ಮಹಾಭಾರಥ

ಮಹಾಭಾರಥ
Updated on: 

ಬರೋಬ್ಬರಿ 9 ಅಡಿ 2 ಇಂಚು ಎತ್ತರದ ಕಲ್ಲಿನ ಗಾಲಿಗಳು. ಅದರ ಮೇಲೆ ದೊಡ್ಡದಾದ ರಥ. ಇದನ್ನು ನೋಡಲು ಕತ್ತು ಮೇಲೆತ್ತಿದರೆ ತಲೆ ಮೇಲಿನ ಟೊಪ್ಪಿಗೆ ಕೆಳಗೆ ಬೀಳುತ್ತದೆ! ರಥದ ಎತ್ತರ ಕೇವಲ 51 ಅಡಿ!! ಇದು ಇರೋದು ಬಿಜಾಪುರ ಜಿಲ್ಲೆಯ ಢವಳಗಿಯ ಮಡಿವಾಳೇಶ್ವರ ದೇವಸ್ಥಾನದ ಆವರಣದಲ್ಲಿ. ಇನ್ನೂ ವಿಶೇಷ ಎಂದರೆ ಇದು ಕಬ್ಬಿಣದ ರಥ!
ಈ ರಥದ ನಿರ್ಮಾಣವಾಗಿದ್ದು ಏಕೆ ಗೊತ್ತಾ? ಬಿಜಾಪುರದ ಆದಿಲ್ ಶಾಹಿ ರಾಜರಿಂದ ಉಂಬಳಿಯಾಗಿ ಪಡೆದ, ಸುಮಾರು 15 ನೇ ಶತಮಾನದಲ್ಲಿ ನಿರ್ಮಾಣವಾದ ಮಡಿವಾಳೇಶ್ವರ ದೇವಸ್ಥಾನಕ್ಕೆ 500 ವರ್ಷ ಹಿಂದೆಯೇ ನಿರ್ಮಿಸಿರಬಹುದಾದ ಕಟ್ಟಿಗೆಯ ರಥವಿತ್ತು. ಅದಕ್ಕೆ ಇದ್ದದ್ದು ಇವೇ ಕಲ್ಲಿನ ದೊಡ್ಡ ಗಾಲಿಗಳು. 2011ರ ಮಾರ್ಚ್ 13 ರಂದು ರಥೋತ್ಸವದಲ್ಲಿ ಅವಘಡವೊಂದು ಘಟಿಸಿಬಿಟ್ಟಿತು. ದುರ್ಬಲವಾಗಿದ್ದ ರಥ ನೆಲ ಕಚ್ಚಿತು.
ಆಗ ಹೊಸ ರಥ ನಿರ್ಮಿಸಲು ದೇವಸ್ಥಾನದ ಧರ್ಮಾಧಿಕಾರಿಗಳು ಹಾಗೂ ಭಕ್ತರು ನಿರ್ಧರಿಸಿದರು. ಕಟ್ಟಿಗೆ ರಥ ನಿರ್ಮಿಸಲು ಬಡಿಗರನ್ನು ಕರೆಯಿಸಿ ಕೇಳಿದಾಗ ಒಂದು ರಥ ನಿರ್ಮಿಸಲು ಕನಿಷ್ಠ ಎಂದರೂ 1 ಕೋಟಿ ರುಪಾಯಿ ಬೇಕು ಎಂದು ಅಭಿಪ್ರಾಯಪಟ್ಟರು. ಕೇಳಿದವರೆಲ್ಲ ಅವಾಕ್ಕಾದರು.
ಆಗ ಧರ್ಮಾಧಿಕಾರಿ ಘನಮಠೇಶ್ವರ ಶಿವಾಚಾರ್ಯ ಸ್ವಾಮೀಜಿಯವರಿಗೆ ಹೊಳೆದ ಉಪಾಯ ಎಂದರೆ ಕಲ್ಲಿನ ಬೃಹತ್ ಗಾಲಿಗಳಿಗೆ ತಕ್ಕಂತೆ ಕಬ್ಬಿಣದ ರಥ ನಿರ್ಮಿಸಿದರೆ ಹೇಗೆ ಎನ್ನುವುದು? ತಡ ಮಾಡಲಿಲ್ಲ. ಪಕ್ಕದ ಮುದ್ದೇಬಿಹಾಳಕ್ಕೆ ಹೋಗಿ ತಂಗಡಗಿ ರಸ್ತೆಯಲ್ಲಿರುವ ಪವಾರ್ ಸಹೋದರರ ಕಬ್ಬಿಣದ ರಥ ನಿರ್ಮಿಸುವ ಫ್ಯಾಕ್ಟರಿಗೆ ಹೋಗಿ ವಿಚಾರಿಸಿದರು. ಕಟ್ಟಿಗೆಯ ರಥಕ್ಕೆ ತಗುಲುವ ವೆಚ್ಚದ ಬರೀ ಕಾಲು ಭಾಗದಲ್ಲಿ 51 ಅಡಿ ಎತ್ತರದ ಕಬ್ಬಿಣದ ರಥ ಮಾಡಿಕೊಡುವುದಾಗಿ ಭರವಸೆ ಕೊಟ್ಟರು. ಅಲ್ಲಿಯೇ ನಿರ್ಮಾಣಕ್ಕೆ ಆರ್ಡರ್ ನೀಡಿ ಢವಳಗಿಗೆ ಹಿಂತಿರುಗಿದರು ಸ್ವಾಮೀಜಿ.  
ಹರ ಸಾಹಸ
ಮಾತು ಕೊಟ್ಟಂತೆ ರಥ ತಯಾರಾಯಿತು. ಬರೋಬ್ಬರಿ 9 ತಿಂಗಳ ಕಾಲ ಸುಮಾರು 35ಕ್ಕೂ ಹೆಚ್ಚು ಕೆಲಸಗಾರರು ಒಟ್ಟಿಗೆ ಕೂಡಿ, ನಾಲ್ಕು ಭಾಗಗಳಲ್ಲಿ ರಥ ತಯಾರಿಸಿದರು. ಫ್ಯಾಕ್ಟರಿಯಿಂದ 10 ಕಿ.ಮೀ ಇರುವ ಢವಳಗಿಗೆ ಈ ರಥದ ಭಾಗಗಳನ್ನು ಒಯ್ಯಲು 2 ಲಾರಿ, ದೊಡ್ಡ ಕ್ರೇನ್ ಮತ್ತು ಎರಡು ಜೆಸಿಬಿ ಯಂತ್ರಗಳ ಸಹಾಯ ಪಡೆಯಲಾಯಿತು. ನಂತರ ಮೂರು ದಿನಗಳ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಜನರು ಒಟ್ಟುಗೂಡಿ ದೊಡ್ಡತೇರನ್ನು ನಿಲ್ಲಿಸಿದರು.
ರಾಜ್ಯದಲ್ಲೇ ಅತಿ ದೊಡ್ಡ ಕಲ್ಲಿನ ಗಾಲಿಗಳ ಕಬ್ಬಿಣದ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ರಥದ ಭಾರ 25 ಟನ್. ಅಲಂಕಾರಕ್ಕೆ 3 ಅಡಿಯ ಕಂಚು ಮತ್ತು ಹಿತ್ತಾಳೆಯ ಸುಂದರ ಉಬ್ಬು ಶಿಲ್ಪಗಳನ್ನು ಜೋಡಿಸಲಾಗಿದೆ. ಸಾವಿರ ಚಿಕ್ಕ ಗಂಟೆಗಳು ಇವೆ. ಕಳೆದ ಮಾರ್ಚ್‌ನಲ್ಲಿ ಭಕ್ತರು ಹೊಸ ತೇರು ಎಳೆದು ಎಲ್ಲರೂ ಸಂಭ್ರಮಪಟ್ಟರು.  ಶ್ರೀಗಳ ಸಂಪರ್ಕ: 9945508368.

ಸಾಂಘಿಕ ಪ್ರಯತ್ನದ ಸಾಕ್ಷಿ
ಈ ರಥದ ನಿರ್ಮಾಣಕ್ಕೆ ಯಾವುದೇ ಸಂಘ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿಲ್ಲ. ವೆಚ್ಚವನ್ನು ಸಂಪೂರ್ಣವಾಗಿಗ್ರಾಮಸ್ಥರು, ಭಕ್ತರೇ ಭರಿಸಿದ್ದಾರೆ. ಇಚ್ಛಾಶಕ್ತಿ ಮತ್ತು ಸಾಂಘಿಕ ಪ್ರಯತ್ನ ಇದ್ದರೆ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂಬುದಕ್ಕೆ ಈ ರಥ ಸಾಕ್ಷಿಯಾಗಿದೆ.

= ಪ್ರವೀಣರಾಜು ಸೊನ್ನದ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com