವ ಜಾಗವನ್ನು ತಿಕ್ಕಿ ತುಕ್ಕನ್ನು ದೂರಮಾಡಿ. ತುಂಬಾ ಜೋರಾಗಿ ತಿಕ್ಕುವುದರಿಂದ ತುಕ್ಕು ಹಿಡಿದ ಆಸುಮಾಪಾಸಿನ ಜಾಗಕ್ಕೂ ಹಾನಿಯಾಗಬಹುದು. ಈ ಬಗ್ಗೆ ಎಚ್ಚರವಿರಲಿ.
ಆಹಾರ ಕಟ್ಟಲು ಬಳಸುವ ಅಲ್ಯೂಮೀನಿಯಂ ಫಾಯ್ಲ್‌ನ ಹೊಳೆಯುವ ಭಾಗವನ್ನು ಕೋಕ್ ಅಥವಾ ಪೆಪ್ಸಿ ಅಥವಾ ಯಾವುದೇ ಕೋಲಾದಲ್ಲಿ ಅದ್ದಿ ನಂತರ ತುಕ್ಕು ಹಿಡಿದ ಪ್ರದೇಶದಲ್ಲಿ ತಿಕ್ಕಿದರೂ ತುಕ್ಕು ದೂರಾಗುವುದಂತೆ! ಸಣ್ಣ ಪ್ರಮಾಣದ ತುಕ್ಕಿಗೆ ಇದು ಅತ್ಯಂತ ಪರಿಣಾಮಕಾರಿ.

ಬಣ್ಣಗೇಡಾಗದಿರಲಿ
ಬೈಕ್ ಸದಾ ಹೊಸದರಂತೆ ಕಾಣಬೇಕು ಅಂದರೆ ಮುಖ್ಯವಾಗಿ ಅದರ ಬಣ್ಣ ಮಾಸಬಾರದು. ಆದರೆ ಹವಾಮಾನ ಮತ್ತು ಪರಿಸರದ ವಿವಿಧ ಅಂಶಗಳು ಮೊದಲು ಪರಿಣಾಮ ಬೀರುವುದೇ ಪೇಂಟ್ ಮೇಲೆ. ಬಿಸಿಲಿನಲ್ಲಿ ಇಟ್ಟಾಗ, ಧೂಳು, ಹೊಗೆ, ಮಳೆ ಹೀಗೆ ಪ್ರತಿಯೊಂದು ಅಂಶಗಳೂ ಬಣ್ಣ ಮಾಸುವಂತೆ ಮಾಡಬಲ್ಲವು.
ಬಣ್ಣ ಮಾಸದಂತೆ ಮಾಡಬೇಕು ಅಂದರೆ ಅದಕ್ಕೆ ಆಗಾಗ ವ್ಯಾಕ್ಸ್ ಪಾಲಿಶ್ ಮಾಡಿಸಬೇಕು. ಉಳಿದ ಸಮಯದಲ್ಲಿ ಎರಡು ದಿನಕ್ಕೊಮ್ಮೆಯಾದರೂ ಒಣ್ಣ ಬಟ್ಟೆಯಿಂದ ಒರೆಸುವುದು ಒಳ್ಳೆಯದು. ಅದರಲ್ಲೂ ಮಳೆಗಾಲದಲ್ಲಿಮಳೆಯಿಂದ ಬಂದ ತಕ್ಷಣ ಬಣ್ಣ ಮತ್ತು ಕ್ರೋಮ್ (ಸ್ಟೀಲ್) ಇರುವ ಜಾಗದಲ್ಲಿರುವ ನೀರನ್ನು ಒರೆಸಿಟ್ಟರೆ ಇನ್ನೂ ಉತ್ತಮ.
ಇನ್ನು ಸಣ್ಣ ಪುಟ್ಟ ಸ್ಕ್ರ್ಯಾಚ್‌ಗಳು ಪ್ರತಿ ವಾಹನ ಮಾಲಿಕನಿಗೆ ಕಿರಿಕಿರಿ ಉಂಟು ಮಾಡುತ್ತವೆ. ಆದರೆ ಈಗ ಸಾಕಷ್ಟು ಸ್ಕ್ರ್ಯಾಚ್ ರಿಮೂವರ್‌ಗಳು ಬಂದಿವೆ. ಸಣ್ಣ ಪುಟ್ಟ ಸ್ಕ್ರ್ಯಾಚ್‌ಗಳನ್ನು ಸ್ಕ್ರ್ಯಾಚ್ ರಿಮೂವರ್‌ಗಳ ಮೂಲಕ ತೆಗೆಯಬಹುದು. ಆಳವಾದ ಸ್ಕ್ರ್ಯಾಚ್ ಆಗಿದ್ದರೆ ರಬ್ಬಿಂಗ್ ಸಹಾಯ ಪಡೆಯಬೇಕಾಗುತ್ತದೆ. ಈಗ ಟ್ರಾನ್ಸ್‌ಫರೆಂಟ್ ಸ್ಕ್ರೀನ್‌ಗಳು ಬಂದಿವೆ. ಇವುಗಳನ್ನು ವಿವಿಧ ಗಾತ್ರ ಮತ್ತು ಶೈಲಿಯಲ್ಲಿ ಕತ್ತರಿಸಲೂಬಹುದು. ಇವುಗಳನ್ನು ಬೈಕ್‌ನ ಬಣ್ಣ ಇರುವ ಜಾಗಕ್ಕೆ ಅಂಟಿಸುವುದರಿಂದ ಕೂಡ ಬೈಕ್‌ಗಳ ಬಣ್ಣ ಮಾಸದಂತೆ ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.
ಸಾಧ್ಯವಾದಷ್ಟೂ ಬೈಕನ್ನು ನೆರಳಿನಲ್ಲಿಡಿ. ನೆರಳಿಲ್ಲದಿದ್ದಲ್ಲಿ ಮುಚ್ಚಿಡಿ. ದೀರ್ಘಕಾಲ ಬಿಸಿನಲ್ಲಿ ಇಡುವುದು ಬಣ್ಣ ಮಾಸಲು ಪ್ರಮುಖ ಕಾರಣ.

ಚೈನು ಇರಲಿ ಫೈನು

ಬೈಕ್‌ನಲ್ಲಿ ಇದು ಕಣ್ಣಿಗೇ ಕಾಣುವುದಿಲ್ಲ. ಆದರೆ ಇದು ಅತ್ಯಂತ ಪ್ರಮುಖ ಅಂಗ. ಕೊಂಚ ಹೆಚ್ಚು ಕಡಿಮೆಯಾದರೂ ಬೈಕ್ ಓಡದು. ಓಡುತ್ತಿದ್ದರೂ ಸವಾರನಿಗೆ ಅಪಾಯ ತಪ್ಪಿದ್ದಲ್ಲ. ಬೈಕ್‌ನಲ್ಲಿ ಅತ್ಯಂತ ಹೆಚ್ಚು ಕೆಲಸಕ್ಕೊಳಗಾಗುವ ಬಿಡಿಭಾಗವೆಂದರೆ ಚೈನು. ಅದು ಕಣ್ಣಿಗೆ ಕಾಣುವುದಿಲ್ಲವಾದ್ದರಿಂದ ನಾವು ಅದರತ್ತ ಹೆಚ್ಚು ಗಮನವನ್ನೇ ಹರಿಸುವುದಿಲ್ಲ. ನೀವು ಚೈನನ್ನು ಸರಿಯಾಗಿ ನೋಡಿಕೊಂಡಿಲ್ಲವಾದರೆ ಚೈನಿನ ಜತೆ ಸ್ಪೊಕೆಟ್ಸ್ ಕೂಡ ಹಾಳಾಗುತ್ತದೆ.
ಮಾರುಕಟ್ಟೆಯಲ್ಲಿ ಸಾಕಷ್ಟು ಚೈನ್ ಕ್ಲೀನರ್‌ಗಳು ಲಭ್ಯವಿದೆ. ಅದನ್ನು ಬಳಸಿ 15 ದಿನಕ್ಕೊಮ್ಮೆಯಾದರೂ ಚೈನ್ ಸ್ವಚ್ಛಗೊಳಿಸಿ. ನಂತರ ಚೈನ್‌ಗೆ ಆಯಿಲ್ ಹಾಕಿ. ಸ್ವಲ್ಪವೇ ಹಾಕಿದರೆ ಸಾಕು. ಹೆಚ್ಚು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ. ಸ್ವಲ್ಪ ಸ್ವಲ್ಪವನ್ನೇ ಆಗಾಗ ಹಾಕುವುದರಿಂದ ಚೈನು ಉತ್ತಮವಾಗಿರುತ್ತದೆ ಎಂಬುದು ನೆನಪಿರಲಿ.

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com