

ನವದೆಹಲಿ: 3 ಲಕ್ಷ ರು.ಗಿಂತ ಅಧಿಕ ಮೊತ್ತದ ಹಣದ ವಹಿವಾಟನ್ನು ಕೇಂದ್ರ ಸರ್ಕಾರ ನಿಷೇಧಿಸುವುದು ಬಹುತೇಕ ಖಚಿತವಾಗಿದ್ದು, ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.
ಕಪ್ಪುಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡ ನೀಡಿದ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಅದರಂತೆ ಇನ್ನು 3 ಲಕ್ಷ ರುಗಳಿಗಿಂತ ಅಧಿಕ ಹಣದ ವಹಿವಾಟನ್ನು ಅಕ್ರಮ ಎಂದು ಪರಿಗಣಿಸಲು ಕೇಂದ್ರ ಸರ್ಕಾರ ನಿರ್ಧಾರಿಸಿದೆ. ಅಂತೆಯೇ ಬ್ಯಾಂಕ್ ಮೂಲಕವೇ ವಹಿವಾಟು ನಡೆಸುವುದನ್ನು ಈ ನಿರ್ಧಾರ ಪ್ರೋತ್ಸಾಹಿಸಲಿದ್ದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ಚೆಕ್‌ಗಳು ಅಥವಾ ಡಿಮಾಂಡ್ ಡ್ರಾಫ್ಟ್‌ಗಳ ಮೂಲಕ ವಹಿವಾಟು ನಡೆಸಬಹುದಾಗಿದೆ ಎಂದು ವಿತ್ತ ಇಲಾಖೆ ತಿಳಿಸಿದೆ.
ಸರ್ಕಾರದ ಈ ನಿರ್ಧಾರದ ಹಿಂದೆಯೂ ಮಹತ್ವದ ಕಾರಣವಿದ್ದು, ಬ್ಯಾಂಕ್ ಗಳ ಮೂಲಕ ಗ್ರಾಹಕರು ನಡೆಸುವ ಅಧಿಕ ಮೊತ್ತದ ವಹಿವಾಟನ್ನು ಸುಲಭವಾಗಿ ಗುರುತಿಸಬಹುದಾಗಿದ್ದು, ತೆರಿಗೆ ಅಧಿಕಾರಿಗಳ ಕಾರ್ಯ ಇದರಿಂದ ಸುಲಭವಾಗಲಿದೆ.
ಇದಲ್ಲದೆ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಂತಹ ಪ್ಲಾಸ್ಟಿಕ್ ಮನಿ ವಹಿವಾಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯ ಹಲವು ಕ್ರಮ ಕೈಗೊಂಡಿದ್ದು, ಕಾರ್ಡ್ ಮೂಲಕ ನಡೆಸುವ ವಹಿವಾಟಿಗೆ ಈ ಹಿಂದೆಯೇ ಶುಲ್ಕ ವಿನಾಯಿತಿ ನೀಡಿದೆ.
ಸರ್ಕಾರದ ಈ ನಡೆಯಿಂದಾಗಿ ಸರ್ಕಾರದ ಭೊಕ್ಕಸ ತುಂಬುತ್ತದೆಯಾದರೂ, ಬಾಡಿಗೆ ಮತ್ತು ಭೋಗ್ಯದಾರರಿಗೆ ಅನಾನುಕೂಲವಾಗಲಿದೆ. ಇನ್ನು ಆಸ್ತಿ, ಆಭರಣ ಖರೀದಿಯಂತಹ ದೊಡ್ಡ ಮೊತ್ತದ ವಹಿವಾಟಿಗೆ ದೇಶದಲ್ಲಿ ನಗದು ಹೊರತಾದ ಇತರೆ ಅನುಕೂಲಕರ ವಿಧಾನವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ರಿಯಾಲಿಟಿಯಂತಹ ಕ್ಷೇತ್ರಗಳಲ್ಲಿ ದೊಡ್ಡ ಮೊತ್ತದ ವಹಿವಾಟುಗಳಿಗೆ ಚೆಕ್ ಮೂಲಕ ಪಾವತಿ ಮಾಡುವುದು ನಂಬಿಕೆ ಮೂಡಿಸುವ ವಿಧಾನವಲ್ಲ. ಮೊಬೈಲ್ ಪಾವತಿಯಿಂತಹ ಎಲೆಕ್ಟ್ರಾನಿಕ್ ವ್ಯವಸ್ಥೆಯ ಪಾವತಿ ವಿಧಾನವಿದೆಯಾದರೂ, ಅದು ಇನ್ನೂ ಸಕ್ರಿಯವಾಗಿ ಜಾರಿಗೆ ಬಂದಿಲ್ಲ. ಡಿಮ್ಯಾಂಡ್ ಡ್ರಾಫ್ಟ್ ಪಡೆಯಲು ವಿಧಿಸುವ ಹೆಚ್ಚಿನ ಶುಲ್ಕ ತೆರುವ ಅನಿವಾರ್ಯತೆ ಇದ್ದು, ಇದೇ ಕಾರಣಕ್ಕೆ ಜನ ಬ್ಯಾಂಕ್ ಮೂಲಕ ನಗದು ವ್ಯವಹಾರ ಮಾಡುತ್ತಾರೆ.
ಆದರೆ ಇದೀಗ ಕೇಂದ್ರ ಸರ್ಕಾರ ಇದಕ್ಕೂ ಕೊಕ್ಕೆ ಹಾಕಿದ್ದು, ಬದಲಿ ಮಾರ್ಗವಿಲ್ಲದೇ ದೊಡ್ಡಮೊತ್ತದ ವಹಿವಾಟು ಇನ್ನು ಕಷ್ಟಕರವಾಗಲಿದೆ.