

ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಅಂತ್ಯದೊಳಗೆ `ಮುದ್ರಾ' ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ರು.1.22 ಲಕ್ಷ ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಏರ್ಪಡಿಸಿದ್ದ ಸಮಾರಂಭದಲ್ಲಿ ಮುದ್ರಾ ಯೋಜನೆ ಸಾಲ ಮೇಳಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಈ ಯೋಜನೆಯಡಿ ಈಗಾಗಲೆ 37 ಲಕ್ಷ ಸಣ್ಣ ಉದ್ಯಮಿಗಳಿಗೆ ರು.24 ಸಾವಿರ ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು. ಹಣಕಾಸಿನ ನೆರವು ಸಿಗದ ಸಣ್ಣ ಉದ್ಯಮಿಗಳಿಗೆ ಸಾಲ ನೀಡಲು ಮತ್ತು ಉದ್ಯೋಗಗಳ ಸೃಷ್ಟಿಗೆ ಮುದ್ರಾ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ 1.25ರಿಂದ 1.75 ಕೋಟಿ ಸಣ್ಣ ಉದ್ಯಮಿಗಳಿಗೆ ಸಾಲ ನೀಡುವ ಗುರಿ ಇದೆ ಎಂದು ತಿಳಿಸಿದ್ದಾರೆ.
ಪ್ರಾತಿನಿಧ್ಯಕ್ಕೆ ಒತ್ತಾಯ
ವಿಶ್ವಬ್ಯಾಂಕ್ ಆಡಳಿತ ಮಂಡಳಿಗೆ ಸುಧಾರಣೆಗಳನ್ನು ತರಬೇಕೆಂದು ಪ್ರತಿಪಾದಿಸಿರುವ ಅರುಣ್ ಜೇಟ್ಲಿ, ಅಭಿವೃದ್ಧಿಶೀಲ ದೇಶಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿದ್ದಾರೆ. ಭಾರತ ಪ್ರವಾಸದಲ್ಲಿರುವ ವಿಶ್ವಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕಿ ಮುಲ್ಯಾನಿ ಇಂದ್ರವತಿ ಜೊತೆಗಿನ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, ಬ್ಯಾಂಕ್‍ನ ಬಂಡವಾಳ ವ್ಯಾಪ್ತಿಯನ್ನೂ ಹೆಚ್ಚಿಸಬೇಕೆಂದು ಹೇಳಿದ್ದಾರೆ.
ಐಎಂಎಫ್ ಮತ್ತು ವಿಶ್ವಬ್ಯಾಂಕ್‍ನಲ್ಲಿ ಪ್ರಾತಿನಿಧ್ಯ ಕುರಿತಂತೆ ಸುಧಾರಣೆಗಳನ್ನು ತರಬೇಕು. ಇಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಲು ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ದೇಶಗಳಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಹೇಳಿರುವುದಾಗಿ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿದೆ. ಬಡತನ ಕಡಿಮೆ, ಆರ್ಥಿಕ ಪ್ರಗತಿಯ ವಿತರಣೆ ಸೇರಿದಂತೆ ವಿಶ್ವಬ್ಯಾಂಕ್ ಹೊಂದಿರುವ ಸುಸ್ಥಿರ ಅಭಿವೃದ್ಧಿ ಗುರಿ 2015ರ ಗುರಿ ತಲುಪುವ ಹಾದಿಯಲ್ಲಿ ಭಾರತ ಮುಂದಾಗಬೇಕೆಂದು ಇಂದ್ರವತಿ ತಿಳಿಸಿದ್ದಾರೆ ಎಂದು ಹೇಳಿದೆ.