ಆ ರಾಮ!

ಪುಟ್ಟ ಪಿಕ್‌ನಿಕ್ ಮಾಡಬೇಕೆಂದರೆ ರಾಮನಗರ ಸಮೀಪದ ರಾಮದೇವರಬೆಟ್ಟ ಒಳ್ಳೇ ಸ್ಪಾಟ್.
ಆ ರಾಮ!
Updated on: 

ಶ್ರೀರಾಮನ ಹದಿನಾಲ್ಕು ವರ್ಷ ವನವಾಸದ ವೇಳೆ ಭೇಟಿ ನೀಡಿದ್ದನೆಂಬ ಪೌರಾಣಿಕ ಹಿನ್ನೆಲೆಯ, ಶಾಂತ ಪರಿಸರದ ತಾಣವೊಂದು ರಾಮನಗರ ಜಿಲ್ಲೆಯಲ್ಲಿದೆ. ಅಲ್ಲದೆ, ಬಾಲಿವುಡ್‌ನಲ್ಲಿ ಬಿರುಗಾಳಿಯೆಬ್ಬಿಸಿದ್ದ 'ಶೋಲೆ' ಶೂಟಿಂಗ್ ಸ್ಪಾಟ್ ಕೂಡಾ ಇದಾಗಿದೆ. ಅದ್ಯಾವುದು ಗೊತ್ತಾ?

ಶ್ರೀರಾಮದೇವರ ಬೆಟ್ಟ
ನಗರ ಜೀವನದ ಒತ್ತಡಗಳನ್ನು ಒತ್ತಟ್ಟಿಗಿಟ್ಟು, ಕೊಂಚ ನಿರಾಳವಾಗಿ ಉಸಿರಾಡಬೇಕೆಂದರೆ, ಪುಟ್ಟ ಪಿಕ್‌ನಿಕ್ ಮಾಡಬೇಕೆಂದರೆ ರಾಮನಗರ ಸಮೀಪದ ರಾಮದೇವರಬೆಟ್ಟ ಅಥವಾ ಶೋಲೆಬೆಟ್ಟಕ್ಕೆ ಅಡಿಯಿಡಬಹುದು. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೆಂಗಳೂರಿನಿಂದ 52 ಕಿ.ಮೀ. ದೂರದಲ್ಲಿರುವ ಈ ಬೆಟ್ಟ ಪ್ರಯಾಣದ ಮಧ್ಯ ಸುಮ್ಮನೆ ಕಣ್ಣಾಡಿಸಿದರೆ ಕಾಣಿಸದಿರದು. ಅದರ ಸೌಂದರ್ಯವನ್ನು ಸ್ವಚ್ಛಂದವಾಗಿ ಸವಿಯಬೇಕಾದರೆ ಬೆಟ್ಟದ ತುದಿಯವರೆಗೆ ಸಾಗಲೇಬೇಕು.
ರಾಮನಗರ ಪಟ್ಟಣದಿಂದ 2 ಕಿ.ಮೀ. ದೂರವಿರುವ ಈ ಬೆಟ್ಟದ ಬುಡದವರೆಗೆ ವಾಹನದಲ್ಲೇ ಸಾಗಬಹುದು. ಪ್ರವಾಸಿಗರಿಗೆ ಪ್ರವೇಶ ಶುಲ್ಕವಿದೆ. ಆದರೆ, ಈ ಬೆಟ್ಟದ ಸೌಂದರ್ಯದ ಮುಂದೆ ಆ ಶುಲ್ಕ ಸಾಸಿವೆ ಅಷ್ಟೇ. ಅಂದಹಾಗೆ, ನಿಮಗೇನು ಖಾನಾ ಪೀನಾ ಬೇಕಿದ್ದರೂ ಜೊತೆಗೇ ಒಯ್ಯುವುದು ಉತ್ತಮ. ಅಲ್ಲಿ ನಿಮಗೆ ಬೇಕಾದ್ದು ಸಿಗುತ್ತದೆ ಎಂಬ ಬಗ್ಗೆ ಖಾತ್ರಿಯಿಲ್ಲ. ಇಲ್ಲಿ ಹದ್ದುಗಳು ಅಪಾರ ಸಂಖ್ಯೆಯಲ್ಲಿರುವುದರಿಂದ ಅರಣ್ಯ ಇಲಾಖೆ ಇದನ್ನು ಹದ್ದು ಸಂರಕ್ಷಣಾ ವಲಯ ಎಂದೂ ಘೋಷಿಸಿದೆ. ಅಪಾಯಕಾರಿ ಹದ್ದುಗಳು ಕಾಣಿಸುವುದು ವಿರಳವಾದರೂ, ಚಾರಣಿಗಳು ಗುಂಪು ತ್ಯಜಿಸಿ ಒಂಟಿಯಾಗಿ ಸಾಗುವ ಸಾಹಸ ಸಲ್ಲದು.
ನೆರಳಿನಲ್ಲೇ ಸಾಗುವುದರಿಂದ ಅಷ್ಟೇನೂ ಆಯಾಸವಾಗುವುದಿಲ್ಲ. ಹಾಗಂತ ಅವಸರ ಮಾಡಿದರೆ ಅನಾರೋಗ್ಯವಾದೀತು. ಕೇವಲ ಒಂದೆರಡು ಗಂಟೆಯ ಟ್ರೆಕ್ಕಿಂಗ್ ಆಗಿರುವುದರಿಂದ ನಿಧಾನವಾಗಿ ಆಸ್ವಾದಿಸುತ್ತಾ ಸಾಗುವುದು ಒಳಿತು. ಹಚ್ಚಹಸಿರಿನ ನಡುವೆ ಮೇಲೇರುತ್ತಾ ಸಾಗಿದಂತೆ ಅಲ್ಲಲ್ಲಿ ಸಣ್ಣಪುಟ್ಟ ಗುಂಡಿಗಳು ಎದುರಾಗುತ್ತವೆ. 250 ಮೆಟ್ಟಿಲುಗಳ ಬಳಿ ಆಂಜನೇಯನ ಮೂರ್ತಿ ಇದೆ.  ಬೆಟ್ಟದ ಮಧ್ಯೆ ಸಿಗುವುದು ರಾಮನ ದೇವಸ್ಥಾನ. ಇದರ ಪಕ್ಕದಲ್ಲೇ ಇರುವ ಕೊಳ ನೋಡಲು ರಮಣೀಯ.
ಎಂಡ್ ಪಾಯಿಂಟ್‌ಗೆ ಸಾಗಬೇಕೆಂದರೆ ಕಡಿದಾದ ಬಂಡೆಯನ್ನು ಏರಲೇಬೇಕು. ಇಲ್ಲಿನ ಭಕ್ತರು ಶ್ರಮದಾನದ ಮೂಲಕ ಈ ಬಂಡೆಗೆ ಮೆಟ್ಟಿಲುಗಳನ್ನು ಮಾತ್ರವಲ್ಲದೇ, ಮೇಲೆ ಹತ್ತುವಾಗ ಭದ್ರ ಆಧಾರಕ್ಕೆಂದು ಕಬ್ಬಿಣದ ರಾಡು- ಪೈಪುಗಳಿಂದ ಕಂಬಗಳನ್ನು ನೆಟ್ಟು ಅಡ್ಡಪಟ್ಟಿಗಳನ್ನು ನಿರ್ಮಿಸಿದ್ದಾರೆ. ಈ ವಂಟಿಕಲ್ ಬೆಟ್ಟವನ್ನು ಹತ್ತಿ ಇಳಿಯುವಾಗ ಮನಸ್ಸು ಉಲ್ಲಾಸವಾಗಿರುತ್ತದೆ. ಇಲ್ಲಿನ ರಾಮ ದೇವರ ದೇಗುಲವನ್ನು ಸಾವಿರ ವರ್ಷಗಳ ಹಿಂದೆ ಕೆಂಪೇಗೌಡ ನಿರ್ಮಿಸಿದ್ದಾನೆ. ಚಾರಣ ಮಾಡುವವರು ಬೆಳ್ಳಂಬೆಳಗ್ಗೆ ಬೆಟ್ಟ ಏರುವುದು ಸೂಕ್ತ.
ಜನಮಾನಸದಲ್ಲಿ ಇನ್ನೂ ಹಚ್ಚಹಸುರಾಗೇ ಇರುವ 1975ರಲ್ಲಿ ಸೂಪರ್ ಹಿಟ್ ಆಗಿದ್ದ ಹಿಂದಿ ಸಿನಿಮಾ 'ಶೋಲೆ' ಮೂಲಕ ಈ ತಾಣ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಇಂದಿಗೂ ಬೆಟ್ಟ ನೈಜತೆಗೆ ಸಾಕ್ಷಿಯಾಗಿದೆ. ವಾಹನ ನಿಲುಗಡೆಗೆ ಅವಕಾಶವಿದ್ದು, ದ್ವಿಚಕ್ರ ವಾಹನಕ್ಕೆ 5 ಪಾವತಿಸಬೇಕಿದೆ. ಫೋಟೋಗ್ರಫಿಗೂ ಹೇಳಿಮಾಡಿಸಿದ ತಾಣವಿದು. ಬೆಟ್ಟದಲ್ಲಿ ಆಗಾಗ ಹಾರಾಡುವ ವಿವಿಧ ಪಕ್ಷಿಗಳು, ಆಡು-ಕುರಿ, ದನ ಮೇಯಿಸುವವರು ಆಗಾಗ ಎದುರಾಗುವುದರಿಂದ ಮನಮೆಚ್ಚಿದ ಫೋಟೋ ಕ್ಲಿಕ್ಕಿಸುವ ಅವಕಾಶ ಸಿಗಬಲ್ಲದು.

ಹೀಗೆ ಬನ್ನಿ...
ಬೆಂಗಳೂರಿನಿಂದ 48 ಕಿ.ಮೀ., ರಾಮನಗರದಿಂದ 3 ಕಿ.ಮೀ. ಅಂತರದಲ್ಲಿದೆ ರಾಮದೇವರ ಬೆಟ್ಟ. ಒಂದೆರಡು ತಾಸು ಪಯಣ. ಬೆಂಗಳೂರು, ಮೈಸೂರಿನಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇದೆ. ರಾಮನಗರದಿಂದ ಆಟೋ ಹಿಡಿದು ಸಹ ಬೆಟ್ಟವನ್ನು ತಲುಪಬಹುದು. ಸ್ವಂತ ವಾಹನದಲ್ಲಿ ಬರುವವರು ಬೆಂಗಳೂರು - ಮೈಸೂರು ರಸ್ತೆ ಮೂಲಕ ಕೆಂಗೇರಿ- ಬಿಡದಿ- ರಾಮನಗರ ತಲುಪಿ ಎಡಕ್ಕೆ ತಿರುಗಿ ಸಾಗಬೇಕು.

- ಲೇಖನ: ಗಣೇಶಪ್ರಸಾದ್ ಕುಂಬ್ಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com