

ಈಗ ಫೆಬ್ರವರಿ. ಇನ್ನೇನು ಮಾರ್ಚ್ ಬರಲಿದೆ. ಅದರ ಜತೆಗೆ ಬಿಸಿಲ ಬೇಗೆಯೂ ಹೆಚ್ಚಲಿದೆ. ಇಂಥ ಸಂದರ್ಭದಲ್ಲಿ ತಂಗಾಳಿ ಬಯಸುವುದು ಸಹಜ. ಹೀಗಾಗಿಯೇ ಫ್ಯಾನ್ ಉದ್ಯಮದಲ್ಲಿ ಬೆಳವಣಿಗೆ ಕಾಣತೊಡಗಿದೆ. ಕಳೆದ 1-2 ವರ್ಷಗಳಲ್ಲಿ ಹಿನ್ನಡೆ ಕಂಡಿದ್ದ ಉದ್ಯಮ ಈ ವರ್ಷ ಏರಿಕೆ ಕಾಣುವ ನಿರೀಕ್ಷೆಯಿದೆ. 2011ರಲ್ಲಿ ಶೇ. 6.18ರಿಂದ ಶೇ.6.16ಕ್ಕೆ ಇಳಿಕೆ ಕಂಡಿತ್ತು. ಆದರೆ ಈ ವರ್ಷ ಅದು ಉತ್ತಮ ಬೆಳವಣಿಗೆ ಕಾಣುತ್ತದೆ ಎನ್ನುತ್ತಾರೆ ಪ್ರಮುಖ ಮಾರಾಟಗಾರರು.
ಭಾರತೀಯ ಫ್ಯಾನ್ ಉತ್ಪಾದಕರ ಸಂಘಟನೆ (ಐಎಫ್ಎಂಎ) ಪ್ರಕಾರ ಈ ವರ್ಷ ಫ್ಯಾನ್ ಮಾರುಕಟ್ಟೆ ಚೆನ್ನಾಗಿರಲಿ ಎನ್ನುವ ಭರವಸೆ ಹೊಂದಿದೆ.
ಭಾರಿ ಮಾರಾಟ
2002-03ರಲ್ಲಿ ಫ್ಯಾನ್ ಉದ್ಯಮ ಉತ್ತಮ ಬೆಳವಣಿಗೆ ಕಾಣತೊಡಗಿದ ವರ್ಷ ಎಂದೆನ್ನಬಹುದು. ಅಲ್ಲಿಂದ ಶೇ.20ರಿಂದ ಶೇ.22 ದರದಲ್ಲಿ ಪ್ರಗತಿ ಕಾಣತೊಡಗಿತು. 2010-11ರಲ್ಲಿ 36.95 ದಶಲಕ್ಷ ಫ್ಯಾನ್ಗಳು ಮಾರಾಟವಾಗಿದ್ದವು.
ಇಲ್ಲೂ ಪೈಪೋಟಿ ಉಂಟು
ಇತ್ತೀಚಿನ ವರ್ಷಗಳಲ್ಲಿ ಫ್ಯಾನ್ ಕಂಪನಿಗಳಲ್ಲಿ ಪೈಪೋಟಿ ಉಂಟಾಗಿದೆ. ಅದು ಗ್ರಾಹಕರ ಆಯ್ಕೆಗೆ ಉತ್ತಮ ಅವಕಾಶ ಎಂದೆನ್ನಬಹುದಾದರೂ, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಬಜಾಜ್ ಎಲೆಕ್ಟ್ರಿಕಲ್ಸ್ ಇತ್ತೀಚೆಗಷ್ಟೇ ಆಸ್ಟ್ರಿಮ್, ಕ್ರುಸ್ ಏರ್ ಹೆಸರಿನ ಫ್ಯಾನ್ಗಳನ್ನು ಬಿಡುಗಡೆಗೊಳಿಸಿದೆ.
ಹೊಸ ಮನೆಗಳಲ್ಲೇ ಹೆಚ್ಚು
ಬೇಸಿಗೆ ಹೊರತುಪಡಿಸಿದರೆ ಫ್ಯಾನ್ಗಳು ಹೆಚ್ಚಾಗಿ ಮಾರಾಟವಾಗುವುದು ಹೊಸತಾಗಿ ನಿರ್ಮಿಸಲಾಗುವ ಮನೆಗಳಲ್ಲಿ. ಆದ್ದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಫ್ಯಾನ್ ಉದ್ಯಮಕ್ಕೂ ನಂಟಿದೆ ಎನ್ನಬಹುದು. ಕಳೆದ ವರ್ಷ ಪರಸ್ಪರ ಮಾರುಕಟ್ಟೆ ಹಿನ್ನಡೆ ಕಂಡಿತ್ತು.
ಈ ಅಂಶ ಗಮನದಲ್ಲಿರಲಿ....
ಫ್ಯಾನ್ ಉದ್ಯಮದ ನಿಪುಣರ ಪ್ರಕಾರ ಯಾವುದೇ ಫ್ಯಾನ್ ಕೊಳ್ಳುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ.
ಫ್ಯಾನ್ನ ಹೊರ ಮತ್ತು ದರ ಮಾತ್ರವೇ ಖರೀದಿಯ ಮಾನದಂಡವಲ್ಲ.
ರಿಮೋಟ್ ಫ್ಯಾನ್ಗಳೂ ಈಗ ಮಾರುಕಟ್ಟೆಯಲ್ಲಿವೆ. ನೂತನ ಆವಿಷ್ಕಾರಗಳು ವರವೂ ಆಗಬಲ್ಲದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡಿರಬೇಕು.
ಫ್ಯಾನ್ ಬ್ಲೇಡ್ ಆಕಾರ ಮತ್ತು ಗ್ರಾತ ಕೂಡ ಗಾಳಿ ಬೀಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಫ್ಯಾನ್ನಲ್ಲಿ ಪ್ರಮುಖ ಭಾಗ ಎಂದರೆ ಅದರ ಮೋಟರ್. ಉತ್ತಮ ದರ್ಜೆಯ ಮೋಟರ್ ಇದ್ದರೆ ಅದರ ಬಾಳಿಕೆ ಹೆಚ್ಚು.
-ಕೆ.ಎನ್. ಸತೀಶ