'ಸ್ಮಾಟ್ ಸ್ಟೇಜ್ ಮನಿ ಬ್ಯಾಕ್ ಪ್ಲಾನ್' ವಿಮಾ ಯೋಜನೆ ಆರಂಭ
ಕೆನರಾ ಎಚ್ಎಸ್ಬಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ವಿಮಾ ಕಂಪನಿ 'ಸ್ಮಾಟ್ ಸ್ಟೇಜ್ ಮನಿ ಬ್ಯಾಕ್ ಪ್ಲಾನ್' ಹೆಸರಿನ ನೂತನ ವಿಮಾ ಯೋಜನೆ ಪರಿಚಯಿಸಿದೆ.ವಿಮಾ ಅವಧಿ ಮುಕ್ತಾಯಕ್ಕೂ ಮುನ್ನವೇ ಮೂರು ಕಂತುಗಳಲ್ಲಿ ಹಣ ಮರುಪಾವತಿ ಸೌಲಭ್ಯವಿರುವ ವಿಮಾ ಯೋಜನೆ ಇದಾಗಿದೆ. ಅವಧಿ ಪೂರ್ಣಗೊಂಡ ನಂತರ ವಿಮೆ ಮಾಡಿಸಿದಷ್ಟು ಪ್ರಮಾಣದ ಮೊತ್ತ ಮತ್ತು ಅಂತಿಮ ಬೋನಸ್ ಸಹ ಲಭ್ಯವಾಗುವುದರ ಜತೆಗೆ ಇಡೀ ಕುಟುಂಬಕ್ಕೆ ಜೀವನ ಸುರಕ್ಷೆಯ ಭರವಸೆ ನೀಡುತ್ತದೆ.
ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಪೂರೈಕೆ, ಹೊಸ ಮನೆ ಖರೀದಿಸಲು, ಕುಟುಂಬ ಸಮೇತ ಪ್ರವಾಸ ತೆರಳಲು ಅಗತ್ಯವಿರುವ ಹಣವೂ ಈ ಯೋಜನೆಯಿಂದ ಲಭಿಸುತ್ತದೆ. ಕಾಲ ಕಾಲಕ್ಕೆ ಮರುಪಾವತಿಯಾಗುವ ವಿಮಾ ಹಣದಿಂದ ವಿಮಾದಾರರು ತಮ್ಮ ಹಾಗೂ ಕುಟುಂಬದ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಜತೆಗೆ ವಿಮೆ ಮಾಡಿಸಿದ ಮೊತ್ತದ ತಲಾ ಶೇ.15ರಷ್ಟನ್ನು ಯೋಜನೆ ಆರಂಭಗೊಂಡನ ನಂತರದ 4ನೇ, 8ನೇ, 12ನೇ ವರ್ಷದ ಅಂತ್ಯದಲ್ಲಿ ಮೂರು ಬಾರಿಯಂತೆ ಮರುಪಾವತಿಸಲಾಗುತ್ತದೆ.
ಡಿಎಚ್ಎಫ್ಎಲ್ನಿಂದ ನೂತನ ನಿಶ್ಚಿತ ಠೇವಣಿ ಯೋಜನೆ ಆರಂಭ
ಭಾರತದ ಎರಡನೇ ಅತಿದೊಡ್ಡ ಗೃಹ ಸಾಲ ಒದಗಿಸುವ ಖಾಸಗಿ ಸಂಸ್ಥೆ ಡಿಎಚ್ಎಫ್ಎಲ್ 'ಡಿಎಚ್ಎಫ್ಎಲ್ ಡಬಲ್ ಮೈ ಮನಿ' ಹೆಸರಿನ ನೂತನ ನಿಶ್ಚಿತ ಠೇವಣಿ ಯೋಜನೆ ಪ್ರಕಟಿಸಿದೆ. ಈ ಯೋಜನೆ ಮೂಲಕ ಹೂಡಿಕೆದಾರರು 80 ರಿಂದ 86 ತಿಂಗಳ ಅವಧಿಯಲ್ಲಿ ತಮ್ಮ ಹಣವನ್ನು ದ್ವಿಗುಣಗೊಳಿಸಿಕೊಳ್ಳಬಹುದು.
ಡಿಎಚ್ಎಫ್ಎಲ್ ಡಬಲ್ ಮೈ ಮನಿ ನಿಶ್ಚಿತ ಠೇವಣಿ ಯೋಜನೆಯನ್ನು ವ್ಯಕ್ತಿಗತವಾಗಿ, ಜಂಟಿ ಖಾತೆಯಲ್ಲಿ, ಅಪ್ರಾಪ್ತ ವಯಸ್ಕರು, ಮಾಲೀಕತ್ವದ ಪಾಲುದಾರಿಕೆ ಸಂಸ್ಥೆ, ಕಂಪನಿಗಳು, ಟ್ರಸ್ಟ್ಗಳು, ಅಸೋಸಿಯೇಷನ್ ಕ್ಲಬ್ಗಳ ಹೆಸರಿನಲ್ಲಿ ತೆಗೆದುಕೊಳ್ಳಬಹುದು. ಕನಿಷ್ಠ ಠೇವಣಿ ರು. 10 ಸಾವಿರ. ಬಳಿಕ 1000 ಗುಣಾಂಕದಲ್ಲಿ ಡಿಎಚ್ಎಫ್ಎಲ್ನ ಯಾವುದೇ ಶಾಖೆಗಳಲ್ಲಿ ಇಡಬಹುದು.
ಈ ಕುರಿತು ಮಾತನಾಡಿದ ಡಿಎಚ್ಎಫ್ಎಲ್ ಅಧ್ಯಕ್ಷ ರಾಕೇಶ್ ಮಕ್ಕರ್, ನೂತನ ಯೋಜನೆ ಬಿಡಿ ಹೂಡಿಕೆದಾರರಿಗೆ ಸೂಕ್ತವಾಗಿದೆ. ಅನಿಶ್ಚಿತ ಮಾರುಕಟ್ಟೆಯ ಪರಿಸ್ಥಿತಿಯಲ್ಲಿಯೂ ಇದು ಆಕರ್ಷಕ ವಾಪಸಾತಿ ಸುರಕ್ಷೆ ಲಾಭ ಹೊಂದಿದೆ. ಉದ್ಯಮದ ಸರಾಸರಿ 93 ತಿಂಗಳ ಬದಲಿಗೆ 86 ತಿಂಗಳಲ್ಲಿ ಹೂಡಿಕೆ ದ್ವಿಗುಣಗೊಳಿಸಲಿದೆ ಎಂದರು.
ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದಿಂದ ಹೂಡಿಕೆದಾರರ ವಾರ
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಅರಿವನ್ನು ಪಸರಿಸಲು ಮತ್ತು ಮಾರುಕಟ್ಟೆಯ ಭಾಗಿಗಳನ್ನು ಸಬಲಗೊಳಿಸಲು ಹೂಡಿಕೆದಾರರ ವಾರವನ್ನು ಆಚರಿಸಿತು. ಷೇರು ಮಾರುಕಟ್ಟೆಯ ಪ್ರಾಥಮಿಕ ವಿಷಯಗಳು, ಆರ್ಥಿಕ ಯೋಜನೆ ಮತ್ತು ಸುರಕ್ಷಿತ ಹೂಡಿಕೆಯ ಬಗ್ಗೆ ಅರಿತುಕೊಳ್ಳಲು ಮತ್ತು ಅವರನ್ನು ದೇಶದ ಮೂಲ ಬಂಡವಾಳ ಮಾರುಕಟ್ಟೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಹೂಡಿಕೆದಾರರ ವಾರ ಆಚರಿಸಿತು.
ಎನ್ಎಸ್ಇ ರಾಷ್ಟ್ರದ ವಿವಿಧ ನಗರಗಳಲ್ಲಿ ಹೂಡಿಕೆದಾರರನ್ನು ಸಂಪರ್ಕಿಸಿ ಅವರಿಗೆ ಮಾರುಕಟ್ಟೆ ಉತ್ಪನ್ನಗಳು, ಹೂಡಿಕೆ ಮಾಡುವುದರ ಪ್ರಯೋಜನಗಳು ಮತ್ತು ಸುರಕ್ಷಿತ ಹೂಡಿಕೆ ಮಾಡುವುದರ ಬಗ್ಗೆ ಅವರಿಗೆ ಮಾಹಿತಿ ಒದಗಿಸುತ್ತಿದೆ. ಸುರಕ್ಷಿತ ಹೂಡಿಕೆ ತತ್ವಗಳ ಬಗ್ಗೆ ಗ್ರಾಹಕರಿಗೆ ತಿಳಿವಳಿಕೆ ಮೂಡಿಸಿ ಅವರು ಉತ್ಪಾದಕ ಆಸ್ತಿಗಳ ಮೇಲೆ ಹಣ ಹೂಡುವುದನ್ನು ಉತ್ತೇಜಿಸುವುದು ಎನ್ಎಸ್ಇ ಪ್ರಯತ್ನವಾಗಿದೆ.
ಶಕ್ತಿ ಪಂಪ್ಸ್ನಿಂದ ಕೃಷಿ ಸಮುದಾಯ ದ್ವಿಗುಣಗೊಳಿಸಲು ಯೋಜನೆ
ಶಕ್ತಿ ಪಂಪ್ಸ್ ಕರ್ನಾಟಕದಲ್ಲಿನ ತನ್ನ ಕೃಷಿ ಸಮುದಾಯವನ್ನು ದ್ವಿಗುಣಗೊಳಿಸಲು ನೂತನ ಯೋಜನೆ ರೂಪಿಸಿದೆ. ಕರ್ನಾಟಕದಲ್ಲಿ ಶಕ್ತಿ ಪಂಪ್ಸ್ ಉತ್ಪನ್ನಗಳ ಮಾರಾಟದ ವ್ಯಾಪ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ರೈತರಲ್ಲಿ ಸಂಸ್ಥೆಯ ಸರಕುಗಳು ಹಾಗೂ ಅದರ ಬಳಕೆ ಮತ್ತು ಅನುಕೂಲಗಳ ಕುರಿತಾಗಿ ಅರಿವು ಮೂಡಿಸಲಿದೆ.
ನೂತನ ಬ್ರ್ಯಾಂಡ್ ಹೇಳಿಕೆ 'ಹಮ್ ಹೈ ದೇಶ್ ಕೆ ಅನ್ನದಾತಾ ಕೆ ಶಕ್ತಿ' ತಲೆ ಬರಹದ ಅಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ರೈತರುಗಳ ಕಡೆಗೆ ಬೆಳಕು ಚೆಲ್ಲಲಿದೆ. ಅಲ್ಲದೇ ರೈತರಿಗೆ ತನ್ನ ಉತ್ಪನ್ನಗಳ ಮೇಲೆ ಶೇ.10ರಷ್ಟು ವಿಶೇಷ ರಿಯಾಯಿತಿ ನೀಡಲಿದೆ.
ವಿ-ಗಾರ್ಡ್ ಆದಾಯ ಶೇ. 14ರಷ್ಟು ಹೆಚ್ಚಳ
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ವಿ-ಗಾರ್ಡ್ ಮೂರನೇ ತ್ರೈಮಾಸಿಕದಲ್ಲಿ ಆದಾಯ ಶೇ.14ರಷ್ಟು ಹೆಚ್ಚಳ ಕಂಡಿದೆ. ತೆರಿಗೆ ಪಾವತಿ ಬಳಿಕ 2013 ಡಿಸೆಂಬರ್ ಅಂತ್ಯಕ್ಕೆ ರು. 17.53 ಕೋಟಿ ಆದಾಯದೊಂದಿಗೆ ಶೇ.14ರಷ್ಟು ಪ್ರಗತಿ ಸಾಧಿಸಿದೆ. ಕಾರ್ಯಾಚರಣೆಯಿಂದ ಒಟ್ಟಾರೆ ಆದಾಯ ಡಿಸೆಂಬರ್ 2013 ಅಂತ್ಯಕ್ಕೆ ರು. 352.93 ಕೋಟಿ ಆದಾಯ ದಾಖಲಿಸಿದೆ.
ವಂಡರ್ ಲಾಗೆ ಪ್ರಶಸ್ತಿ
ವಂಡರ್ ಲಾ 'ಎಕ್ಸ್ಡಿ ಮ್ಯಾಕ್ಸ್' ರೈಡ್ಗೆ ಭಾರತೀಯ ಅಮ್ಯೂಸ್ಮೆಂಟ್ ಪಾರ್ಕ್ಗಳ ಒಕ್ಕೂಟ ಮತ್ತು ಉದ್ಯಮದ ಪ್ರತಿಷ್ಠಿತ 'ಹೊಸ ಕಲ್ಪನೆಯ ಶ್ರೇಷ್ಠ ರೈಡ್' ಪ್ರಶಸ್ತಿ ಲಭಿಸಿದೆ.
ವಂಡರ್ ಲಾ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಅಭಿವೃದ್ಧಿಪಡಿಸಿರುವ ಎಕ್ಸ್ಡಿ ಮ್ಯಾಕ್ಸ್ ರೈಡ್ ವಿಶೇಷ ಆಕರ್ಷಣೆಯಾಗಿದೆ. 180 ಜನ ಕುಳಿತುಕೊಳ್ಳಬಹುದಾದ ಎಕ್ಸ್ಡಿ ಮ್ಯಾಕ್ಸ್, ವೀಕ್ಷಕರಿಗೆ ಚಿಮುಕುವ ನೀರಿನ ಸ್ಪರ್ಶ, ರಭಸವಾಗಿ ಬೀಸುವ ಗಾಳಿ, ಸೀಟ್ ಮೇಲೆ ಕುಳಿತಲ್ಲೇ ಓಲಾಟ, ನೀರಿನ ಗುಳ್ಳೆಗಳ ಹಾರಾಟ, ಲೇಸರ್ ಲೈಟ್ ಹೀಗೆ ವಾಸ್ತವ ಲೋಕದ ನೈಜ ಅನುಭವ ನೀಡುತ್ತದೆ. ವಂಡರ್ ಲಾ ಈಗಾಗಲೇ 'ಎಲೆಕ್ಟ್ರಾನಿಕ್ ಮೀಡಿಯಾ ಪ್ರಮೋಷನ್' ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಈ ಬಗ್ಗೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಕೆ.ಅರುಣ್, ದೇಶದಲ್ಲಿ ಬೇರೆಲ್ಲಿಯೂ ಸಿಗದ ಅತ್ಯುತ್ತಮ ಸೇವೆ, ಸಾಹಸದ ಅನುಭವ ನೀಡಲು ನಿರಂತರವಾಗಿ ಸಂಶೋಧನೆ ಮಾಡಲು ಉತ್ಸುಕವಾಗಿರುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

