

ಮುಂಬೈ: ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಆದೇಶ ಹೊರಡಿಸಿರುವುದರಿಂದಾಗಿ ಷೇರುಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಕುಸಿತ ಕಂಡುಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್ 242.85 ಅಂಕಗಳ ಕುಸಿತ ಕಂಡಿದ್ದು, 29,883.36 ಅಂಕಗಳಿಗೆ ಕುಸಿದಿದೆ. ಅಂತೆಯೇ ನಿಫ್ಟಿ ಕೂಡ 71.60 ಅಂಕಗಳಷ್ಟು ಕುಸಿದಿದ್ದು, 9,288.30 ಅಂಕಗಳಿಗೆ ಕುಸಿದಿದೆ. ಪ್ರಮುಖವಾಗಿ ಬ್ಯಾಕಿಂಗ್ ಕ್ಷೇತ್ರದ ಮೇಲೆ ಸರ್ಕಾರದ ಆದೇಶ ಪರಿಣಾಮ ಬೀರಿದ್ದು, ಎಸ್ ಬಿಐ, ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಡಿಬಿಐ, ಯೂನಿಯನ್ ಬ್ಯಾಂಕ್ ಗಳ ಷೇರು ಮೌಲ್ಯದಲ್ಲಿ 1ರಿಂದ 3.5ರಷ್ಟು ಮೌಲ್ಯ ಕುಸಿತ ಕಂಡುಬಂದಿದೆ.
ಆದರೆ ಇಂದಿನ ವಹಿವಾಟಿನಲ್ಲಿ ಏಷ್ಯನ್ ಪೇಯಿಂಟ್ಸ್, ಅರಬಿಂದೋ ಫಾರ್ಮಾ ಮತ್ತು ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಸಂಸ್ಥೆ ಲಾಭಾಂಶ ಕಂಡಿವೆ ಎಂದು ತಿಳಿದುಬಂದಿದೆ.