

ನವದೆಹಲಿ: ಭಾರತದ ಕಪ್ಪು ಹಣದ ಆರ್ಥಿಕತೆ ಕ್ರಮೇಣವಾಗಿ ಕುಗ್ಗುತ್ತಿದೆಯಾದರೂ, ದೇಶದ ಒಟ್ಟು ಜಿಡಿಪಿಯಲ್ಲಿ ಶೇ.20 ರಷ್ಟು ಪಾಲು ಹೊಂದಿರುವ ಕಪ್ಪು ಹಣದ ಆರ್ಥಿಕತೆ ಥಾಯ್ಲೆಂಡ್, ಅರ್ಜೆಂಟಿನಾದ ಜಿಡಿಪಿಯನ್ನೂ ಸರಿಗಟ್ಟಿದೆ.
ಆಂಬಿಟ್ ಕ್ಯಾಪಿಟಲ್ ರಿಸರ್ಚ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಭಾರತ ಒಟ್ಟು ಜಿಡಿಪಿಯಲ್ಲಿ ಕಾಳಧನದ ಪಾಲು ಶೇ.20 ರಷ್ಟಿದ್ದು ಇದು ಥಾಯ್ಲೆಂಡ್, ಅರ್ಜೆಂಟಿನಾದ ಒಟ್ಟಾರೆ ಜಿಡಿಪಿಯನ್ನೂ ಮೀರಿಸುತ್ತದೆ. ಕಪ್ಪುಹಣವನ್ನು ತಡೆಗಟ್ಟಲು ಕೇಂದ್ರ ಸರಕಾರ ಸಾಕಷ್ಟು ಕ್ರಮ ಕೈಗೊಂಡಿದ್ದು ಕಪ್ಪುಹಣದ ಆರ್ಥಿಕತೆ ಕ್ರಮೇಣವಾಗಿ ಕುಸಿಯುತ್ತಿದೆ ಎಂದು ವರದಿಯ ಮೂಲಕ ತಿಳಿದುಬಂದಿದೆ.
1970 - 80 ರ ಅವಧಿಯಲ್ಲಿ ಭಾರತದ ಕಪ್ಪುಹಣ ಆರ್ಥಿಕತೆ ಅತಿ ಹೆಚ್ಚು ಏರಿಕೆಯಾಗಿದ್ದು, ನಂತರದ ವರ್ಷಗಳಲ್ಲಿ ಕುಸಿತ ಕಾಣುತ್ತಿದ್ದು ಪ್ರಸ್ತುತ ದೇಶದ ಜಿಡಿಪಿಯಲ್ಲಿ ಶೇ.20 ರಷ್ಟು ಪಾಲು ಹೊಂದಿದೆ ಎಂದು ವರದಿ ತಿಳಿಸಿದೆ. ಇನ್ನು 2016 ರ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ 2 .3 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದ್ದು ಈ ಪೈಕಿ 460 ಬಿಲಿಯನ್ ಡಾಲರ್ (30 ಲಕ್ಷ ಕೋಟಿ) ನಷ್ಟು ಹಪ್ಪುಹಣ ಇದೆ ಎಂದು ಅಂದಾಜಿಸಲಾಗಿದೆ. ಅತಿ ಹೆಚ್ಚು ಕಪ್ಪುಧನದ ಹೆಚ್ಚಿನ ಭಾಗ ರಿಯಲ್ ಎಸ್ಟೇಟ್ ಹಾಗೂ ಚಿನ್ನದ ರೂಪದಲ್ಲಿದೆ ಎಂದು ಆಂಬಿಟ್ ಕ್ಯಾಪಿಟಲ್ ರಿಸರ್ಚ್ ಬಿಡುಗಡೆ ಮಾಡಿರುವ ವರದಿ ಮೂಲಕ ತಿಳಿದುಬಂದಿದೆ.